• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ದುರಂತ ಇತಿಹಾಸವೂ ಭೀಕರ ವರ್ತಮಾನವೂ ಶತಮಾನ ದಾಟಿರುವ ಆಧುನಿಕ ಯುದ್ಧ ಪರಂಪರೆ ಮನುಜ ಸೂಕ್ಷ್ಮತೆಯನ್ನೂ ಕೊಂದುಹಾಕಿದೆ

ನಾ ದಿವಾಕರ by ನಾ ದಿವಾಕರ
October 29, 2023
in Top Story, ಅಂಕಣ, ಅಭಿಮತ, ವಿದೇಶ
0
ದುರಂತ ಇತಿಹಾಸವೂ ಭೀಕರ ವರ್ತಮಾನವೂ ಶತಮಾನ ದಾಟಿರುವ ಆಧುನಿಕ ಯುದ್ಧ ಪರಂಪರೆ ಮನುಜ ಸೂಕ್ಷ್ಮತೆಯನ್ನೂ ಕೊಂದುಹಾಕಿದೆ

TOPSHOT - Palestinians evacuate the area following an Israeli airstrike on the Sousi mosque in Gaza City on October 9, 2023. Israel continued to battle Hamas fighters on October 9 and massed tens of thousands of troops and heavy armour around the Gaza Strip after vowing a massive blow over the Palestinian militants' surprise attack. (Photo by Mahmud HAMS / AFP) (Photo by MAHMUD HAMS/AFP via Getty Images)

Share on WhatsAppShare on FacebookShare on Telegram

-ನಾ ದಿವಾಕರ

ADVERTISEMENT

ಕಳೆದ 20 ದಿನಗಳಿಂದ ಇಸ್ರೇಲಿ ಆಕ್ರಮಣಕ್ಕೆ ತುತ್ತಾಗಿ ಸಾವಿರಾರು ಜೀವಗಳನ್ನು ಕಳೆದುಕೊಂಡಿರುವ ಗಾಝಾ ಪಟ್ಟಿ ಸಮಕಾಲೀನ ಭೌಗೋಳಿಕ ಇತಿಹಾಸದ ದುರಂತ ಕಥನಗಳಲ್ಲೊಂದು ಎಂದರೆ ಅತಿಶಯವಾಗಲಾರದು. ತಮ್ಮ ತಾಯ್ನೆಲದಿಂದ ಉಚ್ಚಾಟಿತರಾದ ಒಂದು ಜನಾಂಗ ಆಶ್ರಯ ಪಡೆದ ನೆಲದಲ್ಲೂ ಪರಾವಲಂಬಿಗಳಾಗಿಯೇ ಬದುಕುವ ದುಸ್ಥಿತಿಯನ್ನು ಎದುರಿಸುತ್ತಿರುವುದೇ ಅಲ್ಲದೆ ಒಂದು ಭಯೋತ್ಪಾದಕ ಸಂಘಟನೆಯ ದುಸ್ಸಾಹಸದಿಂದ ಈಗ ತಮ್ಮ ಲೌಕಿಕ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದನ್ನು ಇಡೀ ಜಗತ್ತು ಗಮನಿಸುತ್ತಿದೆ. ಅಕ್ಟೋಬರ್‌ 7ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ನಡೆಸಿದ ದಾಳಿಗೆ ಸಾವಿರಾರು ಅಮಾಯಕರು ಬಲಿಯಾಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್‌ ಕಳೆದ ಹದಿನೈದು ದಿನಗಳಿಂದ ನಡೆಸುತ್ತಿರುವ ನಿರಂತರ ದಾಳಿಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಎರಡೂ ಬದಿಯಲ್ಲಿ ನಡೆಯುತ್ತಿರುವ ಹಿಂಸಾಚಾರ, ಮಾರಣಾಂತಿಕ ದಾಳಿ ಹಾಗೂ ವಿನಾಶಕಾರಿ ಕಲಹ ಇಡೀ ಮಾನವ ಜಗತ್ತನ್ನು ನಿದ್ರಾವಸ್ಥೆಯಿಂದ ಎಚ್ಚರಿಸಬೇಕಿದೆ. ಆದರೆ ವಿಶ್ವದ ಬಹುತೇಕ ರಾಷ್ಟ್ರಗಳನ್ನು ಈ ಸಾವಿರಾರು ಅಮಾಯಕ ಜೀವಗಳಿಗಿಂತಲೂ ಹೆಚ್ಚಾಗಿ ಕಾಡುತ್ತಿರುವುದು ತಪ್ಪು ಯಾರದು ಎಂಬ ಪ್ರಶ್ನೆ ! ಯಾರನ್ನು ಸಮರ್ಥಿಸುವುದು, ಯಾರನ್ನು ವಿರೋಧಿಸುವುದು ? ಯಾವ ದಾಳಿ ಸಕಾರಣವಾದದ್ದು ಯಾವುದು ವಿನಾಕಾರಣವಾದದ್ದು ? ಯಾವ ಆಕ್ರಮಣ ನ್ಯಾಯಯುತವಾದದ್ದು ಯಾವುದು ಅಲ್ಲ ? ಈ Binary ಪ್ರಶ್ನೆಗಳ ಸುತ್ತ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗಳು ವಿದ್ಯುನ್ಮಾನ ಸುದ್ದಿಮನೆಗಳ ಟಿಆರ್‌ಪಿ ರೇಟಿಂಗ್‌ ಹೆಚ್ಚಿಸಲು ನೆರವಾಗಬಹುದೇ ಹೊರತು, ಮನುಕುಲ ಎದುರಿಸುತ್ತಿರುವ ವಿನಾಶಕಾರಿ ಯುದ್ಧೋನ್ಮಾದಕ್ಕೆ ಜವಾಬು ನೀಡುವುದಿಲ್ಲ.

ಮರೆಯಾಗುವ ಮನುಜ ಪ್ರಜ್ಞೆ

ಅಮೆರಿಕ ಸೇರಿದಂತೆ ಪಶ್ಚಿಮ ರಾಷ್ಟ್ರಗಳ ಸಾಮ್ರಾಜ್ಯಶಾಹಿಗಳಿಗೆ ಅನ್ಯ ದೇಶಗಳ ನಡುವೆ ನಡೆಯುವ ಯುದ್ಧಗಳೆಲ್ಲವೂ ಬಂಡವಾಳಶಾಹಿಯ ಮಾರುಕಟ್ಟೆ ಆಧಿಪತ್ಯವನ್ನು ವಿಸ್ತರಿಸುವ ಒಂದು ಸಾಧನವಾಗಿಯೇ ಕಾಣುತ್ತವೆ. ಒಂದೆಡೆ ವಿಶ್ವ ಶಾಂತಿಯ ಮಂತ್ರ ಉಚ್ಛರಿಸುತ್ತಲೇ ಮತ್ತೊಂದು ಬದಿಯಿಂದ ಯುದ್ಧಕೋರ ದೇಶಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುವ ಸಾಮ್ರಾಜ್ಯಶಾಹಿಗಳ ವ್ಯಾವಹಾರಿಕ ಕುತಂತ್ರಗಳಿಗೆ ಬಲಿಯಾಗುವುದು ಮಾತ್ರ ಯಾವ ತಪ್ಪನ್ನೂ ಮಾಡದ ಅಮಾಯಕ ಜನತೆ. ಯುದ್ಧಗಳಲ್ಲಿ ಬಲಿಯಾದವರನ್ನು ಜನಾಂಗೀಯ ನೆಲೆಯಲ್ಲಿ, ಮತೀಯ ಅಸ್ಮಿತೆಗಳೊಂದಿಗೆ, ಧಾರ್ಮಿಕ ಚೌಕಟ್ಟುಗಳಲ್ಲಿ ವಿಂಗಡಿಸುವ ಮೂಲಕ ವಿಶ್ಲೇಷಕರು, ಮಾಧ್ಯಮಗಳು ಹಾಗೂ ಆಧುನಿಕ ಮಾರುಕಟ್ಟೆ ಮೀಮಾಂಸಕರು ಸತ್ತವರ ನಡುವೆಯೂ ಗೋಡೆಗಳನ್ನು ನಿರ್ಮಿಸಿ, ಸಾವನ್ನು ಸಮರ್ಥನೀಯ ಅಥವಾ ಖಂಡನಾರ್ಹಗೊಳಿಸುತ್ತಾರೆ.

ಹಾಗಾಗಿ ಹಮಾಸ್‌ ಎಂಬ ಬಂಡುಕೋರ- ಸಂಘಟನೆ ಎಸಗಿದ ಒಂದು ಭಯೋತ್ಪಾದಕ ಕೃತ್ಯಕ್ಕೆ ಗಾಝಾ ಪಟ್ಟಿಯಲ್ಲಿ ವಾಸಿಸುವ ಏಳು ಸಾವಿರ ಜನರು ಬಲಿಯಾದರೆ, ಅದು ಆ ಜನಾಂಗ ತೆತ್ತ ಬೆಲೆ ಎಂದಷ್ಟೇ ವ್ಯಾಖ್ಯಾನಿಸಲಾಗುತ್ತದೆ. ಹಮಾಸ್‌ ದಾಳಿಯಿಂದ ಜೀವ ಕಳೆದುಕೊಂಡ ಸಾವಿರಾರು ಇಸ್ರೇಲೀಯರು ಬದುಕುಳಿದ ಇಸ್ರೇಲೀಯರ ಪ್ರತೀಕಾರದ ದಾಳಿಗಳಿಗೆ ನಿರ್ಜೀವ ದಾಳಗಳಾಗಿ ಕಾಣುತ್ತಾರೆ. ಜಗತ್ತಿನ ಇತಿಹಾಸದುದ್ದಕ್ಕೂ ಗಮನಿಸಬಹುದಾದ ಒಂದು ಅಂಶವೆಂದರೆ, ಯಾವುದೇ ಯುದ್ಧದಲ್ಲಿ ಮಡಿಯುವ ಅಮಾಯಕ ಜನತೆಯನ್ನು ರಕ್ಷಿಸಲ್ಪಡುವವರು ಮತ್ತು ದಂಡ ತೆರಬೇಕಾದವರು ಎಂಬ ಎರಡು ಮಜಲುಗಳಲ್ಲಿ ವಿಂಗಡಿಸಲಾಗುತ್ತದೆ. ಪ್ರಭುತ್ವಗಳ ಭೂ ದಾಹ ಅಥವಾ ಬಂಡವಾಳ-ಮಾರುಕಟ್ಟೆ ವಿಸ್ತರಣೆಯ ದಾಹಕ್ಕೆ ಬಲಿಯಾಗುವ ಸಾಮಾನ್ಯ ಜನತೆಗೆ ಯಾವುದೇ ಆಯ್ಕೆಯೂ ಇರುವುದಿಲ್ಲ.

ಮಾನವ ಇತಿಹಾಸದ ಮತ್ತೊಂದು ವಿಡಂಬನೆ ಎಂದರೆ ಶ್ರಮಿಕ ವರ್ಗಗಳು ಕಾರ್ಖಾನೆಗಳಲ್ಲಿ ತಯಾರಿಸುವ ಮಾರಕ ಶಸ್ತ್ರಾಸ್ತ್ರಗಳು ಅವರ ಸಂತತಿಯ ಕಬಳಿಸಿದರೂ ಮೌನವಾಗಿ ಸಹಿಸಬೇಕಾಗುತ್ತದೆ ಅಥವಾ ಮತ್ತೊಂದು ಬದಿಯ ಶ್ರಮಿಕರು ಬಲಿಯಾಗುವುದನ್ನು ಮೌನವಾಗಿ ಸಮ್ಮತಿಸಬೇಕಾಗುತ್ತದೆ. ಯುದ್ಧೋನ್ಮಾದವೇ ಪ್ರಧಾನವಾಗಿ ಆವರಿಸಿದಾಗ ಯಾರೇ ಬಲಿಯಾದರೂ ಅದು ತ್ಯಾಗ-ಬಲಿದಾನ ಅಥವಾ ಹುತಾತ್ಮತೆಯ ಚೌಕಟ್ಟಿನಲ್ಲಿ ಮರೆಯಾಗಿಬಿಡುತ್ತದೆ. ಭೌಗೋಳಿಕ ಗಡಿ ರಕ್ಷಣೆ ಎಂಬ ಆಧುನಿಕ ಯುಗದ ಪರಿಭಾಷೆಯಲ್ಲಿ ಮಾನವೀಯತೆಯ ಗಡಿಗಳನ್ನು ದಾಟಿ ಅಮಾನುಷತೆ ಮಿತಿಮೀರಿದರೂ ಅದನ್ನು ಅನಿವಾರ್ಯವೆಂದೋ ಅಥವಾ ಆದ್ಯತೆಯೆಂದೋ ಪರಿಭಾವಿಸುವ ಮಾನವ ಸಮಾಜ ತನ್ನ ಸಹವರ್ತಿಗಳ ಮಾರಣಹೋಮವನ್ನೂ ಮೌನವಾಗಿ ಸಮ್ಮತಿಸುವ ಮಟ್ಟಿಗೆ ನಿಷ್ಕ್ರಿಯವಾಗಿಬಿಡುತ್ತದೆ. ಏಕೆಂದರೆ ಇಲ್ಲಿ ಮನುಜ ಜೀವಗಳು ತಮ್ಮ ಮೂಲ ಮಾನವೀಯ ಪೊರೆಗಳನ್ನು ಕಳಚಿಕೊಂಡು ಯಾವುದಾದರೊಂದು ಅಸ್ಮಿತೆಯ ಕವಚದೊಳಗೆ ಹುದುಗಿರುತ್ತದೆ.

ಇಸ್ರೇಲ್-ಹಮಾಸ್‌ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ ಸೋಲು ಗೆಲುವು ನಿರ್ಣಯವಾಗುವುದು ಪಶ್ಚಿಮ ದೇಶಗಳ ನೆಲದಲ್ಲಿ. ಏಕೆಂದರೆ ಪ್ಯಾಲೆಸ್ಟೈನ್‌ ಪರ ನಿಲ್ಲುವ ಅರಬ್-ಮುಸ್ಲಿಂ ರಾಷ್ಟ್ರಗಳು, ಇಸ್ರೇಲ್‌ ಪರ ನಿಲ್ಲುವ ಪಶ್ಚಿಮ ದೇಶಗಳು ತಮ್ಮ ಮಾರುಕಟ್ಟೆ ಮತ್ತು ಬಂಡವಾಳದ ರಕ್ಷಣೆಗಾಗಿ ಈ ಎರಡೂ ಭೂ ಪ್ರದೇಶಗಳನ್ನು ಬಳಸಿಕೊಳ್ಳುತ್ತವೆ. ಪ್ಯಾಲೆಸ್ಟೈನ್-ಗಾಝಾ ಪಟ್ಟಿಯಲ್ಲಿ ಶಾಂತಿ ಬಯಸುವ ಅಮೆರಿಕ ನೇತೃತ್ವದ ರಾಷ್ಟ್ರಗಳಿಗೆ ಇಸ್ರೇಲ್‌ಗೆ ಅವರಿಂದಲೇ ಪೂರೈಕೆಯಾಗುವ ಮಾರಕ ಶಸ್ತ್ರಾಸ್ತ್ರಗಳು ಸಾವಿರಾರು ಅಮಾಯಕರನ್ನು ಚಿರಶಾಂತಿಗೆ ದೂಡುತ್ತದೆ ಎಂಬ ಪಾಪಪ್ರಜ್ಞೆಯೇ ಕಾಡುವುದಿಲ್ಲ. ಹಾಗೆಯೇ ಪ್ಯಾಲೆಸ್ಟೈನ್‌ ಮತ್ತು ಗಾಝಾ ಪಟ್ಟಿಯಲ್ಲಿ ತಮ್ಮ ನಿತ್ಯಬದುಕಿಗಾಗಿ ಹೋರಾಡುತ್ತಿರುವ ಲಕ್ಷಾಂತರ ಸಾಮಾನ್ಯ ಜನರ ಒಳಿತನ್ನು ಬಯಸುವ ಇಸ್ಲಾಮಿಕ್‌-ಅರಬ್‌ ರಾಷ್ಟ್ರಗಳಿಗೆ ಧರ್ಮ ರಕ್ಷಣೆಯ ಹೆಸರಿನಲ್ಲಿ ಭಯೋತ್ಪಾದಕ-ಬಂಡುಕೋರ ಗುಂಪುಗಳಿಂದ ಜೀವ ಕಳೆದುಕೊಳ್ಳುವ ಸಾಮಾನ್ಯ ಜನರೂ ಕಣ್ಣಿಗೆ ಕಾಣುವುದಿಲ್ಲ.

ಗಾಝಾ ಎಂಬ ನತದೃಷ್ಟ ಪಟ್ಟಿ

ಈ ಎರಡು ಅತಿರೇಕಗಳ ನಡುವೆ ಇಂದು 140 ಚದರ ಮೈಲು ವಿಸ್ತೀರ್ಣ ಇರುವ ಗಾಝಾ ಪಟ್ಟಿಯ 23 ಲಕ್ಷ ಸಾಮಾನ್ಯ ಜನತೆ ಸರಳುಗಳಿಲ್ಲದ ಬಯಲು ಸೆರೆಮನೆಯಲ್ಲಿ ಬಂಧಿತರಾಗಿದ್ದಾರೆ. ವಿಶ್ವದ ಅತಿ ದೊಡ್ಡ ಬಯಲು ಸೆರೆಮನೆ ಎಂದೇ ಹೆಸರಾಗಿರುವ ಗಾಝಾ 1948ರಲ್ಲಿ ನಡೆದ ಅರಬ್-ಇಸ್ರೇಲ್‌ ಯುದ್ಧದಲ್ಲಿ ವಲಸೆ ಬಂದ ನಿರಾಶ್ರಿತರಿಗೆ ಆಶ್ರಯ ನೀಡಿದ ಒಂದು ಪುಟ್ಟ ಭೂ ಪ್ರದೇಶ. ಇಂದು ಇಸ್ಲಾಮಿಕ್‌ ಉಗ್ರಗಾಮಿಗಳ ನಿಯಂತ್ರಣದಲ್ಲಿರುವ ಗಾಝಾ ಈಗಾಗಲೇ ಇಸ್ರೇಲ್‌ ದಾಳಿಯಿಂದ 7000 ಜನರನ್ನು ಕಳೆದುಕೊಂಡಿದೆ. ಈ ಪೈಕಿ 3000ಕ್ಕೂ ಹೆಚ್ಚು ಮಕ್ಕಳಿದ್ದಾರೆ. 15 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅರ್ಧಕ್ಕೂ ಹೆಚ್ಚು ಜನಸಂಖ್ಯೆಯನ್ನು ದಕ್ಷಿಣದ ಪ್ರದೇಶಗಳಿಗೆ ವಲಸೆ ಹೋಗುವಂತೆ ಇಸ್ರೇಲ್‌ ಆಜ್ಞಾಪಿಸಿದೆ. ದಶಕಗಳಿಂದಲೂ ನಿರಾಶ್ರಿತರಂತೆಯೇ ಪರಾವಲಂಬಿಗಳಾಗಿ ಬದುಕಿರುವ ಇಲ್ಲಿನ ಜನರು ಮತ್ತೊಂದು ನಿರಾಶ್ರಿತ ವಲಯಕ್ಕೆ ರವಾನೆಯಾಗುತ್ತಿರುವುದು ಇತಿಹಾಸದ ದುರಂತವೆಂದೇ ಹೇಳಬಹುದು.

ತೀವ್ರ ಆರ್ಥಿಕ ಮುಗ್ಗಟ್ಟಿನಿಂದಲೇ ಹಮಾಸ್‌ ಆಳ್ವಿಕೆಯಲ್ಲಿ ಮುಂದುವರೆದಿರುವ ಗಾಝಾ ಪಟ್ಟಿ 2007ರಿಂದಲೂ ಇಸ್ರೇಲ್‌ನ ಆರ್ಥಿಕ ದಿಗ್ಬಂಧನಕ್ಕೊಳಗಾಗಿದೆ. ಕಳೆದ ಐದು ವರ್ಷಗಳಿಂದ ಐದು ಬಾರಿ ಇಸ್ರೇಲ್‌ ದಾಳಿಗೊಳಗಾಗಿರುವ ಈ ಭೂ ಪ್ರದೇಶ ಇಸ್ರೇಲ್‌ ಸರ್ಕಾರದಿಂದ ನೆಲ-ಜಲ-ವಾಯು ದಿಗ್ಬಂಧನಗಳನ್ನು ಎದುರಿಸುತ್ತಿದೆ. ಈಜಿಪ್ಟ್‌ಗೆ ಹೊಂದಿಕೊಂಡಂತಿರುವ ರಫಾ ಗಡಿಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ಪ್ರವೇಶ ದ್ವಾರಗಳೂ ಇಸ್ರೇಲ್‌ ನಿಯಂತ್ರಣದಲ್ಲಿದೆ. ಹಾಗಾಗಿ ಹಮಾಸ್‌ ಆಳ್ವಿಕೆಯೇ ಇದ್ದರೂ ಸಹ ಇಲ್ಲಿನ ಆರ್ಥಿಕತೆ ಮತ್ತು ಜನಸಾಮಾನ್ಯರ ಜೀವನಮಟ್ಟದಲ್ಲಿ ಸುಧಾರಣೆಯಾಗಿಲ್ಲ. 2008, 2012, 2014, 2021 ರಲ್ಲಿ ಇಸ್ರೇಲ್‌ನಿಂದ ದಾಳಿಗೊಳಗಾಗಿರುವ ಗಾಝಾ ಪಟ್ಟಿಯಲ್ಲಿ ಈ 15 ವರ್ಷಗಳ ಅವಧಿಯಲ್ಲಿ ಇಸ್ರೇಲ್‌ ದಾಳಿಗೆ 6407 ಪ್ಯಾಲೆಸ್ಟೈನೀಯರು ಬಲಿಯಾಗಿದ್ದು, ಇವರ ಪೈಕಿ ಗಾಝಾ ವಾಸಿಗಳ ಸಂಖ್ಯೆ 5360. ಈ ಬಾರಿಯ ದಾಳಿಗೇ 7000 ಜನರು ಬಲಿಯಾಗಿದ್ದಾರೆ.

ಶೇ 47ರಷ್ಟು ನಿರುದ್ಯೋಗ ಪ್ರಮಾಣವನ್ನು ಹೊಂದಿರುವ ಗಾಝಾ ಪಟ್ಟಿಯ ಆರ್ಥಿಕ ಅಭಿವೃದ್ಧಿ ಯುದ್ಧಗಳ ಪರಿಣಾಮವಾಗಿ ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದು ಶೇ 83ಕ್ಕಿಂತಲೂ ಹೆಚ್ಚಿನ ಕಾರ್ಮಿಕರು ಕನಿಷ್ಠ ವೇತನವನ್ನೂ ಗಳಿಸಲಾಗುತ್ತಿಲ್ಲ. ಶೇ 40ರಷ್ಟು ಜನರು ಪರಾವಲಂಬಿಗಳಾಗಿ ಬದುಕು ಸವೆಸುತ್ತಿದ್ದು ನಿರಂತರ ಆರ್ಥಿಕ ನೆರವನ್ನೇ ಆಶ್ರಯಿಸಿದ್ದಾರೆ. ಗಾಝಾ ಮತ್ತು ಪ್ಯಾಲೆಸ್ಟೈನ್‌ ಪ್ರದೇಶಗಳ ಶೇ 50ಕ್ಕಿಂತಲೂ ಹೆಚ್ಚಿನ ಆಮದು ವಹಿವಾಟು, ಶೇ 80ರಷ್ಟು ರಫ್ತು ವಹಿವಾಟು ಇಸ್ರೇಲ್‌ನೊಂದಿಗೇ ನಡೆಯುತ್ತದೆ. ಗಾಝಾದ ಶೇ 60ರಷ್ಟು ವಿದ್ಯುಚ್ಚಕ್ತಿಯನ್ನು ಇಸ್ರೇಲ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಉಳಿದ ವಿದ್ಯುತ್‌ ಉತ್ಪಾದನೆಗೆ ಬೇಕಾದ ಡೀಸೆಲ್‌ ಇಸ್ರೇಲ್‌ನಿಂದಲೇ ಆಮದು ಮಾಡಿಕೊಳ್ಳುತ್ತದೆ. ಗಾಝಾ ಪ್ರದೇಶದಲ್ಲಿ ಆಂತರಿಕವಾಗಿ ನೀರು ಸರಬರಾಜು ಸಮರ್ಪಕವಾಗಿಲ್ಲದ ಕಾರಣ ಬಳಕೆಯ ನೀರನ್ನೂ ಸಹ ಇಸ್ರೇಲ್‌ನಿಂದ ಆಮದು ಮಾಡಿಕೊಳ್ಳಬೇಕಿದೆ. ಪ್ರತಿ ಕುಟುಂಬವೂ ಶೇ 8 ರಿಂದ 13ರಷ್ಟು ವರಮಾನವನ್ನು ನೀರಿಗಾಗಿ ವ್ಯಯಿಸಬೇಕಾಗುತ್ತದೆ. ಇಸ್ರೇಲ್‌ ಮೇಲಿನ ಈ ಅವಲಂಬನೆಯ ನಡುವೆಯೇ ಗಾಝಾದ ಜನತೆ 15 ವರ್ಷಗಳಿಂದ ದಿಗ್ಬಂಧನಕ್ಕೊಳಗಾಗಿದ್ದಾರೆ.

ಇಸ್ರೇಲ್‌ ದಾಳಿಗೆ ಭಯಭೀತರಾಗಿ ಈಗಾಗಲೇ ಗಾಝಾ ಪಟ್ಟಿಯಿಂದ ಲಕ್ಷಾಂತರ ಜನರು ವಲಸೆ ಹೋಗಲಾರಂಭಿಸಿದ್ದಾರೆ. ಭಾರತವನ್ನೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಈ ನಿರಾಶ್ರಿತ ಜನತೆಗೆ ಮಾನವೀಯ ನೆರವು ನೀಡಲು ಮುಂದಾಗಿವೆ. ಅಕ್ಟೋಬರ್‌ 7ರಂದು ಆರಂಭವಾದ ಇಸ್ರೇಲಿ ದಾಳಿಯಲ್ಲಿ ಗಾಝಾ ಪಟ್ಟಿಯ ಶೇ 42ರಷ್ಟು ಮನೆಗಳು ಧ್ವಂಸವಾಗಿದ್ದು ಆರು ಲಕ್ಷಕ್ಕೂ ಹೆಚ್ಚು ಜನರು ನಿರ್ಗತಿಕರಾಗಿದ್ದಾರೆ. ವಿದ್ಯುತ್‌ ಪೂರೈಕೆ ಇಲ್ಲದೆ ಆಸ್ಪತ್ರೆ ಸೇವೆಗಳು ಸ್ಥಗಿತಗೊಂಡಿವೆ. ವಿಶ್ವ ಸಂಸ್ಥೆಯ ನೇತೃತ್ವದಲ್ಲಿ ಶಾಂತಿ ಪ್ರಕ್ರಿಯೆಗಳು ಜಾರಿಯಲ್ಲಿದ್ದರೂ ಹಮಾಸ್‌ ಬಂಡುಕೋರರನ್ನು ನಿರ್ಮೂಲ ಮಾಡುವವರೆಗೂ ದಾಳಿ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್‌ ಘೋಷಿಸಿರುವುದು ಆತಂಕ ಸೃಷ್ಟಿಸಿದೆ. ಈ ನಡುವೆ ಪ್ಯಾಲೆಸ್ಟೈನ್‌ ರಾಯಭಾರಿಗಳೂ ಕದನ ವಿರಾಮ ಘೋಷಿಸುವಂತೆ ಆಗ್ರಹಿಸುತ್ತಿದ್ದು ಶಾಂತಿ ಪ್ರಕ್ರಿಯೆಗೆ ಪ್ರಯತ್ನಿಸುವಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳನ್ನು ವಿನಂತಿಸಿಕೊಳ್ಳುತ್ತಿದ್ದಾರೆ. ಈ ನಡುವೆಯೇ ಇಸ್ರೇಲ್‌ನಿಂದ ಭೂ ದಾಳಿಯೂ ಮುಂದುವರೆದಿದ್ದು ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆಯುತ್ತಿರುವುದಾಗಿ ವರದಿಯಾಗುತ್ತಿದೆ.

ಭೌಗೋಳಿಕ ರಾಜಕೀಯದಿಂದಾಚೆಗೆ

ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ಹಾಗೂ ಸಾಮ್ರಾಜ್ಯಶಾಹಿಗಳಿಗೆ ಈ ಭೀಕರ ಯುದ್ಧದಲ್ಲಿ ಭೌಗೋಳಿಕ ರಾಜಕಾರಣದ ಫಲಾನುಫಲಗಳು ಮುಖ್ಯವಾಗುತ್ತವೆ. ಇಸ್ರೇಲ್‌ನೊಂದಿಗೆ ಕೆಲವು ಪ್ರಮುಖ ವಾಣಿಜ್ಯ ಒಪ್ಪಂದಗಳಿಗೆ ಮುಂದಾಗಿದ್ದ ಅರಬ್‌ ರಾಷ್ಟ್ರಗಳಿಗೆ ತಮ್ಮ ಆರ್ಥಿಕತೆಗೆ ಹಿನ್ನಡೆ ಉಂಟಾಗುವ ಭೀತಿ ಕಾಡುತ್ತದೆ. ಜಾಗತಿಕ ರಾಜಕಾರಣದಲ್ಲಿ ಸೃಷ್ಟಿಯಾಗಿರುವ ಇಸ್ಲಮೋಫೋಬಿಯಾ ಮತ್ತು ಇಸ್ಲಾಮಿಕ್‌ ಉಗ್ರವಾದಿಗಳ ದುಷ್ಕೃತ್ಯಗಳು ಇಡೀ ಜಗತ್ತನ್ನು ಎರಡು ಬಣಗಳಾಗಿ ವಿಂಗಡಿಸಿವೆ. ಧರ್ಮಯುದ್ಧದ ಹೆಸರಿನಲ್ಲಿ ಹಮಾಸ್‌ ಬಂಡುಕೋರರು ನಡೆಸಿದ ಅಮಾನುಷ ದಾಳಿಯಲ್ಲಿ ಬಲಿಯಾದ ಸಾವಿರಾರು ಇಸ್ರೇಲೀಯರು, ನಿರ್ಗತಿಕರಾದ ಸಾವಿರಾರು ಕುಟುಂಬಗಳು ಗಾಝಾ ಮೇಲಿನ ಇಸ್ರೇಲ್‌ ದಾಳಿಯನ್ನು ಪ್ರತೀಕಾರದ ಕ್ರಮವಾಗಿಯೇ ನೋಡುತ್ತವೆ. ಬಂಡವಾಳ, ಮಾರುಕಟ್ಟೆ ಮತ್ತು ಭೌಗೋಳಿಕ ರಾಜಕಾರಣದ ಅನಿವಾರ್ಯತೆಗಳಿಗೆ ಕಟ್ಟುಬಿದ್ದ ದೇಶಗಳು ಈ ಕಾಳಗದ ನಡುವೆಯೇ ತಮ್ಮ ಭೌಗೋಳಿಕ-ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಶ್ರಮಿಸುತ್ತವೆ.

ಆದರೆ ಮಾನವ ಸಮಾಜಕ್ಕೆ ಬಹುಮುಖ್ಯವಾಗಿ ಕಾಣಬೇಕಿರುವುದು ಇಸ್ರೇಲ್‌ನಲ್ಲಿ, ಗಾಝಾ ಪಟ್ಟಿಯಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಬಲಿಯಾಗುತ್ತಿರುವ ಅಮಾಯಕ ಜನತೆ. ಹಾಗೆಯೇ ಇಸ್ರೇಲ್‌ನ ಕ್ರೂರ ಸೇನಾಚರಣೆಯಿಂದ ಅನ್ನಾಹಾರಗಳಿಲ್ಲದೆ ಸಾವಿನೊಡನೆ ಸೆಣಸುತ್ತಿರುವ ಲಕ್ಷಾಂತರ ಜನತೆ. ಆಧುನಿಕ ಯುದ್ಧ ಎಂದರೆ ಕೇವಲ ಕೆಲವು ಸಾವಿರಗಳ ಸಾವುಗಳಲ್ಲ ಅಥವಾ ಸಾವಿರಾರು ಕುಟುಂಬಗಳ ನಿರ್ಗತಿಕತೆಯಲ್ಲ. ಇದನ್ನೂ ಮೀರಿ ಮಾನವ ಸಮಾಜವನ್ನು ನಿರಂತರವಾಗಿ ಕಾಡುವುದು ಯುದ್ಧಗಳು ಸೃಷ್ಟಿಸುವ ದೀರ್ಘಕಾಲೀನ ದುಷ್ಪರಿಣಾಮಗಳು. ಹೀಗೆ ನಿರ್ಗತಿಕರಾದ ಸಾಮಾನ್ಯ ಜನತೆಯನ್ನು ರಕ್ಷಿಸಲು ಯಾವ ಧರ್ಮವೂ ನೆರವಾಗುವುದಿಲ್ಲ ಅಥವಾ ಯಾವ ಉನ್ಮತ್ತ ರಾಷ್ಟ್ರೀಯತೆಯೂ ಸಹಾಯಕವಾಗುವುದಿಲ್ಲ. ಏಕೆಂದರೆ ಆಧುನಿಕ ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಬದುಕು ರೂಪಿಸುವುದು ಬಂಡವಾಳ ಮತ್ತು ಬಂಡವಾಳಿಗರ ಹಿತಾಸಕ್ತಿಯೇ ಹೊರತು ಜನತೆ ಅನುಸರಿಸುವ ಧರ್ಮಗಳಲ್ಲ.

ಆಧುನಿಕ ಯುದ್ಧಗಳಲ್ಲಿ ಬಳಸಲಾಗುವ ರಾಸಾಯನಿಕ ವಸ್ತುಗಳು, ವಿನಾಶಕಾರಿ ಶಸ್ತ್ರಾಸ್ತ್ರಗಳು ಬದುಕುಳಿದವರನ್ನೂ ಹಲವು ಪೀಳಿಗೆಯವರೆಗೆ ಕಾಡುತ್ತಲೇ ಇರುತ್ತದೆ. ಶಾಶ್ವತ ನಿರಾಶ್ರಿತರಂತೆ ಬದುಕಬೇಕಾದ ಯುದ್ಧಪೀಡಿತ ಜನಸಮುದಾಯಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದರೊಂದಿಗೇ ಭವಿಷ್ಯದ ತಲೆಮಾರಿನ ಬದುಕನ್ನು ಸುಗಮಗೊಳಿಸಲು ಹೆಣಗಾಡಬೇಕಾಗುತ್ತದೆ. ಯಾವುದೇ ದೇಶದಲ್ಲಿರಲಿ ಯುದ್ಧವಿರೋಧಿ ಮನಸುಗಳಿಗೆ ಗೋಚರಿಸಬೇಕಿರುವುದು ಈ ದುರಂತ ಜಗತ್ತು. ಇಸ್ರೇಲ್-ಹಮಾಸ್‌ ಪರ-ವಿರೋಧದ ನೆಲೆಗಳಲ್ಲಿ ನಿಂತು ಜೀವ ವಿರೋಧಿ ಯುದ್ಧವನ್ನು ಅಥವಾ ಭಯೋತ್ಪಾದಕ ದಾಳಿಯನ್ನು ಸಮರ್ಥಿಸುವ ಅಥವಾ ಮೌನವಾಗಿ ಸಮ್ಮತಿಸುವ ಮುನ್ನ ಪ್ರಜ್ಞಾವಂತ ಮನಸುಗಳು ಯುದ್ಧದಿಂದಾಗುವ ಭೀಕರ ಪರಿಣಾಮಗಳತ್ತ ಒಮ್ಮೆಯಾದರೂ ಗಮನಹರಿಸುವುದು ವರ್ತಮಾನದ ಅನಿವಾರ್ಯತೆಯಾಗಿದೆ. ಯುದ್ಧ ಸಂಭವಿಸುವುದು ಎರಡು ದೇಶಗಳ ನಡುವೆಯೇ ಆದರೂ ಅದರ ಹಿಂದಿನ ಸೂತ್ರಾಧರ ಶಕ್ತಿಗಳು ಬಂಡವಾಳ-ಮಾರುಕಟ್ಟೆ ಮತ್ತು ಆಧುನಿಕ ಶಸ್ತ್ರಾಸ್ತ್ರ ಉದ್ದಿಮೆಗಳಲ್ಲಿ ಅಡಗಿರುತ್ತವೆ.

ಈ ಔದ್ಯಮಿಕ ಜಗತ್ತಿಗೆ ಜೀವಹಂತಕ ಶಸ್ತ್ರಗಳು ಕೇವಲ ಒಂದು ಮಾರಾಟದ ವಸ್ತುವಿನಂತೆ ಕಾಣುತ್ತದೆ. ಇದನ್ನು ಬಳಸುವ ದೇಶಗಳಿಗೆ ರಕ್ಷಣಾ ಕವಚದಂತೆ ಕಾಣುತ್ತವೆ. ಆದರೆ ತಮ್ಮ ನಿತ್ಯ ಬೆವರಿನ ಶ್ರಮದಿಂದಲೇ ಜಗತ್ತಿನ ಸಂಪತ್ತಿನ ವೃದ್ಧಿಗೆ, ಸಾಮಾಜಿಕ ಸಮೃದ್ಧಿಗೆ, ಆರ್ಥಿಕ ಪ್ರಗತಿಗೆ ನೆರವಾಗುವ ಲಕ್ಷಾಂತರ ದುಡಿಮೆಯ ಜೀವಗಳಿಗೆ ಈ ಮಾರಕಾಸ್ತ್ರಗಳು ಜೀವ ವಿರೋಧಿಯಾಗಿಯೇ ಕಾಣಬೇಕಲ್ಲವೇ ? ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಜೀವ ಹಂತಕ ಯುದ್ಧಗಳಿಗೆ ತಕ್ಷಣದ ಪ್ರತಿರೋಧ ವ್ಯಕ್ತವಾಗಬೇಕಿರುವುದು ಈ ದುಡಿಯುವ ವರ್ಗಗಳಿಂದ. ಏಕೆಂದರೆ ಮತ್ತಾವುದೋ ಭೂ ಪ್ರದೇಶದಲ್ಲಿ ಅವರಂತೆಯೇ ದುಡಿದು ಬದುಕುವ ಲಕ್ಷಾಂತರ ಜನರು ನಿರ್ಗತಿಕರಾಗುತ್ತಿರುತ್ತಾರೆ. ಈ ಅರಿವನ್ನು ಮೂಡಿಸುವುದು ಪ್ರಜಾಪ್ರಭುತ್ವವನ್ನು ಪ್ರೀತಿಸುವ, ಮಾನವೀಯತೆಯನ್ನು ಬಯಸುವ, ಮನುಜ ಸಂವೇದನೆಯನ್ನು ಅಪೇಕ್ಷಿಸುವ ಪ್ರತಿಯೊಬ್ಬ ಜೀವಿಯ ಆದ್ಯತೆಯಾಗಬೇಕಿದೆ.

ಗಾಝಾ ಪಟ್ಟಿಯಲ್ಲಿ, ಇಸ್ರೇಲ್‌ನಲ್ಲಿ ಮಡಿದವರು, ನೊಂದವರು, ನಿರ್ಗತಿಕರಾದವರು, ಶಾಶ್ವತವಾಗಿ ಊನಗೊಂಡವರು ಹಾಗೂ ಭವಿಷ್ಯದ ಭರವಸೆಯನ್ನು ಕಳೆದುಕೊಂಡವರು ಮಾನವ ಸಮಾಜದ ಪ್ರಜ್ಞೆಯನ್ನು ವಿಚಲಿತಗೊಳಿಸಬೇಕಲ್ಲವೇ ? ಯುದ್ಧಗಳನ್ನು ಯಾರು ಮಾಡುತ್ತಾರೆ ಎನ್ನುವುದಕ್ಕಿಂತಲೂ ಯುದ್ಧಗಳು ಏಕೆ ಸಂಭವಿಸುತ್ತವೆ ಎಂಬ ಭೌಗೋಳಿಕ ರಾಜಕಾರಣದ ಒಳಸುಳಿಗಳನ್ನು ಅರ್ಥಮಾಡಿಕೊಂಡರೆ, ನಮ್ಮೊಳಗಿನ ಯುದ್ಧೋನ್ಮಾದವನ್ನೂ ನಿಯಂತ್ರಿಸಲು ಸಾಧ್ಯ. ದುರಾದೃಷ್ಟವಶಾತ್‌ 1960ರ ದಶಕದ ವಿಯೆಟ್ನಾಂ ಸಂದರ್ಭದಲ್ಲಿ ಧ್ವನಿಸಿದ ಯುದ್ಧವಿರೋಧಿ ದನಿಗಳು 2023ರ ವೇಳೆಗೆ ಕ್ಷೀಣಿಸಿದಂತೆ ಕಾಣುತ್ತಿದೆ. ಅಂದರೆ ಆರು ದಶಕಗಳಲ್ಲಿ ಮಾನವ ಸಮಾಜ ಕಲಿತಿರುವುದಾದರೂ ಏನು ? ಈ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಸಾಕು !
-೦-೦-೦-೦-

Tags: GazaHamasisrelNewsPratidhvani
Previous Post

JDSನ 13 ಶಾಸಕರು ಶೀಘ್ರವೇ ಕಾಂಗ್ರೆಸ್‌ಗೆ : ಸಚಿವ ಕೆ.ಎನ್‌ ರಾಜಣ್ಣ

Next Post

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ: ಸಿಎಂ ಬದಲಾವಣೆ ಬೇಡ ಎಂದ ಆರ್.ವಿ.ದೇಶಪಾಂಡೆ

Related Posts

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
0

https://youtube.com/live/zK_8kusfh_Q

Read moreDetails
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

July 12, 2025

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

July 12, 2025
Next Post
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ: ಸಿಎಂ ಬದಲಾವಣೆ ಬೇಡ ಎಂದ ಆರ್.ವಿ.ದೇಶಪಾಂಡೆ

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ: ಸಿಎಂ ಬದಲಾವಣೆ ಬೇಡ ಎಂದ ಆರ್.ವಿ.ದೇಶಪಾಂಡೆ

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada