~ಡಾ. ಜೆ ಎಸ್ ಪಾಟೀಲ.
ಒಂದು ದೇಶದಲ್ಲಿ ಒಬ್ಬ ರಾಜ ತುಂಬಾ ಅಹಂಕಾರಿಯಾಗಿದ್ದ. ರಾಜನಿಗೆ ಭಯಂಕರ ಹೊಟ್ಟೆಬಾಕ ಹಾಗು ಭ್ರಷ್ಟ ರಾಜಗುರುಗಳು ಮಾರ್ಗದರ್ಶನ ಮಾಡುತ್ತಿದ್ದರು. ರಾನಿಗೆ ವಿಧವಿಧದ ರಾಜಪೋಷಾಕು ಧರಿಸಿ ಕಂಡಕಂಡ ಕಡೆ ಪ್ರವಾಸ ಹೋಗುವ ಖಯಾಲಿ ಇತ್ತು. ಆತನ ಸುತ್ತಲು ಬಹಳಷ್ಟು ಚಾಡಿಕೋರರು ಮತ್ತು ಭಟ್ಟಂಗಿಗಳೇ ತುಂಬಿದ್ದರು. ಜನರ ಹಿತದ ಬಗ್ಗೆ ಅಲ್ಲಿ ಯಾರಿಗೂ ಕಾಳಜಿ ಇರಲಿಲ್ಲ. ಅದರಲ್ಲಿ ಒಬ್ಬ ನಿಯತ್ತಿನ ಆಸ್ಥಾನ ಪಂಡಿತ ರಾಜನ ಕಣ್ಣು ತೆರೆಸಿˌ ಆತನ ಅಹಂಕಾರ ಕಳೆಯಲು ಪ್ರಯತ್ನಿಸುತ್ತಿದ್ದ.

ಹೊರ ದೇಶದಿಂದ ಕೆಲವು ಕುಶಲಕರ್ಮಿಗಳನ್ನು ರಾಜಧಾನಿಗೆ ಕರೆಸಿದ ಆ ಪಂಡಿತನು ರಾಜನಿಗೆ ಅವರನ್ನು ಪರಿಚಯಿಸಿದ. ಆ ಕುಶಲಕರ್ಮಿಗಳು ಸುಂದರವಾದ ರಾಜ ಪೋಷಾಕು ತಯ್ಯಾರಿಸುವಲ್ಲಿ ಪರಿಣಿತರಾಗಿದ್ದರು. ಮುತ್ತು, ರತ್ನ, ಚಿನ್ನ, ಬೆಳ್ಳಿ, ವಜ್ರˌ ವೈಢೂರ್ಯಗಳಿಂದ ವಿವಿಧ ಬಗೆಯ ಆಡಂಬರದ ಪೋಷಾಕು ತಯಾರಿಸುವಲ್ಲಿ ಅವರು ಸಿದ್ಧಹಸ್ತರಾಗಿದ್ದರು. ಆ ಪೋಷಾಕಿನ ವಿಶೇಷತೆ ಏನೆಂದರೆ ಅದು ಸತ್ಯವಂತರು ಮತ್ತು ಅತ್ಯಂತ ದಕ್ಷರಾಗಿರುವ ಜನರ ಕಣ್ಣಿಗೆ ಮಾತ್ರ ಗೋಚರಿಸುತ್ತಿತ್ತು. ಸುಳ್ಳುಕೋರರುˌ ಅಸಮರ್ಥರಿಗೆ ಅದು ಕಾಣುತ್ತಿರಲಿಲ್ಲ. ಈ ಸಂಗತಿಯನ್ನು ಆ ಪಂಡಿತನು ರಾಜನಿಗೆ ವಿವರಿಸಿ ಹೇಳಿದನು.
ರಾಜಾ ಈ ಸಂಗತಿ ಕೇಳಿ ಬಹಳಷ್ಟು ಸಂತೋಷಗೊಂಡನು ಮತ್ತು ತನಗೆ ಅಂತಹ ಒಂದು ದುಬಾರಿ ಬೆಲೆಯ ಆಡಂಬರದ ಪೋಷಾಕು ತಯ್ಯಾರಿಸಲು ಆಜ್ಞಾಪಿಸಿದನು. ಆ ಕುಶಲಕರ್ಮಿಗಳಿಗೆ ಒಂದು ಪ್ರತ್ಯೇಕ ಮನೆಯನ್ನು ಗುರುತಿಸಿ ಅವರಿಗೆ ಆ ಮನೆಯಲ್ಲಿ ಪೋಷಾಕು ತಯ್ಯಾರಿಸುವ ಕೆಲಸ ಆರಂಭಿಸಲು ಆಜ್ಞಾಪಿಸಿದನು. ಆ ಹೊರ ಊರಿನ ಕುಶಲಕರ್ಮಿಗಳು ರಾಜನು ಕೊಟ್ಟ ಆ ಮನೆಯಲ್ಲಿ ತಂಗಿದ್ದು ರಾಜನಿಗಾಗಿ ವಿಶೇಷವಾದ ಆಡಬರದ ಪೋಷಾಕು ತಯ್ಯಾರಿಸುವ ಕೆಲಸ ಆರಂಭಿಸಿದರು. ರಾಜಾ ಆಗಾಗ ತನ್ನ ಸೇವಕರನ್ನು ಕಳಿಸಿ ಕೆಲಸದ ಬಗ್ಗೆ ವರದಿ ತಗೊಳ್ಳುತ್ತಿದ್ದನು.

ರಾಜನ ದರ್ಬಾರಿನಲ್ಲಿರುವ ಕೆಲವು ಪಂಡಿತರು ಕುಶಲಕರ್ಮಿಗಳು ತಂಗಿರುವ ಮನೆಗೆ ಹೋಗಿ ನೋಡಿದಾಗ ಅವರು ಪೋಷಾಕು ತಯ್ಯಾರಿಸುವ ಕೆಲಸ ಮಾತ್ರ ಅವರ ಕಣ್ಣಿಗೆ ಕಾಣುತ್ತಿತ್ತು. ಆದರೆ ಪೋಷಾಕು ಕಾಣುತ್ತಿರಲಿಲ್ಲ. ಪೋಷಾಕು ಕಾಣುತ್ತಿಲ್ಲ ಎಂದು ಬಹಿರಂಗವಾಗಿ ಯಾರಾಗಾದರೂ ಹೇಳಿದರೆ ತಮ್ಮನ್ನು ಜನ ಸುಳ್ಳುಕೋರರು ಮತ್ತು ಅಸಮರ್ಥರೆಂದುಕೊಂಡಾರೆಂದು ಹೆದರಿ ಪೋಷಾಕು ಭಾರಿ ಸುಂದರವಾಗಿದೆ ಎಂದು ಸುಳ್ಳು ಹೇಳಿ ಅಲ್ಲಿಂದ ಹಿಂದಿರುಗುತ್ತಿದ್ದರು. ಕೆಲವು ದಿನಗಳ ನಂತರ ರಾಜಾ ಕೂಡ ಅಲ್ಲಿಕೆ ಹೋಗಿ ನೋಡಿದಾಗ ಅಲ್ಲಿ ಪೋಷಾಕು ತಯ್ಯಾರಿಕೆಯ ಕೆಲಸ ನಡೆಯುತ್ತಿದ್ದುದು ಕಾಣಿಸಿತು. ಆದರೆ ರಾಜನಿಗೂ ಕೂಡ ಆ ವಿಶೇಷ ಪೋಷಾಕು ಕಾಣಿಸಲಿಲ್ಲ. ರಾಜಾ ಕೂಡ ಅದು ತನಗೆ ಕಾಣಲಿಲ್ಲ ಎಂದು ಹೇಳಿದರೆ ಜನರು ತನ್ನನ್ನು ಸುಳ್ಳ ಎನ್ನುತ್ತಾರೆಂದು ಸುಮ್ಮನೆ ಅಲ್ಲಿಂದ ನಿರ್ಗಮಿಸಿದ.

ಕೆಲವು ದಿನಗಳ ನಂತರ ಪೋಷಾಕು ಸಿದ್ಧವಾಯಿತು. ರಾಜಾ ಅದನ್ನುಟ್ಟು ನಗರ ಪ್ರದಕ್ಷಿಣೆ ಮಾಡುತ್ತಾನೆಂದು ರಾಜಧಾನಿಯಲ್ಲಿ ಡಂಗುರ ಹೊಡೆದು ಘೋಷಿಸಲಾಯ್ತು. ನಗರದಲ್ಲಿನ ಜನರೆಲ್ಲ ತಮ್ಮ ತಮ್ಮ ಮನೆಯ ಎದುರಿಗೆ ಮತ್ತು ˌ ತಮ್ಮ ಮನೆಯ ಮಹಡಿ ಹಾಗು ಬಾಲ್ಕನಿಗಳಲ್ಲಿ ರಾಜನನ್ನು ಆತನ ವಿಶೇಷವಾಗಿರುವ ಹೊಸ ಪೋಷಾಕಿನಲ್ಲಿ ನೋಡಲು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದರು. ಸೇವಕರು ರಾಜನಿಗೆ ಹೊಸ ಪೋಷಾಕು ತೊಡಿಸಿದರು. ನಗರ ಪ್ರದಕ್ಷಿಣೆಗೆ ರಾಜಾ ಹೊರಟ ನಿಂತ. ಆದರೆ ಆ ಬಟ್ಚೆ ಯಾರ ಕಣ್ಣಿಗೂ ಕಾಣಿಸುತ್ತಿರಲಿಲ್ಲ. ಆದರೂ ಜನರು ವ್ಹಾ ವ್ಹಾ ! ಎಂತ ಅದ್ಭುತˌ ಸುಂದರ ಪೋಷಾಕಿದುˌ ನಾವೆಂದೂ ಇಂತಹ ವಿಶೇಷ ಪೋಷಾಕು ನೊಡಿರಲಿಲ್ಲ ಎಂದು ಉದ್ಘಾರ ತೆಗೆದರು.
ಆಗ ರಸ್ತೆಯಲ್ಲಿ ನಿಂತು ನೋಡುತ್ತಿದ್ದ ಒಬ್ಬ ಪುಟ್ಟ ಬಾಲಕ ರಾಜಾ ಬೆತ್ತಲೆ ಇದ್ದಾನೆ ಎಂದು ಕಿರುಚಿಕೊಂಡನು. ರಾಜನಿಗೆ ಆಶ್ಚರ್ಯವಾಯ್ತು. ಆ ಬಾಲಕ ಸುಳ್ಳು ಹೆಳಲಾರ ಎಂದೆನಿಸಿತು. ರಾಜ ಆ ಬಟ್ಚೆ ತಯ್ಯಾರಿಸಿದವರನ್ನು ಕರೆಸಿ ಈ ಕುರಿತು ವಿಚಾರಿಸಿದನು. ಆಗ ಅವರು ತಾವು ಯಾವುದೇ ಪೋಷಾಕು ತಯ್ಯಾರಿಸಿಲ್ಲ, ನಿಮಗೆ ಯಾವುದೇ ಪೋಷಾಕು ತೊಡಿಸಿಲ್ಲ. ನೀವು ನಿಮ್ಮ ಭಟ್ಟಂಗಿಗಳು ಸೃಷ್ಟಿಸಿರುವ ಭ್ರಮೆಗೆ ಒಳಗಾಗಿದ್ದಿರಿ ಎಂದು ಹೇಳಿದರು. ಇದರಿಂದ ರಾಜಾ ತನ್ನ ಭಟ್ಟಂಗಿಗಳ ಕಡೆಗೆ ನೋಡಿದ. ಆದರೆ ಭಟ್ಟಂಗಿಗಳು ಮಾತ್ರ ತಲೆತಗ್ಗಿಸಿ ನೆಲ ನೋಡುತ್ತ ನಿಂತಿದ್ದರು.

ಈಗ ದೇಶದಲ್ಲಿ ಇದೇ ನಡೆಯುತ್ತಿದೆ. ನಮ್ಮನ್ನಾಳುವ ಸರಕಾರ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಸಂಪುಟದ ಸಚಿವರುˌ ಹಾಗು ಈ ದೇಶದ ಮಾಧ್ಯಮಗಳು, ಭಟ್ಟಂಗಿಗಳ ಪಾತ್ರ ಮಾಡುತ್ತಿವೆ. ಜನರಿಗೆ ಹಿಂದೂ-ಮುಸ್ಲಿಮ್ ಎಂಬ ನಶೆ ಏರಿಸಲಾಗಿದೆ. ಅವರಲ್ಲಿ ಸ್ವರ್ಗ ಸೃಷ್ಟಿಸುವ ಭ್ರಮೆ ಬಿತ್ತಲಾಗಿದೆ. ಅನ್ಯಧರ್ಮ ದ್ವೇಷ ಹಾಗು ನಕಲಿ ರಾಷ್ಟ್ರೀಯತೆಯ ವಿಷವುಂಡಿರುವ ದೇಶದ ಸಾಮಾನ್ಯ ಪ್ರಜೆಗಳ ಕಣ್ಣಿಗೆ ಸರಕಾರದ ಮಾಡುವ ಪ್ರತಿಯೊಂದು ಜನದ್ರೋಹಿ ಕೆಲಸಗಳು ಚನ್ನಾಗಿ ಕಾಣುತ್ತಿವೆ. ಆದರೆ ಸರಕಾರ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದೆ. ರಾಜಾ ಬೆತ್ತಲಾಗಿದ್ದಾನೆ. ಈ ಸಂಗತಿ ಎಲ್ಲಿಯವರೆಗೆ ಬಹಿರಂಗಗೊಳ್ಳುವುದಿಲ್ಲವೊ ಅಲ್ಲಿಯವರೆಗೆ ಈ ದೇಶ ಉಳಿಯುವುದೇ ಅನುಮಾನ!
— ಡಾ. ಜೆ ಎಸ್ ಪಾಟೀಲ.