ಚೆನೈ : ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರು ಇಂದು ದಿಡೀರ್ ಆಗಿ ಮಾಜಿ ಸಿಎಂ ಹಾಗೂ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರ ನಿವಾಸಕ್ಕೆ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವಿಜಯ್ ಇಂದು ಇಲ್ಲಿನ ಅಲ್ವಾರ್‌ಪೇಟೆಯಲ್ಲಿರುವ ಸ್ಟಾಲಿನ್ ನಿವಾಸಕ್ಕೆ ತೆರಳಿದ್ದರು. ಈ ವೇಳೆ ವಿಪಕ್ಷ ನಾಯಕ ಹಾಗೂ ಶಾಸಕ ಉದಯ್ ನಿಧಿ ಸ್ಟಾಲಿನ್ ವಿಜಯ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ವಿಜಯ್ ಅವರನ್ನು ಸ್ಟಾಲಿನ್ ಮತ್ತು ಉದಯನಿಧಿ ಸ್ಟಾಲಿನ್ ಆತ್ಮೀಯವಾಗಿ ಹಸ್ತಲಾಘವ ಮತ್ತು ಅಪ್ಪುಗೆಯ ಮೂಲಕ ಸ್ವಾಗತಿಸಿದರು. ಬಳಿಕ ಉಭಯ ನಾಯಕರು ಹೂಗುಚ್ಛಗಳನ್ನು ವಿನಿಮಯ ಮಾಡಿಕೊಂಡರು ಹಾಗೂ ರೇಷ್ಮೆ ಶಾಲುಗಳನ್ನು ಪರಸ್ಪರ ಹೊದಿಸಿಕೊಂಡು ಭೇಟಿಗೆ ಅರ್ಥ ನೀಡುವ ಪ್ರಯತ್ನ ಮಾಡಿದರು.
ಏಪ್ರಿಲ್ 23 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವಿಜಯ್ ಮತ್ತು ಸ್ಟಾಲಿನ್ ಅವರ ನಡುವಿನ ಮೊದಲ ಭೇಟಿ ಇದಾಗಿದ್ದು, ಚುನಾವಣಾ ಪ್ರಚಾರದಲ್ಲಿ ನೇರವಾಗಿ ವಿಜಯ್ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ : ಜನರ ಒಂದು ಪೈಸೆಯನ್ನೂ ಮುಟ್ಟಲ್ಲ, ತಮಿಳುನಾಡನ್ನು ಡ್ರಗ್ಸ್ ಮುಕ್ತ ಮಾಡ್ತೀನಿ : ನೂತನ ಸಿಎಂ ವಿಜಯ್ ಅಭಯ..
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮತ್ತು ವಿಜಯ್ ಅವರ ಟಿವಿಕೆ ನಡುವೆ ತೀವ್ರ ಹಣಾಹಣಿ ನಡೆದು ಡಿಎಂಕೆ ಹೀನಾಯವಾಗಿ ಸೋಲುಂಡ ನಂತರ ಈ ಭೇಟಿ ನಡೆದಿರುವುದರಿಂದ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.
ಸ್ಟಾಲಿನ್ ನಿವಾಸದಲ್ಲಿ ಉಭಯ ನಾಯಕರುಗಳು ಕೆಲ ಕ್ಷಣ ಮಾತುಕತೆ ನಡೆಸಿದ್ದಾರೆ. ಆದರೆ ಈ ಭೇಟಿಯು ಸೌಜನ್ಯತೆಯಿಂದ ಕೂಡಿದೆ ಎಂದು ಟಿವಿಕೆಯ ಮೂಲಗಳು ಹೇಳಿವೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಅದರಲ್ಲೂ ವಿಜಯ್ ತಮ್ಮ ಸರ್ಕಾರದ ಬಹುಮತ ಸಾಬೀತು ಪಡಿಸುವ ಸವಾಲಿನಲ್ಲಿದ್ದಾರೆ. ಈ ವೇಳೆ ಭೇಟಿಯು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.






