ಕ
ರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ; ನಾಳೆ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ: ಸಚಿವ ಕೆ.ಜೆ. ಜಾರ್ಜ್
– ಪ್ರದೇಶದ ವೈಶಿಷ್ಟ್ಯಕ್ಕೆ ಅನುಗುಣವಾದ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ಚೌಕಟ್ಟು
– ಸ್ಥಳೀಯ ಉದ್ಯೋಗ, ಜೀವನೋಪಾಯ ಮತ್ತು ಹೂಡಿಕೆಗೆ ಒತ್ತು
– ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಆದ್ಯತೆ

ಬೆಂಗಳೂರು, ಸೆಪ್ಟೆಂಬರ್ 17 : ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ ರೂಪಿಸಲಾಗಿದ್ದು, ಅದನ್ನು ನಾಳೆ (ಸೆಪ್ಟೆಂಬರ್ 18ರಂದು) ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಪರಿಗಣನೆಗೆ ಮಂಡಿಸಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಶ್ರೀ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಕರಾವಳಿ ಮತ್ತು ಮಲೆನಾಡು ಪ್ರದೇಶಗಳು ಸಮುದ್ರತೀರ, ನದಿಗಳು, ಪಶ್ಚಿಮ ಘಟ್ಟ, ಧಾರ್ಮಿಕ ಮತ್ತು ಸಾಂಸ್ಕೃತಿಕ ತಾಣಗಳು, ಪರಂಪರೆ ಹಾಗೂ ಪ್ರಕೃತಿ ಆಧಾರಿತ ಪ್ರವಾಸೋದ್ಯಮಕ್ಕೆ ವಿಶಿಷ್ಟ ಅವಕಾಶಗಳನ್ನು ಹೊಂದಿವೆ. ಇವುಗಳ ಅಭಿವೃದ್ಧಿಯನ್ನು ಪ್ರತ್ಯೇಕ ಯೋಜನೆಗಳಾಗಿ ನೋಡುವ ಬದಲು, ಸಮಗ್ರವಾಗಿ ರೂಪಿಸುವ ಅಗತ್ಯದ ಹಿನ್ನೆಲೆಯಲ್ಲಿ ನೀತಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ, ಖಾಸಗಿ ಹೂಡಿಕೆಗೆ ಅನುಕೂಲಕರ ವಾತಾವರಣ, ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆ ಮತ್ತು ಉದ್ಯೋಗ ಸೃಷ್ಟಿಗೆ ನೀತಿಯಲ್ಲಿ ಆದ್ಯತೆ ನೀಡಲಾಗಿದ್ದು, ಪರಿಸರ ಸಂವೇದನಾಶೀಲ ಪ್ರದೇಶಗಳ ಸಂರಕ್ಷಣೆಯನ್ನೂ ಕೇಂದ್ರದಲ್ಲಿಟ್ಟುಕೊಳ್ಳಲಾಗಿದೆ.


ಕರಾವಳಿ ಭಾಗದ ಮೀನುಗಾರರು, ಹೋಂಸ್ಟೇ ನಿರ್ವಾಹಕರು, ಸಣ್ಣ ಉದ್ಯಮಿಗಳು ಮತ್ತು ಯುವಕರಿಗೆ ಪ್ರವಾಸೋದ್ಯಮದ ಬೆಳವಣಿಗೆಯಿಂದ ನೇರ ಪ್ರಯೋಜನವಾಗುವಂತಹ ಮಾದರಿಯನ್ನು ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ.

“ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಗೆ ತಮ್ಮದೇ ಆದ ವಿಶಿಷ್ಟ ಪ್ರವಾಸೋದ್ಯಮ ಸಾಮರ್ಥ್ಯವಿದೆ. ಆ ಪ್ರದೇಶಗಳ ಭೌಗೋಳಿಕ, ಪರಿಸರ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳಿಗೆ ಹೊಂದುವ ಪ್ರತ್ಯೇಕ ನೀತಿ ಅಗತ್ಯವಿತ್ತು. ಸ್ಥಳೀಯ ಜನಪ್ರತಿನಿಧಿಗಳು, ಪ್ರವಾಸೋದ್ಯಮಿಗಳು, ಜನರೊಂದಿಗೆ ಸಮಾಲೋಚನೆ ನಡೆಸಿ, ಸ್ಥಳೀಯ ಆರ್ಥಿಕತೆ ಮತ್ತು ಉದ್ಯೋಗಕ್ಕೆ ಪ್ರವಾಸೋದ್ಯಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಜೋಡಿಸುವ ದೃಷ್ಟಿಯಿಂದ ನೀತಿ ರೂಪಿಸಲಾಗಿದೆ. ಈ ನೀತಿಯನ್ನು ನಾಳೆ ನಡೆಯಲಿರುವ ಸಚಿವ ಸಂಪುಟದಲ್ಲಿ ಮಂಡಿಸಲಾಗುವುದು.”

– ಶ್ರೀ ಕೆ.ಜೆ. ಜಾರ್ಜ್, ಮಾನ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು







