• Home
  • About Us
  • ಕರ್ನಾಟಕ
Wednesday, December 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿಶೇಷ

ಸಮಕಾಲೀನ ಘಟ್ಟದಲ್ಲಿ ನೆಹರೂ ಯುಗದ ಹಿನ್ನೋಟ

ಪ್ರತಿಧ್ವನಿ by ಪ್ರತಿಧ್ವನಿ
June 7, 2024
in ವಿಶೇಷ
0
ಸಮಕಾಲೀನ ಘಟ್ಟದಲ್ಲಿ ನೆಹರೂ ಯುಗದ ಹಿನ್ನೋಟ
Share on WhatsAppShare on FacebookShare on Telegram
  • ನಾ ದಿವಾಕರ

ವರ್ತಮಾನ ಭಾರತದಲ್ಲಿ ನಿಂತು ನೋಡುವಾಗ ನೆಹರೂ ವಿವಿಧ ಆಯಾಮಗಳಲ್ಲಿ ಕಾಣುತ್ತಾರೆ

ADVERTISEMENT

ಕಳೆದ ಹತ್ತು ವರ್ಷಗಳ ನರೇಂದ್ರಮೋದಿ-ಬಿಜೆಪಿ ಆಳ್ವಿಕೆಯಲ್ಲಿ ಅತಿ ಹೆಚ್ಚು ಸಾರ್ವಜನಿಕ ಚರ್ಚೆಗೊಳಗಾಗಿರುವ ವ್ಯಕ್ತಿ ಎಂದರೆ ಭಾರತದ ಪ್ರಥಮ ಪ್ರಧಾನಿ, ಆಧುನಿಕ ಭಾರತದ ಶಿಲ್ಪಿ ಎನ್ನಬಹುದಾದ ಜವಹರಲಾಲ್‌ ನೆಹರೂ. ಸ್ವಾತಂತ್ರ್ಯಪೂರ್ವ ಭಾರತದ ಆರ್ಥಿಕ ಸ್ಥಿತಿಗಳು ಹಾಗೂ ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶಗಳ ನೆಲೆಯಲ್ಲಿ ನಿಂತು ನೋಡುವಾಗ ನಮಗೆ ಕಾಣುವ ನೆಹರೂ, 76 ವರ್ಷಗಳ ನಂತರದ 2024ರ ಭಾರತದ ಸಾಮಾಜಿಕ ವಾತಾವರಣದಲ್ಲಿ ನಿಂತು ನೋಡುವ ನೆಹರೂಗಿಂತಲೂ ಭಿನ್ನವಾಗಿಯೇ ಇರಲು ಸಾಧ್ಯ. ಯಾವುದೇ ದೇಶದ ಇತಿಹಾಸದಲ್ಲೂ ಗತಕಾಲದ ಚಾರಿತ್ರಿಕ ಸನ್ನಿವೇಶಗಳನ್ನು ವರ್ತಮಾನಕ್ಕೆ ಮುಖಾಮುಖಿಯಾಗಿಸುವಾಗ ಅಂದಿನ ವ್ಯಕ್ತಿ ಕೇಂದ್ರಿತ ವ್ಯಾಖ್ಯಾನಗಳನ್ನು ಈ ಹೊತ್ತಿನ ಬೆಳವಣಿಗೆಗಳ ನಡುವೆ ಇಟ್ಟು ನೋಡಬಾರದು ಎಂಬ ಎಚ್ಚರ ಬೌದ್ಧಿಕ ವಲಯದಲ್ಲಿರಬೇಕಾಗುತ್ತದೆ. ಅಂದಿನದನ್ನು ಇಂದಿನದರೊಡನೆ ಇಟ್ಟು ನೋಡುವಾಗ ಯಥಾವತ್ತಾಗಿ ಗತ ಚರಿತೆಯನ್ನು ವರ್ತಮಾನದಲ್ಲಿ juxtapose ಮಾಡಿ ನೋಡುವ ವಿಧಾನವೇ ಮೂಲತಃ ಪ್ರಶ್ನಾರ್ಹವಾದುದು. ಇಲ್ಲಿ ಆಗಬೇಕಿರುವುದು ತಾತ್ವಿಕ ಮುಖಾಮುಖಿ ಹಾಗೂ ಸೈದ್ಧಾಂತಿಕ ಅನುಸಂಧಾನವಷ್ಟೇ.

ವರ್ತಮಾನ ಭಾರತದ ದುರಂತ ಎಂದರೆ ಇಲ್ಲಿ ಇತಿಹಾಸವನ್ನು ವರ್ತಮಾನದ ನೆಲೆಯಲ್ಲೂ, ವರ್ತಮಾನವನ್ನು ಚಾರಿತ್ರಿಕ ಚೌಕಟ್ಟಿನಲ್ಲೂ ಇಟ್ಟು ನೋಡಲಾಗುತ್ತಿದೆ. 1990ರ ಅಯೋಧ್ಯಾ ಬೆಳವಣಿಗೆಗಳ ನಂತರದಲ್ಲಿ ರೂಪುಗೊಂಡ ಸಾಂಸ್ಕೃತಿಕ ರಾಜಕಾರಣ ಹಾಗೂ 2014ರಿಂದ ಹುಟ್ಟಿಕೊಂಡಿರುವ ಮತ ಕೇಂದ್ರಿತ ಆಲೋಚನಾ ಕ್ರಮಗಳು ಇದನ್ನು ವ್ಯವಸ್ಥಿತವಾಗಿ ಪೋಷಿಸುತ್ತಾ ಬಂದಿದೆ. ಹಾಗಾಗಿಯೇ ನಾವು ಪುರಾಣ ಕಲ್ಪಿತ ರಾಮರಾಜ್ಯವನ್ನು ಡಿಜಿಟಲ್‌ ಯುಗದಲ್ಲಿ ಪರಿಭಾವಿಸಿಕೊಳ್ಳುತ್ತಲೇ, ಅತ್ಯಾಧುನಿಕ ತಂತ್ರಜ್ಞಾನ ಯುಗವನ್ನು ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ಸಮಾಜಕ್ಕೆ ಆರೋಪಿಸಿ ನೋಡುತ್ತೇವೆ. ಈ ನೋಟವೇ ನಮ್ಮ ಬೌದ್ಧಿಕ ವಲಯವನ್ನು ಮೌಲಿಕವಾಗಿ ಭ್ರಷ್ಟಗೊಳಿಸಿದ್ದು, ವಿಮೋಚನಾ ನಂತರದ ಭಾರತದ ಚರಿತ್ರೆಯನ್ನು ಆದಷ್ಟೂ ವಿಕೃತಗೊಳಿಸಲು ನೆರವಾಗುತ್ತಿದೆ. ನೆಹರೂ ಈ ವಿಕೃತ ನೋಟಕ್ಕೆ ಬಲಿಯಾಗಿರುವ ಪ್ರಥಮ ಸಂತ್ರಸ್ತರಾಗಿ ಕಾಣುತ್ತಾರೆ.

ನೆಹರೂ ಆರ್ಥಿಕತೆಯ ಸ್ವರೂಪ

ನೆಹರೂ ಆರ್ಥಿಕತೆ ಎಂದು ವ್ಯಾಖ್ಯಾನಿಸಲಾಗುವ ಅರ್ಥವ್ಯವಸ್ಥೆ ಮೂಲತಃ ಪೂರ್ಣ ಸಮಾಜವಾದಿ ಅಲ್ಲ. ಭಾರತವು ತನ್ನ ಸ್ವತಂತ್ರ ಆಳ್ವಿಕೆಯಲ್ಲಿ ಬಂಡವಾಳಿಗರ ಹಿತಾಸಕ್ತಿಯನ್ನು ಕಾಪಾಡಿಕೊಂಡೇ, ಭಾರತದ ಅತಿದೊಡ್ಡ ಸಮಸ್ಯೆಯಾಗಿದ್ದ ಬಡತನ, ಹಸಿವು, ನಿರುದ್ಯೋಗ, ನಿರಕ್ಷರತೆ, ನಿರ್ವಸತಿಕತೆ ಹಾಗೂ ಸಾಮಾಜಿಕ ಅಸಮಾನತೆಗಳನ್ನು ಕಾಪಾಡುವ ನಿಟ್ಟಿನಲ್ಲಿ ಅರ್ಥವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಸ್ವಾತಂತ್ರ್ಯಾನಂತರದಲ್ಲಿ ಬಂಡವಾಳಶಾಹಿಯನ್ನು ಪ್ರತಿನಿಧಿಸುವ ಉದಾರವಾದಿ ಧೋರಣೆಯ ಜೆ.ಆರ್.ಡಿ. ಟಾಟಾ , ಜಿ. ಡಿ.ಬಿರ್ಲಾ, ಪುರುಷೋತ್ತಮದಾಸ್‌ ಠಾಕುರ್‌ದಾಸ್‌, ಜಾನ್‌ ಮಥಾಯಿ ಮುಂತಾದವರು ತಯಾರಿಸಿದ ಬಾಂಬೆ ಪ್ಲಾನ್‌ ನೆಹರೂ ಆರ್ಥಿಕತೆಯನ್ನು ನಿರ್ದೇಶಿಸಿದ ಮೊಟ್ಟಮೊದಲ ದಸ್ತಾವೇಜು ಆಗಿತ್ತು. ಆದರೆ ಭಾರತ ಸಂಪೂರ್ಣವಾಗಿ ಬಂಡವಾಳಶಾಹಿಗೆ ತೆರೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ದೇಶವನ್ನು ಕಾಡುತ್ತಿದ್ದ ಬಡತನ ಮತ್ತು ನಿರುದ್ಯೋಗ, ಕೈಗಾರಿಕಾ ಉತ್ಪಾದನೆಯ ಕೊರತೆ ಹಾಗೂ ಕೃಷಿ ಬಿಕ್ಕಟ್ಟುಗಳು ಕೈಗಾರಿಕಾ ಬಂಡವಾಳದ ಹಿಡಿತದಿಂದ ಮುಕ್ತವಾಗಲೇಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿದ್ದವು. ಇದೇ ವೇಳೆ ಸಾರ್ವಜನಿಕ ಸಂಪತ್ತಿನ ಮೇಲೆ ಪ್ರಭುತ್ವದ ಒಡೆತನ, ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ವಿತರಣೆ ಹಾಗೂ ಬಳಕೆ ಮತ್ತು ದುಡಿಯುವ ವರ್ಗಗಳಿಗೆ ಬಂಡವಾಳಶಾಹಿಯ ಶೋಷಣೆಯಿಂದ ವಿಮೋಚನೆ ದೊರಕಿಸುವಂತಹ ಕಾರ್ಮಿಕ ನೀತಿಗಳು ಭಾರತದ ಸಂದರ್ಭದಲ್ಲಿ ಅನಿವಾರ್ಯವಾಗಿದ್ದವು. ಸೋವಿಯತ್‌ ಮಾದರಿಯ ಒಂದು ರೂಪ ಈ ನಿಟ್ಟಿನಲ್ಲಿ ಮಾರ್ಗದರ್ಶಕವಾಗಿದ್ದು ವಾಸ್ತವ.

1950ರಲ್ಲಿ ಅಂಗೀಕರಿಸಲ್ಪಟ್ಟ ಭಾರತೀಯ ಸಂವಿಧಾನವೂ ಸಹ ಮೂಲತಃ ಬಂಡವಾಳಶಾಹಿ ವಿರೋಧಿಯಾಗಿರಲಿಲ್ಲ. ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಆಶಯದಂತೆ ಭೂಮಿಯ ಮತ್ತು ನೈಸರ್ಗಿಕ ಸಂಪತ್ತಿನ ರಾಷ್ಟ್ರೀಕರಣಕ್ಕೆ ಆಸ್ಪದ ನೀಡುವಂತಹ ಯಾವುದೇ ಅನುಚ್ಛೇದಗಳು ಸಂವಿಧಾನದಲ್ಲಿ ಅಳವಡಿಸಲಾಗಲಿಲ್ಲ. ಸಂಪತ್ತಿನ ಕ್ರೋಢೀಕರಣವನ್ನು ನಿಯಂತ್ರಿಸುವ ನಿಯಮಗಳಾಗಲೀ, ಸಂಪತ್ತಿನ ಮರುಹಂಚಿಕೆ ಅಥವಾ ಸಮಾನ ವಿತರಣೆಯ ನಿಯಮಗಳಾಗಲೀ ಸಂವಿಧಾನದ ಮೂಲ ತತ್ವಗಳಲ್ಲಿ ಅಡಕವಾಗಿರಲಿಲ್ಲ. ಸಮ ಸಮಾಜ, ಸಮಾನತೆ ಮತ್ತು ಸಮಾನ ಹಕ್ಕುಗಳ ನೆಲೆಯಲ್ಲಿ ಅಂಗೀಕರಿಸಲ್ಪಟ್ಟ ಸಂವಿಧಾನದ ಮೂಲ ಆಶಯ ತಾತ್ವಿಕವಾಗಿ ಸಮಾಜವಾದಿಯಾಗಿದ್ದುದನ್ನು ಒಪ್ಪಲೇಬೇಕು. ಆದರೆ ಆಳ್ವಿಕೆಯನ್ನು ನಿರ್ವಹಿಸುವ ಸರ್ಕಾರಗಳು ಬಂಡವಾಳಶಾಹಿ ಅಭಿವೃದ್ಧಿ ಪಥವನ್ನು ಅನುಸರಿಸಲು ಯಾವುದೇ ಸಾಂವಿಧಾನಿಕ ಅಡೆತಡೆಗಳೂ ಇರಲಿಲ್ಲ. ಹಾಗಾಗಿಯೇ 1970ರ ದಶಕದಲ್ಲಿ ಸಮಾಜವಾದಿ ಚಿಂತನೆಗಳಿಗೆ ನೆಲೆಯಾದ ಸಂವಿಧಾನವು 2020ರ ದಶಕದಲ್ಲಿ ನವ ಉದಾರವಾದಕ್ಕೂ ನೆಲೆಯಾಗುತ್ತಿದೆ.

ಈ ಸಂದರ್ಭದಲ್ಲೇ ಬಡ ಭಾರತದ ಆಳ್ವಿಕೆಯನ್ನು ವಹಿಸಿಕೊಂಡ ನೆಹರೂ ತಮ್ಮ ಮಿಶ್ರ ಆರ್ಥಿಕ ನೀತಿಯ ಅನುಸಾರ ಒಂದೆಡೆ ಸ್ಥಳೀಯ ಬಂಡವಾಳಿಗರನ್ನು ಪೋಷಿಸುವ ಮತ್ತೊಂದೆಡೆ ಸಮಾಜವಾದಿ ತತ್ವಗಳ ಅನುಸಾರ ದುಡಿಯುವ ವರ್ಗಗಳಿಗೆ ಒಂದು ಸುಸ್ಥಿರ ಬದುಕು ನೀಡುವ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರು. ಭಾರತದ ಆರ್ಥಿಕತೆಯಲ್ಲಿ, ಕೃಷಿಯನ್ನೂ ಒಳಗೊಂಡಂತೆ, ಯಾವುದೇ ಆರ್ಥಿಕ ವಲಯದಲ್ಲೂ ಬಂಡವಾಳದ ಉತ್ಪಾದನೆಯಾಗುತ್ತಿರಲಿಲ್ಲ. ಸರ್ಕಾರದ ಮೂಲಕ ಅಥವಾ ವಿದೇಶಿ ಸಂಸ್ಥೆಗಳ ಮೂಲಕ ಹೂಡಲಾಗುತ್ತಿದ್ದ ಬಂಡವಾಳವು ಉತ್ಪಾದಿಸುತ್ತಿದ್ದ ಸಂಪತ್ತಿನ ಮೇಲೆ ಸರ್ಕಾರ ತನ್ನ ನಿಯಂತ್ರಣವನ್ನು ಸಾಧಿಸುತ್ತಿತ್ತು. ಇದರ ಫಲವೇ ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್‌, ವಿಮೆ ಮುಂತಾದ ಹಣಕಾಸು ವಲಯದ ರಾಷ್ಟ್ರೀಕರಣಕ್ಕೆ ನಾಂದಿ ಹಾಡಿತ್ತು. ಸರ್ಕಾರ ಹೂಡಿದ ಬಂಡವಾಳವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಖಾಸಗಿ ಬಂಡವಾಳಿಗರೇ ವಹಿಸಿಕೊಂಡಿದ್ದನ್ನು ಭಾರತದ ಔದ್ಯೋಗಿಕ ಬೆಳವಣಿಗೆಯಲ್ಲಿ ಸ್ಪಷ್ಟವಾಗಿ ಕಾಣಬಹುದು.

ಮತ್ತೊಂದು ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಔದ್ಯೋಗಿಕ ವಲಯವನ್ನು ಸಲಹುವ ಮೂಲಕ ನೆಹರೂ ದೇಶದ ಅಸಂಖ್ಯಾತ ಶ್ರಮಜೀವಿಗಳಿಗೆ ಸುಸ್ಥಿರ ಬದುಕನ್ನು ರೂಪಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಈ ನೀತಿಯ ಅಡಿಯಲ್ಲೇ ಬೆಳೆದ ಸಾರ್ವಜನಿಕ ಉದ್ದಿಮೆಗಳು, ತಯಾರಿಕಾ ಘಟಕಗಳು, ಕೈಗಾರಿಕಾ ಉತ್ಪನ್ನದ ಕಾರ್ಖಾನೆಗಳು, ಕೃಷಿ ಮತ್ತು ಹೈನುಗಾರಿಕೆಯ ಔದ್ಯಮಿಕ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ಶಿಕ್ಷಣ ಮತ್ತು ಆರೋಗ್ಯವನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಂತಹ ಶೈಕ್ಷಣಿಕ, ವೈದ್ಯಕೀಯ, ಯೋಗಕ್ಷೇಮದ ಕೇಂದ್ರಗಳು ಇವೆಲ್ಲವೂ ನೆಹರೂ ಕಾಲದ ಅಮೂಲ್ಯ ಕೊಡುಗೆಗಳು. ನೆಹರೂ ಆರ್ಥಿಕತೆಯ ಈ ಮಾದರಿಯನ್ನು ನೇರವಾಗಿ ಸೋವಿಯತ್‌ ಮಾದರಿ ಎನ್ನುವುದಕ್ಕಿಂತಲೂ ಸೋವಿಯತ್‌ ಮಾದರಿಯ ಒಂದು ಭಿನ್ನ ಸ್ವರೂಪ ಎನ್ನಬಹುದು. ಇದು ಸ್ಥಳೀಯ ಬಂಡವಾಳಿಗರಿಗೆ ಸಂಪತ್ತಿನ ಕ್ರೋಢೀಕರಣಕ್ಕೆ ಯಾವುದೇ ಅಡ್ಡಿಯುಂಟುಮಾಡಲಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಹಾಗೆಯೇ ಸಂಪತ್ತಿನ ಸಮಾನ ಹಂಚಿಕೆಯ ಯಾವುದೇ ಯೋಜನೆಗಳೂ ಸಹ ನೆಹರೂ ಆರ್ಥಿಕತೆಯಲ್ಲಿ ಕಾಣಲಾಗುವುದಿಲ್ಲ.

ಹಾಗಾಗಿ ನೆಹರೂ ಆರ್ಥಿಕ ಚಿಂತನೆಗಳನ್ನು, ಅನುಸರಿಸಿದ ಮಾದರಿಯನ್ನು ಆ ಕಾಲಘಟ್ಟದ ಸ್ವಾತಂತ್ರ್ಯೋತ್ತರ ಭಾರತದ ಅನಿವಾರ್ಯತೆಗಳು ಎಂದಷ್ಟೇ ಭಾವಿಸಬಹುದು. ಇಂದಿಗೂ ಸಹ ಭಾರತದ ಶೇ 65ರಷ್ಟು ಜನಸಂಖ್ಯೆ ಕೃಷಿಯನ್ನೇ ಅವಲಂಬಿಸಿರುವುದನ್ನು ಗಮನಿಸಿದರೆ, 70 ವರ್ಷಗಳ ಹಿಂದಿನ ಭಾರತವನ್ನು ಸುಲಭವಾಗಿ ಗ್ರಹಿಸಬಹುದಲ್ಲವೇ ? ನಗರೀಕರಣಕ್ಕೆ ಆಗಷ್ಟೇ ತೆರೆದುಕೊಳ್ಳುತ್ತಿದ್ದ ಒಂದು ಸಮಾಜದಲ್ಲಿ ಶ್ರಮಿಕ ಜಗತ್ತಿಗೆ ಒಂದು ನಿರ್ದಿಷ್ಟ ಮಾರ್ಗ ಮತ್ತು ಕಾಯಕಲ್ಪ ಒದಗಿಸಿದ್ದು ನೆಹರೂ ಆರ್ಥಿಕತೆಯೇ ಎನ್ನುವುದು ನಿರ್ವಿವಾದ ಅಂಶ. ಇದರಿಂದ ಮಾರುಕಟ್ಟೆ ಮತ್ತು ಮುಕ್ತ ಆರ್ಥಿಕತೆಗೆ ಅಡ್ಡಿಯಾಗಿದ್ದು ವಾಸ್ತವ ಆದರೆ 1990ರಲ್ಲಿ ತೆರೆದುಕೊಂಡ ಮುಕ್ತ ಆರ್ಥಿಕತೆಯಿಂದ ಈಗ ಆಗಿರುವ ಅಪಾಯಗಳನ್ನು ಗಮನಿಸಿದರೆ ನೆಹರೂ ಆರ್ಥಿಕತೆಯ ದಾರ್ಶನಿಕತೆ ಸ್ಪಷ್ಟವಾಗುತ್ತದೆ.

ಸಂವಿಧಾನದ ಸಾಮಾಜಿಕ ಆಶಯಗಳು

ನೆಹರೂ ಮೂಲತಃ ಭಾರತದ ಸಂವಿಧಾನಕ್ಕೆ ಪೂರ್ಣ ಬದ್ಧತೆ ಹೊಂದಿದ್ದ ನಾಯಕರಾಗಿದ್ದರು. ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನೆಹರೂ ಆಳ್ವಿಕೆ ಅನುಸರಿಸಿದ ಸಾಮಾಜಿಕ ನೀತಿಗಳು ಮತ್ತು ಉದಾರವಾದಿ ನಿಲುವುಗಳು ದೇಶದ ತಳಸಮುದಾಯಗಳಿಗೆ, ಅಲ್ಪಸಂಖ್ಯಾತರಿಗೆ, ಅವಕಾಶವಂಚಿತರಿಗೆ ಹಾಗೂ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ಸುಭದ್ರ ಜೀವನವನ್ನು ಕಲ್ಪಿಸುವ ನಿಟ್ಟಿನಲ್ಲಿ ರೂಪಿಸಲ್ಪಟ್ಟಿದ್ದವು. ಸಾಂಪ್ರದಾಯಿಕತೆ ಹಾಗೂ ಅದರ ಸುತ್ತ ಶತಮಾನಗಳಿಂದ ಆವರಿಸಿದ್ದ ಅವೈಜ್ಞಾನಿಕ ನಂಬಿಕೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ನೆಹರೂ ಆಳ್ವಿಕೆಯು ಅನುಸರಿಸಿದ ವೈಜ್ಞಾನಿಕ ಶಿಕ್ಷಣ ಮಾದರಿ ಮತ್ತು ವೈಚಾರಿಕ ಬೌದ್ಧಿಕ ಚಿಂತನೆಗಳು ವರ್ತಮಾನದ ಭಾರತವನ್ನು ವಿಜ್ಞಾನ ಜಗತ್ತಿನ ಮುಂಚೂಣಿಯಲ್ಲಿ ನಿಲ್ಲಿಸಲು ನೆರವಾಗಿವೆ. ಇಂದು ಭಾರತ ಚಂದ್ರನ ಮೇಲೆ ಹೆಜ್ಜೆ ಊರಿದ್ದರೆ ಅದರ ಶ್ರೇಯ ಮೂಲತಃ ನೆಹರೂ ಯುಗಕ್ಕೆ ಸಲ್ಲಬೇಕು.

ನೆಹರೂ ಸ್ಥಾಪಿಸಿದ ವಿಜ್ಞಾನ, ಇತಿಹಾಸ ಹಾಗೂ ಶೈಕ್ಷಣಿಕ ಸಂಸ್ಥೆಗಳು ಉತ್ಪಾದಿಸಿದ ಬೌದ್ಧಿಕ ಸಂಪತ್ತು ಇವತ್ತಿನ ಚಂದ್ರಯಾನದಲ್ಲಿ, ಡಿಜಿಟಲ್‌ ಕ್ರಾಂತಿಯಲ್ಲಿ ಹಾಗೂ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆಯಲ್ಲವೇ ? ಈ ಸಾಧನೆಗಳನ್ನು ಮರೆಮಾಚುವುದು ಹಿಂದುತ್ವ ರಾಜಕಾರಣದ ಹಾಗೂ ಅದನ್ನು ಪ್ರಧಾನವಾಗಿ ನಿರ್ದೇಶಿಸುವ ಭಾರತದ ಸಾಂಪ್ರದಾಯಿಕ ಸಮಾಜದ ಕಾರ್ಯಸೂಚಿಯಾಗಿದೆ. ತನ್ಮೂಲಕ ಭಾರತವನ್ನು ಪುನಃ ಪ್ರಾಚೀನ ನಂಬಿಕೆಗಳ ಕೂಪಕ್ಕೆ ತಳ್ಳಿ, ಕೆಳಸ್ತರದ ಸಮಾಜವನ್ನು ಮೇಲಿನಿಂದ ನಿಯಂತ್ರಿಸುವ ಹುನ್ನಾರವನ್ನು ಇಲ್ಲಿ ಗುರುತಿಸಬಹುದು. ಸಾಂವಿಧಾನಿಕ-ರಾಚನಿಕ ಉಪಕ್ರಮಗಳ ನೆರವಿನಿಂದ ಸಾಮಾಜಿಕ ಸಮಾನತೆ, ಸಾಂಸ್ಕೃತಿಕ ವಿಮೋಚನೆ ಹಾಗೂ ಬೌದ್ಧಿಕ ಔನ್ನತ್ಯವನ್ನು ಗಳಿಸಿರುವ ತಳಸಮುದಾಯದ ಅಪಾರ ಜನಸ್ತೋಮವನ್ನು ಮರಳಿ ಶೋಷಣೆಯ ಸಂಕೋಲೆಗಳಲ್ಲಿ ಬಂಧಿಸುವ ಸಲುವಾಗಿಯೇ ನೆಹರೂ ಅವರ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ವ್ಯವಸ್ಥಿತವಾಗಿ ಅಲ್ಲಗಳೆಯಲಾಗುತ್ತಿದೆ.

ಕಾಲದ ಅನಿವಾರ್ಯತೆಗಳ ನೆಲೆಯಲ್ಲಿ

ಭಾರತ ಪಾಶ್ಚಿಮಾತ್ಯ ಚಿಂತನೆಗಳಿಗೆ ತೆರೆದುಕೊಂಡಿದ್ದರಿಂದ ಇಲ್ಲಿನ ಪಾರಂಪರಿಕ ಚಿಂತನೆಗಳಿಗಾಗಲೀ, ಚಿಂತನಾ ವಾಹಿನಿಗಳಿಗಾಗಲೀ ಯಾವುದೇ ಅಪಾಯ ಎದುರಾಗಿಲ್ಲ. ಬ್ರಿಟೀಷ್‌ ಆಳ್ವಿಕೆಯಲ್ಲಿ ಆಧುನಿಕ ಶಿಕ್ಷಣ, ಇಂಗ್ಲಿಷ್‌ ಶಿಕ್ಷಣಕ್ಕೆ ತೆರೆದುಕೊಂಡಿದ್ದರಿಂದಲೇ ಭಾರತದ ಶೋಷಿತ ಸಮುದಾಯಗಳು ಇಂದು ವಿಜ್ಞಾನ ಯುಗದಲ್ಲೂ ಸಹ ಮುಂಚೂಣಿ ಪಾತ್ರ ವಹಿಸುತ್ತಿವೆ. ಇಸ್ರೋದಂತಹ ಸಂಸ್ಥೆಗಳ ಇತಿಹಾಸವನ್ನು ಒಳಹೊಕ್ಕು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಆಧುನಿಕ ಪಾಶ್ಚಿಮಾತ್ಯ ಚಿಂತನೆಗೆ ತೆರೆದುಕೊಂಡಿದ್ದರೂ ನೆಹರೂ ಭಾರತದ ಪರಂಪರೆ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಎಲ್ಲಿಯೂ ನಿರಾಕರಿಸಿಲ್ಲ ಎನ್ನುವುದು ಅವರ ಡಿಸ್ಕವರಿ ಆಫ್‌ ಇಂಡಿಯಾ ಕೃತಿಯಲ್ಲಿ ಸ್ಪಷ್ಟವಾಗುತ್ತದೆ. ಪರಂಪರೆ ಮತ್ತು ಸಂಸ್ಕೃತಿಯನ್ನು ಆಧುನಿಕತೆಯ ನೆಲೆಯಲ್ಲಿ ಮರು ನಿರ್ವಚನೆ ಮಾಡುವುದರಿಂದ ಮೂಲ ಅಡಿಪಾಯವೇ ಶಿಥಿಲವಾಗುತ್ತದೆ ಎನ್ನುವ ವಿತಂಡವಾದಕ್ಕೆ ಹೆಚ್ಚಿನ ಮನ್ನಣೆ ನೀಡಬೇಕಿಲ್ಲ.

ಇಂದಿನ ರಾಜಕೀಯ ಸಂಕಥನಗಳಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗಿರುವುದು ನೆಹರೂ ಅವರ ವಿದೇಶಾಂಗ ನೀತಿ ಮತ್ತು ಚೀನಾ ಯುದ್ಧದ ಸೋಲಿನ ಹಿನ್ನೆಲೆಯಲ್ಲಿನ ಮಿಲಿಟರಿ ವೈಫಲ್ಯ. ಶೀತಲ ಯುದ್ಧದ ಯುಗದಲ್ಲಿ ಅಲಿಪ್ತ ನೀತಿಯನ್ನು ಅನುಸರಿಸುವ ಮೂಲಕ ಅಮೆರಿಕದ ಸಾಮ್ರಾಜ್ಯಶಾಹಿ ಹಿಡಿತಕ್ಕೆ ಸಿಗದೆ ಭಾರತವನ್ನು ಒಂದು ಶಾಂತಿಪ್ರಿಯ ರಾಷ್ಟ್ರವನ್ನಾಗಿ ಮಾಡಿದ ಕೀರ್ತಿ ನೆಹರೂ ಅವರಿಗೆ ಸಲ್ಲಬೇಕು. ಸ್ವಾತಂತ್ರ್ಯಾನಂತರದ ಭಾರತ ಮಿಲಿಟರಿಕರಣಕ್ಕೆ ಪೂರಕವಾದ ಆರ್ಥಿಕ ಬುನಾದಿಯನ್ನು ಹೊಂದಿರಲಿಲ್ಲ ಎನ್ನುವುದನ್ನು ಗಮನಿಸಬೇಕು. ಒಂದು ವೇಳೆ ಆ ಸಂದರ್ಭದಲ್ಲಿ ವರ್ತಮಾನದಲ್ಲಿ ಅನುಸರಿಸಲಾಗುತ್ತಿರುವ ನೀತಿಯನ್ನೇ ಅನುಕರಿಸಿದ್ದಲ್ಲಿ ಭಾರತವು ತಾನು ನಿರ್ಮಿಸಿದಂತಹ ಸಾರ್ವಜನಿಕ ಸಂಪತ್ತನ್ನು, ಮಾನವ ಸಂಪನ್ಮೂಲಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ನೆಹರೂ ವಿದೇಶಾಂಗ ನೀತಿಯನ್ನು ಆ ಕಾಲಘಟ್ಟದ ಪ್ರಿಸಂ ಮೂಲಕ ನೋಡಬೇಕೇ ಹೊರತು, ಇವತ್ತಿನ ಸಾಮ್ರಾಜ್ಯಶಾಹಿ ಮಸೂರದ ಮೂಲಕ ಅಲ್ಲ.

ಈ ವಿದೇಶಾಂಗ ನೀತಿಯಲ್ಲಿ ಕೆಲವು ಪ್ರಮಾದಗಳಾಗಿರುವುದನ್ನು ಅಲ್ಲಗಳೆಯಲೂ ಆಗುವುದಿಲ್ಲ. ಅತಿಯಾದ ಸೋವಿಯತ್‌ ಅವಲಂಬನೆಯೂ ಕೆಲವು ಸಂದರ್ಭಗಳಲ್ಲಿ ನೆಹರೂ ಸರ್ಕಾರದ ತಪ್ಪು ನಿರ್ಧಾರಗಳಿಗೆ ಕಾರಣವಾಗಿರಬಹುದು. ಆದರೆ ಅದನ್ನು ಸರಿಪಡಿಸುವ ಜವಾಬ್ದಾರಿ ತದನಂತರದ ಸರ್ಕಾರಗಳ ಮೇಲಿತ್ತಲ್ಲವೇ ? ಈ ವೈಫಲ್ಯವನ್ನು ನಾವು ಗುರುತಿಸಬೇಕಿದೆ. ಇಂದು ಭಾರತ ಅಮೆರಿಕದ ಸಾಮ್ರಾಜ್ಯಶಾಹಿ ವಿಸ್ತರಣಾವಾದಕ್ಕೆ ನಿಕಟವಾಗುತ್ತಿದ್ದು, ಮಿಲಿಟರೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತಿದೆ. ಆದರೆ ಮೂಲ ಸೌಕರ್ಯಗಳಿಂದಲೇ ವಂಚಿತರಾದ ಅಪಾರ ಜನಕೋಟಿಯ ಬದುಕು ಬವಣೆಯನ್ನು ನಿರ್ಲಕ್ಷಿಸಿ ನೆಹರು ಸರ್ಕಾರ ಮಿಲಿಟರೀಕರಣ ಅಥವಾ ಶಸ್ತ್ರಾಸ್ತ್ರ ಕ್ರೊಢೀಕರಣಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿರಲಿಲ್ಲ. ನೆಹರೂ ಸರ್ಕಾರದ ಈ ನೀತಿಯ ಪರಿಣಾಮವಾಗಿಯೇ 1950-70ರ ನಡುವೆ ಭಾರತ ಶೈಕ್ಷಣಿಕ ವಲಯದಲ್ಲಿ, ಆರೊಗ್ಯ ಕ್ಷೇತ್ರದಲ್ಲಿ ಶಿಖರಪ್ರಾಯ ಅಭಿವೃದ್ಧಿ ಸಾಧಿಸಿರುವುದನ್ನು ಗುರುತಿಸಬೇಕಿದೆ. ಆ ಕಾಲಘಟ್ಟದ ಉನ್ನತ ವಿಜ್ಞಾನ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳೇ 21ನೆಯ ಶತಮಾನದ ಡಿಜಿಟಲ್‌ ಯುಗದಲ್ಲಿ ಭಾರತವನ್ನು ಜಾಗತಿಕವಾಗಿ ಉನ್ನತಿಗೇರಿಸಿರುವುದನ್ನು ಗುರುತಿಸಬೇಕಿದೆ.

ನೆಹರೂ ಆಡಳಿತ ನೀತಿಯಲ್ಲಿ ಆಕ್ಷೇಪಾರ್ಹವಾದ ಒಂದು ಅಂಶವೆಂದರೆ ಅನುವಂಶೀಯ ಆಳ್ವಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದು. ಈ ಆರೋಪವನ್ನು ನೆಹರೂ ಕುಟುಂಬದ ಮೇಲೆ ಮಾತ್ರ ಹೊರಿಸುವುದು ಬೌದ್ಧಿಕ ದಾರಿದ್ರ್ಯದ ಸಂಕೇತವಷ್ಟೇ. ಏಕೆಂದರೆ 2024ರ ಚುನಾವಣೆಗಳಲ್ಲೂ ಪಕ್ಷಾತೀತವಾಗಿ (ಎಡಪಕ್ಷಗಳ ಹೊರತಾಗಿ) ಗುರುತಿಸಬಹುದಾದ ಒಂದು ಸಮಾನ ಎಳೆ ಎಂದರೆ ಅನುವಂಶೀಯ ಆಳ್ವಿಕೆಯ ನೆಲೆಗಳು. ಇದು ಭಾರತದಲ್ಲಿ ಪಾರಂಪರಿಕವಾಗಿ ಬೇರೂರಿರುವ ಊಳಿಗಮಾನ್ಯ ಧೋರಣೆಯ ಪ್ರತಿಫಲ ಎಂದು ಹೇಳಬೇಕಿಲ್ಲ. ಕುಟುಂಬ ರಾಜಕಾರಣ ಇಂದು ಪರಾಕಾಷ್ಠೆ ತಲುಪಿರುವುದನ್ನು ಗುರುತಿಸುತ್ತಲೇ, ಕಳೆದ ಮೂರು ದಶಕಗಳಿಂದ ಗಾಂಧಿ ಅಥವಾ ನೆಹರೂ ಕುಟುಂಬದ ಯಾವೊಬ್ಬ ವ್ಯಕ್ತಿಯೂ ದೇಶದ ಆಳ್ವಿಕೆಯ ಚುಕ್ಕಾಣಿ ಹಿಡಿದಿಲ್ಲ ಎಂಬ ಅಂಶವನ್ನೂ ಗಮನಿಸಬೇಕಿದೆ.

ಅನುವಂಶೀಯ ಆಳ್ವಿಕೆಯಿಂದ ನೆಹರೂ ಅಥವಾ ಅವರ ಕುಟುಂಬದ ಅವರ ಕೊಡುಗೆಯೇನೂ ಮಸುಕಾಗುವುದಿಲ್ಲ. ಏಕೆಂದರೆ ಆ ಕುಟುಂಬದ ಇಬ್ಬರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ನೆಹರೂ ನಿರ್ಮಿಸಿದ ಆಧುನಿಕ ಭಾರತದ ಸ್ಥಾವರಗಳೇ 1991ರಲ್ಲಿ ಭಾರತವನ್ನು ಆರ್ಥಿಕ ಆಘಾತದಿಂದ ಸಹಿಸಿಕೊಳ್ಳಲು ನೆರವಾಗಿದ್ದು, ಇಂದಿಗೂ ನವ ಉದಾರವಾದದ ಅಪಾಯಗಳಿಂದ ರಕ್ಷಿಸಿಕೊಳ್ಳಲು ನೆರವಾಗುತ್ತಿರುವುದು ಎಂಬ ಅಂಶವನ್ನು ಮರೆಯುವಂತಿಲ್ಲ. ಹಾಗಾಗಿ ಭಾರತವನ್ನು ಒಂದು ಆಧುನಿಕ, ಕೈಗಾರಿಕಾ, ಉನ್ನತ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಬೌದ್ಧಿಕ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ನೆಹರೂ ಅವರ ಕೊಡುಗೆಯನ್ನು ಅಲ್ಲಗಳೆಯುವುದು ಇತಿಹಾಸಕ್ಕೆ ಅಪಚಾರ ಮಾಡಿದಂತಾಗುತ್ತದೆ. ಈ ಅರಿವು ನಮ್ಮೊಳಗಿದ್ದರೆ ಸಾಕು. ಉಳಿದೆಲ್ಲವೂ ರಾಜಕೀಯ ವಿತಂಡವಾದಗಳಷ್ಟೇ.
(ಕೃಪೆ : ಸಮಾಜಮುಖಿ ಮಾಸಪತ್ರಿಕೆ ಜೂನ್‌ 2024)

Tags: ElectionIndianeharu
Previous Post

ಎನ್ ಡಿಎ ಸಂಸದರ ಸಭೆ; ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆ

Next Post

ಕಾಂಗ್ರೆಸ್ ಮೈತ್ರಿ ಮುರಿದುಕೊಂಡು ಏಕಾಂಗಿಯಾದ ಆಪ್!

Related Posts

Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
0

ಹವಾಮಾನ ವೈಪರೀತ್ಯಗಳು, ಮಾರುಕಟ್ಟೆ ಸಮಸ್ಯೆ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದು, ಇಂತಹ ವ್ಯತ್ಯಾಸಗಳ ನಡುವೆಯೂ ಕೆಲವು ಕೃಷಿಕರು ಯಶ್ವಸಿಯಾಗಿದ್ದಾರೆ ಎಂದು ಕೃಷಿ ಸಚಿವ...

Read moreDetails

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

December 23, 2025

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

December 23, 2025

ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ: ಜಿಲ್ಲಾ ಉಸ್ತುವಾರಿ ಸಚಿವ ಖಂಡನೆ

December 22, 2025

ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮೆಲ್ಲರ ಕರ್ತವ್ಯ- ಮುಖ್ಯಮಂತ್ರಿ ಸಿದ್ದರಾಮಯ್ಯ

December 22, 2025
Next Post
ಕಾಂಗ್ರೆಸ್ ಮೈತ್ರಿ ಮುರಿದುಕೊಂಡು ಏಕಾಂಗಿಯಾದ ಆಪ್!

ಕಾಂಗ್ರೆಸ್ ಮೈತ್ರಿ ಮುರಿದುಕೊಂಡು ಏಕಾಂಗಿಯಾದ ಆಪ್!

Recent News

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!
Top Story

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

December 23, 2025

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada