ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ನಂತರ ಮಂಡಿಸಿದ ಮೊದಲ ಆಯವ್ಯಯದ ಮೇಲೆ ಎಲ್ಲರ ನಿರೀಕ್ಷೆ ಇತ್ತು ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿಯಿರುವ ಸಮಯದಲ್ಲಿ ಬೊಮ್ಮಾಯಿ ಬಜೆಟ್ ತಪ್ಪುಗಳನ್ನು ರಾಜಕೀಯವಾಗಿ ಸರಿಪಿಡಿಸುವ ಬಜೆಟ್ ಎಂದು ವ್ಯಾಖ್ಯಾನಿಸಲಾಗಿದೆ.
ಈ ಹಿಂದೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಬೇಕಿದ್ದ ಸಮಾಜ ಸುಧಾರಕ ನಾರಾಯಣ ಗುರು ಸ್ತಬ್ಧ ಚಿತ್ರವನ್ನು ಹೊರಗಿಟ್ಟಿದ್ದಕ್ಕಾಗಿ ಬಿಜೆಪಿಗೆ ತೀವ್ರ ಕಟು ಟೀಕೆಗಳು ಎದುರಾಗಿದ್ದವು ಮತ್ತು ಡ್ಯಾಮೇಜ್ ಕಂಟ್ರೋಲ್ ಮಾಡಲು ಬೊಮ್ಮಾಯಿ ನಾರಾಯಣ ಗುರು ಹೆಸರಿನಲ್ಲಿ ಶಾಲೆಗಳನ್ನು ಸ್ಥಾಪಿಸುತ್ತಿರುವುದು ಬೊಮ್ಮಾಯಿ ಮಾಸ್ಟರ್ ಸ್ಟ್ರೋಕ್ ಎಂದೇ ಹೇಳಬಹುದು.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದರಂತೆ ನಾರಾಯಣ ಗುರುವಿನ ಹೆಸರಿನಲ್ಲಿ ವಸತಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಬಜೆಟ್ ಬಾಷಣದ ವೇಳೆ ಘೋಷಿಸಿದ್ದರು.

ಹಾಗೆ ನೋಡುತ್ತಾ ಹೋದರೆ ಬೊಮ್ಮಾಯಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಟ್ರಂಪ್ ಕಾರ್ಡ್ ಎಂದೇ ಹೇಳಲಾಗುವ ಬೀಡಾಡಿ ದನಗಳ ಬಗ್ಗೆ ಕೂಡ ಬಜೆಟ್‌ನಲ್ಲಿ ಗಮನಹರಿಸಿದ್ದಾರೆ. 2021ರ ಬಜೆಟ್ ಅಧಿವೇಶನಕ್ಕೂ ಮೊದಲು ಬಿಜೆಪಿ ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾನೂನನ್ನು ಮಂಡಿಸಿತ್ತು. ಅದರಂತೆಯೇ ರಾಜ್ಯದ ಗೋ ಶಾಲೆಗಳಿಂದ ಗೋವನ್ನು ದತ್ತು ಪಡೆಯುವ ಸಾರ್ವಜನಿಕರು ಅಥವಾ ಸಂಸ್ಥೆಗಳಿಗೆ ವಾರ್ಷಿಕ 11,000 ಸಾವಿರ ರೂಪಾಯಿಗಳನ್ನು ಪ್ರೋತ್ಸಾಹ ಧನವನ್ನಾಗಿ ನೀಡಲಾಗುವುದು ಇದೇ ಮೊದಲ ಭಾರಿಗೆ ಪುಣ್ಯಕೋಟಿ ಎಂಬ ಹೊಸ ಯೋಜನಯನ್ನು ಸಹ ಘೋಷಿಸಿದ್ದಾರೆ.
ನಂತರ ಮಾತನಾಡಿದ ಬೊಮ್ಮಾಯಿ ನಮ್ಮ ಸರ್ಕಾರವು ಗೋ ಸಂಪತ್ತಿನ ಸಂರಕ್ಷಣೆಗಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020ರನ್ನು ಕಳೆದ ವರ್ಷ ಮಂಡಿಸಲಾಯಿತ್ತು. ಈ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಾಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಗೋಶಾಲೆಗಳ ಸಂಖ್ಯೆಯನ್ನು 31ರಿಂದ 100ಕ್ಕೆ ಏರಿಸಲಾಗುವುದು ಇದಕ್ಕಾಗಿ 50 ಕೋಟಿ ರೂಪಾಯಿಯನ್ನು ಮೀಸಲಿಡಲಾಗುವುದು ಎಂದು ತಿಳಿಸಿದ್ದಾರೆ.
ಹಿಜಾಬ್ ವಿವಾದದ ನಂತರ ಬೊಮ್ಮಾಯಿ ಅಲ್ಪಸಂಖ್ಯಾತ ಸಮುದಾಯ ಅದರಲ್ಲೂ ಮುಸ್ಲಿಂ ಸಮುದಾಯವನ್ನ ಸಹ ಗುರಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ ಎಂದು ಹೇಳಬಹುದು. ಅಲ್ಪಸಂಖ್ಯಾತ ಇಲಾಖೆಯ ವಿವಿಧ ಯೋಜನೆಗಳಡಿ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹು ವಸತಿ ಶಾಲೆಗಳನ್ನು ವಿಲೀನಗೊಳಿಸಿ ಪ್ರತಿ ಜಿಲ್ಲೆಯಲ್ಲಿ ಒಂದು ಶಾಲೆಯನ್ನು ಪಿಯು ಕಾಲೇಜಿಗೆ ಮೇಲ್ದರ್ಜೆಗೇರಿಸಲಾಗುವುದು. ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯಗಳನ್ನು ಒಳಗೊಂಡಂತೆ ಆಧುನಿಕರಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಶಾಲೆಗಳನ್ನು APJ ಅಬ್ದುಲ್ ಕಲಾಂ ವಸತಿ ಶಾಲೆ ಎಂದು ಮರುನಾಮಕರಣ ಮಾಡಲಾಗುವುದು ಮತ್ತು CBSE ಮಾನ್ಯತೆ ಪಡೆಯಲಾಗುವುದು ಇದಕ್ಕಾಗಿ 25 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.
ಸಮುದಾಯ ಮತ್ತು ಮತಬ್ಯಾಂಕ್ ಲಾಭದ ವಿಷಯಗಳಲ್ಲಿ ಇಂತಹ ತಿದ್ದುಪಡಿ ಮಾರ್ಗಗಳನ್ನು ಕಂಡುಕೊಂಡಿರುವ ಬೊಮ್ಮಾಯಿ, ಕೋವಿಡ್ ಸಂಕಷ್ಟದಿಂದ ನೆಲಕಚ್ಚಿರುವ ವ್ಯಾಪಾರಿಗಳು, ಉದ್ಯಮಿಗಳು, ಸಣ್ಣಪುಟ್ಟ ವಹಿವಾಟುದಾರರ ವಿಷಯದಲ್ಲಿ ಮಾತ್ರ ಅಂತಹ ಯಾವ ಯತ್ನಗಳನ್ನೂ ಮಾಡದೆ ಸಂಪೂರ್ಣ ಅವರನ್ನು ನಿರ್ಲಕ್ಷಿಸಿದ್ದಾರೆ.