ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು 6 ವರ್ಷಗಳ ಕಾಲ ನಿಷೇಧಿಸಬೇಕೆಂದು ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಂಡಿದೆ.

ಪ್ರಧಾನಿ ಮೋದಿ ಹಿಂದೂ ಹಾಗೂ ಸಿಖ್ ದೇವರುಗಳು ಮತ್ತು ಆರಾಧನಾ ಸ್ಥಳಗಳ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ. ಹೀಗಾಗಿ ನರೇಂದ್ರ ಮೋದಿ (Narendra Modi) ಅವರನ್ನು ಆರು ವರ್ಷಗಳ ಕಾಲ ಅನರ್ಹಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ದೆಹಲಿ ಹೈಕೋರ್ಟ್ (Delhi High Court) ಅರ್ಜಿ ವಜಾಗೊಳಿಸಿದೆ.
ವಕೀಲ ಆನಂದ್ ಎಸ್ ಜೊಂಧಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಚಿನ್ ದತ್ತಾ ನೇತೃತ್ವದ ಪೀಠ ಅರ್ಜಿದಾರರು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಊಹಿಸಿರುವುದರಿಂದ ಅರ್ಜಿಯನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ ಎಂದು ಆಯೋಗಕ್ಕೆ ಸೂಚಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿತು.

ಪ್ರಧಾನಿ ನರೇಂದ್ರ ಮೋದಿ ಹಿಂದೂ ಮತ್ತು ಸಿಖ್ ದೇವತೆಗಳು ಮತ್ತು ಅವರ ಆರಾಧನಾ ಸ್ಥಳಗಳ ಹೆಸರಿನಲ್ಲಿ ಮತಗಳನ್ನು ಕೇಳಿದಿದ್ದಲ್ಲದೇ, ವಿರೋಧಿ ರಾಜಕೀಯ ಪಕ್ಷಗಳು ಮುಸ್ಲಿಮರಿಗೆ ಒಲವು ತೋರುತ್ತಿವೆ ಎಂದು ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣ, ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅಭಿವೃದ್ಧಿ ಹಾಗೂ ಅಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್‌ನ ಪ್ರತಿಗಳನ್ನು ವಾಪಸ್ ತಂದಿರುವುದಾಗಿ ಹೇಳಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.