ರಂಗಭೂಮಿ ಅಥವಾ ಇತರ ಯಾವುದೇ ಕಲಾ ಮಾಧ್ಯಮಗಳಲ್ಲಿರಬೇಕಾದ ಮೂಲ ಸತ್ವ ಎಂದರೆ ನಿತ್ಯ ಜೀವನದ ಸಾಮಾಜಿಕ ಸ್ಥಿತ್ಯಂತರಗಳಿಂದ ಅತೀತವಾದ ಅಭಿವ್ಯಕ್ತಿಯ ಸಾಧನಗಳನ್ನು ರೂಪಿಸುವುದು. ರಂಗಾಯಣದ ಇತಿಹಾಸದಲ್ಲಷ್ಟೇ ಅಲ್ಲ ವಿಶ್ವದ ರಂಗಭೂಮಿಯ ಇತಿಹಾಸದಲ್ಲೇ ಎಡ ಮತ್ತು ಬಲಪಂಥೀಯ ಧೋರಣೆಗಳನ್ನು ಶೋಧಿಸುವುದು ರಂಗಪ್ರಜ್ಞೆಯ ಕೊರತೆಯ ದ್ಯೋತಕ. ರಂಗಾಯಣ ವಿವಾದದ ಹಿನ್ನೆಲೆಯಲ್ಲಿ ಹಾಲಿ ನಿರ್ದೆಶಕರು ಮತ್ತು ಕೆಲವು ಮಾಜಿ ನಿರ್ದೇಶಕರು ಈ ಪ್ರಯತ್ನ ಮಾಡುವ ಮೂಲಕ ಸಾಂಸ್ಕೃತಿಕ ಸಂವಾದವನ್ನೂ ಮಲಿನಗೊಳಿಸಲು ಮುಂದಾಗಿದ್ದಾರೆ. ಇಲ್ಲಿಯವರೆಗೂ ರಂಗಾಯಣವನ್ನು ಎಡಪಂಥೀಯರೇ (ಅಥವಾ ಮಾವೋವಾದಿಗಳು) ಆವರಿಸಿಕೊಂಡಿದ್ದರು ಎಂದು ಹೇಳುವ ಮೂಲಕ ಈ ಕಲಾ ಪ್ರತಿನಿಧಿಗಳು ರಂಗಭೂಮಿಯ ಮೂಲ ನೆಲೆಯನ್ನೇ ಪ್ರಶ್ನಿಸಲು ಹೊರಟಿದ್ದಾರೆ.
ರಂಗಪ್ರಜ್ಞೆಯನ್ನು ಕುರಿತು
ತನ್ನೊಳಗಿನ ಮಾನವೀಯ ನೆಲೆಗಳನ್ನು ಅಂತರಾತ್ಮದ ನೆಲೆಯಲ್ಲಿ ಶೋಧಿಸಲು ರಂಗಭೂಮಿ ಒಂದು ಮಾಧ್ಯಮ. ತಾನು ನಿರ್ವಹಿಸುವ ಪಾತ್ರಗಳ ಮೂಲಕ ಕಲಾವಿದ/ದೆ ಮಾನವನ ಅಂತರಂಗದ ಭಾವಗಳನ್ನು ಹೊರಸೂಸುವುದೇ ಅಲ್ಲದೆ, ಈ ಭಾವಗಳು ಬಾಹ್ಯ ಸಮಾಜದೊಡನೆ ಮುಖಾಮುಖಿಯಾದಾಗ ಎದುರಿಸಬಹುದಾದ ಸವಾಲುಗಳಿಗೆ, ಪ್ರಶ್ನೆಗಳಿಗೆ ಉತ್ತರ ಶೋಧಿಸಲು ತೊಡಗುವಂತೆ ಮಾಡುವುದು ರಂಗಭೂಮಿಯ ವೈಶಿಷ್ಟ್ಯ. ಹಾಗೆಯೇ ತಾನು ಬದುಕುವ ಸಮಾಜದಲ್ಲಿರಬಹುದಾದ ಅಂಕುಡೊಂಕುಗಳನ್ನು, ಮಾನವ ವಿರೋಧಿ ನೆಲೆಗಳನ್ನು, ವೈಚಿತ್ರ್ಯಗಳನ್ನು ಚರಿತ್ರೆಯ ಘಟನೆಗಳ ಮೂಲಕ, ಸಮಕಾಲೀನ ಸಮಾಜದ ವಿದ್ಯಮಾನಗಳ ಮೂಲಕ ಬಿಂಬಿಸುವುದು ರಂಗಭೂಮಿಯ ಆದ್ಯತೆ. ಹಾಗಾಗಿಯೇ ರಂಗಮಂಚದ ಮೇಲೆ ಗಾಂಧಿಯೊಡನೆ ಗೋಡ್ಸೆ ಬರುತ್ತಾನೆ, ಹಿಟ್ಲರನೊಡನೆ ಮಂಡೇಲಾ ಬರುತ್ತಾನೆ, ರಾಮನೊಡನೆ ರಾವಣನೂ ಬರುತ್ತಾನೆ.
ತನ್ನನ್ನು ತಾನು ಕಂಡುಕೊಳ್ಳುವುದರೊಂದಿಗೇ ಸುತ್ತಲಿನ ಸಮಾಜದ ಅಂತಃಸತ್ವವನ್ನೂ ಶೋಧಿಸುವ ಒಂದು ಪ್ರಯತ್ನ ರಂಗಭೂಮಿಯಲ್ಲಿ ನಡೆಯುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲೇ ಅಮೆರಿಕದ ನಾಟಕಕಾರ ಮತ್ತು ಸಿನಿಮಾ ನಿರ್ದೇಶಕ ಡೇವಿಡ್ ಮಾಮೆಟ್ “ ನೀವು ರಂಗಭೂಮಿಯನ್ನು ಪ್ರವೇಶಿಸಿದಾಗ- ‘ಜಗತ್ತಿನಲ್ಲಿ ಏನೆಲ್ಲಾ ಅಪಚಾರಗಳು ನಡೆಯುತ್ತಿವೆ ಎಂಬುದನ್ನು ಅರಿಯಲು ನಾವೆಲ್ಲರೂ ಸಹಭಾಗಿತ್ವಕ್ಕೆ ಒಳಗಾಗುತ್ತೇವೆ’ ಎಂದು ಹೇಳಲು ಸಿದ್ಧವಾಗಿರಬೇಕು. ಹೀಗೆ ಹೇಳಲು ನಿಮಗೆ ಸಾಧ್ಯವಾಗದೆ ಹೋದರೆ ನೀವು ಕಲೆಯ ಬದಲು ಕೇವಲ ಮನರಂಜನೆಯನ್ನಷ್ಟೇ ನೀಡಬಲ್ಲಿರಿ ” ಎಂದು ಹೇಳುತ್ತಾರೆ. ಫ್ರೆಂಚ್ ಕಾದಂಬರಿಕಾರ, ನಾಟಕಕಾರ ರೊಮೇನ್ ರೋಲಾಂಡ್ ರಂಗಭೂಮಿಯ ಸಾರ್ವತ್ರಿಕತೆಯನ್ನು ಪ್ರತಿಪಾದಿಸುತ್ತಾ “ ಹೊಸ ರಂಗಭೂಮಿ ಉದಯಿಸಲು ಇರುವ ಒಂದೇ ಅವಶ್ಯ ಷರತ್ತು ಎಂದರೆ, ರಂಗವೇದಿಕೆ ಮತ್ತು ಸಭಾಂಗಣ ಸಾರ್ವಜನಿಕರಿಗೆ ಮುಕ್ತವಾಗಿರಬೇಕು, ವೇದಿಕೆಯಲ್ಲಿ ಜನಸಾಮಾನ್ಯರಂತೆಯೇ ಜನರ ಚಟುವಟಿಕೆಗಳೂ ಅಂತರ್ಗತವಾಗಿರಬೇಕು ” ಎಂದು ಹೇಳುತ್ತಾರೆ. “ ರಂಗಭೂಮಿ, ಸಾಹಿತ್ಯ ಅಥವಾ ಯಾವುದೇ ಕಲಾಭಿವ್ಯಕ್ತಿ ಸಮಕಾಲೀನ ವಾಸ್ತವಗಳನ್ನು ಬಿಂಬಿಸದೆ ಹೋದರೆ ಅದು ಅಪ್ರಸ್ತುತವಾಗುತ್ತದೆ ” ಎಂದು ಹೇಳುವ ಮೂಲಕ ಇಟಲಿಯ ನಾಟಕಕಾರ ಮತ್ತು ಕಲಾವಿದ ಡಾರಿಯೋ ಫೋ ರಂಗಭೂಮಿಯ ಸಾರ್ವಜನಿಕ ಪ್ರಸ್ತುತತೆಯನ್ನು ಬಿಂಬಿಸುತ್ತಾರೆ.
ಹಾಗಾಗಿಯೇ ರಂಗಭೂಮಿಯನ್ನು ಒಂದು ತಪಸ್ಸಿನ ತಾಣ ಎಂದೇ ಭಾವಿಸಲಾಗುತ್ತದೆ. ರಂಗಕಲೆಯನ್ನು ಏಕಾಂತದ ತಪಸ್ಸಿಗೆ ಹೋಲಿಸಲಾಗುತ್ತದೆ. ಶೇಕ್ಸ್ಪಿಯರ್ ಯುಗದಿಂದ ಇಂದಿನವರೆಗೂ ಈ ತಪಸ್ಸಿನ ಮೂಲಕವೇ ರಂಗತಜ್ಞರು, ಕಲಾವಿದರು ಮತ್ತು ರಂಗಾಸಕ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡುತ್ತಲಿದ್ದಾರೆ. “ ನಿಜವಾದ ರಂಗಭೂಮಿ ಜೀವಂತವಾಗಿರುವ ಸಾಧನಗಳನ್ನು ಬಳಸಿಕೊಂಡು ಚಲನಶೀಲವಾಗಿ ಮಾಡುವ ಮೂಲಕ ಅದು ಈವರೆಗೂ ಬದುಕು ಪ್ರವೇಶಿಸಲಾಗದಂತಹ ಛಾಯೆಗಳನ್ನೂ ಹೊರಗೆಡಹಿಬಿಡುತ್ತದೆ ” ಎನ್ನುತ್ತಾರೆ ರಂಗತಜ್ಞ ಅಂಟೋನಿನ್ ಆರ್ಟಾಡ್. ಮಾನವ ನಾಗರಿಕತೆಯ ಅಭ್ಯುದಯದ ಹಾದಿಯಲ್ಲಿ ಗುಲಾಮಗಿರಿ ವ್ಯವಸ್ಥೆಯಿಂದ ಪ್ರಜಾಪ್ರಭುತ್ವದವರೆಗೆ ನಡೆದು ಬಂದ ಹಾದಿಯನ್ನು ಗಮನಿಸಿದಾಗ, ಅಲ್ಲಿ ರಂಗಭೂಮಿ ಹೇಗೆ ಸಾಮಾಜಿಕ ಸ್ಥಿತ್ಯಂತರಗಳನ್ನು ಪ್ರಭಾವಿಸಿದೆ ಎನ್ನುವುದನ್ನು ಕಾಣಲು ಸಾಧ್ಯ. ಬ್ರಿಟನ್ನಿನ ರಂಗಭೂಮಿ ಕಲಾವಿದೆ ವೆನೆಸಾ ರೆಡ್ಗ್ರೇವ್ “ ನನ್ನ ಅಭಿಪ್ರಾಯದಲ್ಲಿ ನಾಗರಿಕತೆಗೆ ಶುದ್ಧ ನೀರಿನಷ್ಟೇ ಅವಶ್ಯವಾದುದು ರಂಗಭೂಮಿ ” ಎಂದು ಹೇಳುವ ಮೂಲಕ ಈ ಅಭಿಪ್ರಾಯಕ್ಕೆ ಮೆರುಗು ನೀಡುತ್ತಾರೆ.

ಸಮಕಾಲೀನ ಸಂದರ್ಭದಲ್ಲಿ ರಂಗಭೂಮಿಯ ಪ್ರಯೋಗಗಳಿಗೆ ರಾಜಕೀಯ ಸ್ಪರ್ಶ ಇರಬೇಕೇ ಬೇಡವೇ ಎಂಬ ಜಿಜ್ಞಾಸೆ ಎದುರಾಗುವುದೂ ಸಹಜ. ಯಾವುದೇ ಸಮಾಜದ ಏಳು ಬೀಳುಗಳಲ್ಲಿ ಪ್ರಧಾನ ಪಾತ್ರ ವಹಿಸುವ ರಾಜಕೀಯ ಚಿಂತನೆಗಳು ಮತ್ತು ಧೋರಣೆಗಳು ರಂಗಭೂಮಿಗೆ ಅಥವಾ ಕಲೆಗೆ ಅತೀತವಾಗಿರಲು ಸಾಧ್ಯವಿಲ್ಲ. ಆದರೆ ಈ ರಾಜಕಾರಣದ ಸ್ಪರ್ಶ ತಾತ್ವಿಕ ನೆಲೆಯಲ್ಲಿರಬೇಕೇ ಹೊರತು ಅಧಿಕಾರ ರಾಜಕಾರಣದ ನೆಲೆಯಾಗಬಾರದು. ಅಮೆರಿಕದ ರಂಗಭೂಮಿ ನಿರ್ದೇಶಕ ಜಾನ್ ಲೆಹರ್ ಹೀಗೆ ಹೇಳುತ್ತಾರೆ : “ ಪ್ರೇಕ್ಷಕರು ತಮ್ಮ ಬೌದ್ಧಿಕ ಚೌಕಟ್ಟಿನಿಂದಾಚೆಗೆ ಆಲೋಚಿಸುವಂತೆ ಮಾಡುವ, ನಿಮ್ಮ ಬದುಕಿನೊಡನೆ, ನೋವುಗಳೊಡನೆ ಸ್ಪಂದಿಸುವ ಮೂಲಕ ಆ ನೋವುಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡುವ ಯಾವುದೇ ಒಂದು ರಂಗ ಪ್ರಯೋಗ ಅಥವಾ ನಾಟಕ ರಾಜಕೀಯ ಸ್ವರೂಪವನ್ನೇ ಹೊಂದಿರುತ್ತದೆ. ಅನುಭವ, ಅನುಭಾವದ ನೆಲೆಯಲ್ಲಿ ಸ್ವಾಭಾವಿಕ ಮತ್ತು ವೈಚಾರಿಕ ನೆಲೆಗಳ ಅನುಸಂಧಾನ ಮಾಡಿಸುವ ಮೂಲಕ ರಂಗಭೂಮಿ ಒಂದು ರೀತಿಯಲ್ಲಿ ಭಯೋತ್ಪಾದಮೆಗೆ ಪ್ರತಿರೋಧ ಒಡ್ಡುವ ಪ್ರಯತ್ನವಾಗುತ್ತದೆ. ಇದು ಬದುಕುಳಿಯುವ ಸ್ಪೂರ್ತಿಯನ್ನು ಉದ್ಧೀಪನಗೊಳಿಸುವುದೇ ಅಲ್ಲದೆ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಈ ಅರ್ಥದಲ್ಲಿ ಜಗತ್ತಿನಾದ್ಯಂತ ನೂರಾರು ರಂಗಪ್ರಯೋಗಗಳು ನಡೆಯುತ್ತಿವೆ ”.
ಜನ ಜಾಗೃತಿಯ ಭೂಮಿಕೆಯಾಗಿ
ರಂಗಭೂಮಿಯನ್ನು ಗೌರವಿಸುವ ಪ್ರತಿಯೊಂದು ಮನಸಿಗೂ ಈ ಪರಿಕಲ್ಪನೆ ಇರಬೇಕು. ಹೀಗೆ ಮಾನವ ಸಮಾಜದ ಸೂಕ್ಷ್ಮಗಳನ್ನು ಗ್ರಹಿಸಿ, ಒಂದೆರಡು ಗಂಟೆಗಳ ಕಲಾಭಿವ್ಯಕ್ತಿಯ ಮೂಲಕ ವಾಸ್ತವ ಸಮಕಾಲೀನ ಸಂದರ್ಭಗಳೊಡನೆ ಮುಖಾಮುಖಿಯಾಗುವ ಕ್ಷಮತೆ ಮತ್ತು ಸಾಂಸ್ಕೃತಿಕ ಬದ್ಧತೆ ರಂಗಭೂಮಿಗೆ ಇರಬೇಕು. ನಾಲ್ಕು ಗೋಡೆಗಳ ನಡುವೆ, ಸಭಾಂಗಣಗಳ ವೇದಿಕೆಗಳಲ್ಲಿ ಸಾಧ್ಯವಾಗಬಹುದಾದ ಈ ಪ್ರಯತ್ನಗಳನ್ನೇ ರಸ್ತೆ ಬದಿಯಲ್ಲಾಡುವ ಬೀದಿ ನಾಟಕಗಳ ಮೂಲಕವೂ ಮಾಡಲಾಗಿದೆ. ಪ್ರಜಾಪ್ರಭುತ್ವದ ಗೆಲುವಿಗೆ ಮತ್ತು ಮಾನವ ಸಮಾಜದ ಸೌಹಾರ್ದತೆಗೆ ಇಂತಹ ಬೀದಿ ನಾಟಕಗಳೇ ಮೇವು ಒದಗಿಸಿವೆ ಹಾಗೆಯೇ ಪ್ರಭುತ್ವಗಳ ಜನವಿರೋಧಿ ನೀತಿಗಳ ವಿರುದ್ಧ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲೂ ಇದೇ ಬೀದಿ ನಾಟಕಗಳು ಯಶಸ್ವಿಯಾಗಿವೆ. ಒಬ್ಬ ಕಾರ್ಮಿಕ, ದೌರ್ಜನ್ಯಕ್ಕೊಳಗಾದ ಮಹಿಳೆ, ಜಾತಿ ವ್ಯವಸ್ಥೆಯ ಶೋಷಣೆಗೊಳಗಾಗುವ ದಲಿತ, ಮತಾಂಧತೆ ಬಲಿಯಾಗುವ ಅಲ್ಪಸಂಖ್ಯಾತರು, ಘನತೆಯ ಬದುಕಿನಿಂದ ವಂಚಿತರಾಗುವ ಆದಿವಾಸಿಗಳು, ಶೋಷಣೆಗೊಳಗಾಗುವ ಸಮುದಾಯಗಳು ಇವೆಲ್ಲವೂ ರಂಗಭೂಮಿಯ ಮೇಲೆ ಅಭಿವ್ಯಕ್ತಿಗೊಳ್ಳುವ ಮೂಲಕವೇ ಜನಜಾಗೃತಿಯ ನೆಲೆಗಳಾಗಿ ಪರಿಣಮಿಸಿರುವುದನ್ನು ಭಾರತದ ಸಂದರ್ಭದಲ್ಲೇ ಕಾಣಬಹುದು.
ಈ ಪ್ರಯತ್ನಗಳಲ್ಲಿ ಎಡ ಯಾವುದು ಬಲ ಯಾವುದು ? ರಾಜಕೀಯ ಪರಿಭಾಷೆಯ ಎಡ-ಬಲ ವ್ಯಾಖ್ಯಾನಗಳನ್ನು ರಂಗಭೂಮಿಗೆ ಅನ್ವಯಿಸಿ ಮಾತನಾಡುವುದು ಬಾಲಿಶ ಎನಿಸುವುದಿಲ್ಲವೇ ? ರಂಗಾಯಣದಂತಹ ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯನ್ನು ನಿರ್ವಹಿಸುವ ಸಂದರ್ಭದಲ್ಲಿ ಈ ರಂಗಪ್ರಜ್ಞೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯವಶ್ಯಕ. ಇಲ್ಲವಾದಲ್ಲಿ ರಂಗಭೂಮಿ ಸಾಂಕೇತಿಕ ಮನರಂಜನೆಯ ಭೂಮಿಕೆಯಾಗಿಬಿಡುತ್ತದೆ. ರಾಜಕೀಯ ವೈಷಮ್ಯಗಳನ್ನು ಸಾಂಸ್ಥೀಕರಿಸುವ ಪ್ರಯತ್ನದಲ್ಲಿ ರಂಗಭೂಮಿಯೂ ಬಳಕೆಯಾದರೆ, ರಂಗ ಸಂಸ್ಕೃತಿ ನಶಿಸಿಹೋಗುತ್ತದೆ. ರಂಗಾಯಣದ ನಿರ್ದೇಶಕರು ಈ ಹಾದಿಯಲ್ಲಿ ಸಾಗುತ್ತಿದ್ದಾರೆ. ಅಮೆರಿಕದ ರಂಗಭೂಮಿಯ ಸಂಗೀತ ನಿರ್ದೇಶಕ ಟೆರೆನ್ಸ್ ಮಾನ್ “ ಚಲನಚಿತ್ರಗಳು ನಿಮ್ಮನ್ನು ಖ್ಯಾತನಾಮರನ್ನಾಗಿಸುತ್ತದೆ, ಟೆಲಿವಿಷನ್ ನಿಮ್ಮನ್ನು ಶ್ರೀಮಂತರಾಗಿಸುತ್ತದೆ, ಆದರೆ ರಂಗಭೂಮಿ ನಿಮ್ಮನ್ನು ಸಜ್ಜನರನ್ನಾಗಿ ರೂಪಿಸುತ್ತದೆ ” ಎಂದು ಹೇಳುವುದು ಎಷ್ಟು ಮಾರ್ಮಿಕ ಅಲ್ಲವೇ ?
ಬಹುರೂಪಿ ನಾಟಕೋತ್ಸವದಲ್ಲಿ ಸಮಾರೋಪ ಉಪನ್ಯಾಸ ನೀಡುವವರಲ್ಲಿ ಈ ರಂಗಪ್ರಜ್ಞೆಯೇ ಇಲ್ಲವಾದರೆ ಯಾವ ಪುರುಷಾರ್ಥಕ್ಕೆ ಅವರಿಗೆ ರಂಗಾಯಣದ ಆತಿಥ್ಯ ದೊರೆಯಲು ಸಾಧ್ಯ ? ರಂಗಾಯಣದ ನಿರ್ದೇಶಕ ಸ್ಥಾನದಲ್ಲಿರುವವರಿಗೆ ಈ ಪರಿಜ್ಞಾನ ಇದ್ದರೆ ಸಾಕು.