~ಡಾ. ಜೆ ಎಸ್ ಪಾಟೀಲ.
ಕಳೆದ ಹತ್ತೆಂಟು ವರ್ಷಗಳಲ್ಲಿ ಬಿಜೆಪಿ ಮತ್ತು ಸಂಘದ ಪ್ರತಿಗಾಮಿತ್ವದ ದುಸ್ಪರಿಣಾಮಗಳು ಶೂದ್ರ ಸಮುದಾಯದ ಮೇಲೆ ಬಿದ್ದಿವೆ. ಅದರಿಂದ ಶೂದ್ರ ಪ್ರಜ್ಞೆ ಕ್ರಮೇಣವಾಗಿ ಜಾಗೃತಗೊಳ್ಳುವ ಲಕ್ಷಣಗಳು ಗೋಚರಿಸಹತ್ತಿವೆ. ನ್ಯೂಜ್ ಕ್ಲಿಕ್ ಎಂಬ ವೆಬ್ ಜರ್ನಲ್ಲಿನಲ್ಲಿ ಕಾಂಚ ಇಳಯ್ಯ ಕುರುಬ ಎನ್ನುವ ಲೇಖಕರು ಈ ಕುರಿತು ಒಂದು ಅರ್ಥಪೂರ್ಣ ಅಂಕಣವನ್ನು ಇದೇ ೧೫ ನೇ ಫೆಬ್ರವರಿ ೨೦೨೩ ರಂದು ಬರೆದಿದ್ದಾರೆ. ದೇಶದ ಇತರ ಹಿಂದುಳಿದ ವರ್ಗವನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಹೊಂದಿರುವ ಗಮನಾರ್ಹ ಪಾತ್ರ ˌ ಘನತೆ, ಮತ್ತು ಉತ್ಪಾದಕ ಶಕ್ತಿ ಎಂದು ಮರು ವ್ಯಾಖ್ಯಾನಿಸಬೇಕು ಎಂದು ಕಾಂಚ ಇಳಯ್ಯ ಪ್ರತಿಪಾದಿಸಿದ್ದಾರೆ. ವಿಶ್ವ ಸರ್ವ ಸನಾತನ ಸಂಘದ ಸದಸ್ಯರು ಈ ಹಿಂದೆ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ನಡೆಸಿದ ಪ್ರತಿಭಟನೆಯನ್ನು ಅವರು ಇಲ್ಲಿ ಸ್ಮರಿಸಿದ್ದಾರೆ. ಕಾಂಚ ಇಳಯ್ಯನವರು ಲೇಖಕರು ರಾಜಕೀಯ ಸಿದ್ಧಾಂತಿ, ಸಾಮಾಜಿಕ ಕಾರ್ಯಕರ್ತ ಮತ್ತು ಕಾರ್ತಿಕ್ ರಾಜಾ ಕುರುಪ್ಪುಸಾಮಿ ಅವರೊಂದಿಗೆ ‘ದಿ ಶೂದ್ರಾಸ್: ವಿಜನ್ ಫಾರ್ ನ್ಯೂ ಪಾತ್’ ಎಂಬ ಗ್ರಂಥದ ಲೇಖಕರಾಗಿದ್ದಾರೆ. “ದಿ ಶೂದ್ರಾಸ್: ಹಿಸ್ಟರಿ ಫ್ರಾಮ್ ಫೀಲ್ಡ್ ಮೆಮೋರಿಸ್” ಎಂಬ ಶಿರ್ಷಾಕೆಯ ಅವರ ಪುಸ್ತಕ ಪ್ರಕಟಣೆಗೊಳ್ಳಲಿದೆ.
ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಅಥವಾ ಶೂದ್ರರು ಜಾತಿ ವ್ಯವಸ್ಥೆ ಮತ್ತು ತಾರತಮ್ಯಗಳ ವಿರುದ್ಧ ನೂತನ ಮಾದರಿಯ ಹೋರಾಟವನ್ನು ಆರಂಭಿಸಿದ್ದಾರೆ. ಶೂದ್ರರು, ಪ್ರಾಣಿಗಳು, ತಬಲಾ ಮತ್ತು ಸ್ತ್ರೀಯರನ್ನು ಗೌರವಿಸಬಾರದು ಮತ್ತು ಅವರು ಸಾಂಪ್ರದಾಯದ ಗಡಿ ದಾಟಿದರೆ ಶಿಕ್ಷಿಸಬೇಕು ಎಂದು ಹೇಳುವ ಗೋಸ್ವಾಮಿ ತುಳಸಿದಾಸರ ಪ್ರಸಿದ್ಧ ಮಹಾಕಾವ್ಯ ರಾಮಚರಿತಮಾನಸ್‌ನಲ್ಲಿರುವ ದೋಹಾ ಅಥವಾ ಭಾವಗೀತಾತ್ಮಕ ಪದ್ಯದಿಂದ ಈ ಶೂದ್ರ ಚಳುವಳಿಕಾರರು ಪ್ರಚೋದಿತಗೊಂಡಿದ್ದಾರೆ. ಈ ರೀತಿಯಾಗಿ, ರಾಮಚರಿತಮಾನಸ ಕಾವ್ಯವು ಉತ್ಪಾದಕ ಹಾಗು ಕೃಷಿಕ ವರ್ಗದ ಶೂದ್ರರು ಶಿಕ್ಷಣಕ್ಕೆ ಹಾಗು ಉದ್ಯೋಗಕ್ಕೆ ಅರ್ಹರಲ್ಲದವರು ಮತ್ತು ಈ ಶೂದ್ರರಿಗೆ ಪ್ರಾಣಿಗಳಿಗಿಂತ ಕೀಳಾದ ಸ್ಥಾನಮಾನ ನೀಡಬೇಕೆನ್ನುವ ಮೇಲ್ವರ್ಗದ ಮಲೀನ ಮನಸ್ಥಿತಿಯ ಕುರಿತು ಕಾಂಚ ಇಳಯ್ಯ ವಿವರವಾಗಿ ಬರೆದಿದ್ದಾರೆ. ಒಟ್ಟಾರೆ ಉತ್ತರ ಭಾರತದಲ್ಲಿ ಶೂದ್ರತ್ವದ ಜಾಗೃತಿ ಮೂಡುತ್ತಿರುವ ಮತ್ತು ಶೂದ್ರರನ್ನು ಕೀಳಾಗಿ ಕಾಣುವ ಮನುವಾದಿಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟವೊಂದು ತಲೆ ಎತ್ತುತ್ತಿರುವುದು ಆಶಾದಾಯಕ ಬೆಳವಣಿಕೆಯಾಗಿದೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನಾಯಕ, ಬಿಹಾರದ ಶಿಕ್ಷಣ ಸಚಿವ ಪ್ರೊ.ಚಂದ್ರಶೇಖರ್ ಅವರು ಈ ಶೂದ್ರ ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ಈಗ ಈ ಹೋರಾಟದ ಬಿಸಿ ಶೂದ್ರ-ಓಬಿಸಿ ಮತ್ತು ದಲಿತ ಸಂಘಟನೆಗಳಿಗೂ ಹಬ್ಬಿದೆ. ರಾಮಚರಿತಮಾನಸ ಕಾವ್ಯವು ಮೇಲ್ವರ್ಗಕ್ಕೆ ಸೇರದ ಅಥವಾ ತಳ ಸಮುದಾಯದವರ ವಿರುದ್ಧ “ದ್ವೇಷ” ಮತ್ತು ತಾರತಮ್ಯವನ್ನು ಹರಡುತ್ತದೆ ಎಂಬ ಚಂದ್ರಶೇಖರ್ ಅವರ ನಿಲುವನ್ನು ಕಾಂಚ ಇಳಯ್ಯ ವಿವರಿಸಿದ್ದಾರೆ. ಶೂದ್ರ ಪ್ರಜ್ಞೆಯ ಈ ಹೋರಾಟದ ಸುದ್ದಿಯು ಈಗ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಶೂದ್ರ-ಓಬಿಸಿ ನಾಯಕರು ಆರೆಸ್ಸೆಸ್-ಬಿಜೆಪಿಯ ವೈದಿಕರು/ದ್ವಿಜರು, ಸಂತರು ಮತ್ತು ಸಾಧುಗಳಿಗೆ ಸವಾಲು ಹಾಕುವ ಮೂಲಕ ರಾಮಜರಿತಮಾನಸ ಪುಸ್ತಕದ ಪ್ರತಿಗಳನ್ನು ಸುಟ್ಟಿದ್ದಾರೆ. ಬಿಜೆಪಿಯ ಮೇಲ್ವರ್ಗದ ಜನರು ತಮ್ಮ ಜೀವಮಾನದಲ್ಲಿ ಉತ್ಪಾದಕ ಕಾರ್ಯ ಮಾಡುವುದೇಯಿಲ್ಲ, ಆದರೆ ಅವರೆಲ್ಲರೂ ನಿರಂತರವಾಗಿ ದೇವಾಲಯ ನಿರ್ಮಾಣ ಮತ್ತು ಆರ್‌ಎಸ್‌ಎಸ್ ಸದೃಢಗೊಳಿಸುವ ಕೆಲಸಗಳಿಗೆ ಮಾತ್ರ ಹಣ ಖರ್ಚು ಮಾಡುತ್ತಾರೆ ಎಂದು ಕಾಂಚ ಇಳಯ್ಯ ಸಂಘದ ಮೇಲ್ವರ್ಗದ ಜನರ ಗುಪ್ತ ಕಾರ್ಯಸೂಚಿಯನ್ನು ವಿವರಿಸಿದ್ದಾರೆ.
ಉತ್ತರ ಪ್ರದೇಶದ ಕೆಲವು ಸಾಧು-ಸಂತರು ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ಕೊಲೆ ಮಾಡಲು “ಫತ್ವಾ” ಹೊರಡಿಸಿದ್ದಾರೆ. ಬಿಹಾರದಲ್ಲಿ ಚಂದ್ರಶೇಖರ್ ಅವರನ್ನು ವಜಾಗೊಳಿಸಲುˌ ಕ್ಷಮೆ ಯಾಚಿಸಲು ಮತ್ತು ಬಂಧಿಸಲು ಹಿಂದುತ್ವವಾದಿ ಮೇಲ್ವರ್ಗದವರು ಬೇಡಿಕೆಗಳು ಇಟ್ಟಿದ್ದಾರೆ, ಆದರೆ ಈ ಹಿಂದುತ್ವವಾದಿಗಳ ಕ್ಷಮೆಯಾಚಿಸಬೇಕೆಂಬ ಬೇಡಿಕೆಯನ್ನು ಚಂದ್ರಶೇಖರ್ ಅವರು ನಿರಾಕರಿಸಿದ್ದಾರೆ. ಆದಾಗ್ಯೂ, ರಾಮಚರಿತಮಾನಸ ಪುಸ್ತಕವನ್ನು ಸುಡುವ ಮತ್ತು ನಿಷೇಧಿಸುವ ಯಾವುದೇ ಪ್ರಯತ್ನವು ಶೂದ್ರರ ಉತ್ಥಾನಕ್ಕೆ ಪರಿಹಾರವಲ್ಲ. ಆದರೆˌ ಈ ದೇಶದ ಬೆಳವಣಿಗೆಗೆ ಶೂದ್ರ ವರ್ಗದವರ ಕೊಡುಗೆಗಳನ್ನು ಭಾರತೀಯ ಇತಿಹಾಸದಲ್ಲಿ ಬರೆಯಿಸಿ ವೈದಿಕರಿಂದ ತಿರುಚಲ್ಪಟ್ಟ ಭಾರತದ ಇತಿಹಾಸವನ್ನು ಪುನಃ ಬರೆಯುವುದು ಈಗ ಶೂದ್ರರ ಪಾಲಿನ ಅಧಿಕೃತ ಮಾರ್ಗವಾಗಿದೆ ಎನ್ನುತ್ತಾರೆ ಇಳಯ್ಯನವರು. ಭಾರತದ ಇತಿಹಾಸವು ಕೇವಲ ಬ್ರಾಹ್ಮಣ ಕೇಂದ್ರಿತವಾಗಿದೆ. ಆದರೆ ಈ ದೇಶಕ್ಕೆ ಯಾವ ಕಾಣಿಕೆಯೂ ನೀಡದ ಮೇಲ್ವರ್ಗದ ಜನರು ಕೇವಲ ಪರಕೀಯ ಆಳರಸರ ದಿವಾನಗಿರಿˌ ಗೂಲಾಮಗಿರಿ ಮಾಡಿಕೊಂಡು ಈ ನೆಲದ ಶೂದ್ರರನ್ನು ಅಮಾನುಷವಾಗಿ ಶೋಷಿಸಿದ್ದಾರೆನ್ನುವ ಸಂಗತಿ ಶೂದ್ರರ ಮನಸ್ಸಿನಲ್ಲಿ ನೆಲೆಗೊಳ್ಳುವ ಅಗತ್ಯವಿದೆ.
ರಾಮಚರಿತಮಾನಗಳಲ್ಲಿ ಬರೆಯಲಾಗಿರುವ ನಿಂದನೀಯ ಭಾಷೆಯ ವಿರುದ್ಧ ಪ್ರತಿಭಟನಾಕಾರರು ಧ್ವನಿ ಎತ್ತಿದ್ದಾರೆ. ಭಾರತವು ಕೇವಲ ದ್ವಿಜರು ಅಥವಾ ಬ್ರಾಹ್ಮಣ, ಕ್ಷತ್ರಿಯ, ಕಾಯಸ್ಥ, ಖಾತ್ರಿ ಮತ್ತು ನಾನಿಯಾಗಳಿಗೆ ಸೇರಿದ್ದಲ್ಲ. ಮೇಲ್ವರ್ಗದವರ ಮನಸ್ಥಿತಿಯು ಶೂದ್ರ, ದಲಿತ ಮತ್ತು ಆದಿವಾಸಿ ಸಮುದಾಯಗಳು ಹಿಂದೂ ಸಮಾಜದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿ ಬದುಕಬೇಕು ಎನ್ನುವುದಾಗಿದೆ. ಶೂದ್ರರನ್ನು ಅವಮಾನಿಸುವ ಪ್ರಾಚೀನ ಅಥವಾ ಮಧ್ಯಕಾಲೀನ ವೈದಿಕ ಸಾಹಿತ್ಯಗಳನ್ನು ತಮ್ಮ ಮಕ್ಕಳು ಓದುವುದು ಬೇಡ ಎನ್ನುವುದು ಈ ಚಳುವಳಿಕಾರರ ಅಭಿಪ್ರಾಯವಾಗಿದೆ. ಆರ್‌ಎಸ್‌ಎಸ್-ಬಿಜೆಪಿ ವಿನ್ಯಾಸಗೊಳಿಸಿರುವ “ಹೊಸ” ಶಿಕ್ಷಣ ನೀತಿಯಡಿಯಲ್ಲಿ ಪ್ರಸ್ತುತಪಡಿಸಿದ ಪಠ್ಯಕ್ರಮಗಳನ್ನು ಶೂದ್ರ ಚಳುವಳಾಕಾರರು ತಿರಸ್ಕರಿಸುತ್ತಿದ್ದಾರೆ. ಸಂಘಿ ನಮಸ್ಥಿತಿಯ ಮೇಲ್ವರ್ಗದ ಜನರು ಶೂದ್ರರನ್ನು ತರಗತಿಗಳಲ್ಲಿ ಮತ್ತು ಅದರಾಚೆಗೆ ಅವಮಾನಿಸುವ ವಿಚಾರಗಳ ವಿರುದ್ಧ ಉತ್ತರ ಭಾರತದ ಶೂದ್ರರು ಬಂಡಾಯವೆದ್ದಿದ್ದಾರೆ. ಉದಾಹರಣೆಗೆ, ಆಧುನಿಕ ಭಾರತದಲ್ಲಿ ಜಾತೀಯತೆ ಮತ್ತು ಬ್ರಾಹ್ಮಣ್ಯದ ಮಾರಮ್ಯವನ್ನು ಉತ್ತೇಜಿಸುವ ಗೀತಾ ಪ್ರೆಸ್‌ನಿಂದ ಪ್ರಟಕವಾಗಿರುವ ಪುಸ್ತಕಗಳು ಶೂದ್ರರನ್ನು ಅವಮಾನಿಸುತ್ತಿವೆ. ಹೊಸ ಶಿಕ್ಷಣ ನೀತಿಯು ತನ್ನ ಪುಸ್ತಕಗಳಲ್ಲಿ ವ್ಯವಸ್ಥಿತವಾಗಿ ಬ್ರಾಹ್ಮಣ್ಯವನ್ನು ಉತ್ತೇಜಿಸಲು ಬಯಸುತ್ತದೆ ಎನ್ನುತ್ತಾರೆ ಇಳಯ್ಯನವರು.
ಲಕ್ನೋದಲ್ಲಿ, “ಗರ್ವ್ ಸೇ ಕಹೋ ಹಮ್ ಶೂದ್ರ ಹೈ (ಹೆಮ್ಮೆಯಿಂದ ಹೇಳು, ನಾವು ಶೂದ್ರರು) ಎಂಬ ಘೋಷಣೆಯುಳ್ಳ ಹಲವಾರು ಬ್ಯಾನರ್‌ಗಳು ಕಾಣಿಸಿಕೊಳ್ಳುತ್ತಿವೆ. ಪುರಾತನ ಮತ್ತು ಮಧ್ಯಕಾಲೀನ ಬ್ರಾಹ್ಮಣರ ಸಂಸ್ಕೃತ ಸಾಹಿತ್ಯಗಳಲ್ಲಿ ಈ ನೆಲದ ಆಹಾರ ಉತ್ಪಾದಕರು ಮತ್ತು ಕುಶಲಕರ್ಮಿಗಳನ್ನು ಶೂದ್ರರೆಂದು ಉಲ್ಲೇಖಿಸಿರುವ ಕುರಿತು ಪ್ರಸ್ತಾಪಿಸುತ್ತಿರುವ ಚಳುವಳಿಕಾರರು ಆ ಶೂದ್ರ ಪದದ ಬಗ್ಗೆ ನಾವೆಲ್ಲ ಗೌರವ ತಾಳಬೇಕು ಎನ್ನುತ್ತಿದ್ದಾರೆ. ಈ ನೆಲದ ಶೂದ್ರರು ಗೌರವ ಮತ್ತು ಮಾನವ ಘನತೆಗೆ ಅನರ್ಹರು ಎಂಬ ಅರ್ಥವನ್ನು ಈ ಬ್ರಾಹ್ಮಣ ಸಾಹಿತ್ಯ ಋಗ್ವೇದದಿಂದ ಪ್ರಾರಂಭಿಸಿ ಆನಂತರ ತಮ್ಮ ಇತರ ಸಾಹಿತ್ಯಕ್ಕೂ ವಿಸ್ತರಿಸಿತು. ಆದರೆ ಈ ಶೂದ್ರ ಪದವನ್ನು ಉತ್ಪಾದಕ ಸಮುದಾಯಗಳು ಸಕಾರಾತ್ಮಕವಾಗಿ ತೆಗೆದುಕೊಂಡು ಅದೊಂದು ಹೆಮ್ಮೆಯ ಗುರುತಾಗಿ ಪರಿಗಣಿಸಬೇಕು ಹಾಗು ಶೂದ್ರ ಪದವು ಯೋಗ್ಯವಾದ ಪರಿಕಲ್ಪನೆಯಾಗಿ ಮರುನಿಯೋಜನೆ ಮಾಡಬೇಕು ಎನ್ನುವುದು ಚಳುವಳಿಕಾರರ ಉದ್ದೇಶವಾಗಿದೆ. ಈ ಶೂದ್ರ ಆಂದೋಲನವು ತಮ್ಮ ಅವಮಾನಿತ ಗತಕಾಲವನ್ನು ಮರುಶೋಧಿಸಲು ಅಮೆರಿಕದಲ್ಲಿ ಕಪ್ಪು ಚಳವಳಿಯಂತೆ ಸಮಾನತೆಗಾಗಿ ಹೋರಾಡುವ ಅಸ್ತ್ರವಾಗಿ ಚಳುವಳಿಕಾರರು ಬಳಸುತ್ತಿದ್ದಾರೆ ಎನ್ನುತ್ತಾರೆ ಕಾಂಚ ಇಳಯ್ಯನವರು.
ಮುಂದುವರೆಯುವುದು…