ಶಿವಮೊಗ್ಗ : ಸ್ವಂತ ಮಗುವಿಗೆ ಹಾಲುಣಿಸಲು ಸಾಧ್ಯವಾಗುತ್ತಿಲ್ಲವೆಂದು ಮನನೊಂದು ತಾಯಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆಯು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಸಂಭವಿಸಿದೆ. ಮೃತ ಮಹಿಳೆಯನ್ನು ಶಾಂತಾ(28) ಎಂದು ಗುರುತಿಸಲಾಗಿದೆ.

40 ದಿನಗಳ ಹಿಂದೆ ಶಾಂತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು ಎನ್ನಲಾಗಿದೆ. ಆದರೆ ಶಾಂತಾಳಿಗೆ ಮಗುವಿಗೆ ಎದೆ ಹಾಲು ಉಣಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಶಾಂತಾ ತುಂಬಾನೇ ಮನನೊಂದಿದ್ದರು ಎನ್ನಲಾಗಿದೆ .
ಮಗುವಿಗೆ ಹಾಲುಣಿಸಲು ಸಾಧ್ಯವಾಗದೇ ಮಗು ಬಡವಾಗುತ್ತಿದೆ ಎಂದು ಪದೇ ಪದೇ ಹೇಳುತ್ತಿದ್ದ ಶಾಂತಾ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮಗುವಿನ ಸಮೇತ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹೊಂಡದಲ್ಲಿ ಮಗುವಿನ ಶವ ಸಿಕ್ಕ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಸೇರಿ ಶಾಂತಾಳ ಶವವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .