ನವದೆಹಲಿ:ಹೊಸ ಸಂಸತ್ ಭವನದ ಬಳಿ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ. ತಕ್ಷಣವೇ ಬೆಂಕಿ ನಂದಿಸಿ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಉತ್ತರ ಪ್ರದೇಶದ ಬಾಗಪತ್ ನಿವಾಸಿ ಜಿತೇಂದ್ರ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ 3.35ರ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಸಂಸತ್ ಭವನದ ಎದುರಿನ ರೈಲ್ವೆ ಭವನದ ಬಳಿ ಜಿತೇಂದ್ರ ಅವರು, ತಾವೇ ಬೆಂಕಿ ಹೊತ್ತಿಸಿಕೊಂಡಿದ್ದಾರೆ. ಇದನ್ನು ಕಂಡ ಅಲ್ಲಿದ್ದ ಸಿಬ್ಬಂದಿ ನೆರವಿಗೆ ಧಾವಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಘಟನೆಯ ಕುರಿತು ಅಗ್ನಿಶಾಮಕಕ್ಕೆ ಮಾಹಿತಿ ನೀಡಲಾಗಿದ್ದು, ಅಲ್ಲಿಗೆ ಬಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗಾಯಾಳುವನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಹೇಳಿಕೆ: ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ದೇವೇಶ್ ಕುಮಾರ್ ಮಹಲಾ, “ಉತ್ತರ ಪ್ರದೇಶದ ಬಾಗ್‌ಪತ್‌ನ ನಿವಾಸಿ ಜಿತೇಂದ್ರ ಎಂಬ ವ್ಯಕ್ತಿ ಸಂಸತ್ ಭವನದ ರೈಲ್ವೆ ಭವನದ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಪೊಲೀಸರು ಮತ್ತು ಕೆಲವು ನಾಗರಿಕರು ತಕ್ಷಣವೇ ಬೆಂಕಿಯನ್ನು ನಂದಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅವರು ಯಾವುದೇ ಪ್ರಕರಣದಿಂದಾಗಿ ನೊಂದಿದ್ದಕ್ಕೆ ಈ ರೀತಿ ಮಾಡಿಕೊಂಡಿದ್ದಾಗಿ” ತಿಳಿದು ಬಂದಿದೆ ಎಂದು ಹೇಳಿದ್ದಾರೆ.
“ಬೆಂಕಿ ಹೊತ್ತಿಕೊಂಡ ಪರಿಣಾಮ ಅವರ ಬ್ಯಾಗ್ ಮತ್ತು ಕೆಲ ದಾಖಲೆಗಳು ಅರ್ಧಂಬರ್ಧ ಸುಟ್ಟಿವೆ. ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ನೋಟ್ ಸಿಕ್ಕಿಲ್ಲ. ಬುಧವಾರ ಬೆಳಗ್ಗೆ ರೈಲಿನಲ್ಲಿ ಅವರು ಉತ್ತರಪ್ರದೇಶದಿಂದ ದೆಹಲಿಗೆ ಬಂದಿದ್ದಾರೆ. ಗಾಯಾಳು ಕುಟುಂಬ ಸದಸ್ಯರನ್ನು ಸಂಪರ್ಕಿಸಲಾಗಿದೆ.ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಅವರು ಮಾಹಿತಿ ನೀಡಿದರು.