ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹಾತ್ವಾಕಾಂಕ್ಷೆಯ ಚಂದ್ರಯಾನ 3 ಯೋಜನೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳಿಗೆ ಗೌರವ ಸೂಚಿಸುವ ಸಲುವಾಗಿ ಕೊಯಮತ್ತೂರಿನ ಕಲಾವಿದರೊಬ್ಬರು ಚಂದ್ರಯಾನ-3ರ ಮಾದರಿಯ ವಿನ್ಯಾಸವನ್ನು ಚಿನ್ನದಲ್ಲಿ ಸಿದ್ಧಪಡಿಸಿದ್ದಾರೆ.
ಇಸ್ರೊದ ಮಹತ್ವದ ಚಂದ್ರಯಾನ -3 ಯೋಜನೆಯ ವಿಕ್ರಮ್ ಲ್ಯಾಂಡರ್ ಬುಧವಾರ (ಆಗಸ್ಟ್ 23) ಚಂದ್ರನ ಮೇಲೆ ಇಳಿಯಲಿದೆ.
ಕಲಾವಿದ ಮರಿಯಪ್ಪನ್ ಎಂಬುವವರು ಚಿನ್ನದಲ್ಲಿ ಚಂದ್ರಯಾನ 3 ಯೋಜನೆಯ ಮಾದರಿ ರೂಪಿಸಿದ್ದಾರೆ.
ತಮ್ಮ ವಿನ್ಯಾಸದ ಕುರಿತು ಮಾತನಾಡಿರುವ ಅವರು, “ಇಂತಹ ವಿಶೇಷ ಸಂದರ್ಭದಲ್ಲಿ ಚಿನ್ನವನ್ನು ಬಳಸಿ ವಿನ್ಯಾಸಗಳನ್ನು ರೂಪಿಸುತ್ತೇನೆ. ಇದು (ಚಂದ್ರಯಾನ-3) ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ. ಯೋಜನೆಯಲ್ಲಿ ಪಾಲ್ಗೊಂಡ ಎಲ್ಲ ವಿಜ್ಞಾನಿಗಳಿಗೂ ಕೃತಜ್ಞತೆ ಸಲ್ಲಿಸುವುದಕ್ಕಾಗಿ, 4 ಗ್ರಾಂ ಚಿನ್ನವನ್ನು ಬಳಸಿ ಈ ಮಾದರಿ ಸಿದ್ಧಪಡಿಸಿದ್ದೇನೆ” ಎಂದು ಹೇಳಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಮಂಗಳವಾರ (ಆಗಸ್ಟ್ 22) ವರದಿ ಮಾಡಿದೆ.
ಚಂದ್ರಯಾನ 3 ನೌಕೆಯ ವಿನ್ಯಾಸವನ್ನು ಸಿದ್ಧಪಡಿಸಲು ತಮಗೆ ಸುಮಾರು 48 ಗಂಟೆ ಬೇಕಾಯಿತು ಎಂದೂ ತಿಳಿಸಿದ್ದಾರೆ.