
ಮುಂಬೈ:1.10 ಲಕ್ಷ ರೂ.ಹಣಕ್ಕಾಗಿ 5 ದಿನಗಳ ಶಿಶುವನ್ನು ಮಾರಿದ್ದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಥಾಣೆ ಜಿಲ್ಲೆಯ ಬದ್ಲಾಪುರ ನಿವಾಸಿಗಳಾದ ಸುನೀಲ್ ಅಲಿಯಾಸ್ ಭೋಂಡು ದಯಾರಾಮ್ ಗೆಂದ್ರೆ (31) ಮತ್ತು ಅವರ ಪತ್ನಿ ಶ್ವೇತಾ (27), ಮಕ್ಕಳಿಲ್ಲದ ದಂಪತಿಗಳನ್ನು ಪೂರ್ಣಿಮಾ ಶೆಲ್ಕೆ (32) ಮತ್ತು ಅವರ ಪತಿ ಸ್ನೇಹದೀಪ್ ಧರ್ಮದಾಸ್ ಶೆಲ್ಕೆ (45), ಮಧ್ಯವರ್ತಿಗಳಾದ ನಾಗ್ಪುರದ ನಿವಾಸಿಗಳಾದ ಕಿರಣ್ ಇಂಗ್ಲೆ (41), ಆಕೆಯ ಪತಿ ಪ್ರಮೋದ್ ಇಂಗ್ಲೆ (45) ಎಂದು ಗುರುತಿಸಲಾಗಿದೆ.
ಸುನೀಲ್ ಮತ್ತು ಶ್ವೇತಾ ಗೆಂದ್ರೆ ತಮ್ಮ ನವಜಾತ ಮಗನನ್ನು ಆಗಸ್ಟ್ 22 ರಂದು ಕಿರಣ್ ಮತ್ತು ಪ್ರಮೋದ್ ಇಂಗ್ಲೆ ಮೂಲಕ ಶೆಲ್ಕೆ ದಂಪತಿಗೆ ಮಾರಾಟ ಮಾಡಿದ್ದಾರೆ. ಕಿರಣ್ ಇಂಗ್ಲೆ ಅವರ ಸಂಬಂಧಿಕರಾದ ಶೆಲ್ಕೆ ದಂಪತಿ ಮಗುವಿಗೆ 1.10 ಲಕ್ಷ ರೂ. ನೀಡಿ ಮಗುವನ್ನು ದತ್ತು ಪಡೆದಿದ್ದರು. ಆದರೆ ಬೇಕಾದ ಕಾನೂನು ವಿಧಾನಗಳನ್ನು ತಪ್ಪಿಸಿ ಮನೆಗೆ ನೇರವಾಗಿ ಕರೆದೊಯ್ದಿದ್ದರು.
ಘಟನೆ ಹಿನ್ನೆಲೆಯಲ್ಲಿ ಮಾನವ ಕಳ್ಳಸಾಗಣೆ ನಿಗ್ರಹ ದಳ (ಎಎಚ್‌ಟಿಎಸ್) ನಡೆಸಿದ ಕಾರ್ಯಾಚರಣೆಯು ಮಾರಾಟಗಾರ ಮತ್ತು ಖರೀದಿದಾರರನ್ನು ಮಾತ್ರವಲ್ಲದೆ ವಹಿವಾಟಿಗೆ ಮಧ್ಯಸ್ಥಿಕೆ ವಹಿಸಿದ ಇತರ ಇಬ್ಬರನ್ನೂ ಬಂಧಿಸಿದೆ. ಮಗುವನ್ನು ತಾತ್ಕಾಲಿಕವಾಗಿ ಸ್ಥಳೀಯ ಅನಾಥಾಶ್ರಮದಲ್ಲಿ ಇರಿಸಲಾಗಿದೆ.





