
ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ (Physical Abuse) ಸಂಬಂಧ ಯುವತಿ ಸ್ನೇಹಿತ ನೀಡಿದ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ. ಶನಿವಾರ ತಡರಾತ್ರಿ 1 ಗಂಟೆಗೆ ಅತ್ಯಾಚಾರ ಯತ್ನ ನಡೆದ ಬಳಿಕ ಸಂತ್ರಸ್ತೆ ಯುವತಿಯ ಸ್ನೇಹಿತೆ ದೂರುದಾರನಿಗೆ ಕರೆ ಮಾಡಿದ್ದಳು.
ಸ್ಥಳಕ್ಕೆ ಹೋಗಿ ನೋಡಿದಾಗ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಆಕೆಯ ಸ್ನೇಹಿತ ನೀಡಿದ ದೂರಿನ ಮೇರೆಗೆ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಂತ್ರಸ್ತೆ ಯುವತಿಯಿಂದ ಎಮರ್ಜೆನ್ಸಿ ಕರೆ ಮತ್ತು ಲೊಕೇಶನ್ ಬಂದಿದೆ. ಆದರೆ ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂದು ಸ್ನೇಹಿತೆ ದೂರುದಾರನಿಗೆ ಹೇಳಿದ್ದ. ಲೊಕೇಶನ್ ಆಧರಿಸಿ ಹೊಸೂರು ಸರ್ವಿಸ್ ರಸ್ತೆ ಬಳಿ ಸ್ನೇಹಿತ ಹೋಗಿದ್ದ. ಗಿರಿಯಾಸ್ ಶೋರೂಮ್ ಹಿಂಭಾಗದ ಲಾರಿ ನಿಲ್ಲಿಸುವ ಜಾಗಕ್ಕೆ ಬಂದು ನೋಡಿದ್ದ. ಯುವತಿ ಬೆತ್ತಲೆಯಾಗಿ ಲಾರಿಯ ಹಿಂಭಾಗದಲ್ಲಿ ಬಿದ್ದಿದ್ದಳು. ಆಕೆಯ ಮೇಲೆ ಒಂದು ರೆಡ್ ಜಾಕೆಟ್ ಮಾತ್ರ ಇತ್ತು. ಈ ವೇಳೆ ದೂರುದಾರ ಸ್ನೇಹಿತ ತನ್ನ ಬಟ್ಟೆಯಿಂದ ಆಕೆಯ ದೇಹ ಮುಚ್ಚಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಮತ್ತೊಬ್ಬ ಸ್ನೇಹಿತ ಕೂಡ ಮೊಬೈಲ್‌ನಿಂದ ಹೋಗಿದ್ದ ಮೆಸೇಜ್ ಆಧಾರದ ಮೇಲೆ ಸ್ಥಳಕ್ಕೆ ಬಂದಿದ್ದ. ಇಬ್ಬರು ಸೇರಿಕೊಂಡು ಕಾರ್‌ನ ಶೀಟ್ ಕವರ್‌ನಿಂದ ಆಕೆಯ ದೇಹವನ್ನು ಮುಚ್ಚಿಕೊಂಡು ಕಾರಿನಲ್ಲಿ ಮಲಗಿಸಿದ್ದಾರೆ. ಅಷ್ಟರಲ್ಲಿ, ಸ್ಥಳದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಕೇವಲ ಪ್ಯಾಂಟ್‌ನಲ್ಲಿ ನಿಂತಿದ್ದ. ಗಾಬರಿಯಲಿದ್ದ ಆತನ ಮುಖಕ್ಕೆ ಪರಚಿರುವಂತಹ ಗಾಯಗಳಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ದೂರುದಾರ ಆರೋಪಿಯನ್ನು ಹಿಡಿದುಕೊಳ್ಳಲು ಹೋದಾಗ ಆತ ಸ್ಥಳದಿಂದ ಓಡಿ ಹೋಗಿದ್ದಾನೆ. ನಂತರ ಆಸ್ವಸ್ಥಗೊಂಡಿದ್ದ ಯುವತಿಯನ್ನು ಸ್ನೇಹಿತನ ಕಾರಿನಲ್ಲಿ ಬೊಮ್ಮಸಂದ್ರ ಖಾಸಗಿ ಆಸ್ಪತ್ರೆಗೆ ದಾಖಲು ದೂರುದಾರ ಮಾಡಿದ್ದ. ಕಾರಿನಲ್ಲಿ ಯುವತಿ ಬಳಿ ಘಟನೆ ಬಗ್ಗೆ ಸ್ನೇಹಿತರು ಕೇಳಿದ್ದರು. ಆಗ ಅಪರಿಚಿತ ವ್ಯಕ್ತಿ, ಅತ್ಯಾಚಾರ ಮಾಡಲು ಯತ್ನಿಸಿರೋದಾಗಿ ಯುವತಿ ಹೇಳಿಕೆ ನೀಡಿದ್ದಾಳೆ. ಘಟನೆ ಬಗ್ಗೆ ದೂರುದಾರ ಆಕೆಯ ತಂದೆ-ತಾಯಿಗೆ ವಿಷಯ ತಿಳಿಸಿದ್ದಾರೆ.









