ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಆಯಿತು. ಇದೀಗ ಮದರಸಾಗಳಿಗೆ ಮೂಗುದಾರ ಹಾಕಲು ಶಿಕ್ಷಣ ಇಲಾಖೆ ಮುಂದಾಗಿದೆ. ಆಶ್ಚರ್ಯ ಎಂದ್ರೆ ಮದರಸಾ ವ್ಯಾಪ್ತಿ ಬರುವ ವಕ್ಫ್ ಬೋರ್ಡ್ ಗೆ ಈ ಬಗ್ಗೆ ಒಂದಿಂಚೂ ಮಾಹಿತಿಯೇ ಇಲ್ಲ. ಇದು ಶಿಕ್ಷಣ ಇಲಾಖೆ ವರ್ಸಸ್ ವಕ್ಫ್ ಬೋರ್ಡ್ ಮಧ್ಯೆ ಜಟಾಪಟಿ ಅವಕಾಶ ಮಾಡಿಕೊಟ್ಟಿದೆ.
ಮದರಸ ಶಿಕ್ಷಣ ಮಂಡಳಿ ಮಾಡಲು ಮುಂದಾದ ಶಿಕ್ಷಣ ಇಲಾಖೆ
ರಾಜ್ಯದಲ್ಲಿ ಮದರಸಗಳ ನಿಯಂತ್ರಣಕ್ಕೆ ಮಂಡಳಿ ರಚಿಸಲು ಸರ್ಕಾರ ಮುಂದಾಗಿದೆ. ಉತ್ತರ ಪ್ರದೇಶದ ಈ ಮಾದರಿಯನ್ನು ರಾಜ್ಯದಲ್ಲಿ ಪಾಲಿಸುತ್ತಿದ್ಯಾ ಎಂಬ ಅನುಮಾನ ಕಾಡುತ್ತಿದೆ. ಯಾಕಂದ್ರೆ ಈಗಾಗಲೇ ಉತ್ತರ ಪ್ರದೇಶ ಹಾಗೂ ಉತ್ತಾರಖಂಡದಲ್ಲಿ ಮದರಸಾಗಳಿಗೆ ಮಂಡಳಿ ಸ್ಥಾಪನೆ ಮಾಡಲಾಗಿದೆ. ಇವುಗಳಿಂದಲೇ ಮುಸ್ಲಿಂ ಧಾರ್ಮಿಕ ಶಿಕ್ಷಣ ಕೇಂದ್ರಗಳನ್ನು ನಿಯಂತ್ರಿಸಲಾಗ್ತಿದೆ. ಶೈಕ್ಷಣಿಕ ಚಟುವಟಿಕೆ ಬದಲಾವಣೆ, ಪಠ್ಯಕ್ರಮ ಪರಿಷ್ಕರಣೆ ಇತ್ಯಾದಿ ಬದಲಾವಣೆಗಳ ಕುರಿತು ಮಂಡಳಿಯೇ ನಿರ್ಧರಿಸುತ್ತಿದೆ. ಮದರಾಸಗಳಲ್ಲಿ ಯಾವೆಲ್ಲ ನಿಮಯಗಳನ್ನು ಪಾಲಿಸಬೇಕು..? ಮಕ್ಕಳಿಗೆ ಯಾವ ಮಾದರಿಯಲ್ಲಿ ಪಾಠ ಮಾಡಬೇಕು..? ಮುಸ್ಲಿಂ ಧಾರ್ಮಿಕ ಪಾಠಗಳ ಜೊತೆಯಲ್ಲೇ ಬೇರೆ ಯಾವೆಲ್ಲಾ ಪಾಠಗಳನ್ನು ಹೇಳಿಕೊಡಬೇಕು..? ಪ್ರಸ್ತುತ ಜಗತ್ತಿನ ಕಾಂಪಿಟೇಶನ್‌ಗೆ ಒಗ್ಗುವಂತೆ ಹೇಗೆ ಸಿದ್ದಪಡಿಸಬೇಕು..? ಈ ರೀತಿಯ ಹಲವಾರು ಅಂಶಗಳ ಕುರಿತ ನಿರ್ಧರಿಸಲು ಸಮಿತಿ ರಚನೆಗೆ ಸರ್ಕಾರ ಮುಂದಾಗಿದೆ.
ಮದರಸಾಗೆ ಮೂಗುದಾರ ಹಾಕಲು ಮುಂದಾದ ಶಿಕ್ಷಣ ಇಲಾಖೆಯ ಕ್ರಮಕ್ಕೆ ವಕ್ಫ್ ಬೋರ್ಡ್ ಆಕ್ರೋಶ
ರಾಜ್ಯದಲ್ಲಿ ವಕ್ಫ್ ಬೋರ್ಡ್ ವ್ಯಾಪ್ತಿಗೆ ಸಾವಿರಕ್ಕೂ ಹೆಚ್ಚು ಅನುದಾನಿತ ಮದರಸಾಗಳಿವೆ. ಇವುಗಳಿಗೆ ಸರಕಾರವೇ ಅನುದಾನ ನೀಡುತ್ತೆ. ಇನ್ನೂ ಮೂರು ಸಾವಿರಕ್ಕೂ ಹೆಚ್ಚು ಅನುದಾನ ರಹಿತ ಮದರಸಾಗಳಿವೆ. ಇವುಗಳಿಗೆ ಮುಸ್ಲಿಂ ಸಮುದಾಯ ಅನುದಾನ ನೀಡುತ್ತೆ. ಇದೀಗ ವಕ್ಫ್ ಅಧೀನದಲ್ಲಿರುವ ಮದರಸಾದ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ. ಮದರಸಾಗೆ ಮಂಡಳಿ ರಚನೆ ಬಗ್ಗೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. 15 ದಿನದಲ್ಲಿ ವರದಿ ತರಿಸಿಕೊಳ್ಳುವಂತೆ ಸೂಚನೆ ನೀಡಿದೆ. ಆದರೆ ಮದರಸಾ ವ್ಯಾಪ್ತಿ ಒಳಪಡುವ ವಕ್ಫ್ ಬೋರ್ಡ್ ಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಸರ್ಕಾರದ ನಿರ್ಧಾರಕ್ಕೆ ವಕ್ಫ್ ಬೋರ್ಡ್ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಮದರಸಾ ಇರೋದು ವಕ್ಫ್ ಬೋರ್ಡ್ ಅಧೀನದಲ್ಲಿ. ಸರ್ಕಾರದ ಸಭೆ, ನಿರ್ಧಾರ ಯಾವುದು ನಮ್ಮ ಗಮನಕ್ಕೆ ಬಂದಿಲ್ಲ. ಗುಣಮಟ್ಟದ ಶಿಕ್ಷಣ, ಅನುದಾನ ಕೊಡುವುದಾದರೆ ಅಭ್ಯಂತರವಿಲ್ಲ. ಆದರೆ ನಮಗೊಂದು ಮಾಹಿತಿ ನೀಡಿಲ್ಲ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಚಿವ ಬಿಸಿ ನಾಗೇಶ್ ವಾದವೇನು.!?
ಮದರಸಾದ ಶಿಕ್ಷಣ ಬಗ್ಗೆ ಸರ್ಕಾರ ಗಮನ ಕೊಡ್ತಿಲ್ಲ. ಆ ಸಮುದಾಯದ ಪೊಷಕರು ಮಾಹಿತಿ ನೀಡಿದ್ದಾರೆ. ಎಲ್ಲರಂತೆ ನಮ್ಮ ಮಕ್ಕಳು ಉತ್ತಮ ಶಿಕ್ದಣ ಸಿಗಬೇಕು. ಮದರಸಾದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗ್ತಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಆ ಮಕ್ಕಳು ಕಾಂಪಿಟೇಷನ್ ಮಾಡಬೇಕಿದೆ.ಮದರಸಾದಲ್ಲಿ ಮಕ್ಕಳು ಓದುವ ಪಠ್ಯದ ಬದಲಾವಣೆ ಬಗ್ಗೆ ಚರ್ಚೆಯಾಗಲಿದೆ. ಸಭೆಯಲ್ಲಿ ಮಂಡಳಿ ರಚನೆ ಕುರಿತು ನಿರ್ಧಾರ ಆಗಲಿದೆ. ಬೇರೆ ರಾಜ್ಯಗಳ ನೋಡಿ ನಾವು ಮಂಡಳಿ ನಿರ್ಧಾರ ತೆಗೆದುಕೊಂಡಿಲ್ಲ.
ವಕ್ಫ್ ಬೋರ್ಡ್ ವಾದವೇನು.!?
ಮದರಸಾದಲ್ಲಿ ದೇಶದ್ರೋಹದ ಪಾಠ ಮಾಡಲ್ಲ. ನಾವು ಕೂಡ ಮದರಸಾದ ವಿದ್ಯಾರ್ಥಿಯೇ. ಹೀಗೆ ವಕ್ಫ್ ಬೋರ್ಡ್ ಅಧ್ಯಕ್ಷ ತಿರುಗೇಟು ನೀಡಿದ್ದಾರೆ. ಮುಂದುವರೆದು, ಮದರಸಾದಲ್ಲಿ ದೇಶಪ್ರೇಮದ ಭಾವೈಕ್ಯತೆಯ ಸಹಬಾಳ್ವೆಯ ಪಾಠ ಮಾಡಲಾಗುತ್ತೆ. ಯಾವುದೇ ಭಯೋತ್ಪಾದನಾ ಪ್ರೇರಿತ ಘಟನೆ ನಡೆಯೋದಿಲ್ಲ. ಒಟ್ಟಾರೆ ಉತ್ತರ ಪ್ರದೇಶದಂತೆ ರಾಜ್ಯದಲ್ಲಿ ಮದರಸಾ ಶಿಕ್ಷಣ ಮಂಡಳಿಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಆದರೆ ಇದಕ್ಕೆ ವಕ್ಫ್ ಬೋರ್ಡ್ ಅಸಮಾಧಾನವಿದ್ದು, ಶಿಕ್ಷಣ ಇಲಾಖೆ ವರ್ಸಸ್ ವಕ್ಫ್ ಬೋರ್ಡ್ ಜಟಾಪಟಿ ಎಲ್ಲಿಗೆ ಬಂದು ನಿಲ್ಲುತ್ತೋ ಎಂದು ಕಾದು ನೋಡಬೇಕಿದೆ.