ರಾಜ್ಯ ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ನಲ್ಲಿ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ತಿರುಗೇಟು ನೀಡುವುದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿದ ಕೈ ಎನ್ನುವಂತೆ ನಡೆದುಕೊಳ್ತಿದ್ದಾರೆ. ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ವಿಶೇಷ ಅಧಿವೇಶ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಜಾರಿ ಮಾಡಿರುವ ವಿವಾದಿತ ಕಾಯ್ದೆಗಳನ್ನು ತೆಗೆದು ಹಾಕುತ್ತೇವೆ ಎಂದು ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಮಾತಿನಿಂದ ಸಿಡಿದು ಸಿಟ್ಟಾಗಿದ್ದ ಬಿಜೆಪಿ ನಾಯಕರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಹರಿಹಾಯ್ದಿದ್ದರು. ಧಮ್ಮು, ತಾಕತ್ತು ಎಂದು ವೀರಾವೇಶ ಪ್ರದರ್ಶನ ಮಾಡಿದ್ದರು. ಆದರೆ ಬಿಜೆಪಿ ಹೇಳಿಕೆಗೆ ತಣ್ಣನೆ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದ ಬಿಜೆಪಿ ಲೀಡರ್ಸ್..!
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಹಾಗು ಇಬ್ಬರು ಬಿಜೆಪಿ ನಾಯಕರ ಮೇಲೆ ಹಾಕಿರುವ ಕೇಸ್‌ಗಳ ಬಗ್ಗೆ ವಾಗ್ದಾಳಿ ಮಾಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕಂದಾಯ ಸಚಿವ ಆರ್ ಅಶೋಕ್ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದರು. ನಿಮ್ಮ ಅಪ್ಪ, ಅಜ್ಜಿ, ಮುತ್ತಾತ್ತನ ಕೈಯಲ್ಲೇ ಆರ್‌ಎಸ್‌ಎಸ್ ಬ್ಯಾನ್ ಮಾಡಲು ಆಗಿಲ್ಲ. ಇವಾಗ ದೇಶದಲ್ಲಿ ನಿಮ್ಮ ಸರ್ಕಾರ ನೆಗೆದು ಬಿದ್ದಿದೆ. ಇವಾಗ ತಾಕತ್, ಧಮ್ ಇದ್ರೆ ಭಜರಂಗ ದಳ ಆಗಲಿ, ಆರ್‌ಎಸ್‌ಎಸ್‌ನ ಒಂದು ಶಾಖೆಯನ್ನು ಬ್ಯಾನ್ ಮಾಡಿ ನೋಡಿ, ಬ್ಯಾನ್ ಮಾಡಿದ 3 ತಿಂಗಳಿಗೆ ನಿಮ್ಮ ಸರ್ಕಾರ ಇರಲ್ಲ. ನಿಮ್ಮ ಗೂಟದ ಕಾರುಗಳು ಎಲ್ಲವೂ ವಾಪಸ್ಸು ಹೋಗಬೇಕು. ಈ ದೇಶದ ಪ್ರಧಾನಿಗಳು RSS ನವರು. RSS ಹಿಂದೂಗಳ ಧ್ವನಿ. ಭಜರಂಗದಳ ಆಗಲಿ, RSS ಬ್ಯಾನ್ ಮಾಡಿ ತಾಕತ್ ಇದ್ರೆ ಎನ್ನುವ ಮೂಲಕ ಬ್ಯಾನ್ ಬಗ್ಗೆ ಮಾತನಾಡಿದ್ದ ಸಚಿವ ಪ್ರಿಯಾಂಕ್ ಖರ್ಗೆಗೆ ಸವಾಲು ಎಸೆದಿದ್ದರು.
ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಕೊಟ್ಟ ಠಕ್ಕರ್ ಏನು..?
ಬಿಜೆಪಿ ನಾಯಕರು ಮಾಡಿದ್ದ ವಾಕ್ಸಮರಕ್ಕೆ ತಣ್ಣನೆ ಉತ್ತರ ಕೊಟ್ಟಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿಗರು, ಪದೇ ಪದೇ, RSS ಬ್ಯಾನ್ ಮಾಡಿ ನೋಡಿ ಅಂತಿದಾರೆ. ಇಷ್ಟು ದಿನ ರಾಜ್ಯದಲ್ಲಿ ಕುರುಡರ ಆಡಳಿತದಲ್ಲಿ ಆಟವಾಡಿದ ಹಾಗೆ ಅಲ್ಲ. ಈಗ ಒಂದೇ ಒಂದು ಬಾರಿ ಸಮಾಜದಲ್ಲಿ ಶಾಂತಿ ಕದಡುವ, ಹೆಣದ ಮೇಲೆ ರಾಜಕೀಯ ಬೇಳೆ ಬೇಯಿಸುವ, ಅಸಂವಿಧಾನಿಕ ಚಟುವಟಿಕೆ ಮಾಡುವ ಪ್ರಯತ್ನ ಮಾಡಿ ನೋಡಿ. ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪವರ್ ಏನು ಎನ್ನುವುದನ್ನು ನಾವು ತೋರಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಂದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರ ಮಕ್ಕಳ ಹೆಣವನ್ನು ಬೀಳಿಸಿ ರಾಜಕೀಯ ಮಾಡಿತ್ತು. ಇನ್ಮುಂದೆ ಬಿಜೆಪಿಯ ಹೆಣ ಬೀಳಿಸುವ ರಾಜಕೀಯ ನಡೆಯಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.
ಹೋಂ ಮಿನಿಸ್ಟರ್ ಆಗ್ತಾರಾ ಪ್ರಿಯಾಂಕ್ ಖರ್ಗೆ..?
ಪ್ರಿಯಾಂಕ್ ಖರ್ಗೆ 2013ರಲ್ಲಿ ಕಲಬುರಗಿಯ ಚಿತ್ತಾಪುರ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಆದರೂ ಐಟಿ ಬಿಟಿ ಸಚಿವರಾಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. 2018ರಲ್ಲಿ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕೆಲಸ ಮಾಡಿದ್ದರು. ಇದೀಗ 3ನೇ ಬಾರಿಗೆ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಲಿ ಎನ್ನುವುದು ಬಹುತೇಕ ಜನರ ಅಭಿಪ್ರಾಯ. ಬಿಜೆಪಿ ನಾಯಕರಿಗೆ ಖಡಕ್ ಉತ್ತರ ನೀಡುವ ಪ್ರಿಯಾಂಕ್ ಖರ್ಗೆ, ಅಮೆರಿಕದಲ್ಲಿ ಉತ್ತಮ ವಿದ್ಯಭ್ಯಾಸ ಪಡೆದಿದ್ದು ಕಾನೂನು ಜ್ಞಾನ ಹೊಂದಿದ್ದಾರೆ. ಹೀಗಾಗಿ ಗೃಹ ಖಾತೆ ಪಡೆದರೆ ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಇರಲಿದೆ ಎನ್ನುವ ಅಭಿಪ್ರಾಯ ಕೇಳಿ ಬರ್ತಿದೆ.
ಕೃಷ್ಣಮಣಿ