ತಿಂಗಳ ಹಿಂದೆ ಉಡುಪಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರ ವಿರುದ್ಧ ಎದ್ದ ವಿವಾದವು ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಬ್ಬಿ, ಸಂಘರ್ಷಕ್ಕೆ ಕಾರಣವಾಗಿದೆ. ಹಿಜಾಬ್ ಧರಿಸಿ ಮಕ್ಕಳಿಗೆ ಅವಕಾಶ ನೀಡಬಾರದೆಂದು ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಸಹಪಾಠಿಗಳೇ ಹುಯಿಲೆಬ್ಬಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಅದರಲ್ಲೂ, ಕುಂದಾಪುರ ಕಾಲೇಜಿನ ಕೇಸರಿ ಧಾರಿ ವಿದ್ಯಾರ್ಥಿನಿಯೊಬ್ಬಳು, ʼ20 % ಇರುವ ಅವರಿಗೆ ಇಷ್ಟೊಂದು ಇರಬೇಕಾದರೆ, 75% ಇರುವ ನಮಗೆ ಇನ್ನೆಷ್ಟಿರಬೇಡʼ ಎಂದು ಮಾಧ್ಯಮದ ಎದುರು ಕೇಳಿರುವುದು ನಿಜಕ್ಕೂ ನಮ್ಮ ಭವಿಷ್ಯದ ತಲೆಮಾರಿನಲ್ಲಿ ಎಷ್ಟು ಧ್ವೇಷ ತುಂಬಿದೆ ಎಂಬುದಕ್ಕೆ ಸಾಕ್ಷಿ.
ಅಷ್ಟಕ್ಕೂ, ಈ ಪ್ರಕರಣವನ್ನು ಇಷ್ಟು ರಾದ್ಧಾಂತ ಮಾಡುವ ಅಗತ್ಯವೇ ಇದ್ದಿರಲಿಲ್ಲ. ಸಮವಸ್ತ್ರದ ಶಾಲುಗಳನ್ನೇ ತಲೆಗೆ ಹೊದ್ದುಕೊಳ್ಳಿ ಎಂದು ಈ ಸಮಸ್ಯೆಯನ್ನು ಸರಳವಾಗಿ ಬಗೆಹರಿಸಬಹುದಿತ್ತು. ಆದರೆ, ಶಾಸಕ ರಘುಪತಿ ಭಟ್, ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಮೊದಲಾದವರಿಗೆ ಹಿಜಾಬ್ ವಿವಾದ ಬಿಗಡಾಯಿಸಬೇಕು ಎಂದಿತ್ತು ಕಾಣುತ್ತದೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗೆ ಹಾಜರಾಗಲು ಬಿಡದೆ ಕುಳ್ಳಿರಿಸಿ, ಅಂತರಾಷ್ಟ್ರೀಯ ಮಾಧ್ಯಮಗಳಲ್ಲೂ ವರದಿ ಆಗುವಷ್ಟರ ಮಟ್ಟಿಗೆ ಕಾಲೇಜು ಒಂದರ ಕ್ಷುಲ್ಲಕ ಘಟನೆಯನ್ನು ಕೊಂಡೊಯ್ದರು.
ಒಂದು ಹಂತದಲ್ಲಿ, ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಅವರು “ಹಿಂದೂ ಸಂಘಟನೆಗಳಿಗೆ ಐದು ನಿಮಿಷ ಕೊಡಿ ನಾವು ಹಿಜಾಬ್ ಸಮಸ್ಯೆ ಬಗೆಹರಿಸುತ್ತೇವೆ” ಎಂದು ಹೇಳಿ ವಿವಾದಕ್ಕೆ ತೀವ್ರ ಸ್ವರೂಪ ನೀಡಿದ್ದರು.
ಪ್ರತಿಯಾಗಿ, ಸರ್ಕಾರದ ಹಿಂದಿನ ಆದೇಶದಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವಂತೆ ಇಲ್ಲ ಎಂಬ ಅಂಶವನ್ನು ಉಲ್ಲೇಖಿಸಿ ವಿದ್ಯಾರ್ಥಿನಿಯರು ಹಿಜಾಬ್ ನನ್ನ ಹಕ್ಕು ಎಂದು ಬಲವಾಗಿ ನಿಂತರು. ಕಾಲೇಜು ಪ್ರವೇಶ ನೀಡದೆ ಹಠ ಸಾಧಿಸಿತು. ನೋಡ ನೋಡುತ್ತಿದ್ದಂತೆ ಪ್ರಕರಣ ಕುಂದಾಪುರದ ಕಾಲೇಜಿಗೆ ಹಬ್ಬಿತು. ಅದುವರೆಗೂ ಹಿಜಾಬ್ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಏಕಾಏಕಿ ಕ್ಯಾಂಪಸ್ ಪ್ರವೇಶಿಸದಂತೆ ಪ್ರಿನ್ಸಿಪಾಲರೇ ಮುಂದೆ ನಿಂತು ತಡೆದರು.

ಬಿಜೆಪಿ ಶಾಸಕ, ಸಂಸದರು ಮುಸ್ಲಿಂ, ಪಾಕಿಸ್ತಾನ, ದೇಶಭಕ್ತಿ ಎಂದೆಲ್ಲಾ ಬಡಬಡಾಯಿಸತೊಡಗಿದರು. ಸಂಸದ ಪ್ರತಾಪ ಸಿಂಹ ಮಾತನಾಡಿ, ʼಹಿಜಾಬ್ ಉರ್ದು ಬೇಕಿದ್ದರೆ, ಪಾಕಿಸ್ತಾನಕ್ಕೆ ಹೋಗಿ, ಅವತ್ತೇ ನಿಮಗೆ ಪಾಕಿಸ್ತಾನ ಕೊಟ್ಟಿಲ್ಲವಾ. ಇದು ಹಿಂದೂ ರಾಷ್ಟ್ರ. ನಮ್ಮ ಸಂಸ್ಕೃತಿ ಒಪ್ಪಿಕೊಂಡರೆ ಇಲ್ಲಿ ನಿಂತುಕೊಳ್ಳಿʼ ಎಂದು ಬಹುಸಂಖ್ಯಾತವಾದ ಮುಂದಿಟ್ಟರು. ಶಾಸಕ ಬಸನಗೌಡ ಪಾಟೀಲ್ ಕೂಡಾ ಇದೇ ಅರ್ಥದಲ್ಲಿ ಮಾತನಾಡಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವವರೆಗೂ ಸರ್ಕಾರ ಮೌನವಾಗೇ ಇತ್ತು.
ಬಿಜೆಪಿ ನಾಯಕರ ಹೇಳಿಕೆಗಳು, ಕೇಸರಿ ಧಾರಿ ವಿದ್ಯಾರ್ಥಿಗಳ ವಾದಗಳು ಎಲ್ಲಾ ಗಮನಿಸುವಾಗ ಇದು ʼಮುಸ್ಲಿಂ ಜನಾಂಗೀಯ ಧ್ವೇಷʼದ ಕಾರ್ಯಕ್ರಮಗಳಲ್ಲಿ ಒಂದು ಎನ್ನುವುದು ವೇದ್ಯವಾಗುತ್ತದೆ. ಹಿಂದೂ ವಿದ್ಯಾರ್ಥಿನಿಯರಲ್ಲಿ ಮಾತನಾಡಿದ ಕಾರಣಕ್ಕೆ ಹೊಡೆದ, ಬೀಫ್ ಹೆಸರಿನಲ್ಲಿ ಥಳಿಸಿದ್ದ ಹಿಂದುತ್ವ ಪಡೆಗಳಿಗೆ ಮುಸ್ಲಿಮರ ಮೇಲೆ ದಬ್ಬಾಳಿಕೆ ಮಾಡಲು ಹೊಸ ಆಯುಧ ಒಂದು ದೊರೆಯಿತು. ಅದು ಹಿಜಾಬ್.
ಹಿಜಾಬ್ ವಿವಾದ ತಾರಕಕ್ಕೇರುತ್ತಿರುವ ನಡುವೆ, ಶಾಲೆಯಲ್ಲಿ ಎಲ್ಲರೂ ಸಮಾನರಾಗಿರಬೇಕೆಂದು ವಸ್ತ್ರ ಸಂಹಿತೆ ಪಾಲಿಸಬೇಕು ಎಂಬರ್ಥದಲ್ಲೂ ಚರ್ಚೆ ಎದ್ದಿದ್ದವು. ಹಿಂದುತ್ವವನ್ನು ಆಯಾ ಕಾಲದಲ್ಲಿ ವಿರೋಧಿಸುತ್ತಾ ಬಂದ ಉದಾರವಾದಿಗಳೇ ಹಲವರು, ಧಾರ್ಮಿಕ ಚಿಹ್ನೆಗಳನ್ನು ಶಾಲೆಯಲ್ಲಿ ಪಾಲಿಸಬಾರದು ಎಂದು ಚರ್ಚಿಸುತ್ತಾ ಪರೋಕ್ಷವಾಗಿ ಹಿಜಾಬ್ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ದಾಖಲಿಸಿದ್ದರು.
ಅಷ್ಟಕ್ಕೂ, ಬಹುತ್ವದ ನಾಡಾದ ಭಾರತದಲ್ಲಿ ಬಹುತ್ವವನ್ನು ನಿಜಾರ್ಥವನ್ನು ಕಲಿಯಲು ಶಾಲೆಗಳಿಗಿಂತ ಒಳ್ಳೆ ವಾತಾವರಣ ಇನ್ನೆಲ್ಲಿ? ಅದರಲ್ಲೂ, ಬಹುತೇಕ ಘೆಟ್ಟೋಯಿಸೇಷನ್ ಆದ ನಂತರದ ಈ ಕಾಲದಲ್ಲಿ ಪರಸ್ಪರರ ಸಂಸ್ಕೃತಿಯನ್ನು ಅರಿತು ಸಹಬಾಳ್ವೆ ನಡೆಸುವ ಅವಕಾಶವನ್ನು ಶಾಲೆಗಿಂತ ಇನ್ಯಾವ ಪರಿಸರ ಒದಗಿಸಬಲ್ಲದು? ಹಾಗಾಗಿ, ಶಾಳೆಯಲ್ಲಿ ಬಿಂದಿಯೋ, ಕೈ ಬಳೆ, ರಾಖಿ, ಹಿಜಾಬ್, ಸಿಖ್ ಪೇಟ ಮೊದಲಾದವುಗಳು ಒಟ್ಟಿಗೆ ಕುಳಿತು ಒಟ್ಟಿಗೆ ಕಲಿಯಬೇಕಿದೆ.
ಮಂಗಳವಾರ ಕರ್ನಾಟಕ ಹೈಕೋರ್ಟಿನಲ್ಲಿ ನಡೆದ ವಿಚಾರಣೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಪರ ವಾದ ಸಲ್ಲಿಸಿದ್ದ ವಕೀಲ ದೇವದತ್ತ ಕಾಮತ್ ಅವರ ಕೆಲವು ವಾದಗಳನ್ನು ಗಮನಿಸುವುದು ಸೂಕ್ತ.
“ಶಾಲೆಗಳಲ್ಲಿ, ಕೆಲವರು ನಾಮವನ್ನು ಧರಿಸುತ್ತಾರೆ, ಕೆಲವರು ಹಿಜಾಬ್, ಕೆಲವರು ಶಿಲುಬೆ, ಅದು ಧನಾತ್ಮಕ ಜಾತ್ಯತೀತತೆಯ ಪ್ರತಿಬಿಂಬವಾಗಿದೆ. ನಾವು “ಸಕಾರಾತ್ಮಕ ಜಾತ್ಯತೀತತೆಯ” ಮಾರ್ಗವನ್ನು ಅನುಸರಿಸುತ್ತೇವೆ, ಅಲ್ಲಿ ರಾಜ್ಯವು ಎಲ್ಲಾ ಧರ್ಮಗಳ ಆಚರಣೆಯನ್ನು ಗೌರವಿಸುವ ವಾತಾವರಣವನ್ನು ಸೃಷ್ಟಿಸುತ್ತದೆ. ̤ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಮಾಡಿರುವುದು “ಧಾರ್ಮಿಕ ವರ್ಣಭೇದ ನೀತಿ” ಮತ್ತು “ಅಸ್ಪೃಶ್ಯತೆ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ” ಎಂಬುವುದರ ಸೂಚನೆಯಾಗಿದೆ” ಎಂದು ದೇವದತ್ತ ಕಾಮತ್ ವಾದ ಮಂಡಿಸುತ್ತಾರೆ.

ಅಂದರೆ, ಬಹುತ್ವದ ಭಾರತಕ್ಕೆ ಎಲ್ಲಾ ಧರ್ಮ ಚಿಹ್ನೆಗಳನ್ನೂ ಒಳಗೊಳ್ಳುವುದು ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಧಾರ್ಮಿಕ ಚಿಹ್ನೆಗಳನ್ನು ನಿಷೇಧಿಸುವುದು ಭಾರತದ ಬಹುತ್ವದ ವಾತಾವರಣವನ್ನು ಕೆಡಿಸಿದಂತೆ.
ಇನ್ನು ಸಂವಿಧಾನದ ನೀಡಿರುವ ಮೂಲಭೂತ ಹಕ್ಕಿನಡಿ ನೋಡುವುದಾದರೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿಗೆ ಬರಲೇಬಾರದೆಂಬುದು ಸಂಪೂರ್ಣವಾಗಿ ಸಂವಿಧಾನ ವಿರೋಧಿ ವಾದ. ಭಾರತದ ಸಂವಿಧಾನವು ಕೆಲವು ನಿರ್ಬಂಧಗಳಿಗೆ ಒಳಪಟ್ಟು ಒಬ್ಬ ವ್ಯಕ್ತಿಗೆ ತನ್ನ ಧರ್ಮವನ್ನು ಮೂಲಭೂತ ಹಕ್ಕಾಗಿ ಆಚರಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಹಿಂದೆ, ಹಿಜಾಬ್ ಧರಿಸುವ ಹಕ್ಕು ಸಂವಿಧಾನವು ಖಾತರಿಪಡಿಸಿದ ರಕ್ಷಣೆಯ ಅಡಿಯಲ್ಲಿ ಬರುತ್ತದೆ ಎಂದು ವಿವಿಧ ನ್ಯಾಯಾಲಯಗಳು ಅಭಿಪ್ರಾಯಪಟ್ಟಿರುವುದನ್ನು ಇಲ್ಲಿ ನೆನಪಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಈ ವರದಿ ಓದಿ
ಅಂದರೆ, ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಸಂವಿಧಾನಬದ್ದ ಹಕ್ಕನ್ನು ಮಾತ್ರವೇ ಕೇಳುತ್ತಿದ್ದಾರೆ ಹೊರತು ಇನ್ನೇನೂ ಅವರು ಕೇಳುತ್ತಿಲ್ಲ. ಆದರೆ, ಅಲ್ಪಸಂಖ್ಯಾತ ಧಾರ್ಮಿಕ ಹಕ್ಕು ಚಲಾವಣೆಗೆ ಬಹುಸಂಖ್ಯಾತ ಫ್ಯಾಸಿಸಂ ತಡೆಯೊಡ್ಡುತ್ತಿದೆ. ಇದು ಫ್ಯಾಸಿಸಂ ಅಥವಾ ಜನಾಂಗೀಯ ಧ್ವೇಷದ ಕೃತ್ಯ ಎನ್ನಲು ಮೇಲೆ ಉಲ್ಲೇಖಿಸಿದ ವಿದ್ಯಾರ್ಥಿನಿಯ ಹಾಗೂ ಬಿಜೆಪಿ ನಾಯಕರುಗಳ ಹೇಳಿಕೆಗಳೇ ಸಾಕ್ಷಿ.
ವಸ್ತು ಸ್ಥಿತಿ ಹೀಗಿರುವಾಗ ಸಂವಿಧಾನ ಪರ ಇರುವವರು ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ಮಾತನಾಡಬೇಕಿತ್ತು. ಆದರೆ, ಹಿಜಾಬ್ ಸರಿಯೋ, ತಪ್ಪೋ ಅದುಹೇರಿಕೆಯೋ, ಅಲ್ಲವೋ ಎಂಬ ಚರ್ಚೆಗಳು ನಡೆಯುತ್ತಿದೆ. ಹಿಜಾಬ್ ಸರಿಯೋ ತಪ್ಪೋ, ಅದು ಹೇರಿಕೆಯೋ, ಅಲ್ಲವೋ ಎಂದು ತೀರ್ಮಾನಿಸಬೇಕಿದವರು ಅದನ್ನು ಧರಿಸುವವರು ಮಾತ್ರ. ಆದರೆ, ಅವರೇ ತಮಗೆ ತಮ್ಮ ಹಕ್ಕು ಪಾಲಿಸಲು ಅವಕಾಶ ಕೊಡಿ ಎಂದು ಕೇಳುತ್ತಿರುವಾಗ ಸಂವಿಧಾನದ ಮೇಲಿನ ನಂಬಿಕೆ ಉಳ್ಳವರು ಯಾವುದೇ ಷರತ್ತು ಇಲ್ಲದೆ ಅವರ ಪರವಾಗಿ ನಿಲ್ಲಬೇಕು, ಅಷ್ಟೇ.
ಅದನ್ನು ಬಿಟ್ಟು, ಲಿಬರಲಿಸಂ ವ್ಯಾಖ್ಯೆಯೊಳಗೆ ಧಾರ್ಮಿಕತೆಯನ್ನು ವಿಶ್ಲೇಷಿಸುತ್ತಾ ಹಿಂದುತ್ವ ಫ್ಯಾಸಿಸ್ಟರುಗಳ ಕಡು ಕ್ರೌರ್ಯದ ಕಾಲದಲ್ಲಿ ಶೋಷಿತ ಸಮುದಾಯಕ್ಕೆ ಸುಧಾರಣೆ ಬೋಧಿಸುವುದು ಸಂದರ್ಭೋಚಿತವಲ್ಲ.