ಪಾಕಿಸ್ತಾನದ ಹುಂಡೈ ಕಾಶ್ಮೀರದ ಸ್ವಾತಂತ್ರ್ಯವನ್ನು ಕೇಳುತ್ತಿದೆ ಎಂದು ಆರೋಪಿಸಿ ಟ್ವಿಟರಿನಲ್ಲಿ ಹುಂಡೈ ಬಹಿಷ್ಕಾರಕ್ಕೆ #BoycottHyundai ಹ್ಯಾಷ್ಟ್ಯಾಗ್ ಅಭಿಯಾನ ಪ್ರಾರಂಭವಾಗಿದೆ.
“ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ನಡೆದ ಸಂಘರ್ಷದಲ್ಲಿ ತೊಡಗಿಸಿಕೊಂಡ ನಮ್ಮ ಸಹೋದರರರ ತ್ಯಾಗ ಬಲಿದಾನಗಳನ್ನು ನೆನೆಯೋಣ” ಎಂದು ಹುಂಡೈ ಪಾಕಿಸ್ತಾನದ ಅಧಿಕೃತ ಫೇಸ್ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ಹಾಕಲಾಗಿದೆ ಎನ್ನಲಾದ ಸ್ಕ್ರೀನ್ಶಾಟ್ಗಳು ಟ್ವಿಟರಿನಲ್ಲಿ ಹರಿದಾಡುತ್ತಿದೆ.
ಹುಂಡೈ ಪಾಕಿಸ್ತಾನದ ಅಧಿಕೃತ ಫೇಸ್ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ಈ ಪೋಸ್ಟ್ ಸದ್ಯ ಕಂಡು ಬರುತ್ತಿಲ್ಲ. ಅಭಿಯಾನಕಾರರ ಪ್ರಕಾರ, ಭಾರತದಲ್ಲಿ ಆಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಕರೆ ನೀಡಿರುವ ಪೋಸ್ಟ್ ಡಿಲಿಟ್ ಮಾಡಲಾಗಿದೆ.
ಹುಂಡೈ ಕಂಪೆನಿ ವಿರುದ್ಧ ಆಕ್ರೋಶಗಳ ಹೆಚ್ಚುತ್ತಿದ್ದು, ಈ ಹಿಂದೆ ಹುಂಡೈ ಕಂಪೆನಿ ಜಾಹಿರಾತಿನಲ್ಲಿ ಕಾಣಿಸಿಕೊಂಡ ಶಾರುಖ್ ಖಾನ್ ವಿರುದ್ಧವೂ ಧ್ವೇಷದ ಪೋಸ್ಟ್ ಹಾಕಲಾಗುತ್ತಿದೆ.
ಹುಂಡೈ ರಾಜಕೀಯದಲ್ಲಿ ತೊಡಗಬಾರದಿತ್ತು. ಈಗ ಕಾಲ ಮಿಂಚಿದೆ, ಪಾಕಿಸ್ತಾನದ ಅಜೆಂಡಾಗಳನ್ನು ಪ್ರಚಾರ ಮಾಡುವ ಹುಂಡೈಯ ವಿರುದ್ಧ ಭಾರತೀಯರು ತಕ್ಕ ಪಾಠ ಕಲಿಸಲಿದ್ದಾರೆಂದು ಟ್ವೀಟ್ ಮಾಡಲಾಗುತ್ತಿದೆ.
ಟ್ವಿಟರ್ ಬಳಕೆದಾರರೊಬ್ಬರು ಹುಂಡೈ ಖಾತೆಯನ್ನು ಉಲ್ಲೇಖಿಸಿ, ಅಖಂಡ ಭಾರತದ ಜಾಹಿರಾತು ಹಾಕಿ ಇಲ್ಲದಿದ್ದರೆ ಬಹಿಷ್ಕಾರ ಎದುರಿಸಿ ಎಂದು ಟ್ವೀಟ್ ಮಾಡಿದ್ದಾರೆ.
ನಿಮ್ಮ ಉದ್ಯೋಗಿಗಳಿಗೆ ಅಧಿಕೃತ ಹ್ಯಾಂಡಲ್ ಮೂಲಕ ಅಂತಹ ರಾಜಕೀಯ ಪೋಸ್ಟ್ಗಳನ್ನು ಮಾಡಲು ಅನುಮತಿಸಲಾಗಿದೆಯೇ? ಹೌದು ಎಂದಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಉಳಿಯಲು ನೀವು ಖಂಡಿತವಾಗಿಯೂ ಕೆಲವು ಪರಿಷ್ಕರಣೆ ಮಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಕ್ಷಮೆಯಾಚಿಸಿ ಎಂದು ಇನ್ನೊಬ್ಬರು ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.






