ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳ ಪಕ್ಷಗಳು ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿವೆ. ಹಾಗಿದ್ದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಲೋಕದಳಕ್ಕೆ ಚುನಾವಣೋತ್ತರವಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಈ ಘಟನೆ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಮೊದಲನೆಯದಾಗಿ ಈಗಾಗಲೇ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಪಕ್ಷದ ಜೊತೆಗೆ ಅಮಿತ್ ಶಾ ಚುನಾವಣೋತ್ತರ ಮೈತ್ರಿಯ ಮನವಿ ಮಾಡಿದ್ದೇಕೆ? ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆಯೆ? ರಾಷ್ಟ್ರೀಯ ಲೋಕದಳ ಅಷ್ಟೊಂದು ಪ್ರಭಾವಶಾಲಿಯೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಜೊತೆಗೆ ಜಾಟ್ ಸಮುದಾಯದ ಮುನಿಸು ತಮಗೆ ಮಾರಕವಾಗಬಹುದೆಂಬ ಕಾರಣಕ್ಕಾಗಿಯೇ ಅಮಿತ್ ಶಾ ಜಾಟ್ ನಾಯಕರ ಜೊತೆ ಮಾತನಾಡಿ ಇಂಥದೊಂದು ‘ಮೈತ್ರಿಯ ಆಹ್ವಾನ’ ನೀಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯನ್ನು ಮಾತ್ರವಲ್ಲ 2024ರ ಲೋಕಸಭಾ ಚುನಾವಣೆಯನ್ನೂ ಈಗಾಗಲೇ ಗೆದ್ದಿದ್ದೇವೆ ಎಂದು ಬೀಗುತ್ತಿದ್ದ ಬಿಜೆಪಿ ಈಗ ಬಾಲ ಮುದುರಿಕೊಂಡು ರಾಷ್ಟ್ರೀಯ ಲೋಕದಳದ ಬೆಂಬಲ ಕೇಳುತ್ತಿದೆ ಎಂದರೆ ಅದಕ್ಕೆ ಕಾರಣ ಜಾಟ್ ಮತದಾರರು. ಹಾಗಿದ್ದರೆ ಯಾರು ಈ ಜಾಟರು? ಅವರ ಹಿನ್ನೆಲೆ ಏನು? ಅವರ ಪ್ರಭಾವ ಏನು? ಎಂಬಿತ್ಯಾದಿ ಸಂಗತಿಗಳನ್ನು ನೊಡೋಣ.
ಜಾಟರು ಯಾರು?
1891ರ ಜನಗಣತಿ 1,791 ರೀತಿಯ ಜಾಟ್ ಸಮುದಾಯಗಳಿವೆ ಎಂದು ಹೇಳಿದೆ. ‘ಪೀಪಲ್ ಆಫ್ ಇಂಡಿಯಾ’ ಸರಣಿಯ ಸಂಪಾದಕ ಕೆ.ಎಸ್. ಸಿಂಗ್ ಅವರು “ಹಿಂದೂ, ಮುಸ್ಲಿಂ ಮತ್ತು ಸಿಖ್ ಜಾಟ್ಗಳಿವೆ. ಆದರೆ ಈ ವಿಭಾಗಗಳು ವಿವಾಹ ಸಂಬಂಧಗಳನ್ನು ಒಪ್ಪುವುದಿಲ್ಲ” ಎಂದು ಉಲ್ಲೇಖಿಸಿದ್ದಾರೆ. ಜಾಟ್ ಕೃಷಿಪ್ರಧಾನ ಸಮುದಾಯವಾಗಿದ್ದು ಅದು ಹೆಚ್ಚಾಗಿ ಹರಿಯಾಣ, ಉತ್ತರ ಪ್ರದೇಶ, ದೆಹಲಿ ಮತ್ತು ರಾಜಸ್ಥಾನದಲ್ಲಿ ಕೇಂದ್ರೀಕೃತವಾಗಿದೆ. ಜಾಟ್ರು ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಇತರೆ ಹಿಂದುಳಿದ ವರ್ಗಗಳ (OBCs) ನಡುವೆ ಸೇರಲು ಬಯಸುತ್ತಾರೆ. ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಈಗಾಗಲೇ ಅವರನ್ನು ಇತರೆ ಹಿಂದುಳಿದ ವರ್ಗಗಳೆಂದು ವರ್ಗೀಕರಿಸಲಾಗಿದೆ. ರಾಜಸ್ಥಾನದ ಜಾಟ್ಗಳ ಪೈಕಿ ಉಪ ಪಂಗಡಗಳಾದ ಧೋಲ್ಪುರ್ ಮತ್ತು ಭರತ್ಪುರದವರನ್ನು ಹೊರತುಪಡಿಸಿ ಉಳಿದವರು ಈಗಾಗಲೇ ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಇತರೆ ಹಿಂದುಳಿದ ವರ್ಗ ಎಂದೇ ಗುರುತಿಸಲ್ಪಟ್ಟಿದ್ದಾರೆ.
ಜಾಟರು ರಾಜಕೀಯವಾಗಿ ಪ್ರಬಲ ಸಮುದಾಯವಾಗಿದ್ದು ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯ ಸುಮಾರು 40 ಲೋಕಸಭಾ ಸ್ಥಾನಗಳು ಹಾಗೂ ಸುಮಾರು 160 ವಿಧಾನಸಭಾ ಕ್ಷೇತ್ರಗಳ ಫಲಿತಾಂಶದ ಮೇಲೆ ಪ್ರಭಾವ ಬೀರಬಲ್ಲವರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಅವರು ಪಶ್ಚಿಮ ಜಿಲ್ಲೆಗಳಲ್ಲಿ ಕೇಂದ್ರೀಕೃತರಾಗಿದ್ದಾರೆ. ಮುಖ್ಯವಾಗಿ ಕಬ್ಬನ್ನು ಬೆಳೆಯುತ್ತಾರೆ ಮತ್ತು ರಾಜ್ಯದ ಶ್ರೀಮಂತ ರೈತ ಸಮುದಾಯ ಎಂದು ಹೇಳಲಾಗುತ್ತದೆ.
ಜಾಟರ ಪ್ರಮುಖ ನಾಯಕರು ಯಾರು?
1950 ಮತ್ತು 60ರ ದಶಕಗಳಲ್ಲಿ ದೇವಿ ಲಾಲ್ (ಮಾಜಿ ಉಪ ಪ್ರಧಾನಿ) ಮತ್ತು ರಣಬೀರ್ ಸಿಂಗ್ ಹೂಡಾ (ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ತಂದೆ) ಪಂಜಾಬ್ನ ಪ್ರಮುಖ ಜಾಟ್ ನಾಯಕರಾಗಿದ್ದರು. ಆಗ ಪಂಜಾಬ್ ಮತ್ತು ಹರಿಯಾಣಗಳು ಒಟ್ಟಿಗೆ ಇದ್ದವು. ರಾಜಸ್ಥಾನದಲ್ಲಿ ನಾಥೂರಾಂ ಮಿರ್ಧಾ ಮತ್ತು ಉತ್ತರ ಪ್ರದೇಶದಲ್ಲಿ ಚೌಧರಿ ಚರಣ್ ಸಿಂಗ್ ಇದ್ದರು. 1966ರಲ್ಲಿ ಹರಿಯಾಣ ರಚನೆಯಾದ ನಂತರ ಬನ್ಸಿ ಲಾಲ್ ಅವರಂತಹ ನಾಯಕರು ಹೊರಹೊಮ್ಮಿದರು. ಹರಿಯಾಣದಲ್ಲಿ ಶೇಕಡಾ 25ಕ್ಕಿಂತಲೂ ಹೆಚ್ಚು ಜಾಟರಿದ್ದಾರೆ. ಹಾಗಾಗಿ ಅಲ್ಲಿನ ರಾಜಕೀಯದಲ್ಲಿ ದೀರ್ಘಕಾಲ ಅವರೇ ಪ್ರಾಬಲ್ಯ ಸಾಧಿಸಿದ್ದಾರೆ.
1987ರಲ್ಲಿ ಅವರು ನಿಧನರಾಗುವವರೆಗೂ ಚರಣ್ ಸಿಂಗ್ ಅವರು ದೇಶದ ಅತಿ ಎತ್ತರದ ಜಾಟ್ ನಾಯಕರಲ್ಲಿ ಒಬ್ಬರಾಗಿದ್ದರು. ಅವರು ಇತರ ಜಾತಿಗಳ ನಡುವೆಯೂ ಬೆಂಬಲಿಗರನ್ನು ಹೊಂದಿದ್ದರು. ಎರಡು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ನಂತರ ಉಪಪ್ರಧಾನಿ ಆಗಿದ್ದರು. ಇದಾದ ಮೇಲೆ 1979-80ರಲ್ಲಿ ಆರು ತಿಂಗಳಿಗಿಂತಲೂ ಕಡಿಮೆ ಅವಧಿಗೆ ಪ್ರಧಾನ ಮಂತ್ರಿಯ ಸ್ಥಾನವನ್ನೂ ಅಲಂಕರಿಸಿದ್ದರು. ಉತ್ತರ ಪ್ರದೇಶದಲ್ಲಿ 1967ರ ಚುನಾವಣೆಯ ನಂತರ ಹೆಚ್ಚಿನ ಸಂಖ್ಯೆಯ ಜಾಟ್ ಸಮುದಾಯದ ಶಾಸಕರನ್ನು ಹೊಂದಿದ್ದ ಚರಣ್ ಸಿಂಗ್ ಅವರು ಕಾಂಗ್ರೆಸ್ ಮತ್ತು ಭಾರತೀಯ ಜನಸಂಘ ಎರಡರಿಂದಲೂ ಅಂತರ ಕಾಯ್ದುಕೊಂಡಿದ್ದರು.
ಚರಣ್ ಸಿಂಗ್ ರಾಜಕೀಯ ಪರಂಪರೆಯನ್ನು ಅವರ ಪುತ್ರ ಅಜಿತ್ ಸಿಂಗ್ ಅವರು ಮುಂದುವರೆಸಿದರು. ಆದರೆ ಮಂಡಲ್ ಮತ್ತು ಹಿಂದುತ್ವದ ರಾಜಕೀಯ ಮುನ್ನಲೆಗೆ ಬರುತ್ತಿದ್ದಂತೆ ಉತ್ತರ ಪ್ರದೇಶದ ಚಿತ್ರಣ ಆಮೂಲಾಗ್ರವಾಗಿ ಬದಲಾಯಿತು. ಇದರ ಪರಿಣಾಮವಾಗಿ ಅಜಿತ್ ಸಿಂಗ್ ನೇತೃತ್ವದ ಜಾಟರು ಮುಂದಿನ ಕಾಲು ಶತಮಾನದಲ್ಲಿ ಅಸ್ತಿತ್ವಕ್ಕಾಗಿ ಹಲವಾರು ರೀತಿಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಯಿತು.
ಉತ್ತರ ಪ್ರದೇಶದ ಯಾವ ಭಾಗದಲ್ಲಿ ಜಾಟ್ ಪ್ರಭಾವ ಹೆಚ್ಚು?
ಪಶ್ಚಿಮ ಉತ್ತರ ಪ್ರದೇಶದ ಒಂದು ಡಜನ್ ಲೋಕಸಭೆ ಮತ್ತು ಸುಮಾರು 40 ವಿಧಾನಸಭಾ ಸ್ಥಾನಗಳಲ್ಲಿ ಸಮುದಾಯವು ಗಮನಾರ್ಹ ಪ್ರಭಾವವನ್ನು ಹೊಂದಿದೆ. ಜಾಟರು ಕೆಲವು 15 ಜಿಲ್ಲೆಗಳಲ್ಲಿ 10 ರಿಂದ 15 ಪ್ರತಿಶತದಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ ಎಂಬ ಅಂದಾಜಿದೆ. ಸಾಮಾಜಿಕವಾಗಿಯಂತೂ ಅವರು ಅತ್ಯಂತ ಪ್ರಬಲರಾಗಿದ್ದಾರೆ. ತಮ್ಮ ಪರವಾದ ರಾಜಕೀಯ ವಾತಾವರಣ ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಬಾಗ್ಪತ್, ಮುಜಾಫರ್ನಗರ, ಶಾಮ್ಲಿ, ಮೀರತ್, ಬಿಜ್ನೋರ್, ಘಾಜಿಯಾಬಾದ್, ಹಾಪುರ್, ಬುಲಂದ್ಶಹರ್, ಮಥುರಾ, ಅಲಿಘರ್, ಹತ್ರಾಸ್, ಆಗ್ರಾ ಮತ್ತು ಮೊರಾದಾಬಾದ್ ಜಿಲ್ಲೆಗಳು ಗಮನಾರ್ಹವಾದ ಜಾಟ್ ಜನಸಂಖ್ಯೆಯನ್ನು ಹೊಂದಿವೆ. ರಾಮ್ಪುರ್, ಅಮ್ರೋಹಾ, ಸಹರಾನ್ಪುರ ಮತ್ತು ಗೌತಮ್ ಬುದ್ ನಗರ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಜಾಟ್ ಸಮುದಾಯ ಹರಡಿಕೊಂಡಿದೆ. ಕೆಲ ದಿನಗಳ ಮಟ್ಟಿಗೆ ಚರಣ್ ಸಿಂಗ್ ಅವರು ರಚಿಸಿದ ರಾಜಕೀಯ ನೆಲೆಯನ್ನು ಮುಲಾಯಂ ಸಿಂಗ್ ಯಾದವ್ ಅವರು ಬಳಸಿಕೊಂಡರು. ಆದರೆ ಕಳೆದ ದಶಕದಲ್ಲಿ ಜಾಟ್ಗಳ ದೊಡ್ಡ ವಿಭಾಗವು ಬಿಜೆಪಿಗೆ ಬದಲಾಯಿತು.
ಜಾಟರ ಪ್ರಾಬಲ್ಯ ಇರುವ ಮುಜಾಫರ್ನಗರ, ಶಾಮ್ಲಿ, ಮೀರತ್, ಗಾಜಿಯಾಬಾದ್, ಹಾಪುರ್, ಬಾಗ್ಪತ್, ಬುಲಂದ್ಶಹರ್, ಗೌತಮ್ ಬುಧ್ ನಗರ, ಅಲಿಗಢ್, ಮಥುರಾ ಮತ್ತು ಆಗ್ರಾ ಜಿಲ್ಲೆಗಳ 58 ಸ್ಥಾನಗಳಿಗೆ ಈಗ ಫೆಬ್ರವರಿ 10ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 14ರಂದು ಎರಡನೇ ಹಂತದಲ್ಲಿ ಬಿಜ್ನೋರ್, ಮೊರಾದಾಬಾದ್, ಸಂಭಾಲ್, ರಾಂಪುರ್, ಅಮ್ರೋಹಾ, ಬರೇಲಿ, ಬಡಾಯುನ್ ಮತ್ತು ಶಹಜಹಾನ್ಪುರ ಜಿಲ್ಲೆಗಳಲ್ಲಿ 55 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.
(ಮುಂದಿನ ಕಂತಿನಲ್ಲಿ ಜಾಟ್ ರಾಜಕಾರಣದ ಇನ್ನಷ್ಟು ವಿವರ)