ಬಜೆಟ್ ಮಂಡನೆಗೆ ಮೂರು ದಿನಗಳ ಮೊದಲು, ಆಂಧ್ರ ಮೂಲದ ಡಾ.ವಿ. ಅನಂತ ನಾಗೇಶ್ವರನ್ ಅವರನ್ನು ನೂತನ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಇದುವರೆಗೂ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಮೂರು ವರ್ಷಗಳ ಅವಧಿ ಡಿಸೆಂಬರ್ 7ಕ್ಕೆ ಕೊನೆಗೊಂಡಿತ್ತು. ಅವರ ಸೇವೆಯನ್ನು ವಿಸ್ತರಿಸಿರಲಿಲ್ಲ. ಹೀಗಾಗಿ ಹುದ್ದೆ ತೆರವಾಗಿತ್ತು.
ಆರ್ಥಿಕ ಸಲಹೆಗಾರರಾಗಿ ಬಹುತೇಕ ದಕ್ಷಿಣ ರಾಜ್ಯದವರೇ ನೇಮಕಗೊಳ್ಳುತ್ತಿದ್ದಾರೆ. ಅನಂತ ನಾಗೇಶ್ವರನ್ ಅವರ ನೇಮಕದೊಂದಿಗೆ ಆ ಸಂಪ್ರದಾಯ ಮುಂದುವರೆದಿಂತಿದೆ. ನೂತನ ಮುಖ್ಯ ಆರ್ಥಿಕ ಸಲಹೆಗಾರರ ನೇಮಕ ಮಾಡಿರುವ ವಿಷಯವನ್ನು ಕೇಂದ್ರ ಸರ್ಕಾರ ಟ್ವಿಟ್ಟರ್ ಮೂಲಕ ಪ್ರಕಟಿಸಿದೆ. “ಸರ್ಕಾರವು ಡಾ ವಿ ಅನಂತ ನಾಗೇಶ್ವರನ್ ಅವರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿದೆ ಮತ್ತು ಇಂದು ಅವರು ಅಧಿಕಾರ ವಹಿಸಿಕೊಂಡಿದ್ದಾರೆ.”
ಪ್ರಸಿದ್ಧ ಬರಹಗಾರ, ಪ್ರಾಧ್ಯಾಪಕ ಮತ್ತು ಆರ್ಥಿಕ ಸಲಹೆಗಾರರಾಗಿರುವ ಡಾ ನಾಗೇಶ್ವರನ್ ಅವರು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಮ್ಯಾನೆಜ್ಮೆಂಟ್ ಕಾಲೇಜುಗಳಲ್ಲಿ ಬೋಧನೆ ಮಾಡಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕಗೊಳ್ಳುವ ಮೊದಲು, ಅವರು ಐಎಫ್ಎಂಆರ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್ನ ಡೀನ್ ಆಗಿದ್ದರು ಮತ್ತು ಆಂಧ್ರಪ್ರದೇಶದ ಕ್ರಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

ಇದಕ್ಕು ಮುನ್ನ ಅವರು 2019 ರಿಂದ 2021 ರವರೆಗೆ ಭಾರತದ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದರು. ಅಹಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಿಂದ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಅಮ್ಹೆರ್ಸ್ಟ್ನಲ್ಲಿರುವ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ಹಣಕಾಸು ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.
ವಿಶೇಷ ಎಂದರೆ ಬಜೆಟ್ ಮಂಡನೆಯ ಪೂರ್ವದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರ ಸ್ಥಾನ ತೆರವಾಗಿದ್ದಿದು ಇದೇ ಮೊದಲು. ಸಾಮಾನ್ಯವಾಗಿ ವಿತ್ತ ಸಚಿವರೇ ಬಜೆಟ್ ಮಂಡನೆ ಮಾಡಿದರೂ ಬಹುತೇಕ ಬಜೆಟ್ ಸಿದ್ದತೆಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರರ ಪಾತ್ರ ಪ್ರಧಾನವಾಗಿರುತ್ತದೆ.
ನಿರ್ಮಲಾ ಸೀತಾರಾಮನ್ ಅವರು ವಿತ್ತ ಸಚಿವರಾದ ನಂತರ ಈ ಪ್ರಧಾನ ಪಾತ್ರ ನಿಧಾನವಾಗಿ ತಗ್ಗುತ್ತಾ ಬಂದಿದೆ. ಈ ಹಿಂದೆ ಆರ್ಥಿಕ ಇಲಾಖೆ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಅವರೊಂದಿಗೆ ಭಿನ್ನಾಭಿಪ್ರಾಯ ಇದ್ದ ಕಾರಣ ಬೇರೆ ಇಲಾಖೆಗೆ ವರ್ಗಾಹಿಸಲಾಗಿತ್ತು. ನಂತರ ಸುಭಾಷ್ ಚಂದ್ರ ಗಾರ್ಗ್ ಸ್ವಯಂ ನಿವೃತ್ತಿ ಪಡೆದಿದ್ದರು.
ಮುಖ್ಯ ಆರ್ಥಿಕ ಸಲಹೆಗಾರರು ನೇಮಕವಾಗಿರುವುದರಿಂದ ಸಂಪ್ರದಾಯದಂತೆ ಜನವರಿ 31ರಂದು ಸಂಸತ್ತಿನಲ್ಲಿ 2021-22ನೇ ವಿತ್ತೀಯ ವರ್ಷದ ಆರ್ಥಿಕ ಸಮೀಕ್ಷೆಯನ್ನು ಡಾ.ನಾಗೇಶ್ವರನ್ ಅವರೇ ಮಂಡಿಸಲಿದ್ದಾರೆ. ಆದರೆ, ಸಮೀಕ್ಷೆ ತಯಾರಿಕೆಯಲ್ಲಿ ಯಾರ ಪಾತ್ರ ಇದೆ ಎಂಬುದು ಸ್ಪಷ್ಟವಾಗಿಲ್ಲ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ಅವಧಿ ಡಿಸೆಂಬರ್ 7ಕ್ಕೆ ಮುಗಿದಿದೆ.
ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯ ಆರ್ಥಿಕ ಸಲಹೆಗಾರರ ಹುದ್ದೆಯು ನಾಮಮಾತ್ರಕ್ಕೆ ಎಂಬಂತಿದೆ. ಈ ಹಿಂದೆ ಅಪನಗದೀಕರಣ (ನೋಟ್ ಬ್ಯಾನ್) ಜಾರಿ ಮಾಡಿದಾಗ ಆಗ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದು ಸುಬ್ರಮಣಿಯನ್ ಅವರೊಂದಿಗೆ ಸಮಾಲೋಚನೆ ಮಾಡಿರಲೇ ಇಲ್ಲ. ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಇದ್ದ ಕಾರಣ ಸುಬ್ರಮಣಿಯನ್ ಅವರು ಅವಧಿಗೆ ಮುನ್ನವೇ ಹುದ್ದೆ ತೊರೆದಿದ್ದರು.
ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕ ಸ್ಥಿತಿ-ಗತಿಗಳ ಕನ್ನಡಿಯಾಗಿರುತ್ತಿತ್ತು. ಹಿಂದಿನ ವರ್ಷದ ಸಾಧನೆಗಳು ಭವಿಷ್ಯದಲ್ಲಿ ಸಾಗುವ ಪಥಗಳನ್ನು ಮುನ್ನೋಟವಾಗಿರುತ್ತಿತ್ತು. ಆರ್ಥಿಕ ಸಮೀಕ್ಷೆಯು ಸರ್ಕಾರದ ಆರ್ಥಿಕ ನೀತಿಯನ್ನು ವಿಶ್ಲೇಷಣೆಯೂ ಆಗಿರುತ್ತಿತ್ತು. ಸರ್ಕಾರದ ಲೋಪಗಳನ್ನು ಎತ್ತಿ ತೋರಿಸುವ, ಉತ್ತಮ ಯೋಜನೆಗಳನ್ನು ಶ್ಲಾಘಿಸುವ ಕಟುವಿಮರ್ಶೆಯೂ ಆಗಿರುತ್ತಿತ್ತು. ಇತ್ತೀಚೆಗೆ ಆರ್ಥಿಕ ಸಮೀಕೆಯು ಈ ಎಲ್ಲಾ ಗುಣಲಕ್ಷಣಗಳನ್ನು ಕಳೆದುಕೊಂಡಿದ್ದು, ವಿತ್ತ ಸಚಿವರ ಬಜೆಟ್ ಭಾಷಣದ ಹೆಚ್ಚುವರಿ ಭಾಗವಾಗಿರುತ್ತದೆ.












