ಕೇಂದ್ರ ಗೃಹ ಸಚಿವಾಲಯವು ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ನೋಂದಣಿಯನ್ನು ಮರುಸ್ಥಾಪಿಸಿದೆ. MoC ಅಗತ್ಯ ದಾಖಲೆಗಳನ್ನು ಕೆಲವು ದಿನಗಳ ಹಿಂದೆ ಸಂಬಂಧಿಸಿದ ಇಲಾಖೆಗೆ ಸಲ್ಲಿಸಿದೆ. ಆದ್ದರಿಂದ ಅದರ ಲೈಸನ್ಸ್ ನವೀಕರಿಸಲಾಗಿದೆ ಸರ್ಕಾರಿ ಮೂಲಗಳು ಶನಿವಾರ ತಿಳಿಸಿವೆ. ಇದರೊಂದಿಗೆ ಕೋಲ್ಕತ್ತಾ ಮೂಲದ ಸಂಸ್ಥೆಯು ಈಗ ವಿದೇಶಿ ನಿಧಿಯನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ ಮತ್ತು ಬ್ಯಾಂಕ್‌ಗಳ ಖಾತೆಯಲ್ಲಿರುವ ಹಣವನ್ನು ಖರ್ಚು ಮಾಡಬಹುದು ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಸೆಂಬರ್ 27, 2021 ರಂದು, ಮಿಷನರೀಸ್ ಆಫ್ ಚಾರಿಟಿಯ FCRA ನವೀಕರಣ ಅರ್ಜಿಯನ್ನು “ಅರ್ಹತಾ ಷರತ್ತುಗಳನ್ನು ಪೂರೈಸದ ಕಾರಣ” ಮತ್ತು “ಕೆಲವು ವ್ಯತಿರಿಕ್ತ ಮಾಹಿತಿಗಳು ದೊರೆತ ಕಾರಣ” ಅನುಮೋದಿಸಿಲ್ಲ ಎಂದು ಕೇಂದ್ರವು ಹೇಳಿತ್ತು. ಮಿಷನರೀಸ್ ಆಫ್ ಚಾರಿಟಿಯ ಸುಪೀರಿಯರ್ ಜನರಲ್ ಸಿಸ್ಟರ್ ಎಂ ಪ್ರೇಮಾ ಕೂಡ ತನ್ನ ಎಫ್‌ಸಿಆರ್‌ಎ ನವೀಕರಣ ಅರ್ಜಿಯನ್ನು ನಿರಾಕರಿಸಲಾಗಿದೆ ಎಂದು ದೃಢಪಡಿಸುವ ಹೇಳಿಕೆಯನ್ನು ನೀಡಿದ್ದರು. ವಿಷಯ ಬಹಿರಂಗವಾದ ನಂತರ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮಿಷನರೀಸ್ ಆಫ್ ಚಾರಿಟಿಯ ಬ್ಯಾಂಕ್ ಖಾತೆಗಳನ್ನು “ಫ್ರೀಜ್” ಮಾಡಿದ ಆರೋಪಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಆದರೂ ಸರ್ಕಾರ ನೋಂದಣಿಯನ್ನು ನವೀಕರಿಸದೆ ಉದ್ದಟತನ ತೋರಿತ್ತು.
ಈಗ ಅದೇ ಸರ್ಕಾರ ದಿಢೀರನೆ ತನ್ನ ನಿರ್ಧಾರ ಬದಲಿಸಿ ನೋಂದಣಿ ನವೀಕರಿಸಿದೆ. ಇದರ ಹಿಂದೆ ಬ್ರಿಟನ್ನಿನ ಸಂಸದರ ಒತ್ತಾಯ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಮದರ್ ತೆರೇಸಾ ಅವರು ಸ್ಥಾಪಿಸಿದ ಚಾರಿಟಿ ಸೇರಿದಂತೆ 6000 ಕ್ಕೂ ಹೆಚ್ಚು ಎನ್‌ಜಿಒಗಳ ಎಫ್‌ಸಿಆರ್‌ಎ ಪರವಾನಗಿಯನ್ನು ನಿರ್ಬಂಧಿಸಿದ್ದಕ್ಕಾಗಿ ಯುಕೆ ಸಂಸತ್ತು ಗುರುವಾರ ಭಾರತವನ್ನು ಕಟುವಾಗಿ ಟೀಕಿಸಿತ್ತು.
ಈ ಬಗ್ಗೆ ಬ್ರಿಟನ್ ಏನು ಮಾಡುತ್ತಿದೆ ಎಂದು ಅಲ್ಲಿನ ಸಂಸದರು ಸರ್ಕಾರವನ್ನು ಪ್ರಶ್ನಿಸಿದರು. ಕಮ್‌ನಾಕ್‌ನ ಲಾರ್ಡ್ ಫೌಲ್ಕ್ಸ್ ಅವರು ಇಂಗ್ಲೆಂಡ್ ಕಾಮನ್‌ವೆಲ್ತ್ ಸೆಕ್ರೆಟರಿಯೇಟ್‌ನಂತಹ ಬಹುಪಕ್ಷೀಯ ಗುಂಪುಗಳನ್ನು ಈ ವಿಚಾರದಲ್ಲಿ ತೊಡಗಿಸಿಕೊಳ್ಳಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು. ಇನ್ನೂ ಒಂದು ಹೆಜ್ಜೆ ಮುಂದಿಟ್ಟ ಲಿವರ್‌ಪೂಲ್‌ನ ಲಾರ್ಡ್ ಆಲ್ಟನ್ ಈ “ಅನೀತಿಯುತ ನಿರ್ಧಾರ” ಹಿಂತೆಗೆದುಕೊಳ್ಳದಿದ್ದರೆ ಭಾರತದ ಅತ್ಯಂತ ದುರ್ಬಲ ವರ್ಗದ ಜನರ ಬದುಕಿನ ಮೇಲೆ ಭಯಾನಕ ಪರಿಣಾಮಗಳು ಉಂಟಾಗಬಹುದು ಎಂದು ಎಚ್ಚರಿಸಿದ್ದರು.
ಇಡೀ ಚರ್ಚೆಯನ್ನು ಆರಂಭಿಸಿದ ಪೆಂಟ್ರೆಗಾರ್ತ್‌ನ ಲಾರ್ಡ್ ಹ್ಯಾರಿಸ್ ” ಹಿಂದೂ ರಾಷ್ಟ್ರೀಯವಾದದ ಒತ್ತಡವು ಸರ್ಕಾರದ ಈ ನಿರ್ಧಾರದ ಹಿಂದಿದೆ ಎನ್ನುವ ವದಂತಿ ಇದೆ. ಏಕೆಂದರೆ ಜನರು ಕ್ರಿಶ್ಚಿಯನ್ ಧರ್ಮದೊಂದಿಗೆ ಸಂಪರ್ಕಕ್ಕೆ ಬರಬಹುದು ಮತ್ತು ಅಂತಿಮವಾಗಿ ಅದಕ್ಕೆ ಮತಾಂತರಗೊಳ್ಳಬಹುದು ಎಂದು ಅವರು ಭಾವಿಸುತ್ತಾರೆ. ಸರ್ಕಾರ ಕೊಟ್ಟಿರುವ ಕಾರಣವೇನು ಎನ್ನುವುದನ್ನು ನಾವು ಭಾರತ ಸರ್ಕಾರದಿಂದ ಲಿಖಿತವಾಗಿ ಪಡೆಯಬೇಕು” ಎಂದಿದ್ದಾರೆ. ಈ ಹೇಳಿಕೆ ದೇಶ ವಿದೇಶಗಳಲ್ಲಿ ಸಂಚಲನ ಸೃಷ್ಟಿಸಿದ್ದು ಸರ್ಕಾದ ಅಜೆಂಡಾವನ್ನು ಜಗಜ್ಹಾಹೀರು ಮಾಡಿದೆ. ಆ ಮೂಲಕ ಭಾರತೀಯ ಉದಾತ್ತ ಮೌಲ್ಯ, ಘನತೆ, ಪ್ರತಿಷ್ಠೆಗಳನ್ನು ಕೇವಲ ಒಂದು ಸಂಘಟನೆಯ ಆಶೋತ್ತರಗಳನ್ನು ಈಡೇರಿಸಲು ಮಣ್ಣುಪಾಲು ಮಾಡಿದಂತಾಗಿದೆ. ಇಡೀ ಘಟನೆಯ ಹಿಂದೆ ಸಂಘ ಪರಿವಾರ ಹಿಂದಿನಿಂದಲೂ ಮದರ್ ಥೆರೆಸಾ ಮತ್ತು ಅವರ ಮಿಷನರಿಯ ಬಗ್ಗೆ ಹೊಂದಿರುವ ಅಸಹನೆ ಕೆಲಸ ಮಾಡಿದೆ ಎನ್ನುವುದು ಬಹಿರಂಗ ಸತ್ಯ. ಈಗೇನೋ ಸರ್ಕಾರ ಜಾಗತಿಕವಾಗಿ ಇನ್ನಷ್ಟು ಮುಖಭಂಗವಾಗುವುದನ್ನು ತಪ್ಪಿಸಲು ಅನುಮತಿ ನವೀಕರಣ ಮಾಡಿದೆ. ಆದರೆ ಈಗಾಗಲೇ ಸರ್ಕಾರವೇ ಮುಂದೆ ನಿಂತು ತನ್ನ ಕೈಯಾರೆ ಹಾಳುಗೆಡವಿದೆ ದೇಶದ ಘನತೆ ಮತ್ತು ಉದಾರತೆಯನ್ನು ಮರು ಸ್ಥಾಪಿಸುವುದಾದರೂ ಹೇಗೆ?