ಈ ಹಿಂದೆ ಹೃದಯದ ರಕ್ತನಾಳಗಳಲ್ಲಿ ಯಾವುದೇ ತೊಂದರೆಯ ಹಿನ್ನೆಲೆ ಇಲ್ಲದ, 20-45ವರ್ಷಗಳ ನಡುವಿನ ಪೀಕ್ ಉತ್ಪಾದಕ ಪ್ರಾಯವರ್ಗದ, ದೈಹಿಕವಾಗಿ ಸದೃಢರೂ-ಚಟುವಟಿಕೆ ಭರಿತರೂ ಆಗಿರುವ ಎಷ್ಟು ಮಂದಿ ನಿಮ್ಮ ಕುಟುಂಬ-ಪರಿಚಿತ ವರ್ಗದಲ್ಲಿ ಕಳೆದ ಎರಡು ವರ್ಷಗಳಲ್ಲಿ ಹಠಾತ್ “ಹೃದಯಾಘಾತ/ಹೃದಯ ಸ್ಥಂಭನ/ಸ್ಟ್ರೋಕ್ (ಲಕ್ವಾ)” ಆಗಿ ಅಗಲಿಹೋಗಿದ್ದಾರೆ? ನನಗೆ ನನ್ನ ಕುಟುಂಬ-ಪರಿಚಯವರ್ಗದಲ್ಲಿ ಕನಿಷ್ಠ 15-20 ಇಂತಹ ಪ್ರಕರಣಗಳು ಗಮನಕ್ಕೆ ಬಂದಿವೆ. ಫೇಸ್‌ಬುಕ್/ಟ್ವಿಟ್ಟರ್‌ನಂತಹ ಸೋಷಿಯಲ್ ಮೀಡಿಯಾಗಳಲ್ಲಿ ಪ್ರತೀ ವಾರ ಇಂತಹ ಕನಿಷ್ಠ ಎರಡು ಪೋಸ್ಟ್‌ಗಳನ್ನು ಗಮನಿಸುತ್ತಿದ್ದೇನೆ.
ನಮ್ಮ ಆರೋಗ್ಯ ವ್ಯವಸ್ಥೆಗೆ ಇದು ಇನ್ನೂ ಯಾಕೆ ಗಂಭೀರ ಸಂಗತಿ ಅನ್ನಿಸುತ್ತಿಲ್ಲ?
ಭಾರತದ ಹೃದ್ರೋಗಗಳ ಸೊಸೈಟಿ (CSI) ಪ್ರಕಾರ ಹತ್ತು ವರ್ಷಗಳ ಹಿಂದೆ ದೇಶದಲ್ಲಿ ಹೃದಯದ ರಕ್ತನಾಳಗಳ ತೊಂದರೆ (CVD)ಇರುವವರ ಸಂಖ್ಯೆ 3.6ಕೋಟಿ ಇದ್ದದ್ದು, ಕೋವಿಡ್ ಬರುವ ಮುನ್ನವೇ 6.2ಕೋಟಿಗೆ ಏರಿದೆ. ಈಗ ಕೋವಿಡ್ ಕಾಲದ ಲೆಕ್ಕಾಚಾರಗಳು ಇನ್ನೂ ಲಭ್ಯವಿಲ್ಲ. ಆದರೆ, ಕೋವಿಡ್ ಮೊದಲ ಅಲೆಯ ಕಾಲದಲ್ಲಿ ಲಾಕ್‌ಡೌನ್ ಕಾರಣದಿಂದಾಗಿ, ಆಸ್ಪತ್ರೆಗಳು ಕೋವಿಡ್ ಗದ್ದಲದಲ್ಲಿ ಮೈಮರೆತಿದ್ದ ಕಾರಣದಿಂದಾಗಿ ಹೃದ್ರೋಗಗಳು ವರದಿಯಾಗುವ ಪ್ರಮಾಣ ಬಹಳ ಕಡಿಮೆಯಾಗಿತ್ತು. ಇದರಿಂದಾಗಿ ಬಹಳ ಮಂದಿ ಸಕಾಲದಲ್ಲಿ ಚಿಕಿತ್ಸೆ ಸಿಗದೆ ತೊಂದರೆಗೀಡಾಗಿರಬಹುದು, ಅವರ ರೋಗ ಉಲ್ಭಣಗೊಂಡಿರಬಹುದು ಎಂದು ಅಧ್ಯಯನಗಳು ಶಂಕೆ ವ್ಯಕ್ತಪಡಿಸಿದ್ದಿದೆ.
ಕೋವಿಡ್ ರೋಗ ಬಂದವರಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಗಳು ಇದ್ದು, ಅದರಿಂದ ಹೃದಯಾಘಾತ, ಮೆದುಳಿನ ಆಘಾತ (ಲಕ್ವಾ) ಆಗುವ ಸಾಧ್ಯತೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಹೃದಯ-ಮೆದುಳು ಮಾತ್ರವಲ್ಲದೇ ಶ್ವಾಸಕೋಶ, ಕಾಲುಗಳು, ಪಿತ್ತಜನಕಾಂಗ, ಮೂತ್ರಪಿಂಡಗಳ ಮೇಲೂ ರಕ್ತ ಹೆಪ್ಪುಗಟ್ಟುವಿಕೆ ಪರಿಣಾಮ ಬೀರಬಹುದು ಎಂಬುದು ಖಚಿತವಾಗಿದೆ. ಇದೆಲ್ಲ ವೈಜ್ಞಾನಿಕವಾಗಿಯೇ ಖಚಿತವಾಗಿರುವಾಗ, ಭಾರತದಲ್ಲಿ ಈ ಬಗ್ಗೆ ಆರೋಗ್ಯ ವ್ಯವಸ್ಥೆ ಏನು ಕ್ರಮಗಳನ್ನು ಕೈಗೊಂಡಿದೆ?

೧. ದೊಡ್ಡ ಪ್ರಮಾಣದಲ್ಲಿ “ಅಸಿಂಪ್ಟಮ್ಯಾಟಿಕ್” ಕೋವಿಡ್ ಬಂದುಹೋದವರು ದೇಶದಲ್ಲಿದ್ದಾರೆ (ಸರ್ಕಾರದ್ದೇ ಸೀರೊಸರ್ವೇ ಪ್ರಕಾರ ದೇಶದ ಪ್ರತೀ ಮೂವರಲ್ಲಿ ಇಬ್ಬರು ಈಗ ಸೋಂಕು ತಗುಲಿಸಿಕೊಂಡಾಗಿದೆ). ಇವರಲ್ಲಿ ರಕ್ತ ಹೆಪ್ಪುಗಟ್ಟುವ ಮತ್ತು ಅದರ ಪರಿಣಾಮಗಳುಂಟಾಗುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆದಿದೆಯೆ?
೨. ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಆಗಿರುವ ಅಕಾಲಿಕ ಹೃದಯಾಘಾತ-ಸ್ಟ್ರೋಕ್ ಸಾವುಗಳಲ್ಲಿ ರೋಗಿಗಳ ವಿವರವಾದ ಅಟಾಪ್ಸಿ ನಡೆದಿದೆಯೆ? ಸಾವಿಗೆ ಕಾರಣ ಏನು ಎಂಬುದನ್ನು ಪತ್ತೆಹಚ್ಚುವ ಮತ್ತು ಉಳಿಸಬಹುದಾದ ಜೀವಗಳನ್ನು ಉಳಿಸುವ ಪ್ರಯತ್ನಗಳು ನಡೆದಿವೆಯೆ?
೩. ಅಮೆರಿಕದಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಪ್ರಾಯೋಗಿಕ ಹಂತದಲ್ಲಿ ರಕ್ತ ಹೆಪ್ಪುಗಟ್ಟಿಸಿದ ಕಾರಣಕ್ಕೆ ಒಂದೆರಡು ದಿನ ಅಧ್ಯಯನವನ್ನು ಸ್ಥಗಿತಗೊಳಿಸಲಾಗಿತ್ತು. ಈಗಲೂ ಮಕ್ಕಳ ಮೇಲೆ ಲಸಿಕೆ ಪ್ರಯೋಗದ ವೇಳೆ ಹೆಪ್ಪುಗಟ್ಟುವಿಕೆ ದೂರುಗಳ ಹಿನ್ನೆಲೆಯಲ್ಲಿ ಅಧ್ಯಯನಗಳನ್ನು ಸ್ಥಗಿತಗೊಳಿಸಿರುವ ವರದಿಗಳು ಯುರೋಪಿನಲ್ಲಿ ಕೇಳಿಬರುತ್ತಿವೆ. ಲಸಿಕೆಗಳಿಂದ ಈ ರೀತಿಯ ಅಡ್ಡಪರಿಣಾಮಗಳ ಸಾಧ್ಯತೆಯೇನಾದರೂ ಇದೆಯೇ ಎಂಬುದನ್ನು ಭಾರತದಲ್ಲಿ ಔಷಧಿ ಸುರಕ್ಷಾ ವ್ಯವಸ್ಥೆಗಳು ಖಚಿತಪಡಿಸಿಕೊಂಡಿವೆಯೆ?
೪. ಅಕಾಲಿಕವಾಗಿ, ಹಠಾತ್ ಹೃದಯಾಘಾತ-ಸ್ಟ್ರೋಕ್ ಆದವರ ಲಸಿಕೆ ಹಿನ್ನೆಲೆ, ಕೋವಿಡ್ ಸೋಂಕಿನ ಹಿನ್ನೆಲೆಗಳ ಡೇಟಾ ಏನಾದರೂ ಗ್ರಾಮ/ನಗರ ಮಟ್ಟದಲ್ಲಿ ಸಂಗ್ರಹಿಸಿಡಲಾಗಿದೆಯೆ? ಇಂತಹ ದಾಖಲೆಗಳು ಮುಂದೊಂದು ದಿನ ಹಿಂತಿರುಗಿ ನೋಡಿ ವಿಶ್ಲೇಷಿಸುವುದಕ್ಕೆ ಮಹತ್ವದವು ಎಂದು ಆರೋಗ್ಯ ವ್ಯವಸ್ಥೆಗೆ ಅನ್ನಿಸಿಲ್ಲವೆ?
ಅಕಾಲಿಕವಾದ CVD ಸಾವುಗಳೆಲ್ಲವೂ ಅನ್ಯಾಯದ ಸಾವುಗಳು. ಆರೋಗ್ಯ ವ್ಯವಸ್ಥೆ ಪರಿಣಾಮಕಾರಿಯಾಗಿದ್ದರೆ, ಉಳಿಸಿಕೊಳ್ಳಬಹುದಾಗಿದ್ದ ಜೀವಗಳವು. ಜನರ ಜೀವಕ್ಕಿಂತ ದುಡ್ಡು ಮುಖ್ಯವಾದಾಗ ಮಾತ್ರ ಇಂತಹ “ದಿವ್ಯ ನಿರ್ಲಕ್ಷ್ಯ” ಕಾಣಿಸಿಕೊಳ್ಳಲು ಸಾಧ್ಯ. ನಾಳೆ ಜನರೇ ಇಲ್ಲದಿದ್ದರೆ ದುಡ್ಡು ಹಿಡ್ಕೊಂಡು ಏನು ಮಾಡ್ತೀರಿ ಸಾರ್?