ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಪ್ರಚೋದನಕಾರಿ ಮತ್ತು ವಿಭಜನೆಯ ಭಾಷಣಗಳ ಬಗ್ಗೆ ತಿಳಿದಿರುವವರಿಗೆ ‘ಪಾಕಿಸ್ತಾನದ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡುತ್ತೇವೆ. ಈಗ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರುತ್ತೇವೆ ಎಂಬ ಅವರ ಹೇಳಿಕೆಯು ದೊಡ್ಡ ಆಶ್ಚರ್ಯವನ್ನು ಉಂಟುಮಾಡಲಿಲ್ಲ. ಆದರೆ ಅವರದೇ ಪಕ್ಷದ ಹಲವರನ್ನು ಗೊಂದಲಕ್ಕೀಡುಮಾಡಿತ್ತು. ಅಂತಿಮವಾಗಿ ಅವರು ‘ಮರುಮತಾಂತರ’ದ ಕುರಿತಾದ ತಮ್ಮ ಹೇಳಿಕೆಯನ್ನು ಬೆಷರತ್ತಾಗಿ ಹಿಂತೆಗೆದುಕೊಳ್ಳುವುದಾಗಿ ಪ್ರಕಟಿಸಿದರು.
ಈ ಬಗ್ಗೆ ಕರ್ನಾಟಕ ಮತ್ತು ದೆಹಲಿಯಲ್ಲಿ ಬಿಜೆಪಿಯ ನಾಯಕರನ್ನು ಮಾತನಾಡಿಸಿದಾಗ, ತೇಜಸ್ವಿ ಸೂರ್ಯ ಹೇಳಿಕೆಗೆ ಬಿಜೆಪಿ ಹೈಕಮಾಂಡ್ ಸಮ್ಮತಿ ಸೂಚಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಎಲ್ಲಾ ನಾಯಕರು ನೀಡಿದ ಎಲ್ಲಾ ಹೇಳಿಕೆಗಳನ್ನು ಪರಿಶೀಲಿಸುವುದಿಲ್ಲವಾದರೂ ಇದು ಅಂತರರಾಷ್ಟ್ರೀಯ ಸಂಚಲನವನ್ನು ಉಂಟುಮಾಡುವ ಸಂಗತಿಯಾದುದರಿಂದ ಈ ಬಗ್ಗೆ ಗಮನಹರಿಸಲಾಗಿದೆ. ತೇಜಸ್ವಿ ಸೂರ್ಯ ತಮ್ಮ ಹೇಳಿಕೆಗಳನ್ನು ಬೆಷರತ್ತಾಗಿ ವಾಪಸ್ ಪಡೆಯಲು ಏನೆಲ್ಲಾ ಆಗಿದೆ ಎಂಬ ಸಂಗತಿಗಳು ಹೀಗಿವೆ.
ಪ್ರಧಾನಿ ಮೋದಿ ವ್ಯಾಟಿಕನ್‌ಗೆ ತೆರಳಿ ಅಲ್ಲಿ ಪೋಪ್ ಅವರನ್ನು ಭೇಟಿಯಾಗಲು ಸುದೀರ್ಘ ಲಾಬಿ ಮಾಡಬೇಕಾಯಿತು. ಅಂತಿಮವಾಗಿ 2021ರ ಅಕ್ಟೋಬರ್ 30ರಂದು ಪಿಎಂ ಮೋದಿ ಪೋಪ್ ಫ್ರಾನ್ಸಿಸ್ ಅವರನ್ನು ವ್ಯಾಟಿಕನ್ ಸಿಟಿಯಲ್ಲಿ ಭೇಟಿಯಾದರು. ಸಭೆಯ ನಂತರ ಮೋದಿ ಅವರು ಪೋಪ್ ಅವರನ್ನು ಆಲಿಂಗಿಸಿಕೊಂಡಿರುವ ಫೋಟೋಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಯಿತು. ಜೊತೆಗೆ ಮೋದಿ ಅವರು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ ಎಂಬ ಮಾಹಿತಿ ಕೂಡ ಇದೆ.
Also Read : ಹ್ಯಾಪಿ ಬರ್ತಡೇ ತೇಜಸ್ವಿ ಸೂರ್ಯ: ದ್ವೇಷ ಭಾಷಣವೇ ಆಸ್ತಿ, ಮೈ-ಮನಸುಗಳಲ್ಲಿ ಕೋಮುವಿಷ
ಹೆಚ್ಚು ಅಂಗೀಕರಿಸಲ್ಪಟ್ಟ ಜಾಗತಿಕ ನಾಯಕನಾಗಬೇಕೆಂಬ ಮೋದಿಯವರ ಮಹತ್ವಾಕಾಂಕ್ಷೆಯ ಭಾಗವಾಗಿಯೇ ಅವರು ವ್ಯಾಟಿಕನ್‌ಗೆ ಭೇಟಿ ನೀಡಲು ನಿರಂತರವಾಗಿ ಪ್ರಯತ್ನಿಸಿದ್ದರು. ಈ ಅಂಶ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಕಡೆಗೆ ಪೋಪ್ ಭೇಟಿಯಾಗಿ ಬಂದ ಕೆಲವೇ ದಿನಗಳಲ್ಲಿ ಅವರು ಪ್ರತಿನಿಧಿಸುವ ಪಕ್ಷದ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಕ್ರಿಶ್ಚಿಯನ್ ಸಮುದಾಯದ ಮೇಲೆ ಹರಿಹಾಯ್ದರೆ ಸಹಜವಾಗಿ ಅದು ಪ್ರತಿಕೂಲ ಪರಿಣಾಮ ಬೀರುತ್ತದೆ. ಪಾಶ್ಚಿಮಾತ್ಯ ವಿಚಾರಧಾರೆಗಳನ್ನು ಹಿಂದೂ ಧರ್ಮದ ಶತ್ರುಗಳೆಂದು ಬಿಂಬಿಸುವಂತಹ ಹೇಳಿಕೆಗಳನ್ನು ನೀಡಿದರೆ ಮೋದಿ ಸರ್ಕಾರಕ್ಕೆ ಅಡ್ಡಿ ಮತ್ತು ಮುಜುಗರ ಉಂಟುಮಾಡದೆ ಇರದು.
ಕಮ್ಯುನಿಸಂ, ಮೆಕ್ಕಾಯಿಸಂ ಮತ್ತು ವಸಾಹತುಶಾಹಿಯಂತಹ ಪಾಶ್ಚಿಮಾತ್ಯ ವಿಚಾರಧಾರೆಗಳು ಸನಾತನ ಧರ್ಮವನ್ನು ನಾಶ ಮಾಡುವ ಗುರಿಯನ್ನು ಹೊಂದಿವೆ. ಇವುಗಳ ಶಕ್ತಿಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಈ ಶತ್ರುವನ್ನು ಸಂಹಾರ ಮಾಡಬೇಕೆನ್ನುವ ರೀತಿಯಲ್ಲಿ ತೇಜಸ್ವಿ ಸೂರ್ಯ ಮಾತನಾಡಿದ್ದರು. ಹೀಗೆ ತೇಜಸ್ವಿ ಸೂರ್ಯ ಉಡುಪಿ ಮಠದ ಗ್ಯಾಲರಿಯನ್ನು ಖುಷಿಪಡಿಸಲು ಮಾತನಾಡುತ್ತಿದ್ದರೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಗೋವಾ ವಿಧಾನಸಭಾ ಚುನಾವಣೆಗೆ ಮುನ್ನ ಕ್ರಿಶ್ಚಿಯನ್ ಸಮುದಾಯವನ್ನು ಓಲೈಸಲು ಪ್ರಯತ್ನಿಸುತ್ತಿದ್ದರು.

ಡಿಸೆಂಬರ್ 20 ರಂದು ಗೋವಾ ವಿಮೋಚನಾ ದಿನದಂದು ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ವ್ಯಾಟಿಕನ್ ಭೇಟಿಯ ಬಗ್ಗೆ ಮಾತನಾಡಿದ್ದರು. ಮತ್ತು ಪೋಪ್ ಫ್ರಾನ್ಸಿಸ್ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು. ಪೋಪ್ ಅವರ “ಭಾರತದ ಬಗೆಗಿನ ವರ್ತನೆ ಅಗಾಧವಾಗಿದೆ” ಎಂದು ಹೇಳಿದ್ದರು. ತಮ್ನ ಆಹ್ವಾನವನ್ನು ಪೋಪ್ ಫ್ರಾನ್ಸಿಸ್ ‘ಇದು ನೀವು ನನಗೆ ನೀಡಿದ ದೊಡ್ಡ ಉಡುಗೊರೆ” ಎಂದು ಬಣ್ಣಿಸಿದ್ದಾರೆ ಎಂದು ತಿಳಿಸಿದ್ದರು. ಆದರೆ ಮೋದಿಯವರ ‘ಗೋವಾ ಕ್ರಿಶ್ಚಿಯನ್ ಸಮುದಾಯವನ್ನು ಒಲಿಸಿಕೊಳ್ಳುವ ಪ್ರಯತ್ನ’ ತೇಜಸ್ವಿ ಸೂರ್ಯ ಹೇಳಿಕೆಯಿಂದ ವಿಫಲವಾಯಿತು.
2011ರ ಜನಗಣತಿಯ ಪ್ರಕಾರ, ಗೋವಾದ ಜನಸಂಖ್ಯೆಯಲ್ಲಿ ಶೇಕಡಾ 25.1ರಷ್ಟು ಕ್ರಿಶ್ಚಿಯನ್ ಸಮುದಾಯದವರಿದ್ದಾರೆ. ರಾಜ್ಯದಿಂದ ತಮ್ಮ ಪ್ರಬಲ ನಾಯಕ ಮನೋಹರ್ ಪರಿಕ್ಕರ್ ಅವರ ಮರಣದ ನಂತರ ಬಿಜೆಪಿ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ. ಈ ನಡುವೆ ‘ಭಾರತದ ಇತಿಹಾಸದಲ್ಲಿ ಇತರ ಧರ್ಮಗಳಿಗೆ (ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ) ಮತಾಂತರಗೊಂಡ ಗುಂಪುಗಳನ್ನು “ಯುದ್ಧದ ಮಾದರಿಯಲ್ಲಿ” ಹಿಂದೂ ಧರ್ಮಕ್ಕೆ ಮರುಪರಿವರ್ತನೆ ಮಾಡಬೇಕು ಮತ್ತು ಇದು ಪಾಕಿಸ್ತಾನದಲ್ಲಿರುವ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಪರಿವರ್ತಿಸಬೇಕು ಎಂದು ತೇಜಸ್ವಿ ಸೂರ್ಯ ಹೇಳಿರುವುದು ದೆಹಲಿಯ ಎನ್‌ಡಿಎ ಸರ್ಕಾರಕ್ಕೆ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ.
Also Read : BoycottFabIndia ಕರೆ; ಹಿಂದೂಸ್ಥಾನದ ಆತ್ಮಕ್ಕೆ ಧಕ್ಕೆ ತಂದ ಸಂಸದ ತೇಜಸ್ವಿ ಸೂರ್ಯ!
ಈ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಲಕ್ನೋದಲ್ಲಿದ್ದ ತೇಜಸ್ವಿ ಸೂರ್ಯ ಅವರಿಗೆ ಹೇಳಿಕೆಯನ್ನು ಕೂಡಲೆ ಬೆಷರತ್ತಾಗಿ ವಾಪಸ್ ಪಡೆಯುವಂತೆ ಮತ್ತು ವಿವಾದವನ್ನು ಇನ್ನಷ್ಟು ಬೆಳಸದಂತೆ ಮೋದಿಗೆ ಆಪ್ತರಾಗಿರುವ ಆರ್‌ಎಸ್‌ಎಸ್ ಹಿರಿಯ ನಾಯಕರೊಬ್ಬರು ಖಡಕ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೇಜಸ್ವಿ ಸೂರ್ಯ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡುವುದು ಇದು ಮೊದಲೇನಲ್ಲ. 2019ರ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆದ ಸಿಎಎ ಪರವಾದ ಸಮಾವೇಶದಲ್ಲಿ “ಅನಕ್ಷರಸ್ಥರು ಮತ್ತು ಪಂಕ್ಚರ್-ವಾಲಾಗಳು ಮಾತ್ರ ಸಿಎಎಯಲ್ಲಿ ಸಮಸ್ಯೆ ಹೊಂದಿದ್ದಾರೆ’ ಎಂದು ಹೇಳಿಕೆ ನೀಡಿದ್ದರು.
2020ರ ಆಗಸ್ಟ್ ನಲ್ಲಿ “ಹಿಂದೂಗಳ ರಾಜ್ಯ ಅಧಿಕಾರದ ನಿಯಂತ್ರಣವು ಧರ್ಮದ ಪೋಷಣೆಗೆ ಸಂಪೂರ್ಣವಾಗಿ ಅವಶ್ಯಕವಾಗಿದೆ. ನಾವು ರಾಜ್ಯವನ್ನು ನಿಯಂತ್ರಿಸದಿದ್ದಾಗ ನಾವು ನಮ್ಮ ದೇವಾಲಯಗಳನ್ನು ಕಳೆದುಕೊಂಡಿದ್ದೇವೆ. ನಾವು ಮರಳಿ ಪಡೆದಾಗ ಪುನರ್ನಿರ್ಮಿಸಿದ್ದೇವೆ” ಎಂದು ಟ್ವೀಟ್ ಮಾಡಿದ್ದರು.
Also Read : ಆಪದ್ಭಾಂದವ ಶ್ರೀನಿವಾಸ್ ಮತ್ತು ಅದೃಷ್ಟವಂತ ತೇಜಸ್ವಿ ಸೂರ್ಯ, ಯಾರು ನಿಜವಾದ ಜನನಾಯಕ?
2021 ಮೇ ತಿಂಗಳಲ್ಲಿ, ಬಿಬಿಎಂಪಿ ಕೋವಿಡ್-19 ವಾರ್-ರೂಮ್ ಹಾಸಿಗೆ ಹಂಚಿಕೆ ಹಗರಣ ನಡೆದಿದೆ ಎಂದು ಹೇಳುತ್ತಾ ವಾರ್ ರೂಮಿನಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಪಟ್ಟಿಯಲ್ಲಿ ಎಲ್ಲರೂ ಮುಸ್ಲಿಮರೇ ಇದ್ದಾರೆ, ಅವರಿಂದಲೇ ಹಗರಣ ನಡೆದಿದೆ’ ಎಂದು ಹೇಳಿದ್ದರು. ವಾಸ್ತವ ಹಾಗಿರಲಿಲ್ಲ. ಈ ಪ್ರಕರಣದ ಬಗ್ಗೆ ತಪ್ಪು ಒಪ್ಪಿಕೊಳ್ಳಲು ಆರಂಭದಲ್ಲಿ ತೇಜಸ್ವಿ ಸೂರ್ಯ ನಿರಾಕರಿಸಿದ್ದರು. ತನಗೆ ಹಸ್ತಾಂತರಿಸಿದ ಪಟ್ಟಿಯಿಂದ ಹೆಸರುಗಳನ್ನು ಓದಿದ್ದೇನೆ. ಹೆಚ್ಚಿನ ಮಾಹಿತಿ ಗೊತ್ತಿರಲಿಲ್ಲ ಎಂದು ಹೇಳಿ ಕ್ಷಮೆ ಕೇಳಲು ನಿರಾಕರಿಸಿದ್ದರು. ನಂತರ ಜನರ ಆಕ್ರೋಶದ ನಂತರ, ವಾರ್-ರೂಮ್ ಉದ್ಯೋಗಿಗಳಿಗೆ ಕ್ಷಮೆಯಾಚಿಸಿದರು.