ಪಂಜಾಬ್ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಎಪಿಗೆ ಉತ್ತಮ ಆರಂಭ ದೊರತಿದೆ. ಚಂಢೀಗಡದ 35 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ 14ರಲ್ಲಿ ಎಎಪಿ ಜಯ ಸಾಧಿಸಿದೆ. ಕೇಂದ್ರಾಡಳಿತ ಪ್ರದೇಶವಾದ ಚಂಢೀಗಡದಲ್ಲಿ ಈ ಹಿಂದೆ ನಡೆದ ಚುನಾವಣೆಯಲ್ಲಿ 26 ವಾರ್ಡುಗಳಲ್ಲಿ ಬಿಜೆಪಿ ಜಯಗಳಿಸಿತ್ತು. ಆದರೆ ಸೋಮವಾರ ಪ್ರಕಟವಾದ ಪಲಿತಾಂಶದಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ. 8 ವಾರ್ಡುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರೆ, ಶಿರೋಮಣಿ ಅಕಾಲಿದಳ 1ರಲ್ಲಿ ಗೆದ್ದಿದೆ.
ಮೇಯರ್ ಆಯ್ಕೆ ವಿಚಾರಕ್ಕೆ ಬಂದರೆ ಎಎಪಿಗೆ 19 ಮತಗಳ ಅವಶ್ಯಕತೆಯಿದೆ. ಸ್ಥಳೀಯ ಸಂಸದರು ಬಿಜೆಪಿಯವರಾದ್ದರಿಂದ ಬಿಜೆಪಿಗೆ 18ಮತಗಳ ಅವಶ್ಯಕತೆಯಿದೆ. ಮೊದಲ ಬಾರಿಗೆ ಸ್ಪರ್ಧಿಸಿದ್ದ ಎಎಪಿ ಕಡಿಮೆ ಅವಧಿಯಲ್ಲಿ ಪ್ರಚಾರ ನಡೆಸಿ ಬಿಜೆಪಿಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಎಎಪಿ ಪರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ನ ಸಂಸದ ಭಗವಂತ್ ಮಾನ್ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದರು.
ಬಿಜೆಪಿ ಪರ ಕೇಂದ್ರ ಸಚಿವರು, ಸಂಸದರು, ರಾಜ್ಯಗಳ ಮುಖ್ಯಮಂತ್ರಿಗಳು ಮೋದಿ ಹೆಸರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು ಸಹ ಯಾವುದೇ ಪ್ರಯೋಜನ ಕಂಡಿಲ್ಲ. ಅನೇಕ ಬಿಜೆಪಿ ಸದಸ್ಯರ ವಾರ್ಡುಗಳಲ್ಲಿ ಜನ ಎಎಪಿಯಿಂದ ಸ್ಪರ್ಧಿಸಿದ್ದ ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ.
ಪಂಜಾಬ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ನಂತರ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ನೇತೃತ್ವದಲ್ಲಿ ಕಾಂಗ್ರೆಸ್ಗೆ ಯಾವುದೇ ಲಾಭವಾಗಿಲ್ಲ. ಈ ಹಿಂದೆ ಅಮರೀಂದರ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದಾಗ ಲಭಿಸಿದ ಸ್ಥಾನಗಳು ಈ ಭಾರೀ ಕಾಂಗ್ರೆಸ್ಗೆ ಲಭಿಸಿಲ್ಲದಿರುವುದು ರಾಜ್ಯ ಕಾಂಗ್ರೆಸ್ ನಾಯಕತ್ವವನ್ನು ಹೈಕಮಾಂಡ್ ಪ್ರಶ್ನಿಸುವ ಸಾಧ್ಯತೆ ಇದೆ.
ಚುನಾವಣೆ ಪಲಿತಾಂಶದ ನಂತರ ಹೊರ ಬಂದಿರುವ ಅಂಕಿಅಂಶಗಳ ಪ್ರಕಾರ ಜನರು ಬದಲಾವಣೆ ಬಯಸಿದ್ದನ್ನು ಸ್ಪಷ್ಟವಾಗಿ ಕಾಣಬಹುದು. ಬಿಜೆಪಿ ಎಂದಿನಂತೆ ತನ್ನ ಹಿಂದೂತ್ವ ಮತ್ತು ರಾಮಮಂದಿರ ಅಜೆಂಡಾ ಸುತ್ತ ಗಿರಕಿ ಹೊಡೆದದ್ದು ಯಾವುದೇ ಪ್ರಯೋಜನ ಕಂಡಿಲ್ಲ. ಮುಖ್ಯವಾಗಿ ಜನರ ಮನಸ್ಥಿತಿ ಅಳೆಯುವಲ್ಲಿ ಬಿಜೆಪಿ ವಿಫಲವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಡೆಯ ಕ್ಷಣದವರೆಗೂ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಸಿಹಿಯನ್ನು ತಂದು ಬಿಜೆಪಿ ಕಚೇರಿಗಳಲ್ಲಿ ಶೇಕರಿಸಿದ್ದರು ಎನ್ನಲಾಗಿದೆ.
ಚುನಾವಣೆಯ ಫಲಿತಾಂಶದ ನಂತರ ಟ್ವೀಟ್ ಮಾಡಿರುವ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ʻʻಚಂಢೀಗಡದ ಜನರು ಭ್ರಷ್ಟ ರಾಜಕಾರಣವನ್ನು ತಿರಸ್ಕರಿಸಿ, ಪ್ರಾಮಾಣಿಕ ರಾಜಕಾರಣವನ್ನು ಆರಿಸಿಕೊಂಡಿದ್ದಾರೆ. ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆಯ ಸಂಕೇತವಾಗಿದೆʼʼ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಂಸದ ಭಗವಂತ್ ಮಾನ್ ʻʻ ಲೆಫ್ಟಿನೆಂಟ್ ಗವರ್ನರ್, ಸಂಸದರು, ಮೇಯರ್ ವರೆಗೂ ಎಲ್ಲರೂ ಬಿಜೆಪಿಯವರೇ ಆಗಿದ್ದರು ಸಹ ಜನ ನಮ್ಮ ಪಕ್ಷದ ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಸಹ ಈ ಬದಲಾವಣೆ ಮುಂದುವರೆಯಲಿದೆʼʼ ಎಂದಿದ್ದಾರೆ.