ಒಂದು ಕಡೆ ಆಡಳಿತ ಪಕ್ಷದಲ್ಲಿ ವಾಡಿಕೆಯಂತೆ ನಾಯಕತ್ವದ ಚರ್ಚೆ ಮುನ್ನೆಲೆಗೆ ಬಂದಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ಸಿನಲ್ಲೂ ಭವಿಷ್ಯದ ನಾಯಕತ್ವದ ಹಗ್ಗಜಗ್ಗಾಟ ಆರಂಭವಾಗಿದೆ.
ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲೇ ಮುಖ್ಯಮಂತ್ರಿ ಬದಲಾಯಿಸಿದ ಬಿಜೆಪಿ, ಇದೀಗ ಎರಡನೇ ಮುಖ್ಯಮಂತ್ರಿಯನ್ನೂ ಬದಲಾಯಿಸುವ ತಯಾರಿಯಲ್ಲಿದಂತಿದೆ. ನಾಲ್ಕು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟ ಇತಿಹಾಸ ಹೊಂದಿರುವ ಬಿಜೆಪಿಗೆ ಅಂತಹ ಬೆಳವಣಿಗೆಗಳು ಹೊಸದೇನೂ ಅಲ್ಲ. ಆದರೆ, ಅಧಿಕಾರವೂ ಇಲ್ಲದ, ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಖಚಿತ ನಿರೀಕ್ಷೆಯೂ ಇಲ್ಲದ ಡೋಲಾಯಮಾನ ಸ್ಥಿತಿಯಲ್ಲಿರುವ ಪ್ರತಿಪಕ್ಷ ಕಾಂಗ್ರೆಸ್ಸಿನಲ್ಲಿ ಕೂಸು ಹುಟ್ಟುವ ಮುನ್ನವೇ ಕುಲಾವಿ ಕಾದಾಟ ಆರಂಭವಾಗಿರುವುದು ಹೊಸ ವಿಷಯ.
ಚುನಾವಣೆಗೆ ಒಂದೂವರೆ ವರ್ಷ ಮುಂಚೆಯೇ ಕಾಂಗ್ರೆಸ್ ಪಾಳೆಯದಲ್ಲಿ ನಾಯಕತ್ವದ ವಿಷಯದಲ್ಲಿ ಹಗ್ಗಜಗ್ಗಾಟ ನಡೆಯುವುದು, ಅಂತಹ ಗುಂಪುಗಾರಿಕೆ ಮತ್ತು ಕಾಲೆಳೆಯುವ ತಂತ್ರಗಾರಿಕೆಗಳಿಂದಾಗಿಯೇ ಗೆಲ್ಲುವ ಅವಕಾಶವಿದ್ದರೂ ಚುನಾವಣಾ ಕಣದಲ್ಲಿ ಸೋತು ಮಣ್ಣುಮುಕ್ಕುವುದು ಕಾಂಗ್ರೆಸ್ಗೆ ರಕ್ತಗತವಾಗಿರುವ ಕಲೆಗಾರಿಕೆ. ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಕೂಡ ಚುನಾವಣಾ ನೇತೃತ್ವಕ್ಕಾಗಿ ಅಂತಹದ್ದೇ ರಕ್ತಗತ ಪೈಪೋಟಿ ಆರಂಭವಾಗಿದೆ.
ಹಾಗೆ ನೋಡಿದರೆ, ಮುಂದಿನ ಮುಖ್ಯಮಂತ್ರಿ ಗಾದಿಯ ಮೇಲೆ ಅಡ್ವಾನ್ಸ್ ಆಗೇ ಟವಲ್ ಹಾಕುವ ವಿಷಯದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಬಹಿರಂಗ ಸಮರ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ಚುನಾವಣೆಗೆ ಎರಡೂವರೆ ವರ್ಷ ಬಾಕಿ ಇರುವಾಗಲೇ ಪಕ್ಷದ ಮುಖಂಡರಾದ ಎಂ ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ, ಜಿ ಪರಮೇಶ್ವರ್, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರ ನಡುವೆ ಮುಂದಿನ ಮುಖ್ಯಮಂತ್ರಿಯ ರೇಸ್ ಆರಂಭವಾಗಿತ್ತು. ದಲಿತ ಸಿಎಂ ವಿಷಯದಲ್ಲಿ ಹೆಡೆ ಎತ್ತಿದ್ದ ಈ ವಿವಾದ ನಾಯಕರ ಬೆಂಬಲಿಗರ ನಡುವೆ ಮಾರಾಮಾರಿಗೆ ವರೆಗೂ ಹೋಗಿತ್ತು ಮತ್ತು ಬಳಿಕ ಪಕ್ಷದ ಹೈಕಮಾಂಡ್ ಮಧ್ಯಪ್ರವೇಶದೊಂದಿಗೆ ತಹಬದಿಗೆ ಬಂದಿತ್ತು.
ಆದರೆ, ಬೆಳಗಾವಿ ಅಧಿವೇಶನದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಅವರ ಪ್ರಾಬಲ್ಯದ ಮೈಸೂರು ಭಾಗದಲ್ಲಿ ಮೇಕೆದಾಟು ಯೋಜನೆ ಮುಂದಿಟ್ಟುಕೊಂಡು ಹೋರಾಟ ರೂಪಿಸಲು ಪೂರ್ವಭಾವಿ ಸಭೆಗಳನ್ನು ನಡೆಸಿರುವುದು ಮತ್ತೊಂದು ಸುತ್ತಿನ ನಾಯಕತ್ವ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಮೈಸೂರು ಭಾಗದಲ್ಲಿ ತಮ್ಮನ್ನು ಬಿಟ್ಟು ಸಭೆ ನಡೆಸಿ ಮೇಕೆದಾಟು ಯೋಜನೆಗೆ ಕುರಿತು ಪಾದಯಾತ್ರೆ ಹಮ್ಮಿಕೊಂಡಿರುವ ಪಕ್ಷದ ಅಧ್ಯಕ್ಷರ ವಿರುದ್ಧ ಕೇವಲ ಸಿದ್ದರಾಮಯ್ಯ ಬೆಂಬಲಿಗರು ಮಾತ್ರವಲ್ಲ; ಸ್ವತಃ ಸಿದ್ದರಾಮಯ್ಯ ಕೂಡ ತೀವ್ರ ಅಸಮಾಧಾನಗೊಂಡಿದ್ದಾರೆ. ಆ ಹಿನ್ನೆಲೆಯಲ್ಲೇ ಬೆಳಗಾವಿ ಅಧಿವೇಶನದ ನಡುವೆಯೇ ಡಿ ಕೆ ಶಿವಕುಮಾರ್ ಅವರೊಂದಿಗೆ ನೇರವಾಗಿ ವಿಷಯ ಪ್ರಸ್ತಾಪಿಸಿರುವ ಅವರು, ತಮ್ಮ ಗಮನಕ್ಕೆ ತರದೆ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಭಾಗದಲ್ಲಿ ಪಕ್ಷದ ಯಾವುದೇ ಸಭೆ ನಡೆಸದಂತೆ ತಾಕೀತು ಮಾಡಿದ್ದಾರೆ.

ಆದರೆ, ಮುಂದಿನ ಚುನಾವಣೆ ತಮ್ಮ ನೇತೃತ್ವದಲ್ಲೇ ಎಂದು ಹೇಳಿಕೊಂಡು ಮುಂದಿನ ಸಿಎಂ ಕನಸು ಕಾಣುತ್ತಿರುವ ಡಿ ಕೆ ಶಿವಕುಮಾರ್, ಹಳೇ ಮೈಸೂರು ಭಾಗದಲ್ಲಿ ತಮ್ಮ ನೆಲೆ ಭದ್ರಪಡಿಸಿಕೊಳ್ಳುವ ಜೊತೆಗೆ ಸಿದ್ದರಾಮಯ್ಯ ಪ್ರಭಾವ ಕುಗ್ಗಿಸಿ ಅವರಿಗೆ ಟಕ್ಕರ್ ಕೊಡಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಅಂತಹ ಕಾರ್ಯಾಚರಣೆಯ ಭಾಗವಾಗಿಯೇ ಮೇಕೆದಾಟು ಹೋರಾಟ ರೂಪಿಸಿದ್ದಾರೆ ಎಂಬ ಸಂಗತಿ ಸಿದ್ದರಾಮಯ್ಯ ಪಾಳೆಯವನ್ನು ರೊಚ್ಚಿಗೆಬ್ಬಿಸಿದೆ. ಅದರಲ್ಲೂ ಮುಂದಿನ ಚುನಾವಣೆ ತಮ್ಮ ನೇತೃತ್ವದಲ್ಲೇ ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಡಿ ಕೆ ಶಿವಕುಮಾರ್, ಮುಂದಿನ ಮುಖ್ಯಮಂತ್ರಿ ತಾವೇ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇದು ಸಹಜವಾಗೇ ಮತ್ತೊಂದು ಬಾರಿ ಸಿಎಂ ಆಗುವ ಮತ್ತು ಆ ಕಾರಣಕ್ಕಾಗಿಯೇ ಪಕ್ಷದಲ್ಲಿ ಸಕ್ರಿಯವಾಗಿರುವ ಸಿದ್ದರಾಮಯ್ಯ ಅವರನ್ನು ಕೆರಳಿಸಿದೆ. ಜೊತೆಗೆ ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ, “ವ್ಯಕ್ತಿ ಪೂಜೆ ನಿಲ್ಲಿಸಿ, ಪಕ್ಷದ ಪೂಜೆ ಮಾಡಿ, ಎಲ್ಲಾ ಕಡೆ ಕಾಂಗ್ರೆಸ್ ಗೆಲ್ಲಿಸಿ” ಎಂದು ಕರೆ ಕೊಡುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅಭಿಮಾನಿಗಳನ್ನೇ ಟಾರ್ಗೆಟ್ ಮಾಡಿರುವುದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ.
ಆ ಹಿನ್ನೆಲೆಯಲ್ಲೇ ಅವರು, ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದು, “ಕಾಂಗ್ರೆಸ್ಸಿನಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಹೆಸರಲ್ಲಿ ಚುನಾವಣೆ ನಡೆಸುವ ಸಂಪ್ರದಾಯವಿಲ್ಲ. ಏನಿದ್ದರೂ ನಮ್ಮದು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸುವ ಪರಂಪರೆ. ಪ್ರತಿಪಕ್ಷ ನಾಯಕನಾಗಿ ನಾನಿದ್ದೇನೆ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ. ಇನ್ನೂ ಹಲವು ನಾಯಕರಿದ್ದಾರೆ. ನಾವೆಲ್ಲಾ ಸಮೂಹಿಕ ನಾಯಕತ್ವದಡಿಯೇ ಮುಂದಿನ ಚುನಾವಣೆಗೆ ಹೋಗುತ್ತೇವೆ” ಎಂದಿದ್ದಾರೆ. ಆ ಮೂಲಕ ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎಂದಿದ್ದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗೆ ಪ್ರತಿಪಕ್ಷ ನಾಯಕ ಹಾಗೂ ಭಾವೀ ಮುಖ್ಯಮಂತ್ರಿ ಆಕಾಂಕ್ಷಿಗಳ ಪೈಕಿ ಪ್ರಮುಖರಾದ ಸಿದ್ದರಾಮಯ್ಯ ತಣ್ಣೀರೆರಚಿದ್ದಾರೆ.
ಅಷ್ಟಕ್ಕೂ ಈ ಮೊದಲು ಸಾಮೂಹಿಕ ನಾಯಕತ್ವದ ಜಪ ಮಾಡುತ್ತಿದ್ದ ಕೆಪಿಸಿಸಿ ಅಧ್ಯಕ್ಷರು ಇದೀಗ ದಿಢೀರನೇ ತಮ್ಮದೇ ನಾಯಕತ್ವದಲ್ಲಿ ಚುನಾವಣೆ ಎನ್ನಲು ಕಾರಣವೇನು? ಎಂದರೆ; ಅದಕ್ಕೆ ಉತ್ತರ ಇತ್ತೀಚಿನ ವಿಧಾನಪರಿಷತ್ ಚುನಾವಣೆಯಲ್ಲಿ ತಮ್ಮವರೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದು ಮತ್ತು 2022ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದು. ಚುನಾವಣೆಗೆ ಮುಂಚೆ ಸಾಧ್ಯವಾದಷ್ಟು ತಮ್ಮ ಹೆಸರನ್ನು ಚಾಲನೆಯಲ್ಲಿ ಇಡುವುದು ಮತ್ತು ಸಿದ್ದರಾಮಯ್ಯ ಪ್ರಾಬಲ್ಯದ ಪ್ರದೇಶದಲ್ಲಿ ತಮ್ಮ ಪ್ರಾಬಲ್ಯ ವೃದ್ಧಿಸಿಕೊಂಡು ಅವರನ್ನು ತಮ್ಮ ತವರನ್ನೇ ಮಣಿಸುವುದು ಡಿ ಕೆ ಶಿವಕುಮಾರ್ ತಂತ್ರ ಎನ್ನಲಾಗುತ್ತಿದೆ.
ಆದರೆ, ಈ ಎಲ್ಲಾ ತಂತ್ರಗಾರಿಕೆಯ ಒಳಸುಳಿಯ ಸೂಕ್ಷ್ಮ ಅರಿತಿರುವ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ವೇಗಕ್ಕೆ ಬ್ರೇಕ್ ಹಾಕಲು ಪ್ರತಿತಂತ್ರ ಹೆಣೆದಿದ್ದು, ಸಂಕ್ರಾಂತಿಯ ಬೆನ್ನಲ್ಲೇ ದೆಹಲಿಯತ್ತ ಹಾರಲಿದ್ದಾರೆ. ಹೈಕಮಾಂಡ್ ನೊಂದಿಗೆ ಮಾತುಕತೆ ನಡೆಸಿ ಅಲ್ಲಿಂದಲೇ ಕನಕಪುರದ ಬಂಡೆಗೆ ಮೂಗುದಾರ ಹಾಕಿಸಲಿದ್ದಾರೆ ಎಂಬುದು ಸಿದ್ದರಾಮಯ್ಯ ಆಪ್ತ ವಲಯದ ಅಂಬೋಣ!