ಓಮೈಕ್ರಾನ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚಾರಣೆಗೆ ಸರ್ಕಾರ ನಿರ್ಬಂಧ ಹೇರಿದೆ. ಬಹಿರಂಗ ಆಚರಣೆಯಷ್ಟೇ ಇಲ್ಲವಾಗಿದ್ದು, ಮನೆಯಲ್ಲಿ ಸರಳವಾಗಿ ಆಚರಿಸಲು ಯಾವುದೇ ಅಡ್ಡಿಯಿಲ್ಲ. ಈ ಬಗ್ಗೆ ಇತ್ತೀಚೆಗೆ ತಾಂತ್ರಿಕ ಸಲಹಾ ಸಮಿತಿ ಹಾಗೂ ಅಧಿಕಾರಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಇದು ಈಗ ಬಹಳ ಗೊಂದಲಕ್ಕೆ ಮತ್ತು ಅನುಮಾನಕ್ಕೆ ಕಾರಣವಾಗಿದೆ.
ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪೈಕಿ; ಡಿಸೆಂಬರ್ 28 ರಿಂದ ಜನವರಿ 2 2022ರವರೆಗೆ ಹೋಟೆಲ್, ರೆಸ್ಟೋರೆಂಟ್, ಪಬ್, ಬಾರ್‌ಗಳಲ್ಲಿ 50% ಆಸನಕ್ಕೆ ಮಾತ್ರ ಅವಕಾಶ ನೀಡಿದೆ. ಆದರೆ ಚಿತ್ರಮಂದಿರಗಳಿಗೆ ಮಾತ್ರ 100% ಅವಕಾಶ ಕೊಡಲಾಗಿದೆ. ಜೊತೆಗೆ ಡಿಸೆಂಬರ್ 28 ರಂದು ರಾತ್ರಿ 10ರಿಂದ ಜನವರಿ 7ರ 5ರ ವೆರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಇದರ ಜೊತೆಗೆ ಮದುವೆ, ಸಭೆ, ಸಮಾರಂಭಗಳಿಗೆ 300 ಜನರಿಗೆ ಮಾತ್ರ ಅವಕಾಶ ಕಲ್ಪಿಸೊಕೊಡಲಾಗಿದೆ. ಸರ್ಕಾರ ಈ ನಡೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೊಸವರ್ಷ ಆಚರಣೆಗೆ ಸರ್ಕಾರ ಹೊರಡಿಸಿದ ಈ ಗೈಡ್ ಲೈನ್ಸ್ ನಲ್ಲಿ ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ಪಬ್ ಗಳಿಗೆ 50% ಆಸನ ವ್ಯವಸ್ಥೆಗೆ ಅವಕಾಶ ಕೊಡಲಾಗಿರುವ ಬಗ್ಗೆ ಇದೀಗ ಅನುಮಾನಗಳು ಮೂಡಿವೆ. ಇದೇ ವೇಳೆ ಚಿತ್ರಮಂದಿರಗಳಿಗೆ ಮಾತ್ರ 100% ಅವಕಾಶ ಕೊಡಲಾಗಿದೆ. ಈ ಬಗ್ಗೆ ʻಪ್ರತಿಧ್ವನಿʼ ಗೆ ಮಾತನಾಡಿದ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್, ʻʻಹೊಸ ವರ್ಷದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದೀಗ ದಿಢೀರನೆ ನಾಲ್ಕು ದಿನಗಳಿರುವಾಗಲೇ ಸರ್ಕಾರ ಈ ರೀತಿಯಾದ ಆದೇಶ ಹೊರಡಿಸಿರುವುದು ಸರಿ ಅಲ್ಲ. ಬೆಂಗಳೂರಿನ ಹೋಟೆಲ್ ಉದ್ಯಮ ಪ್ರತಿವರ್ಷ ಸಾವಿರಕ್ಕೂ ಅಧಿಕ ಕೋಟಿ ತೆರಿಗೆಯನ್ನು ಪಾವತಿಸುತ್ತದೆ. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಸಂಪೂರ್ಣವಾಗಿ ನೆಲಕ್ಕಚ್ಚಿತ್ತು. ಈ ವೇಳೆ ಸರ್ಕಾರದಿಂದಲೂ ಯಾವುದೇ ಸಹಾಯ ನಮಗೆ ಸಿಕ್ಕಿರಲಿಲ್ಲ. ಅದಾಗಿಯೂ ಇತ್ತೀಚೆಗೆ ಉದ್ಯಮ ಚೇತರಿಕೆ ಕಂಡುಕೊಳ್ಳುತ್ತಿದೆ. ಈ ವರ್ಷಕ್ಕೆ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಾಣುವುದರಲ್ಲಿತ್ತು. ಈ ವೇಳೆಯೇ ಈ ರೀತಿ ನಮಗೆ ಮಾತ್ರ ನಿರ್ಬಂಧ ಹೇರಿರುವುದು ಸಂಜಸವಲ್ಲ. ಆದರೆ ಇದೇ ವೇಳೆ ಚಿತ್ರಮಂದಿರಗಳಿಗೆ ಮಾತ್ರ 100% ಅವಕಾಶ ಕೊಟ್ಟಿರುವುದು ಓಲೈಕೆಯಲ್ಲದೆ ಮತ್ತೇನು ಅಲ್ಲʼʼ ಎಂದು ಹೇಳಿದ್ದಾರೆ.

ಚಿತ್ರಮಂದಿರಕ್ಕೊಂದು ನ್ಯಾಯ, ಹೋಟೆಲ್ ಉದ್ಯಮಕ್ಕೊಂದು ನ್ಯಾಯ
ಸರ್ಕಾರದ ಲೆಕ್ಕದಲ್ಲಿ ಕೊರೋನಾ ಹರಡುವುದು ಹೋಟೆಲ್, ಬಾರ್, ಪಬ್ ಗಳಲ್ಲಿ ಮಾತ್ರ ಎಂಬಂತಾಗಿದೆ. ಯಾಕೆಂದರೆ, ಹೋಟೆಲ್, ರೆಸ್ಟೋರೆಂಟ್‌ಗಳಿಗಿಂತ ಹೆಚ್ಚಾಗಿ ಜನ ಸೇರುವ ಚಿತ್ರಮಂದಿರಗಳಿಗೆ ಯಾವುದೇ ನಿರ್ಬಂಧ ಹೇರದೆ ಮುಕ್ತ ಅವಕಾಶ ಕೊಡಲಾಗಿದೆ. ಇದು ಸರ್ಕಾರದ ದ್ವಿಮುಖ ಧೋರಣೆ ನಡೆ. ಈ ಮೂಲಕ ಸರ್ಕಾರ ಹೇಳ ಹೊರಟಿರುವುದ ಬಹಳ ಸ್ಪಷ್ಟವಾಗಿ ಕಾಣುತ್ತಿದೆ. ಮತ್ತೊಂದು ಕಡೆಯಿಂದ ಈ ಮೂಲಕ ಸರ್ಕಾರ ಪರ್ಸಂಟೇಜ್ ಗೆ ಇಳಿದಿದ್ಯಾ ಎನ್ನುವ ಸಂಶಯವಿದೆ. ಈಗಾಗಲೇ ಬಿಜೆಪಿ ಸರ್ಕಾರದ ಸಚಿವರು, ನಾಯಕರ ಮೇಲೇ ಪರ್ಸಂಟೇಜ್ ಆರೋಪವಿದ್ದು ಈ ಕೊರೋನಾ ನಿಯಮಾವಳಿಯನ್ನು ಮುಂದಿಟ್ಟುಕೊಂಡೂ ದುಡ್ಡು ಮಾಡಲು ಹೊರಟಿದ್ದಾರೆ ಎಂಬ ಮಾತು ಜನರಲ್ಲಿದೆ.
ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಕೊರೋನಾ ಹಗರಣ ನಡೆದಿದೆ ಎಂದು ವಿರೋಧ ಪಕ್ಷಗಳು ಬಿಜೆಪಿ ಸರ್ಕಾರ ಮೇಲೆ ಗಂಭೀರ ಆರೋಪ ಮಾಡಿದ್ದವು. ಪಿಪಿಇ ಕಿಟ್, ಕೊರೋನಾ ಔಷಧ, ಇತರೆ ಕೊರೋನಾ ವಸ್ತುಗಳಲ್ಲಿಯೂ ಕೋಟಿ ಕೋಟಿ ಲೆಕ್ಕದ ಹಣ ಬಿಜೆಪಿ ಸಚಿವರು ಜೇಬಿಗೆ ಇಳಿಸಿಕೊಂಡಿದ್ದಾರೆ ಎಂದು ಸ್ವತಃ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಆರೋಪಿಸಿದ್ದರು. ಈಗ ಮತ್ತೆ ಕೊರೋನಾ ತಡೆಗಟ್ಟಲು ರೂಪಿಸಿರುವ ನಿಯಮಾವಳಿಯಲ್ಲೂ ಒಂದು ಕ್ಷೇತ್ರಕ್ಕೆ ಮುಕ್ತ ಅವಕಾಶ ಮತ್ತೊಂದು ಕ್ಷೇತ್ರಕ್ಕೆ ನಿರ್ಬಂಧ ಮಾಡಿರುವುದು ಕೂಡ ಹಲವು ಗುಮಾನಿಗಳಿಗೆ ಕಾರಣವಾಗಿದೆ. ಸರ್ಕಾರ ಈ ನಡೆ ನೋಡಿದರೆ, ಕೊರೋನಾ ಹರಡುವುದು ಹೋಟೆಲ್‌ಗಳಲ್ಲಿ ಮಾತ್ರ ಚಿತ್ರಮಂದಿರಗಳಲ್ಲಿ ಅಲ್ಲ ಎನ್ನುವಂತಿದೆ. ಎಲ್ಲವೂ ಏಕ ರೂಪಕ್ಕೆ ತಿರುಗಿಸಲು ಪ್ರಯತ್ನಿಸುವ ಬಿಜೆಪಿ ಹೀಗೆ ತಮಗೆ ಬೇಕಾದ ಹಾಗೆ ಕಾನೂನುಗಳನ್ನು ರೂಪಿಸುವುದು ಅವರ ಹಿಟ್ಲರ್ ಮನಸ್ಥಿತಿಗೆ ಹಿಡಿದಿರುವ ಕೈಗನ್ನಡಿ.






