ರೈತ ಕುಟುಂಬದ, ಪ್ರಿವಿಲೇಜ್ ಇರುವ ಜಾತಿಯ ಹಿನ್ನೆಲೆಯಿಂದ ಬಂದಿರುವ ಡಾ. ಕಿರಣ್ ಪ್ರಸಾದ್ ಅವರು ಕಳೆದ ಮೂವತ್ತು ವರ್ಷಗಳಿಂದ ಜೀತ ನಿರ್ಮೂಲನೆಗಾಗಿ ಶ್ರಮಿಸುತ್ತಿರುವುದು ಒಂದು ಅಧ್ಯಯನಯೋಗ್ಯ ಕಥನ. ಮೂಲತಃ ಉಡುಪಿ ಜಿಲ್ಲೆಯ ಕಿರಣ್ ಪ್ರಸಾದ್ ಸಣ್ಣಂದಿನಿಂದಲೇ ತಮ್ಮ ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಹಾಗಾಗಿ ಅವರ ಬದುಕಿನ ಸಂಕಷ್ಟ, ನೋವು ಕಿರಣ್ ಅವರಿಗೆ ಬಹುಬೇಗ ಅರ್ಥವಾಗುತ್ತದೆ.
1986 ರಲ್ಲಿ ಕಾಲೇಜಿನಿಂದ ಪದವಿ ಪಡೆದು ಜೀತ ಕಾರ್ಮಿಕರ ಪರ ಕೆಲಸ ಮಾಡಲು ಇಳಿದಾಗ ಪ್ರಸಾದ್ ಅವರಿಗೆ ಕೇವಲ ಇಪ್ಪತ್ತು ವರ್ಷ. ಅಲ್ಲಿಂದ ಇಲ್ಲಿಯವರೆಗೆ ಅವರು ಕ್ರಮಿಸಿದ ದೂರ ಅಪಾರ. 1986ರಲ್ಲಿ ನಡೆದ ಚುನಾವಣೆಯಲ್ಲಿ ದಲಿತರ ಬದುಕಿಗೆ ಪೂರಕವಾಗುವಂತೆ ಮತದಾನ ಮಾಡಲು ಪ್ರೇರೇಪಿಸುವ ಜಾಗೃತಿಯ ಮೂಲಕ ಅವರ ಹೋರಾಟದ ಬದುಕು ಪ್ರಾರಂಭವಾಯಿತು. ಆನಂತರ ದಲಿತರ ಮಕ್ಕಳನ್ನು ಶಾಲೆಗೆ ಸೇರಿಸುವ ನಿರ್ಣಾಯಕ ಹೋರಾಟವನ್ನೂ ಕೈಗೊಂಡರು.
ಈ ಬಗ್ಗೆ ಮಾತನಾಡಿರುವ ಅವರು “ನಾನು ರೈತರ ಕುಟುಂಬದಿಂದ ಬಂದವನು ಮತ್ತು ಉಡುಪಿ ಜಿಲ್ಲೆಯ ನಮ್ಮ ಜಮೀನಿನಲ್ಲಿ ನಮಗಾಗಿ ಕೂಲಿ ಕೆಲಸ ಮಾಡುತ್ತಿದ್ದ ಪ್ರತಿಯೊಬ್ಬರ ವೈಯಕ್ತಿಕ ಮತ್ತು ಆರ್ಥಿಕ ಸಮಸ್ಯೆಗಳ ಬಗ್ಗೆ ನನಗೆ ಅರಿವಿತ್ತು. ಶಿಕ್ಷಣವು ಬಡತನವನ್ನು ತೊಡೆದುಹಾಕಲು ಒಂದು ಮಾರ್ಗವಾಗಿದೆ ಎಂದು ನನಗೆ ತಿಳಿದಿತ್ತು. ಹಾಗಾಗಿ ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಾನು ಮಾನವಶಾಸ್ತ್ರವನ್ನು ಅಧ್ಯಯನ ಮಾಡಿದೆ” ಎನ್ನುತ್ತಾರೆ.
ಮಾನವಶಾಸ್ತ್ರದಲ್ಲಿ ಪಿಎಚ್ಡಿ ಮಾಡಿರುವ ಅವರು ಜೀತದಾಳುಗಳ ಪುನರ್ವಸತಿ ಮಾಡಲು, ಅವರ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮೂಡಿಸಲು, ಪ್ರಬಲರ ವಿರುದ್ಧ ಹೋರಾಡಲು ಕಾನೂನು ಮಾರ್ಗಕ್ಕೆ ತೆರೆದುಕೊಂಡರು. ಇದು ಅವರಿಗೆ ನ್ಯಾಯ ನಿರ್ಣಯದಲ್ಲಿನ ಇನ್ನಷ್ಟು ವಿವರಗಳನ್ನು ತಿಳಿಯು ರಹದಾರಿಯಾಯಿತು.
70ರ ದಶಕದಲ್ಲೇ ಜೀತ ಪದ್ಧತಿಯನ್ನು ಅಧಿಕೃತವಾಗಿ ಭಾರತದಲ್ಲಿ ನಿಷೇಧಿಸಲಾಗಿತ್ತು. ಆದರೆ ದೇಶದ ಹಳ್ಳಿಗಳಲ್ಲಿ ಅದು ಇನ್ನೂ ಜೀವಂತವಾಗಿತ್ತು. ಹಲವು ಕುಟುಂಬಗಳು ಸಾಲದ ಕಾರಣದಿಂದ ತಲೆಮಾರುಗಳವರೆಗೆ ಗುಲಾಮರಾಗಿರುವುದು ಅವರಿಗೆ ಕಂಡುಬಂತು ಮತ್ತು ಕೆಲವು ಜನರು ತಮ್ಮ ಜಾತಿಯ ಕಾರಣದಿಂದಾಗಿ ಇದಕ್ಕೆ ಒಳಗಾಗುವ ಸಂದರ್ಭಗಳೂ ಸಹ ಅವರಿಗೆ ಗೋಚರಿಸಿತು.
“ನಾನು ಬಡವರ ಜೀವನ ಪರಿಸ್ಥಿತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವಾಗ, ಜೀತದಾಳುಗಳ ಸಮಸ್ಯೆಯು ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟು ಆಳವಾಗಿ ವ್ಯಾಪಿಸಿದೆ ಎಂಬುದನ್ನು ಅರಿತೆ. ಈ ಪದ್ದತಿಯನ್ನು 1970 ರ ದಶಕದಲ್ಲಿ ಅಧಿಕೃತವಾಗಿ ರದ್ದುಗೊಳಿಸಲಾಗಿತ್ತು. ನಾನು ಅಧ್ಯಯನ ಮಾಡುವಾಗ ಜೀತದಾಳುಗಳ ಬಗ್ಗೆ ಕಲಿತಿದ್ದೆ, ಆದರೆ ಅದನ್ನು ನೇರವಾಗಿ ನೋಡುವುದು ಒಂದು ಭಯಾನಕ ಅನುಭವ” ಎಂದು ಅವರು ‘ದಿ ಬೆಟರ್ ಇಂಡಿಯನ್’ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

“ಗೋಪಾಲ್ ಎಂಬ ವ್ಯಕ್ತಿಯನ್ನು ಚಿಕ್ಕ ವಯಸ್ಸಿನಿಂದಲೇ ಜೀತ ಮಾಡುವಂತೆ ಒತ್ತಾಯಿಸಲಾಗಿತ್ತು ಮತ್ತು ಆತ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕಿತ್ತು. ಅವನು ತನ್ನ ಉದ್ಯೋಗದಾತರಿಂದ ದೈಹಿಕ ಕಿರುಕುಳಕ್ಕೆ ಒಳಗಾಗುತ್ತಿದ್ದನು ಮತ್ತು ಹಸಿದಾಗ ಎಲೆಗಳನ್ನು ತಿನ್ನಲು ಒದಗಿಸಲಾಗುತ್ತುತ್ತಿತ್ತು. ಇದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಇತರ ಪ್ರತಿಯೊಬ್ಬ ಕಾರ್ಮಿಕರ ಕಥೆಯಾಗಿದೆ. ಕೆಲವರನ್ನು ಸರಪಳಿಯಿಂದ ಬಂಧಿಸಲಾಗಿತ್ತು, ಕೆಲವರಿಗೆ ಜಮೀನಿನಿಂದ ಹೊರಗೆ ಕಾಲಿಡಲು ಅವಕಾಶವಿರಲಿಲ್ಲ, ಮತ್ತು ಕೆಲವರಿಗೆ ಪರ್ಯಾಯ ಕೆಲಸ ಮಾಡಲು ಅವಕಾಶವಿರಲಿಲ್ಲ” ಎಂದು ಡಾ ಪ್ರಸಾದ್ ನೆನಪಿಸಿಕೊಳ್ಳುತ್ತಾರೆ.
ಶೋಷಕರು ದಲಿತರನ್ನು, ಬಡವರನ್ನು ಶೋಷಿಸುತ್ತಿದ್ದರು ಎನ್ನುವುದು ಒಂದು ಬದಿಯ ಕಥೆಯಾದರೆ ಇನ್ನೊಂದು ಬದಿಯಲ್ಲಿ ಶೋಷಿತರು ತಮ್ಮ ಹಕ್ಕುಗಳನ್ನು ಚಲಾಯಿಸಲು ಸಿದ್ಧರಿರಲಿಲ್ಲ. ಜಾತಿ ರಾಜಕಾರಣವು ಎಷ್ಟು ಆಳವಾಗಿ ಬೇರೂರಿತ್ತು ಎಂದರೆ ಅವರು ಹಳ್ಳಿಗರಿಂದ ಬಹಿಷ್ಕಾರಕ್ಕೆ ಒಳಗಾದರೆ ಎಂದು ಹೆದರುತ್ತಿದ್ದರು. ದಬ್ಬಾಳಿಕೆಗೆ ಒಳಗಾಗುವುದು ಅವರ ಸಂಪ್ರದಾಯದ ಭಾಗವಾಗಿದೆ ಎಂದು ಕೆಲವರು ತಿಳಿದುಕೊಂಡಿದ್ದರು.
ಹಾಗಾಗಿ ಬದಲಾವಣೆಯನ್ನು ತರಲು ಕೇವಲ ಜನಸಾಮಾನ್ಯರಿಗೆ ಶಿಕ್ಷಣ ನೀಡುವುದು ಸಾಕಾಗುವುದಿಲ್ಲ, ಆದ್ದರಿಂದ 1976 ರ ಜೀತ ನಿರ್ಮೂಲನೆ ಕಾಯಿದೆಯಲ್ಲಿ ಉಲ್ಲೇಖಿಸಲಾದ ಪ್ರತಿಯೊಂದು ಷರತ್ತುಗಳನ್ನು ಅರ್ಥಮಾಡಿಕೊಳ್ಳಲು ಡಾ ಪ್ರಸಾದ್ ನಿರ್ಧರಿಸಿದರು. ಕಾಯಿದೆಯ ಪ್ರಕಾರ, ಜೀತ ಪ್ರಕರಣಗಳಲ್ಲಿ ನ್ಯಾಯ ನಿರ್ಣಯದ ಅಧಿಕಾರವು ಜಿಲ್ಲಾ ಅಥವಾ ಉಪ-ಜಿಲ್ಲಾ ಮ್ಯಾಜಿಸ್ಟ್ರೇಟ್ (DM ಅಥವಾ SDM) ಬಳಿ ಇರುತ್ತದೆ, ಇದರರ್ಥ ದೂರುದಾರರು ನ್ಯಾಯವನ್ನು ಪಡೆಯಲು ನ್ಯಾಯಾಲಯಗಳಿಗೆ ಅಲೆಯಬೇಕಾಗಿರಲಿಲ್ಲ. ಸಾಮಾನ್ಯವಾಗಿ ನ್ಯಾಯಲಯಗಳಲ್ಲಿ ನ್ಯಾಯ ಪ್ರಕ್ರಿಯೆಯು ದೀರ್ಘ ಅವಧಿಯನ್ನು ತೆಗೆದುಕೊಳ್ಳುತ್ತದೆ. ಆದರೆ DM ಅಥವಾ SDM ಬಳಿ ಹೋದರೆ ಪ್ರಕರಣ ಬೇಗ ಮುಕ್ತಾಯವಾಗುತ್ತದೆ. ಮೇಲಾಗಿ ಅದಕ್ಕೆ ಪೂರಕ ಸಾಕ್ಷಿಗಳನ್ನು DM ಅಥವಾ SDM ತಾವೇ ಹುಡುಕಿಕೊಳ್ಳುತ್ತಿದ್ದರು. ಇದು ಅರ್ಥವಾದ ಮೇಲೆ ಅವರು ಹಲವು ಶೋಷಿತರಿಗೆ ಅರ್ಜಿ ಸಲ್ಲಿಸಲು, ನ್ಯಾಯ ಪಡೆಯಲು ಶೀಘ್ರವಾಗಿ ನೆರವಾಗುವಂತಾಯಿತು. ಅದಕ್ಕಾಗಿ ಮೇಲ್ಜಾತಿ ವರ್ಗಗಳಿಂದ ಬೆದರಿಕೆಗಳನ್ನೂ ಎದುರಿಸಬೇಕಾಯಿತು.
ಆದರೆ ಇದಕ್ಕೆ ಜಗ್ಗದ ಅವರು 1990 ರಲ್ಲಿ ಈ ಕಾರ್ಮಿಕರಿಗೆ ಸಹಾಯ ಮಾಡಲು ‘ಜೀವಿಕಾ’ ಎನ್ನುವ NGO ಅನ್ನು ಸ್ಥಾಪಿಸಿದರು. ಐದು ವರ್ಷಗಳ ನಂತರ 48 ತಾಲೂಕುಗಳಲ್ಲಿ ಈ ಸಂಸ್ಥೆಯ ಸಂಖ್ಯೆ 20,000 ಕ್ಕೆ ಏರಿತು. ಸುಮಾರು ಮೂರೂವರೆ ದಶಕಗಳಲ್ಲಿ ಡಾ ಪ್ರಸಾದ್ ಅವರು ರಕ್ಷಣೆ ಮತ್ತು ಪುನರ್ವಸತಿ ಮೂಲಕ 7,000 ಕ್ಕೂ ಹೆಚ್ಚು ಜನರಿಗೆ ಘನತೆಯ ಜೀವನವನ್ನು ನೀಡಿದ್ದಾರೆ. ಹೆಚ್ಚುವರಿಯಾಗಿ ಸುಮಾರು 30,000 ಜನರನ್ನು ಸರ್ಕಾರವು ಜೀತಕ್ಕಿದ್ದ ಕಾರ್ಮಿಕರೆಂದು ಗುರುತಿಸಿದೆ ಮತ್ತು ಪುನರ್ವಸತಿ ಪ್ರಕ್ರಿಯೆಯಲ್ಲಿದೆ. ಡಾ ಪ್ರಸಾದ್ ಅವರು ಕಂಡಂತೆ ಈ ಮೂವತ್ತು ವರ್ಷಗಳಲ್ಲಾದ ಪ್ರಮುಖ ಬದಲಾವಣೆಗಳೆಂದರೆ ಹಲವಾರು ತಾಲೂಕುಗಳಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಯಾವುದೇ ಪ್ರಕರಣಗಳಿಲ್ಲದೆ ಮುಚ್ಚಿರುವುದು.
“ನಾವು ಪ್ರಾರಂಭಿಸಿದಾಗ, ನಾವು 170 ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೆವು ಮತ್ತು ಇಂದು ನಮ್ಮ ಸಿಬ್ಬಂದಿ ಅವುಗಳಲ್ಲಿ ಕೇವಲ 20 ರಲ್ಲಿ ಸಕ್ರಿಯರಾಗಿದ್ದಾರೆ. ಇದು ಖಂಡಿತವಾಗಿಯೂ ಸಕಾರಾತ್ಮಕ ಬದಲಾವಣೆಯಾಗಿದೆ. ಆದರೆ ಆದರೆ 2021 ರಲ್ಲೂ 20 ತಾಲೂಕುಗಳಲ್ಲಿರುವುದು ಖಂಡಿತವಾಗಿಯೂ ದೊಡ್ಡ ಸಂಖ್ಯೆಯೇ ”ಎಂದು ಅವರು ಹೇಳುತ್ತಾರೆ.
ಇದೀಗ ತಮ್ಮ ಗಮನವನ್ನು ನಗರ ಪ್ರದೇಶದೆಡೆ ಹರಿಸಿರುವ ಡಾ ಪ್ರಸಾದ್ ಅವರು ನಗರ ಪ್ರದೇಶಗಳಲ್ಲಿನ ಶೋಷಿತರ ಪರ ಹೋರಾಡಲು ನಿರ್ಧರಿಸಿದ್ದಾರೆ. ಮುಂಗಡವಾಗಿ ಸಂಬಳ ನೀಡುವ ನೆಪದಲ್ಲಿ, ನಿರ್ಮಾಣ ಕ್ಷೇತ್ರಗಳಲ್ಲಿ, ಮಸಾಜ್ ಪಾರ್ಲರ್ಗಳಲ್ಲಿ ಮತ್ತು ಮಾಲ್ಗಳಲ್ಲಿ ಮಾಲೀಕರು ಹೆಚ್ಚಿನ ಗಂಟೆಗಳ ಕಾಲ ಕೆಲಸ ಮಾಡಲು ನೌಕರರನ್ನು ಒತ್ತಾಯಿಸುತ್ತಾರೆ. ಅಂತಹ ಕಳಪೆ ಕೆಲಸದ ಪರಿಸ್ಥಿತಿಗಳು ಮತ್ತು ಒತ್ತಾಯವೂ ಸಹ ಈ ಕಾಯಿದೆಯ ಅಡಿಯಲ್ಲಿ ಬರುವುದರಿಂದ ಅಂತಹವುಗಳ ವಿರುದ್ಧ ಹೋರಾಟ ಸಂಘಟಿಸಲಾಗುವುದು ಎಂದು ಆಶಾಭಾವ ವ್ಯಕ್ತಪಡಿಸುತ್ತಾರೆ ಡಾ. ಕಿರಣ್ ಪ್ರಸಾದ್.