ಜಾತಿ ಮತ್ತು ಧರ್ಮದ ಮೂಲಕ ರಾಜಕೀಯವನ್ನು ನೋಡುವವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದಡಿ ನಡೆದ ಉತ್ತರ ಪ್ರದೇಶದ ಅಭಿವೃದ್ಧಿಯನ್ನು ಇಷ್ಟಪಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಇಂದು ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಡಬಲ್ ಎಂಜಿನ್, ಡಬಲ್ ಪವರ್ ಬಗ್ಗೆಯಾಗಲಿ, ಕಾಶಿ ಹಾಗೂ ಉತ್ತರ ಪ್ರದೇಶದ ಅಭಿವೃದ್ಧಿಯ ಬಗ್ಗೆಯಾಗಲಿ ನಾನು ಮಾತನಾಡಿದರೆ ಕೆಲವರಿಗೆ ಅಸಮಾಧಾನವಾಗುತ್ತದೆ. ಇವರೆಲ್ಲ ಉತ್ತರ ಪ್ರದೇಶದ ರಾಜಕೀಯವನ್ನು ಕೇವಲ ಜಾತಿ, ಧರ್ಮ ಮೂಲಕ ನೋಡುತ್ತಿದ್ದು, ಅವರೆಲ್ಲ ರಾಜ್ಯದ ಅಭಿವೃದ್ಧಿ ಬಯಸುವುದಿಲ್ಲ ಎಂದು ಪರೋಕ್ಷವಾಗಿ ಪ್ರತಿಪಕ್ಷಗಳನ್ನು ಉತ್ತರಿಸಿದ್ದಾರೆ.
ಇಲ್ಲಿ ಜನರು ಯುಪಿ ಅಭಿವೃದ್ಧಿ ಹೊಂದಬೇಕು, ಯುಪಿ ಆಧುನಿಕತೆಯಲ್ಲಿ ಮಹತ್ತರ ಗುರುತನ್ನು ಸಾಧಿಸಬೇಕು. ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ರಸ್ತೆಗಳು, ನೀರು, ವಿದ್ಯುತ್, ಬಡವರಿಗೆ ಮನೆಗಳು, ಗ್ಯಾಸ್ ಸಂಪರ್ಕಗಳು, ಶೌಚಾಲಯಗಳು ಇವೆಲ್ಲ ಅಭಿವೃದ್ಧಿ ಸಂಗತಿಗಳು. ಆದರೆ, ಇಂಥವುಗಳನ್ನು ಅವರು ಅಭಿವೃದ್ಧಿ ಎಂದು ಪರಿಗಣಿಸುವುದಿಲ್ಲ ಎಂದರು.

ಇದೇ ವೇಳೆ ಹಿಂದಿನ ರಾಜ್ಯ ಸರ್ಕಾರಗಳ ವಿರುದ್ಧವು ಹರಿಹಾಯ್ದ ಮೋದಿ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಇವೆಲ್ಲ ಅವರ ಪಠ್ಯಕ್ರಮದಿಂದ ದೂರ ಇವೆ. ಏನಿದ್ದರೂ ಅವರ ಪಠ್ಯಕ್ರಮದಲ್ಲಿ ಮಾಫಿಯಾ, ಕುಟುಂಬ ರಾಜಕಾರಣ, ಹಾಗೂ ಜಮೀನು ಅಕ್ರಮ ಕಬಳಿಕೆಯೇ ಅವರಲ್ಲಿದೆ ಎಂದು ಕುಟುಕಿದರು.
ಉತ್ತರ ಪ್ರದೇಶದ ಜನರು ಈ ಹಿಂದೆ ಏನನ್ನು ಪಡೆದರು ಮತ್ತು ಈಗ ನಮ್ಮ ಸರ್ಕಾರದಿಂದ ಏನನ್ನು ಪಡೆಯುತ್ತಿದ್ದಾರೆ ಎಂಬುದರ ಬಗ್ಗೆ ವ್ಯತ್ಯಾಸ ಸ್ಪಷ್ಟವಾಗಿದೆ. ನಾವು ಯುಪಿಯ ಪರಂಪರೆ ಹೆಚ್ಚಿಸುತ್ತಿದ್ದೇವೆ ಹಾಗೂ ಯುಪಿಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿಗೆ ಈ ಬಾರಿ ಅಧಿಕಾರ ಉಳಿಸಿಕೊಳ್ಳುವುದು ನಿರ್ಣಾಯಕವಾಗಿವುದರಿಂದ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಮೋದಿ ಅವರಿಂದ ಇಂಥ ಮಾತುಗಳು ಬಂದಿರುವುದನ್ನು ಗಮನಿಸಬಹುದು.