ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳ ವಿರುದ್ಧ ಶೀಘ್ರವೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಕಾನೂನು ಸುವ್ಯವಸ್ಥೆಗೆ ಉದ್ದೇಶಪೂರ್ವಕವಾಗಿ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಈಗಾಗಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಸೂಚಿಸಿದ್ದೇನೆ. ಈಗಾಗಲೇ ಘಟನೆಯ ಸಂಬಂಧ ಕೆಲವರನ್ನು ಬಂಧಿಸಲಾಗಿದ್ದು, ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರಿ ಆಸ್ತಿಪಾಸ್ತಿ ಹಾನಿ ಮಾಡಿದ, ಪೊಲೀಸ್ ವಾಹನ ಜಖಂ ಮಾಡಿದವರನ್ನು ಈಗಾಗಲೇ ಬಂಧಿಸಲಾಗಿದೆ. ರಾಷ್ಟ್ರ ಭಕ್ತರ ಪ್ರತಿಮೆಗಳಿಗೆ ಅಪಮಾನ ಮಾಡುವ ಪ್ರವೃತ್ತಿ ಸಹಿಸುವುದಿಲ್ಲ. ರಾಷ್ಟ್ರ ಭಕ್ತರ ಪ್ರತಿಮೆಗಳನ್ನು ಧ್ವಂಸ ಮಾಡುವುದು ಶಿಕ್ಷಾರ್ಹ ಅಪರಾಧ. ನಾಡಿನ ಹಿರಿಯ, ದೇಶಭಕ್ತರ ಗೌರವ ಉಳಿಸುವ ಕೆಲಸ ನಾವು ಮಾಡಬೇಕು ಅವರಿಗೆ ಅಪಮಾನ ಮಾಡುವುದು ಸಮಾಜಕ್ಕೆ ಶೋಭೆ ತರುವುದಿಲ್ಲ. ಇಂತಹ ಕೃತ್ಯಗಳು ಮರುಕಳಿಸದಂತೆ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕಠಿಣ ಕ್ರಮವನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ದೇಶ ಭಕ್ತರ ಪ್ರತಿಮೆಗಳನ್ನು ಭಗ್ನಗೊಳಿಸಿರುವುದನ್ನು ಸಹಿಸಲು ಸಾಧ್ಯವಿಲ್ಲ. ಪ್ರತಿಮೆಗಳನ್ನು ಸ್ಥಾಪಿಸಿರುವುದು ಅವರಿಗೆ ಗೌರವ ಸೂಚಿಸುವುದಕ್ಕಾಗಿಯೇ ಹೊರತು ಅವರುಗಳ, ಹೆಸರಿನಲ್ಲಿ ಸಮಾಜದ ಶಾಂತಿ ಕದಡಲು ಅಲ್ಲ. ಕೆಲವು ದುಷ್ಟರು ಇಂತಹ ಕೆಲಸದಲ್ಲಿ ತೊಡಗಿದ್ದಾರೆ. ಅಂತಹ ದುಷ್ಟರನ್ನು ಆದಷ್ಟು ಬೇಗ ಹಿಡಿಯಲಾಗುವುದು ಎಂದರು.

ಈ ಘಟನೆಯ ಮುಖ್ಯ ಉದ್ದೇಶ ಅಧಿವೇಶನವನ್ನು ಅಡ್ಡಿಪಡಿಸುವುದು. ಮಾತ್ರವಲ್ಲ ಇದರ ಹಿಂದೆ ಬೇರೆಯದೆ ಉದ್ದೇಶ ಇದೆ. ತನಿಖೆಯ ನಂತರ ಎಲ್ಲಾ ವಿಚಾರ ಗೊತ್ತಾಗಲಿದೆ. ನಾವು ಇಂತಹ ಪುಂಡರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.