ರಾಮಚಂದ್ರಾಪುರ ಮಠದ ಸ್ವಾಮಿ ವಿರುದ್ಧದ ಸರಣಿ ಅತ್ಯಾಚಾರ ಆರೋಪ ಪ್ರಕರಣಗಳು ಮತ್ತೆ ಚರ್ಚೆಗೆ ಬಂದಿವೆ. ಅದರಲ್ಲೂ ಮುಖ್ಯವಾಗಿ ಬಹುಶಃ ಭಾರತೀಯ ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪ ಎನ್ನಬಹುದಾದ ಮಟ್ಟಿಗೆ ಸ್ವಾಮಿ ವಿರುದ್ಧದ ವಿವಿಧ ಪ್ರಕರಣಗಳ ವಿಚಾರಣೆಯಿಂದ ಸಾಲು ಸಾಲು ನ್ಯಾಯಾಧೀಶರು ಹಿಂದೆ ಸರಿಯುತ್ತಿರುವುದರ ಹಿಂದಿನ ರಹಸ್ಯದ ಬಗ್ಗೆ ಚರ್ಚೆ ಶುರುವಾಗಿದೆ.
ರಾಮಚಂದ್ರಾಪುರ ಮಠದ ರಾಘವೇವೇಶ್ವರ ಭಾರತಿ ಸ್ವಾಮಿ ವಿರುದ್ಧದ ಪ್ರಕರಣಗಳ ವಿಚಾರಣೆಯಿಂದ ನ್ಯಾಯಾಧೀಶರು ಹಿಂದೆ ಸರಿಯುತ್ತಿರುವ ಆಘಾತಕಾರಿ ಪರಂಪರೆಯ ಹಿನ್ನೆಲೆಯಲ್ಲಿ ಪ್ರಭಾವಿ ಡಿಜಿಟಲ್ ಸುದ್ದಿ ಮಾಧ್ಯಮ ‘ದ ನ್ಯೂಸ್ ಮಿನಿಟ್’ ವಿಶೇಷ ವರದಿಯೊಂದನ್ನು ಪ್ರಕಟಿಸಿದೆ.
ಕನ್ನಡದ ಓದುಗರಿಗಾಗಿ ಆ ವರದಿಯನ್ನು ಸಾರಾಂಶರೂಪದಲ್ಲಿ ಇಲ್ಲಿ ನೀಡಲಾಗಿದೆ.
ಮೊದಲ ನ್ಯಾಯಮೂರ್ತಿ ಹಿಂದೆ ಸರಿದಿದ್ದು ಯಾಕೆ?
ರಾಘವೇಶ್ವರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣಗಳ ವಿಚಾರಣೆಯ ನಡುವೆಯೇ ನ್ಯಾಯಮೂರ್ತಿಗಳು ದಿಢೀರನೇ ಹಿಂದಿ ಸರಿಯುವ ಸಂಪ್ರದಾಯ ಆರಂಭವಾಗಿದ್ದು ನ್ಯಾ. ಫಣೀಂದ್ರ ಅವರಿಂದ. 2014ರಲ್ಲಿ ಪ್ರಕರಣ ನ್ಯಾ. ಫಣೀಂದ್ರ ಅವರ ಪೀಠದ ಮುಂದೆ ಬಂದಾಗ, ಏಕ ಕಾಲಕ್ಕೆ ಎರಡು ಬೆಳವಣಿಗೆಗಳು ನಡೆಯುತ್ತಿದ್ದವು. ಮೊದಲನೆಯದು, ಗೀತಾ ಅವರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದ ವಿಚಾರಣೆ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಅದೇ ಹೊತ್ತಿಗೆ ತಮ್ಮ ವಿರುದ್ಧದ ಪ್ರಕರಣದ ರದ್ದತಿಗೆ ಕೋರಿ ರಾಘವೇಶ್ವರ ಸ್ವಾಮಿ ರಾಜ್ಯ ಹೈಕೋರ್ಟಿನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಈ ನಡುವೆ ಪ್ರಕರಣ ರದ್ದು ಕೋರಿ ರಾಘವೇಶ್ವರ ಸ್ವಾಮಿ ಸಲ್ಲಿಸಿದ್ದ ಮೊದಲ ಅರ್ಜಿಯನ್ನು ತಿರಸ್ಕರಿಸಿದ್ದ ನ್ಯಾ. ಫಣೀಂದ್ರ ಅವರ ಮುಂದೆಯೇ ಎರಡನೇ ಅರ್ಜಿಯೂ ವಿಚಾರಣೆಗೆ ಬಂದಿತ್ತು. ಎರಡನೇ ಅರ್ಜಿಯ ವಿಚಾರಣೆಯ ಹಂತದಲ್ಲಿ ಸ್ವಾಮಿಯ ಪರ ವಕೀಲರು, ಸಂತ್ರಸ್ತೆ ರಾಷ್ಟ್ರಪತಿಗಳಿಗೆ 2014ರ ಅಕ್ಟೋಬರ್ 6ರಂದು ಒಂದು ಪ್ರಕರಣದ ಕುರಿತು ಪತ್ರ ಬರೆದು, ಆರೋಪಿಯ ವಿರುದ್ಧ ನ್ಯಾಯಯುತ ವಿಚಾರಣೆ ನಡೆಯುವಂತೆ ಕೋರಿರುವ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದ ಗೀತಾ, ತನ್ನ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಯ ವಿಳಂಬದ ಬಗ್ಗೆ ಪ್ರಸ್ತಾಪಿಸಿ, ಆರೋಪಿಯ ವಿರುದ್ಧ ಯಾವುದೇ ಕ್ರಮ ಜರುಗಿಸದ ಬಗ್ಗೆ ಗಮನ ಸೆಳೆದಿದ್ದರು. ತಾವು ನೀಡಿದ ಅತ್ಯಾಚಾರ ದೂರಿನ ಕುರಿತು ಪೊಲೀಸರು ಯಾವುದೇ ತನಿಖೆಗೆ ಮುಂದಾಗಿಲ್ಲ. ಆರೋಪಿ ಸ್ವಾಮಿ ತಮ್ಮ ಬಂಧನಕ್ಕೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಬಂಧನ ಕೂಡ ಆಗಿಲ್ಲ ಎಂಬುದನ್ನು ಆ ಪತ್ರದಲ್ಲಿ ಪ್ರಸ್ತಾಪಿಸಿದ್ದರು. ಕೈಗೊಂಡಿಲ್ಲ. ಸ್ವಾಮಿಯ ಬೆಂಬಲಿಗರು ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ತನ್ನ ಬಾವ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದನ್ನೂ ಆ ಪತ್ರದಲ್ಲಿ ಪ್ರಸ್ತಾಪಿಸಲಾಗಿತ್ತು(ಆ ಆತ್ಮಹತ್ಯೆ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ). ಹಾಗೇ ಸ್ವಾಮಿ, ತನ್ನ ಪ್ರಭಾವ ಬಳಸಿ, ತನ್ನ ಕೃತ್ಯಗಳು ತಪ್ಪಲ್ಲ, ಅದು “ಶ್ರೀರಾಮನ ಇಚ್ಛೆಯಂತೆಯೇ ನಡೆದ ಕ್ರಿಯೆ” ಎಂದು ಇಡೀ ಹವ್ಯಕ ಬ್ರಾಹ್ಮಣ ಸಮುದಾಯವನ್ನೇ ನಂಬಿಸಿರುವುದಾಗಿಯೂ ಹೇಳಿದ್ದರು.
“ಸ್ವಾಮಿಯ ವಕೀಲರು ಆ ಪತ್ರವನ್ನೇ ಆಧಾರವಾಗಿಟ್ಟುಕೊಂಡು ಸಂತ್ರಸ್ತೆಗೆ ನ್ಯಾಯಾಲಯದ ಮೇಲೆ ವಿಶ್ವಾಸವೇ ಇಲ್ಲ” ಎಂದು ವಾದಿಸಿದರು ಎಂದು ಗೀತಾ ಅವರ ಪತಿ ದ ನ್ಯೂಸ್ ಮಿನಿಟ್(ಟಿಎನ್ ಎಂ)ಗೆ ಹೇಳಿದರು. ಆ ವಾದದ ಹಿನ್ನೆಲೆಯಲ್ಲಿ, “ನ್ಯಾಯಾಲಯದ ಬಗ್ಗೆ ಪ್ರಕರಣದ ಒಂದು ಪಾರ್ಟಿಗೆ ನಂಬಿಕೆ ಇಲ್ಲ ಎಂದಾದರೆ ಪ್ರಕರಣದ ವಿಚಾರಣೆ ನಡೆಸುವುದು ನನ್ನ ದೃಷ್ಟಿಯಿಂದ ಸಮಂಜಸವಲ್ಲ” ಎಂದು ನ್ಯಾ. ಫಣೀಂದ್ರ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದರು.
“ರಾಷ್ಟ್ರಪತಿಗಳಿಗೆ ಬರೆದ ಆ ಪತ್ರ ಅದಾಗಲೇ ನ್ಯಾಯಾಲಯದ ದಾಖಲೆಯ ಭಾಗವಾಗಿದ್ದರೂ, ನಾವು ಅಷ್ಟರಲ್ಲಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದಾಖಲೆಗಳಲ್ಲಿ ಆ ಪತ್ರವನ್ನು ಅಡಕ ಮಾಡಿದ್ದರೂ, ವಿಚಾರಣೆಯ ವೇಳೆ ಹೀಗಾಯಿತು..” ಎಂದು ಗೀತಾ ಅವರ ಪತಿ ವಿವರಿಸಿದರು.
ಹಿಂದೆ ಸರಿಯುವ ಸರಣಿ..
ನ್ಯಾ. ಫಣೀಂದ್ರ ಅವರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಬಳಿಕ ಪ್ರಕರಣ ವಿಚಾರಣೆಗೆ ನ್ಯಾ. ರಾಮ್ ಮೋಹನ್ ರೆಡ್ಡಿ ಅವರ ಮುಂದೆ ಹೋಯಿತು. ಅವರು ಕೂಡ 2015ರ ಜನವರಿ 6ರಂದು ವಿಚಾರಣೆಯಿಂದ ಹಿಂದೆ ಸರಿದರು. “ಬೆಳಗಿನ ಕಲಾಪದಲ್ಲಿ ಈ ಪ್ರಕರಣದ ಕುರಿತು ಸಾಕಷ್ಟು ದೀರ್ಘ ವಿಚಾರಣೆ ನಡೆದಿದ್ದರೂ, ಈ ಮೇಲ್ಮನವಿ ವಿಚಾರಣೆಯಿಂದ ನಾನು ಹಿಂದೆ ಸರಿಯುತ್ತಿದ್ದೇನೆ. ನಾನು ಭಾಗಿಯಾಗಿರದ ಮತ್ತಾವುದೇ ಪೀಠ ಈ ಮೇಲ್ಮನವಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಬಹುದು” ಎಂದು ನ್ಯಾ. ರೆಡ್ಡಿ ಮತ್ತು ಮುಖ್ಯನ್ಯಾಯಮೂರ್ತಿ ಡಿ ಎಚ್ ವಘೇಲಾ ಅವರ ಪೀಠ ಅಭಿಪ್ರಾಯಪಟ್ಟಿತ್ತು.
ಅದಾಗಿ ಒಂಭತ್ತು ದಿನಗಳ ಬಳಿಕ, ಜನವರಿ 14ರಂದು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ದಿವಂಗತ ನ್ಯಾ. ಮೋಹನ್ ಶಾಂತನಗೌಡರ್ ಘೋಷಿಸಿದರು. ಸಾಮಾನ್ಯವಾಗಿ ಹೀಗೆ ವಿಚಾರಣೆಯಿಂದ ಹಿಂದೆ ಸರಿಯುವಾಗ ನ್ಯಾಯಾಧೀಶರು ಯಾವುದೇ ನಿರ್ದಿಷ್ಟ ಕಾರಣ ನೀಡುವುದಿಲ್ಲ. ಹಾಗೇ ನಿಷ್ಪಕ್ಷಪಾತ ವಿಚಾರಣೆ ಮತ್ತು ತೀರ್ಪಿನ ಉದ್ದೇಶದಿಂದ ತೆಗೆದುಕೊಳ್ಳುವ ವಿಚಾರಣೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಅಷ್ಟೇ ಮುಕ್ತವಾಗಿ ಸ್ವಾಗತಿಸಲಾಗುತ್ತದೆ ಕೂಡ.
ನ್ಯಾ. ಶಾಂತನಗೌಡರ್ ಹಿಂದೆ ಸರಿದ ಐದು ದಿನಗಳ ಬಳಿಕ ಜನವರಿ 19ರಂದು ನ್ಯಾ.ಎನ್ ಕುಮಾರ್ ಅವರು ಕೂಡ ಆ ಪ್ರಕರಣದ ವಿಚಾರಣೆಯಿಂದ ತಾವು ಹಿಂದೆ ಸರಿಯುವುದಾಗಿ ಘೋಷಿಸಿದರು. ಅವರು ತಮ್ಮ ಆ ನಿರ್ಧಾರಕ್ಕೆ ಯಾವುದೇ ಕಾರಣ ನೀಡಿರಲಿಲ್ಲ. ಆದರೆ, ಸಂತ್ರಸ್ತೆಯ ಪತಿ ಟಿಎನ್ ಎಂ ಗೆ ನೀಡಿದ ಮಾಹಿತಿ ಪ್ರಕಾರ, ಆ ನ್ಯಾಯಾಧೀಶರ ಮಗಳು ಸಂತ್ರಸ್ತೆಯ ಮಗಳ ಸಹಪಾಠಿ ಎಂಬ ಬಗ್ಗೆ ಪ್ರಕಟವಾಗಿದ್ದ ‘ಕನ್ನಡಪ್ರಭ’ ಪತ್ರಿಕೆಯ ವರದಿಯನ್ನು ಪ್ರಸ್ತಾಪಿಸಿ ಸ್ವಾಮಿಯ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.
ಎರಡು ದಿನಗಳ ಬಳಿಕ, ಪ್ರಕರಣದಿಂದ ಹಿಂದೆ ಸರಿದ ಸರಣಿಯಲ್ಲಿ ಐದನೆಯವರಾಗಿ ನ್ಯಾ. ಎಚ್ ಜಿ ರಮೇಶ್ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದರು. ಸ್ವಾಮಿಯ ಪರ ವಕೀಲರಾದ ಬಿ ವಿ ಆಚಾರ್ಯ ಅವರ ಜೊತೆ ತಾವು ಈ ಹಿಂದೆ ಕಿರಿಯ ವಕೀಲರಾಗಿ ಕೆಲಸ ಮಾಡಿದ್ದರಿಂದ, ಪ್ರಕರಣದಲ್ಲಿ ಹಿತಾಸಕ್ತಿಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ ಎಂಬುದು ನ್ಯಾಯಮೂರ್ತಿಗಳು ತಮ್ಮ ನಿಲುವಿಗೆ ನೀಡಿದ ಸಮರ್ಥನೆ. ಆ ದ್ವಿಸದಸ್ಯ ಪೀಠದ ಮತ್ತೊಬ್ಬ ನ್ಯಾಯಮೂರ್ತಿಯಾದ ಪಿ ಬಿ ಭಜಂತ್ರಿ ಅವರು ಕೂಡ ಅದೇ ದಿನ ವಿಚಾರಣೆಯಿಂದ ಹಿಂದೆ ಸರಿದರು. ಪೀಠದಲ್ಲಿ ಒಬ್ಬರೇ ನ್ಯಾಯಮೂರ್ತಿ ಉಳಿದಿರುವುದರಿಂದ ಪ್ರಕರಣವನ್ನು ಹೊಸ ದ್ವಿಸದಸ್ಯ ಪೀಠಕ್ಕೆ ವರ್ಗಾಯಿಸುವುದು ಸೂಕ್ತ ಎಂಬುದು ಅವರು ನೀಡಿದ ಕಾರಣ.
Also Read: ಎರಡು ಅತ್ಯಾಚಾರ ಪ್ರಕರಣದ ಆರೋಪ ಹೊತ್ತ ಸ್ವಾಮಿ ಮತ್ತು ನ್ಯಾಯಮೂರ್ತಿಗಳ ಅಚ್ಚರಿಯ ನಡೆ!
ಅತ್ಯಾಚಾರ ಆರೋಪ ನಿರಾಕರಣೆ
ಈ ನಡುವೆ ರಾಘವೇಶ್ವರ ಸ್ವಾಮಿ ತಮ್ಮ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಮಾಡುವಂತೆ ಮತ್ತೆ ಮತ್ತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸುತ್ತಲೇ ಇದ್ದರು. 2016ರಲ್ಲಿ ರಾಘವೇಶ್ವರ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಲ್ಲಿಕೆಯಾಗಿದ್ದ ಆರೋಪಪಟ್ಟಿಯ ಕುರಿತು ವಿಚಾರಣೆ ಕೈಗೆತ್ತಿಕೊಂಡಿದ್ದ ಅಧೀನ ನ್ಯಾಯಾಲಯದ ನ್ಯಾಯಾಧೀಶೆ ಎಚ್ ಜಿ ವಿಜಯಕುಮಾರಿ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗದೇ ಉಳಿದಿದ್ದ ಆರೋಪಿಯ ವಿರುದ್ಧ ಕೆಂಡಕಾರಿದ್ದರು.
ಅದಾದ ಬೆನ್ನಲ್ಲೇ 2016ರ ಜನವರಿ 29ರಂದು ನ್ಯಾಯಾಧೀಶೆ ವಿಜಯಕುಮಾರಿ ಅವರನ್ನು ಪ್ರಕರಣದ ವಿಚಾರಣೆಯಿಂದ ವರ್ಗಾವಣೆ ಮಾಡಲಾಯಿತು.
“ನ್ಯಾಯಾಧೀಶೆ ವಿಜಯಕುಮಾರಿ ಅವರ ವರ್ಗಾವಣೆಯ ಬಳಿಕ ಪ್ರಕರಣದ ವಿಚಾರಣೆಗೆ ಪುರುಷ ನ್ಯಾಯಾಧೀಶರನ್ನು ನೇಮಕ ಮಾಡಿದ್ದನ್ನು ನಾವು ಪ್ರಶ್ನಿಸಿದೆವು. ಪ್ರಕರಣವನ್ನು ಮಹಿಳಾ ನ್ಯಾಯಾಧೀಶರೇ ವಿಚಾರಣೆ ನಡೆಸಬೇಕು ಎಂದು ಕೋರಿ ನಾವು ಹೈಕೋರ್ಟಿನಲ್ಲಿ ಮೇಲ್ಮ,ನವಿ ಅರ್ಜಿಯನ್ನೂ ಸಲ್ಲಿಸಿದೆವು. ಆದರೆ, ನಮ್ಮ ಅರ್ಜಿಯನ್ನು ತಿರಸ್ಕರಿಸಲಾಯಿತು” ಎಂದು ಗೀತಾ ಅವರ ಪತಿ ಟಿಎನ್ ಎಂ ಗೆ ತಿಳಿಸಿದರು.
ಆ ನಂತರ ಪ್ರಕರಣದ ವಿಚಾರಣೆ ನಡೆಸಿದ ಪೀಠ, ಸ್ವಾಮಿಯನ್ನು ನಿರ್ದೋಷಿ ಎಂದು ಆರೋಪಮುಕ್ತಗೊಳಿಸಿ ತೀರ್ಪು ನೀಡಿತು. ನ್ಯಾಯಾಲಯಕ್ಕೆ “ಪ್ರಕರಣದಲ್ಲಿ ವಿಚಾರಣೆ ನಡೆಸುವಂತಹದ್ದೇನೂ ಕಂಡುಬಂದಿಲ್ಲ” ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಲಾಗಿತ್ತು.
“ಅತ್ಯಾಚಾರ ಕೃತ್ಯದಲ್ಲಿ ಆರೋಪಿಯು ಭಾಗಿಯಾಗಿದ್ದಾರೆ ಎಂಬುದನ್ನು ಸಾಭೀತುಮಾಡಲು ಯಾವುದೇ ಬಲವಾದ ಶಂಕೆಯ ಲವಲೇಶವೂ ಕಂಡುಬಂದಿಲ್ಲ. ಆರೋಪಿಯ ವಿರುದ್ಧದ ಆರೋಪ ಸಾಬೀತು ಮಾಡಲು ಯಾವ ಸಾಕ್ಷ್ಯಧಾರಗಳೂ ಇಲ್ಲ” ಎಂದು ನ್ಯಾಯಾಲಯ ಹೇಳಿತ್ತು.
ಹೈಕೋರ್ಟಿನಲ್ಲಿ ಮೇಲ್ಮನವಿ
ಈ ನಡುವೆ, ಅಧೀನ ನ್ಯಾಯಾಲಯದ ತೀರ್ಪಿನ ವಿರುದ್ಧ ಗೀತಾ ಹೈಕೋರ್ಟಿನಲ್ಲಿ ಕ್ರಿಮಿನಲ್ ರಿವಿಷನ್ ಅರ್ಜಿ ಸಲ್ಲಿಸಿದರು. 2018ರ ಜನವರಿಯಲ್ಲಿ ಆ ತೀರ್ಪು ಪುನರ್ ಪರಿಶೀಲನಾ ಅರ್ಜಿ ಮತ್ತೆ ನ್ಯಾ. ಪಣೀಂದ್ರ ಅವರ ಮುಂದೆಯೇ ವಿಚಾರಣೆಗೆ ಬಂದಿತು. ಈ ಮೊದಲು ಇದೇ ಪ್ರಕರಣದಲ್ಲಿ ಆರೋಪಿ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದ ನ್ಯಾ. ಫಣೀಂದ್ರ ಅವರು ಈಗ ಸಂತ್ರಸ್ತೆಯ ಮೇಲ್ಮನವಿ ಅರ್ಜಿಯ ವಿಚಾರಣೆಯಿಂದಲೂ ಹಿಂದೆ ಸರಿಯಬೇಕು ಎಂದು ಆರೋಪಿಯ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಆ ಆಕ್ಷೇಪಕ್ಕೆ ಮಣಿದ ನ್ಯಾಯಾಧೀಶರು, ವಿಚಾರಣೆಯಿಂದ ಹಿಂದೆ ಸರಿದರು.
ಅಕ್ಟೋಬರ್ 2018ರ ಬಳಿಕ ಈವರೆಗೆ ಇನ್ನಷ್ಟು ಹೈಕೋರ್ಟ್ ನ್ಯಾಯಾಧೀಶರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ನ್ಯಾ. ಮೊಹಮ್ಮದ್ ನವಾಜ್ ಅವರು 2019ರ ಜೂನ್ ನಲ್ಲಿ ಯಾವುದೇ ಕಾರಣ ನೀಡದೆ ವಿಚಾರಣೆಯಿಂದ ಹಿಂದೆ ಸರಿದರು.
ನವೆಂಬರ್ 2021ರಲ್ಲಿ ನ್ಯಾ. ಎನ್ ಕೆ ಸುಧೀಂದ್ರ ರಾವ್ ಅವರು ಪ್ರಕರಣದ ವಿಚಾರಣೆಯನ್ನು ಮುಂದೂಡಿದರು. ಗೀತಾ ಅವರ ಪತಿಯ ಪ್ರಕಾರ, ‘ತಮ್ಮ ನಿವೃತ್ತಿ ಸಮೀಪಿಸುತ್ತಿರುವುದರಿಂದ ತಮಗೆ ಪ್ರಕರಣದ ವಿಚಾರಣೆ ನಡೆಸಲು ಬೇಕಾದಷ್ಟು ಸಮಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದರು. ಸಾಮಾನ್ಯವಾಗಿ ನಿವೃತ್ತಿಯ ಅಂಚಿನಲ್ಲಿರುವ ನ್ಯಾಯಾಧೀಶರಿಗೆ ಯಾವುದೇ ಪ್ರಕರಣದ ವಿಚಾರಣೆಗೆ ಬೇಕಾದಷ್ಟು ಸಮಯ ಇಲ್ಲದೇ ಇದ್ದಲ್ಲಿ ಅಂತಹ ಪ್ರಕರಣವನ್ನು ಬೇರೊಂದು ಪೀಠಕ್ಕೆ ವರ್ಗಾಯಿಸುವ ರೂಢಿ ಇದೆ.
ಸದ್ಯ ಹೊಸ ನ್ಯಾಯಾಧೀಶರು ಪ್ರಕರಣದ ವಿಚಾರಣೆ ಮುಂದುವರಿಸಿದ್ದಾರೆ. ಕಳೆದ ನವೆಂಬರ್ 25ರಂದು ಪ್ರಕರಣದ ಇತ್ತೀಚಿನ ವಿಚಾರಣೆ ನಡೆದಿದೆ. ಡಿಸೆಂಬರ್ 17ರಂದು ಮುಂದಿನ ವಿಚಾರಣೆ ನಿಗದಿಯಾಗಿದೆ.
“ಸದ್ಯಕ್ಕೆ ತನಗೆ ಗೊತ್ತಿರುವ ಸಂಗತಿಗಳನ್ನು ಸ್ವತಃ ತಾನೇ ನ್ಯಾಯಾಲಯದಲ್ಲಿ ಮಂಡಿಸಲು ಅವಕಾಶ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇವೆ. ಈಗಿನ ನ್ಯಾಯಮೂರ್ತಿಗಳಾದರೂ ಪ್ರಕರಣದ ವಿಚಾರಣೆ ಮುಂದುವರಿಸುತ್ತಾರೆ ಎಂಬ ನಂಬಿಕೆ ಇದೆ. ವಿಚಾರಣೆ ನಡೆಸುವುದು ತಮಗೆ ಸಾಧ್ಯವಿಲ್ಲ ಎಂದಾದರೆ ಆರಂಭದಲ್ಲೇ ನಮಗೆ ತಿಳಿಸಿದರೆ ಒಳ್ಳೆಯದು. ಏಕೆಂದರೆ, ಪ್ರತಿ ಬಾರಿ ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿದಾಗಲೂ ನಾವು ಮತ್ತೆ ಆರಂಭದಿಂದ ಎಲ್ಲವನ್ನೂ ಶುರುಮಾಡಬೇಕಾಗುತ್ತಿದೆ..” ಎನ್ನುತ್ತಾರೆ ಗೀತಾ ಅವರ ಪತಿ.
ಮುಂದುವರಿಯುವುದು…….