ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವುದರಿಂದ, ಇತರ ಪ್ರತಿಭಟನೆಗಳು ಸಹ ಪುನಾರಂಭವಾಗುವ ನಿರೀಕ್ಷೆಗಳು ಹೆಚ್ಚಾಗಿವೆ. ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು 2019ರಲ್ಲಿ ಜಾರಿಗೊಳಿಸಲಾದ ವಿವಾದಾತ್ಮಕ ಕಾರ್ಮಿಕ ಸಂಹಿತೆಗಳ ಬಗ್ಗೆ ಮಾತುಕತೆಗಳು ನಡೆಯುವ ಸಂಭವವಿಲ್ಲದಿದ್ದರೂ, ಈ ಕಾಯ್ದೆಗಳ ವಿರುದ್ಧ ಪ್ರತಿಭಟನೆಗಳು ಪುನಃ ಜೀವ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಕೃಷಿ ಕಾಯ್ದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರದ ನಡೆಯ ಬೆನ್ನಲ್ಲೇ ಕಾರ್ಮಿಕ ಸಂಘಟನೆಗಳೂ ಸಹ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿವೆ.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ರಾಜಕೀಯ ಕಾರಣಗಳು ಏನೇ ಇದ್ದರೂ, ರೈತ ಮುಷ್ಕರದ ಯಶಸ್ಸಿಗೆ ಹಲವಾರು ಮಹತ್ತರವಾದ ಕಾರಣಗಳನ್ನು ಗುರುತಿಸಬಹುದು. ಕೈಗಾರಿಕಾ ಕಲಹಗಳು ಮತ್ತು ಸಾಮಾಜಿಕ ಸಂಘರ್ಷಗಳಲ್ಲಿ ದೃಢವಾದ ಐಕಮತ್ಯ, ಪ್ರತಿಭಟನಾ ಹೋರಾಟಗಳ ಸ್ಥಿರತೆ, ರಾಜಕೀಯ ಔಚಿತ್ಯ, ಸಾಮಾಜಿಕ ಗುರುತಿಸುವಿಕೆ ಮತ್ತು ಎದುರಾಳಿಯನ್ನು ಘಾಸಿಗೊಳಿಸುವ ಸಾಮಥ್ರ್ಯ ಇವೆಲ್ಲವೂ ಪ್ರತಿಭಟನಾಕಾರರ ಯಶಸ್ಸಿಗೆ ಕಾರಣಗಳಾಗುತ್ತವೆ. ರೈತ ಮುಷ್ಕರದಲ್ಲಿ ಇವೆಲ್ಲವನ್ನೂ ಕಾಣಬಹುದಾಗಿತ್ತು. ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದಾಗ ರೈತರೊಡನೆ ಸಮಾಲೋಚನೆ ನಡೆಸದೆ ಇದ್ದುದು ಮತ್ತು ಮಸೂದೆಗಳನ್ನು ಸಂಸದೀಯ ಸ್ಥಾಯಿ ಸಮಿತಿಗೆ ಪರಾಮರ್ಶೆಗಾಗಿ ಸಲ್ಲಿಸದೆ ಹೋದುದು, ಈ ಪ್ರತಿಭಟನೆಗಳಿಗೆ ರಾಜಕೀಯ ಔಚಿತ್ಯವನ್ನು ನೀಡಿತ್ತು. ಈ ಅಂಶಗಳನ್ನು ಪರಿಗಣಿಸುತ್ತಲೇ ನಾವು ಕಾರ್ಮಿಕ ಸಂಹಿತೆಗಳ ವಿರುದ್ಧ ಕೈಗಾರಿಕಾ ಕಾರ್ಮಿಕರ ಪ್ರತಿಭಟನೆಗಳ ಸಾಧ್ಯತೆಗಳನ್ನು ಪರಾಮರ್ಶಿಸಬೇಕಿದೆ.
ಕಾರ್ಮಿಕ ಸಂಹಿತೆಗಳ ಸಮಸ್ಯೆಗಳು
ಕೇಂದ್ರ ಕಾರ್ಮಿಕ ಸಂಘಟನೆಗಳು ಮೂರು ಕಾರಣಗಳಿಗಾಗಿ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸುತ್ತಿವೆ. ಈ ಕಾರ್ಮಿಕ ಸಂಹಿತೆಗಳನ್ನು ಸಂಸತ್ತಿನಲ್ಲಿ, ವಿರೋಧ ಪಕ್ಷಗಳು ಕಲಾಪವನ್ನು ಬಹಿಷ್ಕರಿಸಿದ್ದ ಕಾರಣದಿಂದ, ಹೆಚ್ಚಿನ ಚರ್ಚೆಗಳಿಲ್ಲದೆಯೇ ಅನುಮೋದಿಸಲಾಗಿತ್ತು. ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಸೇರಿದಂತೆ ಕೇಂದ್ರ ಕಾರ್ಮಿಕ ಸಂಘಟನೆಗಳು ಈ ಸಂಹಿತೆಗಳನ್ನು ವಿರೋಧಿಸಿದ್ದು, ಮಸೂದೆಯನ್ನು ಮಂಡಿಸುವ ಮುನ್ನ ಕಾರ್ಮಿಕ ಪ್ರತಿನಿಧಿಗಳೊಡನೆ ಸಮರ್ಪಕವಾದ ಮಾತುಕತೆಗಳನ್ನು ನಡೆಸದೆ ಹೋದರೂ ಕೇಂದ್ರ ಸರ್ಕಾರ ತಾನು ಎಲ್ಲ ಕಾರ್ಮಿಕ ಸಂಘಟನೆಗಳೊಡನೆ ಸಮಾಲೋಚನೆ ನಡೆಸಿರುವುದಾಗಿ ಸುಳ್ಳು ಹೇಳುತ್ತಿದೆ ಎಂದು ಕಾರ್ಮಿಕ ನಾಯಕರು ಆರೋಪಿಸಿದ್ದಾರೆ. ಕಾರ್ಮಿಕ ಸಂಘಟನೆಗಳೊಡನೆ ಸಮರ್ಪಕವಾಗಿ ಮಾತುಕತೆ ನಡೆಸದಿರುವುದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಒಪ್ಪಂದದ ಅನ್ವಯ, ತ್ರಿಪಕ್ಷೀಯ ಪರ್ಯಾಲೋಚನ (ಅಂತಾರಾಷ್ಟ್ರೀಯ ಕಾರ್ಮಿಕ ಮಾನದಂಡಗಳು) ಒಡಂಬಡಿಕೆ 1976 (ಸಿ144)ಯ ಉಲ್ಲಂಘನೆಯಾಗುತ್ತದೆ. ಈ ಒಡಂಬಡಿಕೆಗೆ ಭಾರತ 1978ರಲ್ಲೇ ತಮ್ಮ ಸಮ್ಮತಿ ಸೂಚಿಸಿದೆ. ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಮಿಕ ಸಂಹಿತೆಗಳಲ್ಲಿ ಅನೇಕ ನಿಯಮಗಳು ಕಾರ್ಮಿಕರ ಹಕ್ಕುಗಳಿಗೆ ಚ್ಯುತಿ ಉಂಟುಮಾಡುವಂತಿವೆ.
ಈ ಸಂಹಿತೆಗಳನ್ನು ರದ್ದುಪಡಿಸಲು ಇತರ ಕಾರಣಗಳನ್ನೂ ಗುರುತಿಸಬಹುದು. ಕಾಯ್ದೆಯ ಕರಡು ಪ್ರತಿಯೂ ಸಹ ಅಸ್ಪಷ್ಟತೆಯಿಂದ ಕೂಡಿದ್ದು ಅಪೂರ್ಣವಾಗಿದೆ. ಭಾರತದಲ್ಲಿ ಪ್ರಚಲಿತವಾಗಿರುವ ಕೈಗಾರಿಕಾ ಸಂಬಂಧಗಳ ಸಾಮೂಹಿಕ ವಿಚಾರಶೀಲತೆ ಮತ್ತು ಕಾನೂನಾತ್ಮಕ ವಿವೇಚನೆಯನ್ನು ಅಪಮಾನಗೊಳಿಸುವ ರೀತಿಯಲ್ಲಿ ಈ ಸಂಹಿತೆಗಳನ್ನು ರೂಪಿಸಲಾಗಿದೆ. ಅನೇಕ ವಿವಾದಾಸ್ಪದ ಅಂಶಗಳನ್ನು ಸರ್ಕಾರ ಬದಲಿಸಿದ್ದು ಈ ಬದಲಾವಣೆಗೆ ಯಾವುದೇ ಪ್ರಯೋಗಾತ್ಮಕ ಪುರಾವೆಗಳನ್ನು ಒದಗಿಸಿಲ್ಲ. ಉದಾಹರಣೆಗೆ ಕಾರ್ಮಿಕರನ್ನು ನೇಮಿಸುವ ಮತ್ತು ವಜಾಗೊಳಿಸುವ ಹಕ್ಕುಗಳು, ಗುತ್ತಿಗೆ ಕಾರ್ಮಿಕ ಪದ್ಧತಿ ಇತ್ಯಾದಿ. ಸ್ಥಾಯಿ ಆದೇಶಗಳು ಮತ್ತು ಪರಿಶೋಧನೆಯ ಹಲವು ಉತ್ತಮ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಕೈಗಾರಿಕಾ ನ್ಯಾಯಮಂಡಲಿ, ಕನಿಷ್ಠ ವೇತನ ಈ ವಿಚಾರಗಳನ್ನು ಮತ್ತಷ್ಟು ಜಟಿಲಗೊಳಿಸಲಾಗಿದೆ. ಸಾಮಾಜಿಕ ಸುರಕ್ಷತಾ ನಿಧಿ, ಸಾರ್ವತ್ರಿಕ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಈ ವಿಚಾರಗಳಲ್ಲಿ ವಿಶ್ವಾಸಾರ್ಹವಲ್ಲದ ಭರವಸೆಗಳನ್ನು ನೀಡಲಾಗಿದೆ. ಪ್ರಮುಖ ಕಾನೂನಾತ್ಮಕ ಅಂಶಗಳಾದ ಸ್ಥಾಯಿ ಆದೇಶಗಳು, ಗುತ್ತಿಗೆ ಶ್ರಮ ಮತ್ತು ಹೈರ್ ಅಂಡ್ ಫೈರ್ ನಿಯಮಗಳಿಗೆ ಇದ್ದ ಇತಿಮಿತಿಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ. ವೈದ್ಯಕೀಯ ವಿಮೆ ಮತ್ತು ಭವಿಷ್ಯ ನಿಧಿಯ ನಿಗದಿತ ಮಿತಿಯನ್ನು ಹಲವು ದಶಕಗಳ ನಂತರವೂ ಚಾಲ್ತಿಯಲ್ಲಿರುವ ಮಿತಿಯಲ್ಲೇ ಮುಂದುವರೆಸಲಾಗಿದೆ. ಇದರ ಪರಿಣಾಮ ಅಸಾಂಪ್ರದಾಯಿಕ ಶ್ರಮಿಕರ ಸಂಖ್ಯೆ ಉಲ್ಬಣಿಸುತ್ತದೆ. ಅನೇಕ ನಿರ್ವಹಣಾತ್ಮಕ, ನಿರುಪಾಧಿಕ ಅಂಶಗಳನ್ನು ನಿಯಮ ರೂಪಿಸುವ ಪ್ರಕ್ರಿಯೆಗೆ ಒಳಪಡಿಸಲಾಗಿದ್ದು, ಇದರಿಂದ ವಿವಿಧ ರಾಜ್ಯಗಳು ತಮ್ಮದೇ ಆದ ನಿಯಮಗಳನ್ನು ರೂಪಿಸುವಾಗ ವಿಭಿನ್ನ ಕಾಯ್ದೆಗಳನ್ನು ಜಾರಿಗೊಳಿಸಬಹುದಾಗಿದೆ. ಇದು ಕೈಗಾರಿಕಾ ಸಂಬಂಧಗಳ ನಿರ್ವಹಣೆಯಲ್ಲಿ ಹೆಚ್ಚಿನ ಗೊಂದಲಗಳನ್ನು ಸೃಷ್ಟಿಸುತ್ತದೆ.
ರೈತ ಮುಷ್ಕರದ ಯಶಸ್ಸಿಗೆ ವ್ಯತಿರಿಕ್ತವಾಗಿ, ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗಳು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಒಂದು ಒಗಟಿನಂತೆಯೇ ಕಾಣುತ್ತದೆ. ಮೇಲೆ ಉಲ್ಲೇಖಿಸಿದ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಒಡಂಬಡಿಕೆಗಳ ಅನುಸಾರ ಒಂದು ಸಂಘಟಿತ ಪರ್ಯಾಲೋಚನಾ ಚೌಕಟ್ಟಿನ ಒಳಗೇ ಕಾರ್ಮಿಕ ಸಂಘಟನೆಗಳು ಮುಂದುವರೆಯಬೇಕಿದೆ. ಬಹುತೇಕ ಕಾರ್ಮಿಕ ಸಂಘಟನೆಗಳು ರಾಜಕೀಯ ಪಕ್ಷಗಳೊಡನೆ ಸಂಯೋಜಿತವಾಗಿವೆ. ಇತ್ತೀಚಿನ ದಿನಗಳಲ್ಲಿ ಸದಸ್ಯತ್ವ ಕ್ಷೀಣಿಸುತ್ತಿದ್ದರೂ, ಭಾರತದಲ್ಲಿ ಕಾರ್ಮಿಕ ಸಂಘಟನೆಗಳ ಸದಸ್ಯರು 10 ಕೋಟಿಯಷ್ಟಿದ್ದಾರೆ. ಇದರಲ್ಲಿ ಅಸಂಘಟಿತ ಕಾರ್ಮಿಕ ವಲಯವೂ ಸೇರಿರುತ್ತದೆ. ಇತ್ತೀಚೆಗೆ ನಡೆದ ದೇಶವ್ಯಾಪಿ ಮುಷ್ಕರದಲ್ಲಿಲ 15 ರಿಂದ 25 ಕೋಟಿ ಕಾರ್ಮಿಕರು ಪಾಲ್ಗೊಂಡಿದ್ದರು ಎಂದು ಕಾರ್ಮಿಕ ಸಂಘಟನೆಗಳು ಘೋಷಿಸಿವೆ. ಹಾಗಾಗಿದ್ದಲ್ಲಿ ಇದು ಸರ್ಕಾರವನ್ನು ವಿಚಲಿತಗೊಳಿಸಬೇಕಿತ್ತು ಮತ್ತು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವಂತೆ ಮಾಡಬೇಕಿತ್ತು. ಆದರೆ ಹಾಗಾಗಿಲ್ಲ. ಹಾಗಾದರೆ ಕೈಗಾರಿಕಾ ಕಾರ್ಮಿಕ ವರ್ಗವನ್ನು ಬಾಧಿಸುತ್ತಿರುವ ಸಮಸ್ಯೆ ಏನು ?
ಮುಷ್ಕರಗಳು ಏಕೆ ಯಶಸ್ಸು ಕಾಣುತ್ತಿಲ್ಲ
ತಮ್ಮ ರಾಜಕೀಯ ಸಂಯೋಜನೆಗಳ ಕಾರಣದಿಂದಲೇ ಕಾರ್ಮಿಕ ಸಂಘಟನೆಗಳು ವಿಘಟಿತವಾಗಿವೆ 12 ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳ ಪೈಕಿ ಹತ್ತು ಸಂಘಟನೆಗಳು ಜಂಟಿ ಹೋರಾಟಗಳನ್ನು ನಡೆಸುತ್ತಿದ್ದು ಎಲ್ಲಾ ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ ಆಗ್ರಹಿಸುತ್ತಿವೆ. ಬಿಎಂಎಸ್ ಸಂಘಟನೆ ತನ್ನದೇ ಆದ ಸೀಮಿತ ಪ್ರತಿಭಟನೆಯನ್ನು ನಡೆಸುತ್ತಿದೆ. ಬಿಎಂಎಸ್ ಸಂಘಟನೆಯು ಸಾಮಾಜಿಕ ಭದ್ರತಾ ಸಂಹಿತೆಗಳು ಮತ್ತು ವೇತನಗಳ ಬಗ್ಗೆ ಸಹಮತ ಹೊಂದಿದ್ದು ಕೈಗಾರಿಕಾ ಸಂಬಂಧಗಳು, ವೃತ್ತಿ ಕೇಂದ್ರಿತ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯಕ್ಷೇತ್ರ ನಿಯಮಗಳನ್ನು ಪರಿಷ್ಕರಿಸಲು ಆಗ್ರಹಿಸುತ್ತಿದೆ. ಸಾವಿರಾರು ಉದ್ಯಮ ಕೇಂದ್ರಿತ ಕಾರ್ಮಿಕ ಸಂಘಟನೆಗಳು ಯಾವುದೇ ರೀತಿಯ ರಾಜಕೀಯ ಪ್ರಜ್ಞೆ ಇಲ್ಲದಿರುವ ಕಾರಣ ಕೇಂದ್ರ ಕಾರ್ಮಿಕ ಸಂಘಟನೆಗಳ ಮುಷ್ಕರಗಳನ್ನು ಬೆಂಬಲಿಸುತ್ತಿಲ್ಲ. ಈವರೆಗೆ ನಡೆಸಿರುವ ಮುಷ್ಕರಗಳ ಪರಿಣಾಮ ಎಂದರೆ ಯುಪಿಎ ಮತ್ತು ಎನ್‍ಡಿಎ ಸರ್ಕಾರಗಳು ಕೇಂದ್ರ ಕಾರ್ಮಿಕ ಸಂಘಟನೆಗಳೊಡನೆ ಸಾಂಕೇತಿಕವಾಗಿ ಮಾತುಕತೆಗಳನ್ನು ನಡೆಸಿವೆ. ಆದರೆ ಆಳುವ ವರ್ಗಗಳ ಸುಧಾರಣಾ ಕ್ರಮಗಳು ಚಾಲ್ತಿಯಲ್ಲೇ ಇವೆ.
ಎರಡನೆಯದಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳು ತಮ್ಮ ಮುಷ್ಕರಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಕಾರ್ಮಿಕ ಕಾನೂನುಗಳ ಸುಧಾರಣೆಗಳನ್ನು ತಡೆಹಿಡಿದಿದ್ದರೂ, ಪ್ರಾದೇಶಿಕ ಮಟ್ಟದಲ್ಲಿ ಕಾರ್ಮಿಕ ಕಾನೂನುಗಳು ಮತ್ತು ಪರಿಶೋಧನಾ ನಿಯಮಗಳು ಸಾಕಷ್ಟು ಬದಲಾವಣೆ ಹೊಂದಿವೆ. ಅಷ್ಟೇ ಅಲ್ಲದೆ ಸರ್ಕಾರಗಳ ಪರೋಕ್ಷ ಬೆಂಬಲದೊಂದಿಗೆ ಉದ್ಯೋಗದಾತರು ಹೆಚ್ಚಿನ ಪ್ರಮಾಣದಲ್ಲಿ ಗುತ್ತಿಗೆ ಕಾರ್ಮಿಕರನ್ನು ನೇಮಿಸುತ್ತಿದ್ದಾರೆ. ಇದು ಕಾನೂನು ರೀತ್ಯ ಮಾನ್ಯತೆ ಪಡೆಯದೆ ಇದ್ದರೂ, ತೆರೆಮರೆಯಲ್ಲಿ ನಡೆಯುತ್ತಲೇ ಇದೆ. ಮೂರನೆಯದಾಗಿ 40 ಕೋಟಿ ಅಸಂಘಟಿತ ಹಾಗೂ ಅನೌಪಚಾರಿಕ ಕ್ಷೇತ್ರದ ಕಾರ್ಮಿಕರಿದ್ದರೂ, ಈ ಸಂಖ್ಯೆ ಚದುರಿಹೋಗಿದ್ದು ಕ್ರೋಢೀಕೃತವಾಗಿ ಸಂಘಟಿತರಾಗಿಲ್ಲ. ಹಾಗಾಗಿ ಈ ಕಾರ್ಮಿಕರು ರಾಜಕೀಯ ಹೋರಾಟಗಳ ಮೂಲಕ ಸರ್ಕಾರಗಳ ಮೇಲೆ ಒತ್ತಡ ಹೇರಿ ಶ್ರಮದ ಮಾರುಕಟ್ಟೆಯ ಸುರಕ್ಷತೆಯನ್ನು ಪಡೆಯಲಾಗುವುದಿಲ್ಲ. ಕಾರ್ಮಿಕ ಕಾನೂನುಗಳ ಸುಧಾರಣೆಯಿಂದ ಅನೌಪಚಾರಿಕ ಕ್ಷೇತ್ರ ವಿಸ್ತರಿಸಲಿದ್ದು ಇದು ಕಾರ್ಮಿಕ ಸಂಘಟನೆಗಳ ಪ್ರತಿಭಟನಾ ಸಾಮಥ್ರ್ಯವನ್ನೂ ಕುಂದಿಸುತ್ತದೆ.
ನಾಲ್ಕನೆಯದಾಗಿ ರೈತರು ಮಾಡಿದಂತೆ ಕಾರ್ಮಿಕರು ದೀರ್ಘ ಕಾಲದ ಬೃಹತ್ ಮುಷ್ಕರಗಳನ್ನು ನಡೆಸಿದಲ್ಲಿ ತಮ್ಮ ಉದ್ಯೋಗ ಮತ್ತು ವೇತನವನ್ನು ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ. ಪೂರ್ಣ ಪ್ರಮಾಣದ ಉದ್ಯೋಗವಿಲ್ಲದವರು, ನಿರುದ್ಯೋಗಿಗಳು ಮತ್ತು ಅನೌಪಚಾರಿಕ ವಲಯದ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಕಾರ್ಮಿಕ ಸಂಘಟನೆಗಳ ಚೌಕಾಸಿ ಸಾಮಥ್ರ್ಯವೂ ಕ್ಷೀಣಿಸುತ್ತದೆ. ಹೆಚ್ಚೆಂದರೆ ಈ ಕಾರ್ಮಿಕರು ಅಲ್ಪಕಾಲಿಕ ಮುಷ್ಕರಗಳನ್ನು ನಡೆಸಬಹುದು. ಈ ಕಾರ್ಮಿಕರ ಮುಷ್ಕರದಿಂದ ಅರ್ಥವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಅಥವಾ ಸರ್ಕಾರವೂ ವಿಚಲಿತವಾಗುವುದಿಲ್ಲ. 1974ರ ರೈಲ್ವೆ ಮುಷ್ಕರ ಹಾಗೂ 1982-83ರ ಬಾಂಬೆ ಜವಳಿ ಕಾರ್ಮಿಕ ಮುಷ್ಕರಗಳ ವೈಫಲ್ಯ ಇಂದಿಗೂ ಕಾರ್ಮಿಕ ಚಳುವಳಿಯನ್ನು ಕಾಡುತ್ತಲೇ ಇದೆ.
ಐದನೆಯದಾಗಿ, ಖಾಸಗೀಕರಣ, ಶ್ರಮ ಮಾರುಕಟ್ಟೆಯ ನಮ್ಯತೆ ಮುಂತಾದ ಕ್ರಮಗಳನ್ನೊಳಗೊಂಡ ಕಾರ್ಮಿಕ ಸುಧಾರಣೆಗಳಿಗೆ ಜಾಗತಿಕ ಹಣಕಾಸು ಸಂಸ್ಥೆಗಳಾದ ಐಎಂಎಫ್ ಮತ್ತು ವಿಶ್ವಬ್ಯಾಂಕ್ ಸಹ ಪ್ರೋತ್ಸಾಹಿಸುತ್ತಿವೆ. ಅನೇಕ ದೇಶಗಳಲ್ಲಿ ಕಾರ್ಮಿಕ ಸುಧಾರಣೆಗಳು ಜಾರಿಯಲ್ಲಿವೆ. ಮೂಲತಃ ಕಾರ್ಮಿಕ ಸಂಘಟನೆಗಳು ನವ ಉದಾರವಾದದ ವಿರುದ್ಧ ಹೋರಾಟ ನಡೆಸಿದ್ದು, ಈ ನಿಟ್ಟಿನಲ್ಲಿ ಕಾರ್ಮಿಕ ಚಳುವಳಿಗಳಿಗೆ ದೃಢತೆ ಅತ್ಯವಶ್ಯವಾಗಿದೆ. ಆರನೆಯದಾಗಿ ಈ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸಂಸದೀಯ ಸ್ಥಾಯಿ ಸಮಿತಿ ಪರಿಶೀಲಿಸಿದ್ದರೂ, ಈ ಸಮಿತಿಯ ಅನೇಕ ಶಿಫಾರಸುಗಳನ್ನು ಅಂತಿಮ ಕರಡು ಸಿದ್ಧಪಡಿಸುವಾಗ ನಿರ್ಲಕ್ಷಿಸಲಾಗಿದೆ. ಹಾಗೆಯೇ ಸಮಿತಿ ಸಲ್ಲಿಸಲಾದ ಕರಡುಪ್ರತಿಯಲ್ಲಿ ಇಲ್ಲದಿರುವ ಹಲವು ನಿಯಮಗಳನ್ನು ನಂತರದಲ್ಲಿ ಸೇರಿಸಲಾಗಿದೆ. ಕೃಷಿ ಕಾಯ್ದೆಗಳಿಗೆ ಹೋಲಿಸಿದರೆ ಈ ಕಾರ್ಯವಿಧಾನದ ಲೋಪಗಳು ಅಷ್ಟಾಗಿ ಗಂಭೀರ ಸ್ವರೂಪದ್ದು ಎನಿಸುವುದಿಲ್ಲ. ಅಂತಿಮವಾಗಿ ಘಾಸಿಗೊಂಡಿರುವ ಸರ್ಕಾರ ಮತ್ತು ಸುಧಾರಣಾ ಪರವಾಗಿ ಇರುವ ಲಾಬಿಗಳು ಮತ್ತಾವುದೇ ಸುಧಾರಣಾ ಕ್ರಮಗಳನ್ನು ಹಿಂಪಡೆಯಲು ಅವಕಾಶ ನೀಡದಂತೆ ತಡೆಯೊಡ್ಡುತ್ತವೆ.
ಈ ವಾಸ್ತವಗಳ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳು ಕ್ರೋಢೀಕೃತಗೊಂಡು, ಆಡಳಿತಾರೂಢ ಸರ್ಕಾರದ ಚುನಾವಣಾ ಭವಿಷ್ಯಕ್ಕೆ ಘಾಸಿ ಉಂಟುಮಾಡುವ ರೀತಿಯಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬೇಕಿದೆ. ಅಥವಾ ನಿರ್ದಿಷ್ಟ ಚಟುವಟಿಕೆಯನ್ನಾಧರಿಸಿ ವೇತನ ಪಡೆಯುವ ಗುತ್ತಿಗೆದಾರರು ಮತ್ತು ವೈಯ್ಯಕ್ತಿಕ ದುಡಿಮೆಗಾರರ ಸಂದರ್ಭದಲ್ಲಿ ಆದಂತೆ ಕಾರ್ಮಿಕ ಸಂಹಿತೆಗಳನ್ನು ಕಾನೂನಾತ್ಮಕವಾಗಿ ಪ್ರಶ್ನಿಸಬೇಕಿದೆ. ವ್ಯತಿರಿಕ್ತ ಆರ್ಥಿಕ ಪರಿಸ್ಥಿತಿಗಳಿಂದ ಅಥವಾ ರಾಜಕೀಯ ಕಾರಣಗಳಿಗಾಗಿ ಈ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವುದಕ್ಕೆ ಸರ್ಕಾರ ವಿಳಂಬ ಮಾಡುತ್ತಿರುವುದು ಒಂದು ರೀತಿಯಲ್ಲಿ ಸಾಂತ್ವನ ನೀಡುವಂತಿದೆ.