ಹದಿನಾಲ್ಕು ವರ್ಷಗಳ ಹಿಂದೆ ಯೋಗಿತಾ ಭಯಾನಾ ಅವರು ದೆಹಲಿಯ ಇತರ ಯುವತಿಯರಂತೆಯೇ ಸಾಮಾನ್ಯ ಹುಡುಗಿ. ಸಾವಿರಾರು ಕನಸುಗಳನ್ನು ಹೊತ್ತು ಏವಿಯೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ ನಗರದಲ್ಲೆ ಬೆಳೆದ ಆಧುನಿಕ ಯುವತಿ. ಆದರೆ ಈಗ ಆಕೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ. ಅತ್ಯಾಚಾರ, ಕ್ರೌರ್ಯ ಮತ್ತು ಅನ್ಯಾಯ ನಡೆದಾಗೆಲ್ಲಾ ಈ ದೇಶದ ದುರ್ಬಲ ವರ್ಗದ ಬೆನ್ನಿಗೆ ನಿಲ್ಲುವ ಅಸಾಮಾನ್ಯ ಛಲಗಾರ್ತಿ.
ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದ ಯೋಗಿತಾ, ಗುರು ಗೋಬಿಂದ್ ಸಿಂಗ್ ವಿಶ್ವವಿದ್ಯಾನಿಲಯದಿಂದ ವಿಪತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಕಿಂಗ್‌ಫಿಷರ್ ಏರ್‌ಲೈನ್ಸ್ ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ್ದರು. ವೃತ್ತಿಜೀವನದಲ್ಲಿ ಉನ್ನತ ಮಟ್ಟಕ್ಕೇರುವ ಎಲ್ಲಾ ಅವಕಾಶಗಳಿದ್ದ ಅವರು ಒಂದು ದಿನ ಭೀಕರ ರಸ್ತೆ ಅಪಘಾತಕ್ಕೆ ಸಾಕ್ಷಿಯಾಗುತ್ತಾರೆ. ಅಪಘಾತ ಮಾಡಿದ ದುಷ್ಕರ್ಮಿ ಓಡಿ ಹೋಗುತ್ತಾರೆ. ಅಲ್ಲಿದ್ದ ಯಾರೂ ಅವರ ಸಹಾಯಕ್ಕೆ ಬರುವುದಿಲ್ಲ. ಯೋಗಿತಾ ಮತ್ತವರ ಸ್ನೇಹಿತರು ಸೇರಿ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ನೀಡಬೇಕಾದ ವೈದ್ಯರು ತಡ ಮಾಡಿದ್ದರಿಂದ ಪತ್ನಿ ಮತ್ತು ಒಂದರಿಂದ ಐದು ವರ್ಷಗಳೊಳಗಿನ ಮಕ್ಕಳನ್ನು ಅಗಲಿ ಗಾಯಾಳು ಮರಣ ಹೊಂದಿದರು. ಎಳವೆಯಿಂದಲೇ ಸಮಾಜ ಸೇವೆಯ ಕಡೆ ಆಕರ್ಷಿತರಾಗಿದ್ದ ಯೋಗಿತಾರ ಬದುಕಿನಲ್ಲಿ ಈ ಘಟನೆ ಬಹುದೊಡ್ಡ ಪ್ರಭಾವ ಬೀರಿತು.
ಅಪಘಾತಕ್ಕೀಡಾದವರ ಕುಟುಂಬಕ್ಕೆ ಬೆಂಬಲವಾಗಿ ಯೋಗಿತಾ ನಿಂತರು. ಅವರ ಪರವಾಗಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರು. ಈ ಮೂಲಕ ಅವರ ಹೆಂಡತಿ ಮತ್ತು ಮಕ್ಕಳಿಗೆ ನ್ಯಾಯಯುತವಾಗಿ ಸಲ್ಲಬೇಕಾಗಿದ್ದ ಪರಿಹಾರ ಸಿಗುವಂತೆ ಮಾಡಿದರು. ಆದರೆ ಈ ಘಟನೆಯಿಂದಾಗಿ ನ್ಯಾಯ ಪ್ರಕ್ರಿಯೆಯು ಎಷ್ಟು ಜಟಿಲವಾಗಿದೆ ಎಂಬುವುದು ಅವರಿಗೆ ಮೊದಲ ಬಾರಿ ಅನುಭವಕ್ಕೆ ಬಂತು. ಮತ್ತು ಆಗ ಅವರಿಗೆ ಕೇವಲ 22 ವರ್ಷ ವಯಸ್ಸಾಗಿತ್ತು.

ಕ್ರಮೇಣ ಸಾಮಾಜಿಕ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ತಮ್ಮ ಕೆಲಸ ತೊರೆದರು. ಈ ಬಗ್ಗೆ ‘The better india’ ಜೊತೆ ಮಾತಾಡಿರುವ ಅವರು “ ಕೆಲಸವನ್ನು ತ್ಯಜಿಸುವುದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿತ್ತು. ನಾನು ಬಹಳ ಹಿಂದೆಯೇ ಸಾಮಾಜಿಕ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳಬೇಕಿತ್ತು ಎಂದು ಅನಿಸುತ್ತದೆ. ಆದರೆ ನಾನು ವಾಯುಯಾನದಲ್ಲಿನ ಕೆಲಸವನ್ನು ಬದುಕಿನ ಅನುಭವವಾಗಿ ಪರಿಗಣಿಸುತ್ತೇನೆ ”ಎಂದು ಹೇಳಿದ್ದಾರೆ.
2007 ರಲ್ಲಿ ಅವರು ರಸ್ತೆ ಅಪಘಾತಗಳ ಸಂತ್ರಸ್ತರಿಗೆ ಸಹಾಯ ಮಾಡಲು ‘ದಾಸ್ ಚಾರಿಟೇಬಲ್ ಫೌಂಡೇಶನ್’ ಅನ್ನು ಸ್ಥಾಪಿಸಿ ಆಸ್ಪತ್ರೆಯ ಸುಧಾರಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಿದರು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಯತ್ನಿಸಿದರು. 2011 ರವರೆಗೆ ಟ್ರಸ್ಟ್ ನಲ್ಲಿ ಕೆಲಸ ಮಾಡಿದ ಅವರು ಮುಂದಿನ ವರ್ಷ, ದೆಹಲಿಯಲ್ಲಿ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಭೀಕರ ಸಾಮೂಹಿಕ ಅತ್ಯಾಚಾರದ ಸುದ್ದಿ ರಾಷ್ಟ್ರವನ್ನು ವ್ಯಾಪಿಸುತ್ತಿದ್ದಂತೆ ಅತ್ಯಚಾರ ವಿರೋಧಿ ಹೋರಾಟಕ್ಕೆ ಧುಮುಕಿದರು.
ಒಂಭತ್ತು ವರ್ಷಗಳ ನಿರಂತರ ಹೋರಾಟದ ಫಲವಾಗಿ ನಿರ್ಭಯಾ ಪ್ರಕರಣದ ನ್ಯಾಯ ದೊರಕಿತು. “ನಾನು ನಿರ್ಭಯಾ ಪ್ರಕರಣವನ್ನು ಕೈಗೆತ್ತಿಕೊಂಡಾಗ ಸುಮಾರು ಎಂಟು ಅಥವಾ ಒಂಬತ್ತು ಅತ್ಯಾಚಾರ ಮತ್ತು ಕ್ರೂರ ಪ್ರಕರಣಗಳನ್ನು ಹೊಂದಿದ್ದೆ. ಆ ದಿನಗಳಲ್ಲಿ ನಾನು ಪ್ರತಿ ದಿನ ನ್ಯಾಯಾಲಯದಲ್ಲೇ ಕಳೆಯುತ್ತಿದ್ದೆ, ಒಂದು ವಿಚಾರಣೆಯಿಂದ ಇನ್ನೊಂದು ವಿಚಾರಣೆಗೆ ಹಾಜರಾಗಬೇಕಿತ್ತು. ನಿರ್ಭಯಾರ ತಾಯಿ ಪ್ರಪಂಚದ ಗಮನ ಮತ್ತು ಸಹಾಯವನ್ನು ಹೊಂದಿದ್ದರು, ಆದರೆ ಅದೆಷ್ಟೋ ಜನರ ನೋವು ಪ್ರಪಂಚಕ್ಕೆ ಗೊತ್ತೇ ಇರಲಿಲ್ಲ. ಅವರ ಪರವಾಗಿ ನಿಲ್ಲುವುದು ನನಗೆ ನಿಜವಾದ ಆಶೀರ್ವಾದವಾಗಿತ್ತು ” ಎಂದು ಅತ್ಯಾಚಾರ ಪ್ರಕರಣಗಳ ಭೀಕರತೆಯನ್ನು ಬಿಚ್ಚಿಡುತ್ತಾರೆ ಯೋಗಿತಾ.

“ನಾವು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ, ಇತರ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಂದ ನಮಗೆ ಅನೇಕ ಕರೆಗಳು ಬಂದವು. ನಾನು ಪ್ರತಿಭಟನೆಯಲ್ಲೂ ಕೆಲವು ಸಂತ್ರಸ್ತರನ್ನು ಭೇಟಿಯಾಗಿದ್ದೆ. ಒಂದು ಬಾರಿ ನಾನು ಸಂತ್ರಸ್ತೆಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋಗಿದ್ದೆ, ಸುಮಾರು ನಾಲ್ಕು ಅಥವಾ ಐದು ವರ್ಷ ವಯಸ್ಸಿನ ಪುಟ್ಟ ಹುಡುಗಿಯದು. ಆಸ್ಪತ್ರೆಯಲ್ಲಿ ನಾನು ಅಂತಹ ಹಲವಾರು ಶಿಶುಗಳನ್ನು ಭೇಟಿಯಾದೆ. ಅಂತಹ ಎಷ್ಟು ಹುಡುಗಿಯರು ಆಸ್ಪತ್ರೆಗಳಲ್ಲಿ ಕೊಳೆಯುತ್ತಿದ್ದಾರೆ ಅಥವಾ ಸತ್ತಿದ್ದಾರೆ ಎಂದು ನಮಗೆ ತಿಳಿದಿಲ್ಲ ” ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.
ನಿರ್ಭಯಾ ಪ್ರಕರಣವು ಬೆಳಕಿಗೆ ಬಂದ ನಂತರ, ಯೋಗಿತಾ ‘ಪೀಪಲ್ ಅಗೇನ್ಸ್ಟ್ ರೇಪ್ ಇನ್ ಇಂಡಿಯಾ’ (PARI) ಅನ್ನು ಪ್ರಾರಂಭಿಸಿದರು, ಇದು ಅತ್ಯಾಚಾರದ ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಪುನರ್ವಸತಿ, ನ್ಯಾಯ ಮತ್ತು ಸುರಕ್ಷತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಮಹಿಳೆಯರ ಸುರಕ್ಷತೆ, ಲಿಂಗ ಸಂವೇದನೆ ಮತ್ತು ಮಹಿಳಾ ಸಬಲೀಕರಣಗಳಲ್ಲಿ ಪುರುಷರೂ ಒಳಗೊಳ್ಳುವಂತೆ ಪ್ರೇರೇಪಿಸುವ ಕೆಲಸವನ್ನು PARI ಮಾಡುತ್ತದೆ.
“ಬದುಕುಳಿದವರಿಗೆ ಸಹಾಯ ಮಾಡುವುದು ಮುಖ್ಯ, ಆದರೆ ಅತ್ಯಾಚಾರ ತಡೆಗಟ್ಟುವ ಕೆಲಸ ಮಾಡುವುದು ಅಷ್ಟೇ ಮುಖ್ಯವಾಗಿದೆ. ಹಾಗೆ ಮಾಡದಿದ್ದರೆ, ಈ ಪ್ರಕರಣಗಳು ಮುಂದುವರಿಯುತ್ತಲೇ ಇರುತ್ತದೆ” ಎನ್ನುವ ಯೋಗಿತಾ “ನಾವು ಇಲ್ಲಿ ಎರಡು ಹಂತಗಳಲ್ಲಿ ವಿಫಲರಾಗಿದ್ದೇವೆ” ಎನ್ನುತ್ತಾರೆ. “ಮೊದಲನೆಯದಾಗಿ, ನೀತಿ ಮಟ್ಟದಲ್ಲಿ – ಮಹಿಳೆಯರು ಮತ್ತು ಸಂತ್ರಸ್ತರಿಗೆ ಪ್ರಯೋಜನವಾಗುವಂತೆ ಅನೇಕ ಕಾನೂನುಗಳು ಮತ್ತು ಸುಧಾರಣೆಗಳು ಅಸ್ತಿತ್ವದಲ್ಲಿವೆ, ಆದರೆ ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ. ಎರಡನೆಯದು, ಸಮಾಜದ ಮಟ್ಟದಲ್ಲಿ – ನಾವು ನಮ್ಮ ಮಹಿಳೆಯರನ್ನು ದೇವತೆಗಳಂತೆ ಅಥವಾ ವೇಶ್ಯೆಯರಂತೆ ನೋಡುತ್ತೇವೆ. ಮಹಿಳೆಯರು ಪುರುಷರಿಗೆ ಸಮಾನವಾಗಿರಬೇಕು, ಮೇಲೂ ಅಲ್ಲ ಮತ್ತು ಕೀಳೂ ಅಲ್ಲ” ಎಂದು ಅತ್ಯಂತ ಪ್ರಾಯೋಗಿಕವಾಗಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ವಿವರಿಸುತ್ತಾರೆ.

ನಿಧಾನವಾಗಿ ನ್ಯಾಯದಾನವಾಗುವ ಭಾರತದಂಥ ದೇಶದಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಹಿಂದೆ ಹೋಗುವುದು ಸುಲಭವಲ್ಲ. ಅದರಲ್ಲೂ ಅತ್ಯಾಚಾತದಂತಹ ಪ್ರಕರಣಗಳಲ್ಲಿ ಹಲವು ಬಾರಿ ಸಂತ್ರಸ್ತರ ಪರವಾಗಿ ಹೋರಾಡುವವರು ಅಪರಾಧಿಗಳಿಂದ, ಪ್ರಭಾವಶಾಲಿಗಳಿಂದ ಬೆದರಿಕೆ ಎದುರಿಸುತ್ತಲೇ ಇರುತ್ತಾರೆ. ಇಂಥವನ್ನೆಲ್ಲಾ ಎದುರಿಸಿ, ನಿಗದಿತ ಮತ್ತು ಸ್ಥಿರ ಆದಾಯ ತರುವ ಕೆಲಸವನ್ನೂ ತೊರೆದು ಸಂತ್ರಸ್ತರ ಪರ ನಿಲ್ಲುವುದಕ್ಕೆ ಅಖಂಡ ಮಾನಸೀ ಸ್ಥೈರ್ಯ ಮತ್ತು ಬದ್ಧತೆ ಬೇಕು. ಹಾಗಾಗಿಯೇ ಯೋಗಿತಾರಂಥವರು ಭಾರತೀಯ ದಿನಮಾನದಲ್ಲಿ ಅಪರೂಪ ಅನ್ನಿಸಿಕೊಳ್ಳುತ್ತಾರೆ.