ಮೊನ್ನೆ ಮೊನ್ನೆ ನಡೆದ ಹಾನಗಲ್ ಬೈ ಎಲೆಕ್ಷನ್ ಕಾವು ಇನ್ನೂ ಆರಿದಂಗೆ ಕಾಣಿಸ್ತಿಲ್ಲಾ. ಚುನಾವಣೆನೂ ನಡೀತು, ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದು ಆಯ್ತು. ಆದರೆ ಇದೀಗ ಗೆಲವು ಕಂಡಿದ್ದ ಶ್ರಿನಿವಾಸ್ ಮಾನೆ ಮಾಡಿದ ಕೆಲಸಗಳು ಇತರ ಎಂಎಲ್ಎಗಳಿಗೆ ಮಾದರಿಯಾಗುತ್ತಿವೆ. ಇಷ್ಟು ದಿನ ತಮ್ಮ ಪಾಡಿಗೆ ತಾವು ಎಂಬಂತಿದ್ದ ಜನಪ್ರತಿನಿಧಿಗಳು ಜನ ಸಂಪರ್ಕ ಹಾಗೂ ಜನತಾ ದರ್ಶನ ಎಂದು ಜನಾನುರಾಗಿಯಾಗಿ ಕೆಲಸ ಆರಂಭಿಸಿದ್ದಾರೆ.
ಒಳ್ಳೆಯ ಕೆಲಸಗಳನ್ನು ಮಾಡಿದ್ರೆ ಒಂದಿಲ್ಲೊಂದು ದಿನ ಅವುಗಳಿಗೆ ಒಳ್ಳೆಯ ಪ್ರತಿಫಲ ಸಿಕ್ಕಿಯೇ ಸಿಗುತ್ತದೆ ಅನ್ನೋದಕ್ಕೆ ಹಾನಗಲ್ ಬೈ ಎಲೆಕ್ಷನ್ ಸಾಕ್ಷಿಯಾಗಿದೆ. ಹೌದು ಕೋವಿಡ್ ಸಮಯದಲ್ಲಿ ಜನರೊಂದಿಗೆ ನಿಂತು ಆರೋಗ್ಯದ ಜೊತೆಗೆ ಜನರ ಪ್ರಾಣ ಕಾಪಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಬೈ ಎಲೆಕ್ಷನ್ನಲ್ಲಿ ಗೆದ್ದು ಬೀಗಿದ್ದಾರೆ. ಈಗ ಮಾನೆ ಗೆಲುವು ಇತರ ಶಾಸಕರಿಗರ ಪಾಠವಾಗಿದೆ.
ಹಾನಗಲ್ ಉಪಚುನಾವಣೆ ಜನ ಪ್ರತಿನಿಧಿಗಳಿಗೆ ಪಾಠವಾಗುವುದರ ಜೊತೆಗೆ ಜಿಲ್ಲೆಯ ಶಾಸಕರಿಗೆ ನಡುಕ ಸೃಷ್ಟಿಸಿದೆ. ಜನರ ನಡುವೆ ಇದ್ದು ಕೆಲಸ ಮಾಡಿದ್ದಕ್ಕೇ ಶ್ರೀನಿವಾಸ್ ಮಾನೆ ಗೆದ್ದರು ಎಂಬುದು ಸಾಬೀತಾದ ಹಿನ್ನಲೆ, ಜನಾನುರಾಗಿಯಾಗಿ ಕೆಲಸ ಮಾಡಲು ಶಾಸಕ ನೆಹರು ಒಲೇಕಾರ ಹಾಗೂ ವಿರೂಪಾಕ್ಷಪ್ಪ ಬಳ್ಳಾರಿ ಮುಂದಾಗುತ್ತಿದ್ದಾರೆ.
ಈಗ ಕೊರೊನಾ ನೆಪವೊಡ್ಡಿ ಸುಮ್ಮನೆ ಕುಳಿತಿದ್ದ ಹಾವೇರಿ ಶಾಸಕ ಒಲೇಕಾರ ಜನತಾ ದರ್ಶನ ಎಂಬ ಹೊಸ ಕಾನ್ಸೆಪ್ಟ್ ಆರಂಭ ಮಾಡಿದ್ದಾರೆ. ಇದರಿಂದ ಶಾಸಕರಿಗೆ ಜನರ ಜೊತೆ ನಿರಂತರ ಸಂಪರ್ಕ ಇರುತ್ತದೆ. ಹಾಗೂ ಮತದಾರರನ್ನು ಈಗಿನಿಂದಲೇ ಒಲೈಕೆ ಮಾಡಿಕೊಳ್ಳುವ ತಂತ್ರಗಾರಿಕೆಗೆ ಮುಂದಾಗಿದ್ದಾರೆ.
ಇದು ಹಾವೇರಿ ಶಾಸಕರ ಕಥೆಯಾದರೆ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ವರಸೆಯೇ ಬೇರೆಯಾಗಿದೆ. 2023ರ ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ಕಸರತ್ತು ಆರಂಭ ಮಾಡಿದಂಗೆ ಕಾಣಿಸುತ್ತೆ. ಜನತಾ ದರ್ಶನ, ಜನ ಸಂಪರ್ಕ, ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ವರ್ಚಸ್ಸು ಬೆಳೆಸಿಕೊಳ್ಳಲು ಕಸರತ್ತುಗಳನ್ನು ಶುರು ಮಾಡಿದ್ದಾರೆ.
ಮೊನ್ನೆ ಕಾಕೋಳ ತಾಂಡಾದಲ್ಲಿ ಕಬ್ಬಡ್ಡಿಯಾಡಿ ಸೋಷಿಯಲ್ ಮೀಡಿಯಾದಲ್ಲಿ ಹೀರೋ ಕೂಡ ಆಗಿದ್ರೂ. ಇಷ್ಟು ದಿವಸ ಮಲಗಿದ್ದವರು ಈಗ ಎಚ್ಚರ ಆಗಿ ಜನರ ಜೊತೆ ಹೋಗಬೇಕು ಅಂದುಕೊಂಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎನ್ನುವ ಮೂಲಕ ಶಾಸಕ ನೆಹರು ಒಲೇಕಾರ್ಗೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಟಾಂಗ್ ನೀಡಿದ್ದಾರೆ.
ಇನ್ನೂ ಇವರ ಜೊತೆ ಕೃಷಿ ಸಚಿವ ಬಿ.ಸಿ ಪಾಟೀಲ್ ಹಿರೇಕೇರೂರಿನಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯುತ್ತಲೆ ಇವೆ. ತಮ್ಮ ಬಾಂಬೆ ಫ್ರೆಂಡ್ಸ್ ಸಚಿವರನ್ನು ಕರೆತಂದು ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡಿಸಿದ್ದಾರೆ. ಮೇಲಿಂದ ಮೇಲೆ ಸಾರ್ವಜನಿಕ ಸಮಾರಂಭಗಳನ್ನು ಏರ್ಪಡಿಸಲು ಮುಂದಾದಗುತ್ತಿದ್ದಾರೆ. ಒಟ್ಟಿನಲ್ಲಿ ಜನರ ನೋವು ನಲಿವುಗಳನ್ನ ಅರ್ಥ ಮಾಡಿಕೊಂಡರೆ ಅದುವೇ ಜನಾರ್ಧನ ಸೇವೆ ಎಂದು ಈಗಲಾದರು ಅರ್ಥವಾಗುತ್ತಿದೆಯಲ್ಲಾ ಅಂತಾ ಮತದಾರ ಮಾತಾಡುತ್ತಿದ್ದಾನೆ.