ಬಿಟ್ ಕಾಯಿನ್ ಹಗರಣ ಕುರಿತ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಹಗರಣದ ತನಿಖೆ ಇಡಿ- ಸಿಬಿಐನಿಂದ ನಡೆಯಲಿದೆ, ತಪ್ಪಿತಸ್ಥರು ಯಾರೇ ಇದ್ದರೂ ರಕ್ಷಣೆಯ ಪ್ರಶ್ನೆಯೇ ಇಲ್ಲ ಎಂಬುದು ಆ ಹೇಳಿಕೆಗಳ ಒಟ್ಟಾರೆ ಸಾರಾಂಶ.
ಆದರೆ, ವಾಸ್ತವವಾಗಿ ಪ್ರಕರಣದ ವಿಷಯದಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಿದರೆ, ತೀರಾ ಜನ ಸಾಮಾನ್ಯರಿಗೂ ಸರ್ಕಾರ ಮತ್ತು ಬಿಜೆಪಿಯ ಹೇಳಿಕೆಯ ಮೇಲೆ ನಂಬಿಕೆ ಬರುತ್ತಿಲ್ಲ. ಏಕೆಂದರೆ; ಒಂದು ಕಡೆ ರಾಜ್ಯದ ಗೃಹ ಸಚಿವರು ಸೇರಿದಂತೆ ಸರ್ಕಾರ ಮತ್ತು ಆಡಳಿತ ಪಕ್ಷದ ಕೆಲವು ನಾಯಕರು ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ ಜೊತೆಗೆ ಜಾರಿ ನಿರ್ದೇಶನಾಲಯ (ಇಡಿ) ಕೂಡ ತನಿಖೆ ಆರಂಭಿಸಿದೆ ಎನ್ನುತ್ತಿದ್ದರೆ, ಸ್ವತಃ ಮುಖ್ಯಮಂತ್ರಿ ಸೇರಿದಂತೆ ಮತ್ತೆ ಕೆಲವರು ಇಡಿಗೆ ಪತ್ರ ಬರೆದಿದ್ದು, ಶೀಘ್ರವೇ ತನಿಖೆ ಆರಂಭವಾಗಲಿದೆ ಎನ್ನುತ್ತಿದ್ದಾರೆ.
ಈ ನಡುವೆ, ಪ್ರಕರಣದ ಕಿಂಗ್ ಪಿನ್ ಮತ್ತು ಇಡೀ ಬಹುಕೋಟಿ ಹಗರಣದ ಸೂತ್ರಧಾರ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹೋಟೆಲ್ ಮ್ಯಾನೇಜರ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧಿತನಾಗಿ ನಿಗೂಢವಾಗಿ ಬಿಡುಗಡೆಯಾದ ಬಳಿಕ ಏಕಾಏಕಿ ಕಾಣೆಯಾಗಿದ್ದಾನೆ. ಆತನೇ ಹೇಳಿಕೊಂಡಂತೆ ಆತನಿಗೆ ಜಾಮೀನು ನೀಡಿದವರು ಯಾರು? ಆತನ ಪರ ವಕಾಲತು ವಹಿಸಿದ ವಕೀಲರು ಯಾರು? ಎಂಬುದು ಕೂಡ ಆತನಿಗೆ ಗೊತ್ತಿಲ್ಲ! ಈ ನಡುವೆ, ಕಳೆದ ವಾರ ದಿಢೀರನೇ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಆತ ಸೀದಾಸಾದಾ ಮನುಷ್ಯನಂತೆ ಏಕಾಂಗಿಯಾಗಿ ಕೈಬೀಸಿಕೊಂಡು ನಡೆದುಕೊಂಡು ಹೋಗಿ ಆಟೋ ಹತ್ತಿಕೊಂಡು ಹೋಗಿದ್ದು ಟಿವಿ ಕ್ಯಾಮರಾಗಳಲ್ಲೇ ಸೆರೆಯಾಗಿತ್ತು. ಕ್ಯಾಮರಾಗಳ ಮುಂದೆ ಮಾತನಾಡಿದ್ದ ಆತ, ತನ್ನ ತಂದೆಗೆ ಅನಾರೋಗ್ಯವಾಗಿದೆ. ಹಾಗಾಗಿ ತಾನು ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದ.
ಆದರೆ, ಅದೇ ಕೊನೆಯ ಬಾರಿ ಆತ ಕಾಣಿಸಿಕೊಂಡದ್ದು. ಆ ಬಳಿಕ ಆತನ ಜೀವಕ್ಕೆ ಅಪಾಯವಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸರ್ಕಾರದ ಗಮನ ಸೆಳೆದಿದ್ದರು. ಜೊತೆಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಘಟಾನುಘಟಿ ನಾಯಕರ ಹೆಸರುಗಳೊಂದಿಗೆ ತಳಕು ಹಾಕಿಕೊಂಡಿರುವ ಹೈಪ್ರೊಫೈಲ್ ಪ್ರಕರಣದ ಕೇಂದ್ರಬಿಂದುವಾದ ಆ ವ್ಯಕ್ತಿಯನ್ನು ಪೊಲೀಸರು ಹಾಗೆ ಬಿಟ್ಟಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯೂ ನಡೆದಿತ್ತು. ಆ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದಲೂ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಎಲ್ಲಿದ್ದಾನೆ ಎಂಬುದು ಸ್ವತಃ ಆತನ ಮನೆಮಂದಿಗೂ ಗೊತ್ತಿಲ್ಲ ಮತ್ತು ಆತನಿಗೆ ಭದ್ರತೆ ನೀಡಲು ಪರದಾಡುತ್ತಿರುವ ಬೆಂಗಳೂರು ಪೊಲೀಸರಿಗೂ ಆತನ ಸುಳಿವು ಸಿಕ್ಕಿಲ್ಲ!
ಇನ್ನೊಂದು ಕಡೆ ಬಿಟ್ ಕಾಯಿನ್ ಪ್ರಕರಣ ಸಂಬಂಧ ವೈರಲ್ ಆಗಿದ್ದ ಪೊಲೀಸ್ ಅಧಿಕಾರಿಗಳ ನಡುವಿನ ಸಂಭಾಷಣೆಯ ಆಡಿಯೋ ಹಿಂದೆ ಸಿಸಿಬಿಯ ಮಹಿಳಾ ಐಪಿಎಸ್ ಅಧಿಕಾರಿಯ ಕೈವಾಡ ಇದೆ ಎನ್ನಲಾಗುತ್ತಿದೆ.
ವೈರಲ್ ಆಡಿಯೋ ಕುರಿತು ಸಿಐಡಿ ಪೊಲೀಸರು ತನಿಖೆ ಮಾಡಿದ್ದು, ಅದು ನಿವೃತ್ತ ಸಬ್ ಇನ್ಸ್ಪೆಕ್ಟರ್ ಮತ್ತು ಹೆಡ್ ಕಾನ್ಸಟೇಬಲ್ ನಡುವಿನ ಮಾತುಕತೆಯ ಆಡಿಯೋ ಎಂದು ಖಚಿತವಾಗಿದೆ. ಆದರೆ ಸಬ್ ಇನ್ಸಪೆಕ್ಟರ್ಗೆ ಮೊದಲು ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಕಾಲ್ ಮಾಡಿದ್ದರು. ನಂತರ ಸಬ್ ಇನ್ಸ್ಪೆಕ್ಟರ್ ಹೆಡ್ ಕಾನ್ ಸ್ಟೇಬಲ್ಗೆ ಕಾನ್ಫರೆನ್ಸ್ ಕರೆ ಹಾಕಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಸದ್ಯ ಈ ಕುರಿತು ಸಿಐಡಿಯಿಂದ ಡಿಜಿ, ಐಜಿಪಿಗೆ ಅಂತರಿಕ ವರದಿ ಸಲ್ಲಿಕೆಯಾಗಿದೆ ಎಂದು ವರದಿಯಾಗಿದೆ.
ಈ ನಡುವೆ ಸಿಐಡಿ ಪೊಲೀಸರು, ಶ್ರೀಕಿ ಸಹಚರ ರಾಬಿನ್ ಖಂಡೇಲ್ ವಾಲಾನಿಂದ ವಶಪಡಿಸಿಕೊಂಡಿರುವ ಆರು ಹಾರ್ಡ್ ಡಿಸ್ಕ್ಗಳ ಪೈಕಿ ಒಂದನ್ನ ವಿಶ್ಲೇಷಣೆ ಮಾಡಿದ್ದಾರೆ. ಅದರಲ್ಲೀ, ಶ್ರೀಕೃಷ್ಣ ಕೇವಲ ಬಿಟ್ ಕಾಯಿನ್ ವೆಬ್ ಸೈಟ್ಗಳಲ್ಲದೆ ಝೊಮ್ಯಾಟೊ ವೆಬ್ ಸೈಟ್, ಕೆಲವೊಂದು ಹಣಕಾಸು ವ್ಯವಹಾರದ ವೆಬ್ಸೈಟ್ಗಳನ್ನು ಕೂಡ ಹ್ಯಾಕ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಹೀಗೆ ತನಿಖೆಯ ವಿವಿಧ ಹಂತಗಳು ಇನ್ನೂ ಪ್ರಗತಿಯಲ್ಲಿರುವಾಗ, ಹೊಸ ಹೊಸ ಅಕ್ರಮಗಳು ಬಯಲಿಗೆ ಬರುತ್ತಿರುವಾಗ, ತನಿಖಾ ಸಂಸ್ಥೆಗಳು ಇಡೀ ಪ್ರಕರಣ ಸೂತ್ರಧಾರನನ್ನು ಅಬ್ಬೇಪಾರಿಯಂತೆ ಬಿಟ್ಟುಕಳಿಸಿರುವುದು ಗಂಭೀರ ಅನುಮಾನಗಳಿಗೆ ಎಡೆಮಾಡಿದೆ.
ಹತ್ತು ಸಾವಿರ ಕೋಟಿಗೂ ಹೆಚ್ಚು ಮೊತ್ತದ ಅಂತಾರಾಷ್ಟ್ರೀಯ ಹಗರಣದ ಸೂತ್ರಧಾರನೊಬ್ಬನನ್ನು ಹಾಗೆ ಸಾದಾಸೀದಾ ಸಾಮಾನ್ಯನೊಬ್ಬನನ್ನು ಬಿಟ್ಟು ಕಳಿಸಿದಂತೆ ಕಳಿಸಿದ ಬೆಂಗಳೂರು ಪೊಲೀಸರು, ಆತನ ವಿರುದ್ಧದ ವಿವಿಧ ಪ್ರಕರಣಗಳ ತನಿಖೆ ನಡೆಸಿದ್ದ ಸಿಸಿಬಿ, ಇದೀಗ ತನಿಖೆಯನ್ನು ವಹಿಸಿಕೊಂಡಿರುವ(ಸಿಎಂ ಹೇಳಿಕೆ ಪ್ರಕಾರ) ಜಾರಿ ನಿರ್ದೇಶನಾಲಯ(ಇಡಿ) ಮತ್ತು ಸಿಐಡಿ ಸೇರಿದಂತೆ ಇಡೀ ಪೊಲೀಸ್ ಮತ್ತು ಕಾನೂನು ವ್ಯವಸ್ಥೆಯೇ ಈಗ ಶಂಕೆಗೆ ಗುರಿಯಾಗಿದೆ.








