ಕಳೆದೊಂದು ವರ್ಷದಿಂದಲೂ ವರುಣ್ ಗಾಂಧಿ ಬಿಜೆಪಿ ತೊರೆಯುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಲೇ ಇದೆ. ಕಳೆದ ಕೆಲವು ದಿನಗಳಿಂದ ಅವರು ತೆಗೆದುಕೊಳ್ಳುತ್ತಿರುವ ರಾಜಕೀಯ ನಿಲುವುಗಳು ಈ ವದಂತಿಗಳಿಗೆ ಮತ್ತಷ್ಡು ಪುಷ್ಟಿ ಒದಗಿಸುತ್ತಿವೆ.
ಹಿಂದುತ್ವದ ಹರಿಕಾರನಾಗಿ ರಾಜಕೀಯ ಜೀವನ ಪ್ರಾರಂಭಿಸಿದವರು ವರುಣ್. 1999ರಲ್ಲಿ ಫಿಲಿಬಿತ್ ಕ್ಷೇತ್ರದಲ್ಲಿ ಅವರ ತಾಯಿ ಲೋಕಸಭಾ ಕಣಕ್ಕಿಳಿದಾಗ ಮೊದಲ ಬಾರಿಗೆ ವರುಣ್ ಪ್ರಚಾರಕ್ಕೆ ಹೋಗಿ ರಾಜಕೀಯ ಜೀವನಕ್ಕೆ ಅಧಿಕೃತವಾಗಿ ಪ್ರವೇಶಿಸಿದ್ದರು. 2004ರಲ್ಲಿ ಎನ್ಡಿಎ ಭಾಗವಾಗಿದ್ದ ಬಿಜೆಪಿಯನ್ನು ಅಧಿಕೃತವಾಗಿ ಸೇರ್ಪಡೆಗೊಂಡ ಮೇನಕಾ ಗಾಂಧಿ ಜತೆಗೆ ಮಗ ವರುಣ್ ಗಾಂಧಿ ಕೂಡ ಬಿಜೆಪಿ ಭಾಗವಾದರು. ಆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ 40 ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಕೈಗೊಂಡು ಬಿಜೆಪಿ ಫೈರ್ ಬ್ರ್ಯಾಂಡ್ ಎಂದೇ ಚಿರಪರಿಚಿತರಾದರು. 2009ರಲ್ಲಿ ಫಿಲಿಬಿತ್ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಜಯಗಳಿಸಿದ್ದ ಮನೇಕಾ ಗಾಂಧಿಯ ಬದಲಾಗಿ ವರುಣ್ ಗಾಂಧಿಯನ್ನೇ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಇಳಿಸಲು ಬಿಜೆಪಿ ನಿರ್ಧರಿಸಿತು. ಅದರಂತೆ ಕಾಂಗ್ರೆಸ್ಸಿನ ವಿ.ಎಂ. ಸಿಂಗ್ ಅವರನ್ನು ಸೋಲಿಸಿ ವರುಣ್ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಅದೇ ಚುನಾವಣೆಯಲ್ಲಿ ಸುಲ್ತಾನಪುರ ಕ್ಷೇತ್ರದಿಂದ ಮನೇಕಾ ಸ್ಪರ್ಧಿಸಿ ಗೆದ್ದರು. ಆ ನಂತರ 2013ರಲ್ಲಿ ಬಿಜೆಪಿಯ ಕಿರಿಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕವಾದರು. 2014ರಲ್ಲಿ ತಾಯಿಯ ಕ್ಷೇತ್ರ ಸುಲ್ತಾನಪುರದಿಂದ ಮತ್ತು 2019ರಲ್ಲಿ ಮತ್ತೆ ಫಿಲಿಬಿತ್ ನಿಂದ ಸ್ಪರ್ಧಿಸಿ ಗೆಲುವು ಕಂಡರು.
2009ರ ವರುಣ್ ಗಾಂಧಿಗೂ 2019ರ ವರುಣ್ ಗಾಂಧಿಗೂ ಅಜಗಜಾಂತರವಿತ್ತು. 2009ರಲ್ಲಿ ಬುದ್ಧಿಜೀವಿಗಳಿಂದ, ಪ್ರಗತಿಪರರಿಂದ, ದೇಶದ ಪ್ರಜ್ಞಾವಂತ ರಾಜಕೀಯ ವಲಯದಿಂದ ವರುಣ್ ವ್ಯಾಪಕ ಟೀಕೆ ಎದುರಿಸಿದ್ದರು. ಆ ಮಟ್ಟಿಗಿನ ದ್ವೇಷದ ಭಾಷಣ, ಸಮಾಜವನ್ನು ಒಡೆಯುವ, ಕೋಮು ಧ್ರುವೀಕರಣದ ಮಾತುಗಳನ್ನಾಡಿದ್ದರು ಅವರು. ಫಿಲಿಬಿತ್ನ ದಾಲ್ ಚಂದ್ ಮೊಹಲ್ಲಾದಲ್ಲಿ ಅವರು ಮಾಡಿದ ಮುಸ್ಲಿಂ ದ್ವೇಷಿ ಭಾಷಣಕ್ಕಾಗಿ ಅವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಅದೇ ವರುಣ್ ಗಾಂಧಿ 2019ರಲ್ಲಿ ಅದೇ ವಲಯದಿಂದ ಪ್ರಬುದ್ಧ ರಾಜಕಾರಣಿಯಾಗುತ್ತಿದ್ದಾರೆ ಎಂದು ಅನ್ನಿಸಿಕೊಂಡಿದ್ದರು.
ಇತ್ತೀಚೆಗೆ ಲಖಿಂಪುರ್ ಖೇರಿ ಘಟನೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದ ಅವರು ರೈತ ಪ್ರತಿಭಟನೆಯನ್ನು ಹಿಂದೂ- ಸಿಖ್ ನಡುವಿನ ಕದನವನ್ನಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿ ಕಾರಿದ್ದರು . ಇದನ್ನು ಅನೈತಿಕ ಮತ್ತು ಅಪಾಯಕಾರಿ ಎಂದು ಕರೆದ ಅವರು “ರಾಷ್ಟ್ರೀಯ ಐಕ್ಯತೆಗಿಂತ ಒಂದು ಹೆಜ್ಜೆ ಮುಂದೆ ರಾಜಕೀಯ ಲಾಭಗಳನ್ನು ಇರಿಸಬೇಡಿ” ಎಂದು ಹೇಳಿದ್ದರು. ಅಲ್ಲದೆ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ರೈತರಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮಾತನಾಡಿದ ಭಾಷಣದ ತುಣಕೊಂದನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ‘ವಿಶಾಲ ಹೃದಯದ ನಾಯಕನಿಂದ ಜಾಣ್ಮೆಯ ಮಾತುಗಳು ‘ ಎಂಬ ಶೀರ್ಷಿಕೆಯನ್ನೂ ನೀಡಿ ಬಿಜೆಪಿಯ ಕೇಂದ್ರ ನಾಯಕರನ್ನು ಕೆಣಕಿದ್ದರು. ಇದಾಗಿ ಕೆಲವೇ ಘಂಟೆಗಳಲ್ಲಿ ವರುಣ್ ಮತ್ತವರ ತಾಯಿ ಮೇನಕಾ ಗಾಂಧಿಯವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಕೈ ಬಿಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು”ಯಾವುದೇ ಹುದ್ದೆ ನನ್ನನ್ನು ಸತ್ಯ ಹೇಳದಿರುವಂತೆ ತಡೆಯಲು ಸಾಧ್ಯವಿಲ್ಲ” ಎಂದಿದ್ದರು.
ಇದೀಗ “ಭಾರತಕ್ಕೆ 1947ರಲ್ಲಿ ಸಿಕ್ಕಿದ್ದು ಭಿಕ್ಷೆ, ನಿಜವಾದ ಸ್ವಾತಂತ್ರ್ಯ 2014ರಲ್ಲಿ ಸಿಕ್ಕಿತು” ಎಂದು ಹೇಳಿಕೆ ನೀಡಿರುವ ಕಂಗನಾ ಅವರನ್ನು ತೀವ್ರವಾಗಿ ಟೀಕಿಸಿರುವ ವರುಣ್ “ಹಲವು ಬಾರಿ ಮಹಾತ್ಮಗಾಂಧಿ ಅವರ ತ್ಯಾಗವನ್ನು ಅಪಮಾನಿಸಲಾಯಿತು, ಹಲವು ಬಾರಿ ಮಹಾತ್ಮರನ್ನು ಕೊಂದವರನ್ನು ಹೊಗಳಲಾಯಿತು. ಈಗ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನ ಮಾಡಲಾಗಿದೆ. ಹುತಾತ್ಮರಾದ ಮಂಗಲ ಪಾಂಡೆ, ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ನೇತಾಜಿ ಸೇರಿದಂತೆ ಅನೇಕರ ತ್ಯಾಗವನ್ನು ಕಡೆಗಣಿಸಲಾಗಿದೆ. ಇದು ಹುಚ್ಚುತನವೇ ಅಥವಾ ದೇಶದ್ರೋಹವೇ” ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಲಖಿಂಪುರ ಖೇರಿ ಘಟನೆಯನ್ನು ಖಂಡಿಸಿದಾಗ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಅವರನ್ನು ಕೈ ಬಿಟ್ಟಿದ್ದ ಬಿಜೆಪಿಯು ಈಗ ಅವರ ಮೇಲೆ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲವಿದೆ. ಆದರೆ ಸೋಶಿಯಲ್ ಮೀಡಿಯಾದಾದ್ಯಂತ ಬಿಜೆಪಿ ಕಾರ್ಯಕರ್ತರು ವರುಣ್ ಹೇಳಿಕೆಯನ್ನು ಬೆಂಬಲಿಸುತ್ತಿದ್ದಾರೆ. ಹತ್ತಿರದಲ್ಲೇ ಚುನಾವಣೆಯನ್ನು ಎದುರಿಸಲಿರುವ ಉತ್ತರ ಪ್ರದೇಶದಲ್ಲಿ ವರುಣ್ ಕೇವಲ ಒಬ್ಬ ಎಂಪಿಯಾಗಿ ಮಾತ್ರ ಗುರುತಿಸಿಕೊಳ್ಳುತ್ತಿಲ್ಲ ಬದಲಾಗಿ ಅವರೊಬ್ಬ ತಳಮಟ್ಟದ ನಾಯಕ. ಹಾಗಾಗಿ ಅಲ್ಲಿನ ಚುನಾವಣೆಯಲ್ಲಿ ಅವರ ಮಾತು, ನಡೆ ನುಡಿಗಳು ಖಂಡಿತಾ ಪ್ರಭಾವ ಬೀರಲಿದೆ ಎನ್ನುವುದು ಬಿಜೆಪಿ ನಾಯಕರಿಗೂ ಗೊತ್ತು. ಹಾಗಾಗಿಯೇ ವರುಣ್ ಗಾಂಧಿ ಹೇಳಿಕೆ ರಾಜಕೀಯವಾಗಿ ಈ ಮಟ್ಟಕ್ಕೆ ಗಮನ ಸೆಳೆದಿರುವುದು.
ಬಿಜೆಪಿಯಲ್ಲಿ ನೆಹರು-ಗಾಂಧಿ ಪರಿವಾರದವರನ್ನು ಒಂದು ಹಂತಕ್ಕೆ ಮೀರಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುವುದಕ್ಕೆ ವರುಣ್ ಸ್ಪಷ್ಟ ಮತ್ತು ತಾಜಾ ಉದಾಹರಣೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ವದಂತಿಯನ್ನು ವರುಣ್ ಸದ್ಯಕ್ಕೆ ಸ್ಪಷ್ಟವಾಗಿ ಅಲ್ಲಗೆಳೆದಿದ್ದಾರೆ. ಆದರೆ ಬದಲಾದ ಭಾರತದಲ್ಲಿ ಅವರು ಬದಲಾಗಲಾರರು ಎನ್ನುವುದಕ್ಕೆ ಮಾತ್ರ ಯಾವ ಖಾತರಿಯೂ ಇಲ್ಲ.













