ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಾನು ಮಾರಾಟ ಮಾಡುವ ಸರ್ಕಾರಿ ಸಾಲಪತ್ರಗಳಲ್ಲಿ (ಬಾಂಡ್ ಮತ್ತು ಸೆಕ್ಯುರಿಟೀಸ್) ಜನಸಾಮಾನ್ಯರೂ ಹೂಡಿಕೆ ಮಾಡಲು ಅವಕಾಶ ನೀಡುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಚಿಲ್ಲರೆ ನೇರ ಯೋಜನೆ (ರಿಟೇಲ್ ಡೈರೆಕ್ಟ್ ಸ್ಕೀಮ್) ಜತೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿರುವ ಸಮಗ್ರ ಸಾರ್ವಜನಿಕ ತನಿಖಾಧಿಕಾರಿ (ಒಂಬುಡ್ಸ್ಮನ್) ಯೋಜನೆಗೂ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಲಪತ್ರಗಳನ್ನು (ಬಾಂಡ್ ಮತ್ತು ಸೆಕ್ಯುರಿಟೀಸ್) ಆರ್ಬಿಐ ಮಾರಾಟ ಮಾಡುತ್ತದೆ. ಈ ಮಾರಾಟ ಪ್ರಕ್ರಿಯೆಯಲ್ಲಿ ಸಾಂಸ್ಥಿಕ ಹೂಡಿಕೆದಾರರಷ್ಟೇ ಪಾಲ್ಗೊಳ್ಳುತ್ತಿದ್ದು, ಸಾಮಾನ್ಯ ಗ್ರಾಹಕರಿಗೆ ಅವಕಾಶ ಇರಲಿಲ್ಲ.
ಆಸಕ್ತರು ಬ್ಯಾಂಕುಗಳ ಇಲ್ಲವೇ ಹಣಕಾಸು ಸಂಸ್ಥೆಗಳ ಮೂಲಕ ಖರೀದಿ ಮಾಡಬೇಕಿತ್ತು. ಅದಕ್ಕೆ ಕಮಿಷನ್ ಸಹ ನೀಡಬೇಕಿತ್ತು. ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆಯ ಸ್ವರೂಪ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸಾಲಪತ್ರಗಳಲ್ಲೂ ಜನಸಾಮಾನ್ಯರು ಹೂಡಿಕೆ ಮಾಡಲು ಉತ್ತೇಜಿಸುವ ಸಲುವಾಗಿ ಚಿಲ್ಲರೆ ನೇರ ಯೋಜನೆಯನ್ನು ರೂಪಿಸಲಾಗಿದೆ.

ನೂತನ ಯೋಜನೆಯಡಿ ಜನಸಾಮಾನ್ಯರು ನೇರವಾಗಿ ಆರ್ಬಿಐನಲ್ಲೇ ನೊಂದಾಯಿಸಿಕೊಂಡು ಆರ್ಬಿಐ ಮೂಲಕವೇ ಸಾಲಪತ್ರಗಳನ್ನು ಖರೀದಿಸಬಹುದು. ಈ ವ್ಯವಸ್ಥೆಯಿಂದಾಗಿ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳ ಮೂಲಕ ಖರೀದಿಸಿದಾಗ ಪಾವತಿಸಬೇಕಾದ ಕಮಿಷನ್ ಪಾವತಿಸುವ ಅಗತ್ಯ ಇರುವುದಿಲ್ಲ. ಈ ಕ್ರಮದಿಂದಾಗಿ ಸರ್ಕಾರಿ ಸಾಲಪತ್ರಗಳಿಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ನೇರ ಚಿಲ್ಲರೆ ಯೋಜನೆಗೆ ಪೂರಕವಾಗಿ ಮತ್ತು ಬೆಂಬಲವಾಗಿ ಸಮಗ್ರ ತನಿಖಾಧಿಕಾರಿ ಯೋಜನೆಯನ್ನು ಆರ್ಬಿಐ ರೂಪಿಸಿದೆ. ಆರ್ಬಿಐ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಪ್ರಾಧಿಕಾರ ಮತ್ತಿತರ ಸಂಸ್ಥೆಗಳಲ್ಲಿ ಗ್ರಾಹಕರಿಗೆ ಆಗುವ ನಷ್ಟ ಅಥವಾ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಒಂಬುಡ್ಸ್ ಮನ್ (ಸಾರ್ವಜನಿಕ ತನಿಖಾಧಿಕಾರಿ) ವ್ಯವಸ್ಥೆ ಈಗ ಇದೆ. ಹಾಲಿ ವ್ಯವಸ್ಥೆಯಡಿ ಬೇರೆ ಬೇರೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳಿಗೆ ಪ್ರತ್ಯೇಕ ಒಂಬುಡ್ಸ್ ಮನ್ ಗಳಿದ್ದಾರೆ. ಆದರೆ, ಗ್ರಾಹಕರ ದೂರುಗಳನ್ನು ನಿವಾರಿಸುವ ಪ್ರಕ್ರಿಯೆ ನಿಧಾನವಾಗುತ್ತಿದೆ.
ನೂತನ ವ್ಯವಸ್ಥೆಯಡಿ ದೇಶವ್ಯಾಪಿ ಗ್ರಾಹಕರು ಒಂದೇ ಇ-ಮೇಲ್, ಒಂದೇ ಅಂಚೆ ವಿಳಾಸ ಮತ್ತು ಒಂದೇ ವೆಬ್ ಸೈಟ್ ನಲ್ಲಿ ದೂರು ದಾಖಲಿಸಬಹುದು. ಬ್ಯಾಂಕ್ ಯಾವುದೇ ಆಗಲೀ, ಹಣಕಾಸು ಸಂಸ್ಥೆ ಯಾವುದೇ ಆಗಲಿ ಗ್ರಾಹಕರು ಸಲ್ಲಿಸಬೇಕಾದ ದೂರಿನ ವಿಳಾಸ, ಇಮೇಲ್ ಮತ್ತು ವೆಬ್ ಸೈಟ್ ಒಂದೇ ಆಗಿರುತ್ತದೆ. ಇದು ಸಾರ್ವಜನಿಕ ತನಿಖಾಧಿಕಾರಿಗಳ ಸೇವೆಯನ್ನು ಗ್ರಾಹಕರು ಬಳಸಿಕೊಳ್ಳಲು ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ ಮತ್ತು ದೂರು ಸಲ್ಲಿಕೆ ಪ್ರಕ್ರಿಯೆಗಳು ಸುಲಭವಾಗಿರುತ್ತದೆ ಎಂದು ಆರ್ಬಿಐ ಹೇಳಿದೆ.

ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಜನಸಾಮಾನ್ಯರು ಕೂಡಾ ಸಮಗ್ರ ಸಾರ್ವಜನಿಕ ತನಿಖಾಧಿಕಾರಿ ಯೋಜನೆ ವ್ಯಾಪ್ತಿಯಲ್ಲಿ ದೂರುಗಳನ್ನು ದಾಖಲಿಸಿ ತ್ವರಿತಗತಿಯಲ್ಲಿ ಪರಿಹಾರ ಪಡೆಯಬಹುದಾಗಿದೆ.
ಈ ಎರಡೂ ಯೋಜನೆಗಳಿಂದಾಗಿ ಸರ್ಕಾರಿ ಸಾಲಪತ್ರಗಳಲ್ಲಿ ಜನಸಾಮಾನ್ಯರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಲು ಉತ್ತೇಜಿಸಿದಂತಾಗುತ್ತದೆ ಎಂದು ಆಶಿಸಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ನ ಈ ಎರಡೂ ಗ್ರಾಹಕ ಕೇಂದ್ರಿತ ಉಪಕ್ರಮಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೂಡ ಪಾಲ್ಗೊಂಡಿದ್ದರು.






