ಮಂಗಳೂರಿನ ಸುರತ್ಕಲ್ ಜಂಕ್ಷನ್ ಗೆ ವೀರ ಸಾವರ್ಕರ್ ಅವರ ಹೆಸರನ್ನಿಡಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವೈ. ಭರತ್ ಶೆಟ್ಟಿ ಮಂಗಳೂರು ಮಹಾನಗರ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಿರುವುದು ಕರಾವಳಿಯಲ್ಲಿ ಗದ್ದಲ ಎಬ್ಬಿಸಿದೆ.
ಈ ಹೇಳಿಕೆಗೆ ಉಳ್ಳಾಲ ಕಾಂಗ್ರೆಸ್ನ ಮಾಜಿ ಸಚಿವ ಯು. ಟಿ. ಖಾದರ್ ವಿರೋಧ ವ್ಯಕ್ತಪಡಿಸಿದ್ದು, ವಿವಿಧ ನಗರಗಳ ಸಾರ್ವಜನಿಕ ಸ್ಥಳಗಳಲ್ಲಿ ಸಾವರ್ಕರ್ ಹೆಸರನ್ನು ಇಡಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ವೀರ ಸಾವರ್ಕರ್ ಅವರ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದಾರೆ.
ಜಂಕ್ಷನ್ಗೆ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಬಹುದು ಎಂದು ಯು.ಟಿ.ಖಾದರ್ ಹೇಳಿದ ಅವರು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವೀರ್ ಸಾವರ್ಕರ್ ಭಾಗವಹಿಸಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಅವರು ಬ್ರಿಟಿಷರಿಗೆ ಕ್ಷಮೆಯಾಚಿಸುವ ಪತ್ರವನ್ನು ಬರೆದಿದ್ದಾರೆ. ಆದ್ದರಿಂದ ಅವರ ಹೆಸರನ್ನು ಪ್ರಮುಖ ಜಂಕ್ಷನ್ಗೆ ಹೆಸರಿಸುವುದು ಸರಿಯಲ್ಲ ಎಂದು ಖಾದರ್ ಹೇಳಿದ್ದಾರೆ.
ಈ ಹಿಂದೆ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಲಾಯಿತು. ಅಂಡಮಾನ್ನ ಸೆಲ್ಯುಲಾರ್ ಜೈಲಿನಲ್ಲಿ ಅನೇಕರು ಪ್ರಾಣ ತ್ಯಾಗ ಮಾಡಿದ್ದಾರೆ. ಜಂಕ್ಷನ್ಗೆ ಸಾವರ್ಕರ್ ಹೆಸರಿಡುವ ಬದಲು ಶ್ರೀನಿವಾಸ್ ಮಲ್ಯ, ಕುದ್ಮುಲ್ ರಂಗರಾವ್, ಕಾರ್ನಾಡ್ ಸದಾಶಿವರಾವ್ ಮತ್ತು ಜನಾರ್ದನ ಪೂಜಾರಿ ಅವರ ಹೆಸರನ್ನು ಮರುನಾಮಕರಣ ಮಾಡಬಹುದಲ್ವ ಎಂದು ಖಾದರ್ ತಿಳಿಸಿದ್ದಾರೆ.

ವಿವಾದಿತ ವ್ಯಕ್ತಿಯ ಹೆಸರಿಡುವುದು ಸರಿಯಲ್ಲ- ಎಸ್ ಡಿ ಪಿ ಐ ಖಂಡನೆ!
ಸುರತ್ಕಲ್ ಜಂಕ್ಷನ್ ಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಸ್ಥಳಕ್ಕೆ ವಿವಾದಿತ ವ್ಯಕ್ತಿಯ ಹೆಸರನ್ನು ಇಡುವುದು ಸರಿಯಲ್ಲ, ಅಕಸ್ಮಾತ್ ಹೆಸರಿಟ್ಟರೆ ರಾಜ್ಯಾದ್ಯಂತ ತೀವ್ರವಾದ ಹೋರಾಟ ನಡೆಸಲಾಗುತ್ತದೆ ಎಂದು ಶಾಸಕರ ಈ ನಡೆಯನ್ನು ಎಸ್ ಡಿ ಪಿ ಐ ಖಂಡಿಸಿದೆ.
ಅದೇ ರೀತಿ ಶಾಸಕರು ಕೊಟ್ಟ ಪ್ರಸ್ತಾವನೆಯನ್ನು ಮಹಾನಗರ ಪಾಲಿಕೆ ಆಡಳಿತವು ತಿರಸ್ಕಾರ ಮಾಡಿ ಸಂವಿಧಾನಕ್ಕೆ ಗೌರವ ಕೊಡಬೇಕು, ಮಂಗಳೂರು ನಗರ ಪ್ರದೇಶಗಳಲ್ಲಿ ಬಹಳಷ್ಟು ಸಮಸ್ಯೆಗಳಿರುವಾಗ ಅದನ್ನು ಪರಿಹರಿಸಲು ಪಾಲಿಕೆ ವಿಶೇಷ ಗಮನ ಹರಿಸಬೇಕು. ಕೋಮುಸೂಕ್ಷ್ಮ ಪ್ರದೇಶವಾದ ಸುರತ್ಕಲ್ ಸದ್ಯ ಹಲವಾರು ವರ್ಷಗಳಿಂದ ಶಾಂತಿಯಿಂದ ಇದೆ ಇಂತಹ ಕಡೆಗಳಲ್ಲಿ ಬಿಜೆಪಿಯವರು ಅಶಾಂತಿ ಸೃಷ್ಟಿಸಲು ವ್ಯವಸ್ಥಿತ ಹುನ್ನಾರಗಳನ್ನು ನಡೆಸುತ್ತಿದೆ ಎಂದು ಎಸ್ಡಿಪಿಐ ಆರೋಪಿಸಿದೆ.
ಬಿಜೆಪಿ ಉತ್ತರ ಪ್ರದೇಶದ ಅಜೆಂಡಾವನ್ನು ದಕ್ಷಿಣ ಕನ್ನಡದಲ್ಲಿ ತರಲು ಬಯಸಿದರೆ ಎಸ್ಡಿಪಿಐ ಸುಮ್ಮನಿರುವುದಿಲ್ಲ, ನಂತರ ಕಾನೂನು ಹೋರಾಟ ಹಾಗೂ ಪ್ರತಿಭಟನೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ. ಇತ್ತೀಚೆಗಿನ ವರ್ಷಗಳಲ್ಲಿ ಅನೇಕ ಜನರ ಹತ್ಯೆಯಾಗಿದೆ. ಕ್ಷೇತ್ರವು ಕೋಮುಸೂಕ್ಷ್ಮವಾಗಿದ್ದು, ಬಿಜೆಪಿಯು ಜನರನ್ನು ಪ್ರಚೋದಿಸಬಾರದು ಎಂದು ಕಾಂಗ್ರೆಸ್ನ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ತಿಳಿಸಿದ್ದಾರೆ.

ಹೆಬ್ಬಾಳ ಮೇಲ್ಸೇತುವೆ ವಿವಾದ!
ಇತ್ತೀಚೆಗಷ್ಟೇ ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯ ರಾಜಧಾನಿಯಲ್ಲಿ ವಿವಾದ ಸೃಷ್ಟಿಸಿತ್ತು. ಆದರೆ ವಿರೋಧದ ನಡುವೆಯೂ ಬಿಜೆಪಿ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನಿಟ್ಟು ಉದ್ಘಾಟನೆ ಮಾಡಿತ್ತು. ಈ ವಿವಾದದಿಂದ ಹಲವಾರು ಜನ ಹೋರಾಟಕ್ಕಿಳಿದಿದ್ದರು. ಇದೇ ರೀತಿ ಕರಾವಳಿಯಲ್ಲಂತೂ ವಿವಾದಗಳು ಕಡಿಮೆ ಏನಲ್ಲ. ಒಂದಲ್ಲಾ ಒಂದು ವಿವಾದಗಳು ಸೃಷ್ಟಿಯಾಗುತ್ತಲೇ ಇವೆ. ವೀರ ಸಾವರ್ಕರ್ ಅವರ ಹೆಸರಿಡಲು ಪರ, ವಿರೋಧಗಳ ನಡುವೆ ಕರಾವಳಿಯ ಪರಿಸ್ಥಿತಿ ಮುಂದೇನಾಗುತ್ತದೆ ಕಾದುನೋಡಬೇಕಿದೆ.






