ಮಹಾರಾಷ್ಟ್ರದ ಅಹ್ಮದನಗರದಲ್ಲಿರುವ ಸಿವಿಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡು 10 ಮಂದಿ ಸಾವನಪ್ಪಿದ್ದಾರೆ ಮತ್ತು 7 ಮಂದಿಗೆ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಕಿ ಅನಾಹುತದಲ್ಲಿ ಇನ್ನಷ್ಟು ರೋಗಿಗಳು ಸಿಲುಕಿಕೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಅಗ್ನಿಶಾಮಕ ದಳ ಸಿಬ್ಬಂದಿಯು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳಕ್ಕೆ ಅಹ್ಮದ್ ನಗರ ಪೊಲೀಸರು ಕೂಡ ದೌಡಾಯಿಸಿದ್ದು ಅಗ್ನಿ ಅವಘಡದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಅಗ್ನಿ ಅವಘಡ ಸಂಭವಿಸಿದ ಅಮಯದಲ್ಲಿ ಐಸಿಯುನಲ್ಲಿ ಕನಿಷ್ಠ 20 ಮಂದಿ ರೋಗಿಗಳು ಇದ್ದರು ಎಂದು ಹೇಳಲಾಗುತ್ತಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
ಅಗ್ನಿ ಅವಘಡದ ಬಗ್ಗೆ ತನಿಖೆಗೆ ಆದೇಶಿಸಿರುವ ಮಹಾರಾಷ್ಟ್ರ ಸರ್ಕಾರ ಒಂದು ವಾರದ ಅವಧಿಯಲ್ಲಿ ಪ್ರಾಥಮಿಕ ವರದಿಯನ್ನು ಸಲ್ಲಿಸುವಂತೆ ವಿಭಾಗೀಯ ಆಯುಕ್ತರಿಗೆ ಸೂಚಿಸಿದೆ. ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಮೃತರ ಕುಟುಂಬಗಳಿಗೆ ತಲಾ 5ಲಕ್ಷ ಪರಿಹಾರವನ್ನ ಘೋಷಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ರಾಜೇಶ್ ಟೋಪೆ ಅಗ್ನಿ ಅವಘಡದಲ್ಲಿ ಮೃತಪಟ್ಟ ದುರ್ದೈವಿಗಳಲ್ಲಿ ಒಬ್ಬರು 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಉಳಿದವರು 60 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಹಾರಷ್ಟ್ರ ವಿಧಾನಸಭೆ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ತೀವ್ರ ಸಂತಾಪವನ್ನ ವ್ಯಕ್ತಪಡಿಸಿದ್ದಾರೆ ಮತ್ತು ಘಟನೆಯ ಸಂಪೂರ್ಣ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.