ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು 2 ವರ್ಷಗಳು ಬಾಕಿ ಇದೆ. ರಾಜ್ಯ ರಾಜಕಾರಣದಲ್ಲಿ ಈಗಿನಿಂದಲೇ ಚುನಾವಣಾ ಸಿದ್ಧತೆಗಳು ಆರಂಭವಾಗಿವೆ. ಅದಕ್ಕೆ ಪೂರಕವಾಗಿ 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಕ ಚುನಾವಣೆಗೆ ರಾಜ್ಯ ಬಿಜೆಪಿ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ.
ಆರ್ಎಸ್ಎಸ್ ಪ್ರಮುಖರ ಸೂಚನೆ ಮೇರೆಗೆ ನವೆಂಬರ್ ತಿಂಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಪಕ್ಷ ಸಂಘಟನೆಗೆ ವೇದಿಕೆ ಸಜ್ಜುಗೊಳಿಸಲು ಬಿಜೆಪಿ ನಿರ್ಧಾರ ಮಾಡಿದೆ. ಇದರ ಮೊದಲ ಹಂತವಾಗಿ, ನಳಿನ್ಕುಮಾರ್ ಕಟೀಲ್ರ ಜೊತೆಗೆ ಮಾತುಕತೆ ನಡೆಸಿದ್ದಾರೆ ಆರ್ಎಸ್ಎಸ್ನ ಪ್ರಮುಖರು. ಈಗಾಗಲೇ ರಾಜ್ಯ ಬಿಜೆಪಿಯಲ್ಲಿ ಆಗಿರುವ ನಾಯಕತ್ವ ಬದಲಾವಣೆ, ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರನ್ನು ಬದಲಿಸಲು ತೆರೆಮರೆಯಲ್ಲಿ ಸಿದ್ಧತೆ ಆರಭವಾಗಿದೆ.
ಇತ್ತೀಚೆಗೆ ಜನಾಶೀರ್ವಾದ ಯಾತ್ರೆಯ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೆ ಆಗಮಿಸಿದ್ದ ನಳಿನ್ಕುಮಾರ್ ಕಟೀಲ್ ಅವರಿಗೆ, ಮಂಗಳೂರಿನ ಆರ್ಎಸ್ಎಸ್ನ ಕಚೇರಿ, ಸಂಘ ನಿಕೇತನಕ್ಕೆ ಬರುವಂತೆ ಆರ್ಎಸ್ಎಸ್ನ ಪ್ರಮುಖರು ಆಹ್ವಾನ ನೀಡಿದ್ದರು. ಭೇಟಿಯ ಸಂದರ್ಭದಲ್ಲಿ, 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಕ್ಷೇತ್ರದ ಚುನಾವಣೆಯ ಹಿತದೃಷ್ಟಿಯಿಂದ ಪಕ್ಷದೊಳಗೆ ಬದಲಾವಣೆ ಮಾಡುವುದಾಗಿ ಆರ್ಎಸ್ಎಸ್ ಪ್ರಮುಖರು ಸೂಕ್ಷ್ಮವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಆರ್ಎಸ್ಎಸ್ನ ಬೈಠಕ್ನಲ್ಲಿ ಒಕ್ಕೊರಲ ನಿರ್ಧಾರವಾದ್ರೆ, ರಾಜ್ಯ ಬಿಜೆಪಿಯ ಸಾರಥಿಯನ್ನು ಬದಲಾವಣೆ ಮಾಡಬಹುದು. ಅದಕ್ಕೆ ನೀವು ಸಿದ್ಧವಾಗಿರಿ ಎಂದು ನಳಿನ್ಕುಮಾರ್ ಕಟೀಲ್ರಿಗೆ ಆರ್ಎಸ್ಎಸ್ನ ಪ್ರಮುಖರು ತಿಳಿಸಿದ್ದಾರೆ ಎನ್ನಲಾಗಿದ್ದು, ಈ ವರ್ಷದ ಅಂತ್ಯದೊಳಗೆ ಸಂಘಟನೆಯ ಕೆಲಸ ಕಾರ್ಯಗಳು ಆರಂಭವಾಗಬೇಕಾಗಿರುವ ಕಾರಣ, ನಿಮ್ಮನ್ನು ಆ ಸ್ಥಾನದಿಂದ ಬದಲಾವಣೆ ಮಾಡಬೇಕಾಗಬಹುದು ಎಂದಿದ್ದಾರಂತೆ.
![](https://pratidhvani.com/wp-content/uploads/2021/10/Nalin-Kumar-Kateel-1-1024x576.jpg)
ಜೊತೆಗೆ ದಲಿತ, ಒಕ್ಕಲಿಗ, ಲಿಂಗಾಯತ ಹೀಗೆ ವಿವಿಧ ಸಮುದಾಯದ ನಾಯಕರಲ್ಲಿ ಒಬ್ಬರನ್ನು ಆಯ್ಕೆ ಮಾಡಿ, ಆ ಸ್ಥಾನಕ್ಕೆ ತಂದು ಕೂರಿಸಬಹುದು ಎಂದು ತಿಳಿಸಿರುವ ಆರ್ಎಸ್ಎಸ್, ಪ್ರಮುಖರ ಮಾತಿಗೆ ಖಂಡಿತವಾಗಿಯೂ ಪಕ್ಷದ ತತ್ವ, ಸಿದ್ಧಾಂತ ಹಾಗೂ ಸಂಘದ ಕಟ್ಟಪ್ಪಣೆಗೆ ನಾನು ಸಿದ್ಧ ಎಂದಿದ್ದಾರೆ ಅಂತ ಹೇಳಲಾಗ್ತಿದೆ.
ಇನ್ನು ಇದರ ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪರನ್ನು ಸದ್ಭಳಕೆ ಮಾಡಿಕೊಳ್ಳಲು ಪಕ್ಷ ನಿರ್ಧಾರ ಕೈಗೊಂಡಿದ್ದು, ಯಡಿಯೂರಪ್ಪರನ್ನು ರಾಜ್ಯದ್ಯಾಂತ ಪ್ರವಾಸ ಮಾಡುವಂತೆ ತಿಳಿಸಿ, ಆ ಮೂಲಕವು ಸಂಘಟನೆಗೆ ಒತ್ತು ನೀಡಲು ಬಿಜೆಪಿ ನಿರ್ಧಾರ ಮಾಡಿದೆ. ಹೀಗೆ ಸಾಲು ಸಾಲು ಕಾರ್ಯಕ್ರಮಗಳ ಮೂಲಕ , 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಅಕ್ಟೋಬರ್ನಿಂದಲೇ ಬಿಜೆಪಿ ಸಜ್ಜಾಗುತ್ತಿದೆ.
ಕಳೆದ ವರ್ಷ ಜನವರಿಯಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗಾಗಿ ನಡೆದ ಔಪಚಾರಿಕ ಚುನಾವಣೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದರು. ನಗರದ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಔಪಚಾರಿಕ ಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವಿರೋಧ ಆಯ್ಕೆಯಾಗಿದ್ದರು.
![](https://pratidhvani.com/wp-content/uploads/2021/10/pratidhvani_2021-04_29cee206-dc0f-4bab-800a-a1c9baf36790_Support_QR-300x300-1.jpg)
ಅಂದು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ವೇಳೆ ಮಾತಾಡಿದ್ದ ನಳಿನ್ ಕುಮಾರ್ ಕಟೀಲ್, ಸಾಮಾನ್ಯ ಕಾರ್ಯಕರ್ತನೊಬ್ಬ ಪ್ರಧಾನಿಯಾಗುವುದು, ಮುಖ್ಯ ಮಂತ್ರಿಯಾಗುವುದು, ರಾಜ್ಯಾಧ್ಯಕ್ಷನಾಗುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ನಾನು ರಾಜ್ಯವನ್ನು ಪ್ರತಿನಿಧಿಸಲಿದ್ದೇನೆ. ನಾನು ವಿದ್ವಾಂಸನಲ್ಲ, ಪಂಡಿತನೂ ಅಲ್ಲ. ನಾನು ಸಂಘದ ಸಾಮಾನ್ಯ ಕಾರ್ಯಕರ್ತ. ಸಂಘದ ಕಾರ್ಯಕರ್ತರು ನನ್ನ ಬೆಳೆಸಿದ್ದಾರೆ. ಕಾರ್ಯಕರ್ತರ ಅಪೇಕ್ಷೆಗೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆ. ಸಿಎಂ ಮತ್ತು ತಂಡದ ಮಾರ್ಗದರ್ಶನದಂತೆ ನಡೆಯುತ್ತೇನೆ. ಈ ಜವಾಬ್ದಾರಿಯನ್ನು ನಿರ್ವಹಿಸಲು ಭಯವೂ ಇದೆ, ಆತ್ಮವಿಶ್ವಾಸವೂ ಇದೆ. ಯಡಿಯೂರಪ್ಪನವರಂಥ ನಾಯಕರ ಆಶೀರ್ವಾದ ನನ್ನ ಮೇಲಿದೆ. ಯಡಿಯೂರಪ್ಪ, ಈಶ್ವರಪ್ಪ, ಅನಂತ್ ಕುಮಾರ್ ರಂಥವರ ಪರಿಶ್ರಮದಿಂದ ಪಕ್ಷ ಬೆಳೆದುಬಂದಿದೆ. ಆ ಪಕ್ಷವನ್ನು ನಾವು ಮುನ್ನಡೆಸಿಕೊಂಡು ಹೋಗಬೇಕಿದೆ ಎಂದು ಹೇಳಿದ್ದರು..