ಸಾಮಾಜಿಕ ಜಾಲತಾಣ ಹಾಗೂ ಮುಖ್ಯವಾಹಿನಿ ಮಾಧ್ಯಮಗಳು ನೂರು ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿದ ಕಾರಣಕ್ಕೆ ನರೇಂದ್ರ ಮೋದಿ ಸರ್ಕಾರದ ಬೆನ್ನು ತಟ್ಟುತ್ತಿರುವ ಸಂದರ್ಭದಲ್ಲಿ, ಕೋವಿಡ್ ಹಾಗೂ ಕೋವಿಡ್ ನಂತರದ ಪರಿಸ್ಥಿತಿಯ ಕಳಪೆ ನಿರ್ವಹಣೆಯಿಂದ ಪ್ರಾಣ ತೆತ್ತ, ಪ್ರಾಣ ಹಿಡಿಯಲು ಪರದಾಡುತ್ತಿರುವ ಹಾಗೂ ಒಂದು ಹೊತ್ತಿನ ಊಟಕ್ಕೂ ಒದ್ದಾಡುತ್ತಿರುವವರನ್ನು ಮರೆಯಲು ಸಾಧ್ಯವಿಲ್ಲ.
ಶಹಬ್ಬಾಸ್’ಗಿರಿ ನೀಡುವುದು ಪಡೆಯುವುದರ ಮಧ್ಯೆ, ಸರ್ಕಾರದ ಅಸೂಕ್ಷ್ಮತೆಗೆ ಹಾಗೂ ನಿರಾಸಕ್ತಿಗೆ ಒಳಗಾಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ದೇಶದ ಪ್ರಜೆಗಳ ಬೆನ್ನು ತಟ್ಟುವ ಅಗತ್ಯವಿದೆ. ಪ್ರಸ್ತುತ ಸರ್ಕಾರವು ನಡೆಸುತ್ತಿರುವ ಪ್ರಚಾರ ಅಭಿಯಾನವು ಹಲವು ವಿಧಗಳಲ್ಲಿ ತಪ್ಪಾಗಿ ಕಾಣುತ್ತದೆ. ಭಾರತವೆಂಬ ಹಡಗು ಮುಳುಗುತ್ತಿರುವ ಸಂದರ್ಭದಲ್ಲಿ ದೇಶವನ್ನು ಸಂಕಷ್ಟದಿಂದ ಮೇಲೆತ್ತಲು ಹಾಗೂ ನಿರಂತರವಾಗಿ ತೇಲುವಂತೆ ಮಾಡಲು ಶ್ರಮಪಟ್ಟವರಿಗೆ ಈ ಶ್ರೇಯ ತಲುಪಬೇಕಾಗಿದೆ. ಅಂದ ಹಾಗೇ, ಕರೋನಾ ಲಸಿಕೆ ವಿತರಣೆಯ ಪಟ್ಟಿ ಗಮನಿಸಿದರೆ 217 ದೇಶಗಳಲ್ಲಿ ಭಾರತವು 127ನೇ ಸ್ಥಾನದಲ್ಲಿದೆ. ದೇಶದ 20.6% ನಾಗರಿಕರು ಎರಡು ಡೋಸ್ ಲಸಿಕೆ ಪಡೆದಿದ್ದರೆ, 29.6% ಜನರು ಮಾತ್ರ ಒಂದು ಡೋಸ್ ಲಸಿಕೆ ಪಡೆದಿದ್ದಾರೆ.
ಪ್ರತೀ ಬಾರಿಯು ಬೆನ್ನು ತಟ್ಟಿಸಿಕೊಳ್ಳುವ ಚಪಲ ಹೊಂದಿರುವ ಸರ್ಕಾರದ ಬೆನ್ನು ತಟ್ಟುವ ಮುಂಚೆ ಇತರ ವಿಷಯಗಳ ಕುರಿತಾಗಿಯೂ ಆಲೋಚಿಸಬೇಕಿದೆ. ಜನವರಿ 21ರಿಂದ ಏಪ್ರಿಲ್ 16ರವರೆಗೆ 66.3 ಮಿಲಿಯನ್ ಡೋಸ್ ಲಸಿಕೆಯನ್ನು ರಫ್ತು ಮಾಡದಿದ್ದರೆ, ಲಸಿಕೆ ವಿತರಣೆಯ ಅಂಕಿ ಸಂಖ್ಯೆಗಳು ಮತ್ತಷ್ಟು ಬೆಳವಣಿಗೆಯನ್ನು ಕಾಣುತ್ತಿರಲಿಲ್ಲವೇ?
![](https://pratidhvani.com/wp-content/uploads/2021/10/PTI05_15_2021_000275B_1621165811775_1621165826331-1024x576.webp)
ವಾಸ್ತವದಲ್ಲಿ ಈ ಗುರಿ ತಲುಪುವ ಮೊದಲೇ, ಪ್ರಧಾನ ಮಂತ್ರಿ World Economic Forumನಲ್ಲಿ ಕೋವಿಡ್ ವಿರುದ್ದ ಜಯ ಸಾಧಿಸಿದ ಕಾರಣಕ್ಕೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದನ್ನು ಮರೆಯಬೇಕೇ?. ಇದೇ ಪ್ರಧಾನ ಮಂತ್ರಿ ಮಾಸ್ಕ್ ಧರಿಸದೇ ಪಶ್ಚಿಮ ಬಂಗಾಳದಲ್ಲಿ ಸಾವಿರಾರು ಕಾರ್ಯಕರ್ತರ ನಡುವೆ ಚುನಾವಣಾ ಪ್ರಚಾರ ನಡೆಸಿದ್ದನ್ನೂ ಮರೆಯಬೇಕೇ?
ಕರೋನಾ ಮೊದಲನೇ ಅಲೆಯ ಸಂದರ್ಭದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಕಾಲ್ನಡಿಗೆಯ ಮೂಲಕವೇ ತಮ್ಮ ಊರುಗಳನ್ನು ತಲುಪಿಲು ಪಟ್ಟ ಶ್ರಮವನ್ನು ನಾವು ಮರೆಯಬೇಕೇ?
![](https://pratidhvani.com/wp-content/uploads/2021/06/pratidhvani_2021-04_29cee206-dc0f-4bab-800a-a1c9baf36790_Support_QR.jpg)
ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಲಕ್ಷಾಂತರ ಭಾರತೀಯರು ಅಸಹಾಯಕರಾಗಿ, ಹತಾಶರಾಗಿ ಪ್ರಾಣ ಬಿಟ್ಟರಲ್ಲವೇ, ಇದನ್ನು ನಾವು ಮರೆಯಬೇಕೇ? ಕೋವಿಡ್ ಸಾವುಗಳು ವರದಿಯಾಗಿರುವ ದೇಶಗಳ ಪಟ್ಟಿಯನ್ನು ಗಮನಿಸಿದರೆ, 221 ದೇಶಗಳಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ.
ಆಸ್ಪತ್ರೆಗಳಲ್ಲಿ ಸರಿಯಾದ ದಾಖಲಾತಿ ಇಲ್ಲದೇ, ಚಿತಾಗಾರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೃತಪಟ್ಟವರ ಲೆಕ್ಕವನ್ನು ನಾವು ಇಲ್ಲಿ ತೆಕೊಂಡಿಲ್ಲ. ನದಿ ತೀರದಲ್ಲಿ ಹಾಗೂ ರಸ್ತೆ ಬದಿ ಅನಾಥರಂತೆ ಬಿಸಾಕಿ ಹೋಗಿದ್ದ ಶವಗಳ ಲೆಕ್ಕವನ್ನಂತೂ ನಾವು ಪರಿಗಣಿಸಲೇ ಇಲ್ಲ. ಜಾಗತಿಕವಾಗಿ ಈ ವಿಚಾರಗಳು ಚರ್ಚೆಗೆ ಬಂದರೂ, ‘ರಾಷ್ಟ್ರೀಯತೆಯ’ ಹೆಸರಿನಲ್ಲಿ ಸತ್ಯವನ್ನು ಹೊರಗೆಳೆದವರ ಮೇಲೆ ದಾಳಿ ನಡೆಸಲಾಯಿತು. ಶಹಬ್ಬಾಸ್ ಎಂದು ಸರ್ಕಾರದ ಬೆನ್ನು ತಟ್ಟುವ ಸಂದರ್ಭದಲ್ಲಿ ನಾವು ಇದನ್ನು ಮರೆಯಬೇಕೇ?
ಒಂದು ಗ್ಲಾಸಿನಲ್ಲಿ ಅರ್ಧ ನೀರು ತುಂಬಿ ಈ ಗ್ಲಾಸ್ ಅರ್ಧ ತುಂಬಿದೆಯೇ ಅಥವಾ ಅರ್ಧ ಖಾಲಿಯಿದೆಯೇ ಎಂಬ ವಿತಂಡ ವಾದ ಇದಲ್ಲ. ಇದು ಲಕ್ಷಾಂತರ ಜನರ ಕೋಪ, ನೋವು ಹಾಗೂ ಅಸಹಾಯಕತೆಗಳಿಗೆ ದನಿಯಾಗುವ ಯತ್ನ. ಖಂಡಿತವಾಗಿಯೂ ಜೀವನ ಮುಂದುವರೆಯುತ್ತದೆ. ಆದರೆ, ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ಸಾವನ್ನಪ್ಪಿದವರು ಇಂದು ಬದುಕಿದ್ದಿದ್ದರೆ, ಅವರೂ ನಮ್ಮೊಂದಿಗೆ ಸಂಭ್ರಮಾಚರಣೆ ನಡೆಸುತ್ತಿದ್ದರು. ಅವರಿಗೂ ಬದುಕುವ ಆಸೆಯಿತ್ತು.
ಅರ್ಧ ತುಂಬಿದ ಅಥವಾ ಖಾಲಿಯಿರುವ ನೀರಿನ ಗ್ಲಾಸ್ ಎಂಬ ವಾದ ಇದಲ್ಲ, ಏಕೆಂದರೆ ಆ ಗ್ಲಾಸ್ ಈಗಾಗಲೇ ಒಡೆದು ಹೋಗಿದೆ. ಈ ಗಾಜಿನ ತುಂಡುಗಳನ್ನು ಬದುಕಿರುವವರ ಮೇಲೆ ಪ್ರಯೋಗಿಸಿ ಅವರ ನೋವನ್ನು ಮತ್ತಷ್ಟು ಆಳವಾಗಿಸುವ ಪ್ರಯತ್ನ ಮಾಡಬಾರದು. ತಮ್ಮ ಪ್ರೀತಿಪಾತ್ರರ ಅಕಾಲಿಕ ಮರಣವನ್ನು ಇಂದಿಗೂ ಶೋಕಿಸುತ್ತಿರುವ ಜನರ ನೋವನ್ನು ಮತ್ತಷ್ಟು ಕೆದಕಬಾರದು.
ಇಂದು ಸಂಭ್ರಮಾಚರಣೆ ನಡೆಸುತ್ತಿರುವವರು, ಕರೋನಾದಿಂದ ಸಾವನ್ನಪ್ಪಿದವರಿಗೆ ಪರಿಹಾರ ನೀಡಬಾರದು ಎಂದು ಸುಪ್ರಿಂಕೋರ್ಟಿನಲ್ಲಿ ಶತ ಪ್ರಯತ್ನ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ವೆಚ್ಚದ ಸೆಂಟ್ರಲ್ ವಿಸ್ತಾ ಯೋಜನೆಯನ್ನಯ ಜಾರಿಗೆ ತರಲೂ ಅವರು ಕೋರ್ಟಿನಲ್ಲಿ ಹೋರಾಡಿದ್ದಾರೆ. ತಮ್ಮ ಮುಂದಿನ ಕಚೇರಿ ಮತ್ತು ಮನೆಯ ನಿರ್ಮಾಣವನ್ನು ಪರಿಶೀಲಿಸಲು ಹೋಗುವ ಇವರು, ಒಂದು ಆಸ್ಪತ್ರೆ ಅಥವಾ ಆಕ್ಸಿಜನ್ ಘಟಕವನ್ನು ನೋಡಲು ಇಷ್ಟಪಡುವುದಿಲ್ಲ.
ಇವರ ಕಿವಿಗಳಿಗೆ ಅಪ್ಪಳಿಸುವಂತೆ ನಾವು ಹೇಳಬೇಕಾಗಿದೆ, “ಇವರು ಭಾರತದ ಜನರೆದುರು ಕ್ಷಮಾಪಣೆ” ಕೇಳಬೇಕಿದೆ. ಜನರ ಸಂಘಟಿತ ನೋವನ್ನು ವೈಯಕ್ತಿಕ ನೋವಾಗಿ ಪರಿವರ್ತಿಸಲು ಸರ್ಕಾರ ಒಡುತ್ತಿರುವ ಯತ್ನವನ್ನು ನಾವು ಬೆಂಬಲಿಸಬೇಕೇ?
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ‘ವಿಭಜನೆಯ ದುರಂತ’ವನ್ನೂ ನೆನಪಿಸಿಕೊಳ್ಳಲು ನಮಗೆ ಹೇಳಿದ್ದರು.
“75 ವರ್ಷಗಳ ಹಿಂದೆ ನಡೆದಿದ್ದ ವಿಭಜನೆಯ ದುರಂತವನ್ನು ನೆನಪಿಸಿಕೊಳ್ಳಲು ಪ್ರಧಾನಿ ಹೇಳುತ್ತಾರೆ. ಆದರೆ, ಕೆಲವೇ ತಿಂಗಳುಗಳ ಹಿಂದೆ ನಡೆದಿದ್ದ ಕೋವಿಡ್ ದುರಂತವನ್ನು ನಾವು ಮರೆಯಬೇಕೇ? ಸರ್ಕಾರ ನಮಗೆ ಮರೆಯಲು ಹೇಳುತ್ತಿದೆ ಎಂಬ ಕಾರಣಕ್ಕೆ ನಾವು ಮರೆಯಬೇಕೇ?”
ಇಷ್ಟಕ್ಕೂ, ಪ್ರಧಾನ ಮಂತ್ರಿ ಕೋವಿಡ್ ದುರಂತವನ್ನು ಮರೆಯಲು ಯಾಕೆ ಹೇಳುತ್ತಿದ್ದಾರೆ? ಮತ್ತೆ ಶೀಘ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಲೇ? ಆದರೆ, ಕಳೆದ ಚುನಾವಣೆಯಲ್ಲಿ ಅವರ ಪರವಾಗಿ ಪ್ರಚಾರ ಮಾಡಿದ, ಅವರ ಪರವಾಗಿ ಜಗಳವಾಡಿದ, ಅವರಿಗೆ ಮತ ನೀಡಿದ ಲಕ್ಷಾಂತರ ಜನರು ಇಂದು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಅವರ ಬಗ್ಗೆ ಯಾರು ಮಾತನಾಡುತ್ತಾರೆ? ಪ್ರತಿ ಚುನಾವಣೆಯಲ್ಲಿಯೂ ಗುರಿಯಾಗಿಸಲು ಹೊಸ ಮತದಾರರು ಇರುತ್ತಾರೆ, ಹೊಸ ಭಾಷಣವಿರುತ್ತೆ, ಹೊಸ ‘ಪುಟ ಪ್ರಮುಖ’ರಿರುತ್ತಾರೆ.
(ಪವನ್ ಖೇರಾ ಅವರು ‘ದಿ ಕ್ವಿಂಟ್’ಗೆ ಬರೆದ ಲೇಖನಾದ ಸಂಗ್ರಹಾನುವಾದ)
![](https://pratidhvani.com/wp-content/uploads/2021/08/pratidhvani_2021-02_b25805e8-d9f8-421e-a7cb-a15b7e6f7742_pratidhvani_2020_09_17f09c37_524c_4aa5_a9f7_60fb07975af5_Support_us_Banner_New_3.png)