ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ NDPS ಕೋರ್ಟ್ ತಿರಸ್ಕರಿಸಿದೆ. ಆರ್ಯನ್ ಖಾನೆ ಜೊತೆಗೆ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಗಳನ್ನೂ ಕೋರ್ಟ್ ತಿರಸ್ಕರಿಸಿದ್ದು, ಈ ಆದೇಶವನ್ನು ಪ್ರಶ್ನಿಸಿ ಮುಂಬೈ ಹೈಕೊರ್ಟ್‌ಗೆ ಆರ್ಯನ್ ಪರ ವಕೀಲ ಮೇಲ್ಮನವಿ ಸಲ್ಲಿಸಲಾಗಿದೆ.
ಅಕ್ಟೋಬರ್ 3ರಂದು Narcotics Control Bureau (NCB) ಯಿಂದ ಬಂಧಿತನಾಗಿದ್ದ ಆರ್ಯನ್ ಖಾನ್ ಸದ್ಯ ಮುಂಬೈನ ಅರ್ಥೂರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಆರ್ಯನ್ ಖಾನ್ ಗೆ ಜಾಮೀನು ನೀಡುವಂತೆ ಮುಂಬೈನ ಎನ್ಡಿಪಿಎಸ್ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ 20-10-2021 ಬುಧವಾರಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಸೇರಿದಂತೆ ಇನ್ನು ಮೂವರಿಗೆ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಈ ಪ್ರಕರಣದ ಆರೋಪಿ ಆರ್ಯನ್ ಖಾನ್ ಮತ್ತು ಇತರರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 8 (ಸಿ), 20 (ಬಿ), 27, 28, 29 ಮತ್ತು 35ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
“ಮುಂಬೈ NDPS ಕೋರ್ಟ್ ನೀಡಿದ ಆದೇಶ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದು, ಇಂದೇ ಹೈಕೋರ್ಟ್ ಮೊರೆ ಹೋಗಲಾಗುವುದು. ಒಂದು ವೇಳೆ ಆದೇಶ ಪ್ರತಿ ಸಿಗದಿದ್ದರೆ ಗುರುವಾರ ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗುವುದು,” ಎಂದು ಆರ್ಯನ್ ಖಾನ್ ಪರ ವಕೀಲರು ತಿಳಿಸಿದ್ದಾರೆ. ಈಗ ಹೈಕೊರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು ಮುಂದೇನಾಗುತ್ತದೆ ಎಂದುಕಾದು ನೋಡಬೇಕಿದೆ.

ಅತ್ತ ಜೈಲಿನಲ್ಲಿ ಸರಿಯಾಗಿ ಊಟ,ನೀರು ಮತ್ತು ಸ್ನಾನ ಮಾಡದ ಆರ್ಯನ್ ಖಾನ್; ಅಧಿಕಾರಿಗಳಿಗೆ ತಲೆಬಿಸಿ ತಂದಿಟ್ಟಿದ್ದಾರೆ!
ಸ್ಟಾರ್ ಪುತ್ರನಾಗಿ ಹುಟ್ಟಿದ ಆರ್ಯನ್ ಖಾನ್ ಅವರು ಜೀವನದಲ್ಲಿ ಕಷ್ಟವನ್ನೇ ಕಂಡಿರಲಿಲ್ಲ. ಇಷ್ಟು ದಿನ ಐಷಾರಾಮಿ ಜೀವನ ಸಾಗಿಸಿದ್ದ ಅವರಿಗೆ ಈಗ ಜೈಲಿನಲ್ಲಿ ಹೊಂದಿಕೊಳ್ಳುವುದು ಕಷ್ಟ ಆಗಿದೆ. ಅಲ್ಲಿನ ಶೌಚಾಲಯವನ್ನು ಬಳಸಲು ಆರ್ಯನ್ ಹಿಂದೆಮುಂದೆ ನೋಡುತ್ತಿದ್ದಾರೆ. ಶೌಚಾಲಯಕ್ಕೆ ಹೋಗುವುದನ್ನು ತಪ್ಪಿಸಲು ಅವರು ಊಟ, ನೀರು ಸೇವಿಸುವುದನ್ನು ಕಡಿಮೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಸ್ನಾನವನ್ನೂ ಮಾಡುತ್ತಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.
ಶಾರುಖ್ ಪುತ್ರನ ಈ ವರ್ತನೆಯಿಂದ ಜೈಲು ಅಧಿಕಾರಿಗಳಿಗೆ ತಲೆನೋವು ಉಂಟಾಗಿದೆ. ಹೀಗೆಲ್ಲ ಮಾಡಿ ಆರೋಗ್ಯ ಕೆಡಿಸಿಕೊಂಡರೆ ಮುಂದಿನ ವಿಚಾರಣೆಗೆ ತೊಂದರೆ ಆಗುತ್ತದೆ. ಹಾಗಾಗಿ ಜೈಲು ಅಧಿಕಾರಿಗಳು ಶಾರುಖ್ ಪುತ್ರನನ್ನು ಬೇರೊಂದು ಸೆಲ್ಗೆ ವರ್ಗಾಯಿಸಿದ್ದಾರೆ.
ಇತ್ತ ಮಗ ಆರ್ಯನ್ ಬರುವವರೆಗೆ ಸಿಹಿ ತಿಂಡಿ ಮಾಡುವಂತಿಲ್ಲ ಎಂದ ತಾಯಿ ಗೌರಿ ಖಾನ್!
ಈ ಮಧ್ಯೆ ಆರ್ಯನ್ ಖಾನ್ ಬರುವವರೆಗೂ ಮನೆಯಲ್ಲಿಯಾವುದೇ ರೀತಿಯ ಸಿಹಿ ತಿನಿಸು ಅಡುಗೆ ಮಾಡಬಾರದು ಎಂದು ಗೌರಿ ಖಾನ್ ಅಡುಗೆಯವರಿಗೆ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಮನೆಯಲ್ಲಿನ ಅಡುಗೆ ಸಿಬ್ಬಂದಿಗೆ ಗೌರಿ ಖಾನ್ ಈ ಕುರಿತು ಸೂಚನೆ ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.






