ಸಾಲು ಸಾಲು ಕಟ್ಟಡಗಳು ನೆಲಕ್ಕುರುಳಿದ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ ಇದೀಗ ಸರ್ವೇ ಮಾಡಿ ಅನಧಿಕೃತ ಹೈರೈಸ್ ಕಟ್ಟಡಗಳನ್ನು ಗೊತ್ತು ಮಾಡಿಕೊಂಡಿದೆ. ಈಗಾಗಲೇ ನಗರದಲ್ಲಿ ಕಟ್ಟಡಗಳು ಏಕಾಏಕಿಯಾಗಿ ಉರುಳುತ್ತಿವೆ. ಅಕ್ರಮವಾಗಿ ಅಂತಸ್ತುಗಳನ್ನು ನಿರ್ಮಾಣ ಮಾಡಿಕೊಂಡಿದ್ದ ಕಟ್ಟಡಗಳ ಬುಡ ಕುಸಿದು ಕಟ್ಟಡಗಳು ನೆಲಕ್ಕಚ್ಚುತ್ತಿದೆ. ಇದರ ನಡುವೆ ಪಾಲಿಕೆ ನಗರದಲ್ಲಿ 5000 ಕ್ಕೂ ಅಧಿಕ ಹೈರೈಸ್ ಕಟ್ಟಡಗಳು ಪತ್ತೆಯಾಗಿವೆ.
5 ಸಾವಿರಕ್ಕೂ ಅಧಿಕ ಅನಧಿಕೃತ ಹೈರೈಸ್ ಬಿಲ್ಡಿಂಗ್ ಗಳು ತೆರವು.!?
ಬೆಂಗಳೂರು ಈಗ ಆತಂಕದಲ್ಲೇ ಬದುಕುವಂತಾಗಿದೆ. ಅಲ್ಲಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ನೆಲಕ್ಕುರುಳುತ್ತಿದೆ. ಬುಡ ಸಮೇತ ಬಿಲ್ಡಿಂಗ್ಗಳು ನೆಲಕ್ಕಚ್ಚುತ್ತಿದೆ. ಇದರ ನಡುವೆ ಬಿಬಿಎಂಪಿ ನಡೆಸುತ್ತಿರುವ ಸರ್ವೇಯಲ್ಲಿ ಆಶ್ಚರ್ಯಕರ ಸಂಗತಿ ಬಯಲಾಗಿದೆ. ನಗರದಲ್ಲಿ 5000ಕ್ಕೂ ಅಧಿಕ ಹೈರೈಸ್ ಕಟ್ಟಡಗಳು ಅನಧಿಕೃತವೆಂದು ಗೊತ್ತಾಗಿದೆ. ಹೈರೈಸ್ ಕಟ್ಟಡಗಳು ಎಂದರೆ, ನಾಲ್ಕು ಮಹಡಿಗಳಿಗಿಂತಲೂ ಆಧಿಕ ಅಂತಸ್ತನ್ನು ಹೊಂದಿರುವ ಕಟ್ಟಡಗಳು. ಈಗ ಪತ್ತೆಯಾಗಿರುವ ಅನಧಿಕೃತ ಹೈರೈಸ್ ಕಟ್ಟಡಗಳ ಬಗ್ಗೆ ವಿವರ ನೀಡುವಂತೆ ಬಿಬಿಎಂಪಿ ಅದರ ಮಾಲೀಕರಿಗೆ ಹೇಳಿದೆ.
ಕಳೆದ ಹತ್ತು ವರ್ಷದಲ್ಲಿ ಬಿಬಿಎಂಪಿಯಿಂದ ಅಧಿಕೃತವಾಗಿ ಅನುಮತಿ ಪಡೆದ ಹೈರೈಸ್ ಬಿಲ್ಡಿಂಗ್ ಗಳ ಸಂಖ್ಯೆ ಕೇವಲ 1,178. ಇವೆಲ್ಲವೂ ಪಾಲಿಕೆಯಿಂದ ಓಸಿ ಪತ್ರ ಪಡೆದ ಕಟ್ಟಡಗಳು. ಆದರೆ, ಬೆಂಗಳೂರಿನಲ್ಲಿ ಕಳೆದ ಹತ್ತು ವರ್ಷದಲ್ಲಿ ನಿರ್ಮಾಣ ಆಗಿದ್ದು ಕೇವಲ 1178 ಹೈರೇಜ್ ಬಿಲ್ಡಿಂಗ್ ಗಳಾ..? ಎಂಬ ಅನುಮಾನ ನಿಮ್ಮನ್ನೂ ಕಾಡಬಹುದು. ಹೌದು, ಕಟ್ಟಡ ನಿರ್ಮಾಣದ ನಂತರ ಬಿಬಿಎಂಪಿಯಿಂದ ಓಸಿ ಪಡೆದಿರುವ ಕಟ್ಟಡಗಳು 1178 ಮಾತ್ರ. ಆದರೆ ನಾಲ್ಕು ಅಂತಸ್ತಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು, ತಮ್ಮಗಿಷ್ಟ ಬಂದ್ದ ಹಾಗೆ ಕಟ್ಟಡವನ್ನು ನಿರ್ಮಿಸಿಕೊಂಡಿದ್ದಾರೆ. ಇದನ್ನು ಈಗ ಸರ್ವೇ ಮಾಡಿ ಬಿಬಿಎಂಪಿ ಮಾಹಿತಿ ಕಲೆ ಹಾಕಿದೆ. ಅನಧಿಕೃತವಾಗಿ ನಿರ್ಮಾಣವಾಗಿರುವ ಹೈರೈಸ್ ಕಟ್ಟಡಗಳನ್ನು ಮುಲಾಜಿಲ್ಲಿದೆ ಬಿಬಿಎಂಪಿ ತೆರವು ಮಾಡುವ ಭರವಸೆ ನೀಡಿದೆ.
ನಿಯಮ ಮೀರಿ ಕಟ್ಟಡ ಕಟ್ಟಿದ್ರೆ.. ನಿಮ್ಮ ಕಟ್ಟಡ ಬೀಳೋದು ಗ್ಯಾರಂಟಿ!
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಅನಧಿಕೃತವಾಗಿ ಕಟ್ಟಡಲಾಗಿರುವ ಕಟ್ಟಡವನ್ನು ಮುಲಾಜಿಲ್ಲಿದೆ ಕೆಡವಲಿದ್ದೇವೆ. ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಕಟ್ಟಡ ಅನಧಿಕೃತ ಅಂತ ಕಂಡು ಬಂದರೆ ಅವರಿಗೆ ಮೊದಲು ನೊಟೀಸ್ ಕೊಡಲಾಗುತ್ತೆ. ಕಟ್ಟಡ ಮಾಲೀಕರಿಗೆ ನೊಟೀಸ್ ಕೊಟ್ಟು ಖಾಲಿ ಮಾಡಲು ಸೂಚನೆ ಕೊಡಲಾಗುತ್ತೆ. ಬಿಲ್ಡಿಂಗ್ ತುಂಬಾ ಶಿಥಿಲಾವಸ್ಥೆಯಲ್ಲಿದೆ ಎಂದರೆ ತಕ್ಷಣವೇ ಖಾಲಿ ಮಾಡಿಸಿ ಡೆಮಾಲಿಷನ್ ಮಾಡಲಾಗುತ್ತೆ. ಸರ್ವೇ ವೇಳೆ ಹೈರೈಸ್ ಕಟ್ಟಡಗಳು ಅಂತ ವಿಂಗಡಿಸಲಾಗುತ್ತಿಲ್ಲ. ಅನಧಿಕೃತವಾಗಿರುವ ಕಟ್ಟಡಗಳ ಬಗ್ಗೆ ಯಾವುದೇ ರಾಜಕೀಯ ಒತ್ತಡಕ್ಕೂ ಮಣಿಯದೆ ಕ್ರಮ ಕೈಗೊಳ್ಳಲಾಗುತ್ತೆ ಎಂದರು.
ಒಟ್ಟಾರೆ ನಗರದಲ್ಲಿ ಸಾಲು ಸಾಲು ಕಟ್ಟಡಗಳು ಕುಸಿತ ಕಂಡ ಬೆನ್ನಲ್ಲೇ ಪಾಲಿಕೆ ಎಚ್ಚೆತ್ತುಕೊಂಡು ಸರ್ವೇ ಆರಂಭಿಸಿದೆ. ಈ ವೇಳೆ ನಗರದಲ್ಲಿ ನಿರ್ಮಿಸಲಾಗಿರುವ ಸಾಲು ಸಾಲು ಅನಧಿಕೃತವಾಗಿ ಕಟ್ಟಡಗಳು ಪತ್ತೆಯಾಗಿವೆ. ಇವೆಲ್ಲದರ ಬಗ್ಗೆ ಬಿಬಿಎಂಪಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೆ ಎಂದು ಹೇಳಿದೆ. ಆದರೆ ಎಷ್ಟರ ಮಟ್ಟಿಗೆ ಇದು ಕಾರ್ಯ ರೂಪಕ್ಕೆ ಬರಲಿದೆ ಎಂದು ಕಾದು ನೋಡಬೇಕು.