ಹಿಂದೂ ರಾಷ್ಟ್ರದ ಕಲ್ಪನಯೊಂದಿಗೆ ಬಿಜೆಪಿ ಮತ್ತು ಆರ್.ಎಸ್.ಎಸ್. ನ ಹಿಂದೂ ಬಹುಸಂಖ್ಯಾತವಾದಿ ವರ್ತನೆಯು ಭಾರತದ ಪ್ರಜಾಪ್ರಭುತ್ವವನ್ನು ಅಸ್ತಿತ್ವದ ಬಿಕ್ಕಟ್ಟಿನಲ್ಲಿ ಸಿಲುಕಿಸಿದೆ.
ವಿ-ಡೆಂ ಎಂಬ ಸ್ವೀಡಿಶ್ ಸಂಘಟನೆ ಭಾರತವನ್ನು ‘ಎಲೆಕ್ಟಾರಲ್ ಆಟೋಕ್ರಸಿ’ (ಚುನಾಯಿತ ಸರ್ವಾಧಿಕಾರ) ಎಂದು ಕರೆಯುತ್ತದೆ. ತನ್ನ ಅಲ್ಪಸಂಖ್ಯಾತರ, ಅದರಲ್ಲೂ ಮುಸಲ್ಮಾನರ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಭುತ್ವ ನಿರ್ಧರಿಸಿದಂತೆ ಕಾಣುತ್ತದೆ. ಪತ್ರಿಕಾ ಸ್ವಾತಂತ್ರದ ಮೇಲೆ ಹಿಂದೆಂದೂ ಆಗದಂತೆ ದಾಳಿ ನಡೆದಿದೆ. ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ ಸಂಸ್ಥೆಯು ತನ್ನ 2021ರ ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಭಾರತವನ್ನು 180 ದೇಶಗಳ ನಡುವೆ 142ನೇ ಜಾಗದಲ್ಲಿ ಇರಿಸಿದೆ.
ಆದರೆ ವಿ-ಡೆಂ ಸೂಚಿಸಿರುವಂತೆ ಭಾರತದ ರಾಜಕೀಯ ಚರ್ಚೆಯು ದೇಶ ಉದಾರವಾದಿ ಸಾಂವಿಧಾನಿಕ ಪ್ರಜಾಪ್ರಭುತ್ವದಿಂದ ಎಲೆಕ್ಟಾರಲ್ ಆಟೋಕ್ರೆಸಿ ಆಗುತ್ತಿರುವುದರ ಕುರಿತು ಕೇಂದ್ರಿತವಾಗುತ್ತಿಲ್ಲ. ಬದಲಾಗಿ ಈ ಚರ್ಚೆ ಇನ್ನೂ ಮೋದಿ-ಶಾ ವರ್ಸಸ್ ಪ್ರಿಯಾಂಕಾ-ರಾಹುಲ್ ಎಂದೇ ರೂಪು ಪಡೆಯುತ್ತಿದೆ.
ದ ವೈರ್ ಗಾಗಿ ಹರೀಶ್ ಖರೆ ಬರೆದ ಲೇಖನದಲ್ಲಿ ಇದನ್ನು ಅವರು ಜಿ2 ವರ್ಸಸ್ 2ಜಿ ಎಂದು ಕರೆಯುತ್ತಾರೆ. ಉದಾರವಾದಿ ಪ್ರಜಾಪ್ರಭುತ್ವ ಮತ್ತು ಚುನಾಯಿತ ಸರ್ವಾಧಿಕಾರದ ನಡುವಿನ ಆಯ್ಕೆಯನ್ನು ಮತ್ತು ಜನರು ನಾಯಕರನ್ನು ಚುನಾಯಿಸುವುದನ್ನು ಲೇಖನವು ಸಮೀಕರಿಸಿದಂತೆ ಕಾಣುತ್ತದೆ.
ವ್ಯಕ್ತಿ ಸ್ವಾತಂತ್ರಗಳ ನಿರಾಕರಣೆ, ನ್ಯಾಯಾಂಗದ ಅಸಮಾನತೆ, ಅಲ್ಪಸಂಖ್ಯಾತರ ಘೆಟ್ಟೋಐಸೇಷನ್ ನಂತಹ ಮುಖ್ಯ ವಿಷಯಗಳನ್ನು ಪ್ರಮುಖ ರಾಜಕೀಯ ಅಂಕಣಕಾರರು ಮತ್ತು ಪ್ರಭಾವಿಗಳು ಯಾಕೆ ಬದಿಗೆ ಸರಿಸಿ ರಾಜಕಾರಣವನ್ನ ಕೇವಲ ವ್ಯಕ್ತಿಗಳ ನಡುವಿನ ಸ್ಪರ್ದೆಯಾಗಿ ಕಾಣುತ್ತಿದ್ದಾರೆ? ಬಿಜೆಪಿ-ಆರ್.ಎಸ್.ಎಸ್. ಮತ್ತು ಕಾಂಗ್ರೆಸ್ ಪಕ್ಷದ ರಾಜಕೀಯ ತತ್ವಗಳು ಮತ್ತು ಸಿದ್ದಾಂತಗಳ ನಡುವಿನ ವ್ಯತ್ಯಾಸವನ್ನು ಯಾಕೆ ನಿರ್ಲಕ್ಷಿಸಲಾಗುತ್ತಿದೆ?
ಈ ಸ್ಪರ್ಧೆಯನ್ನು ಸಿದ್ಧಾಂತಗಳ ನಡುವಿನ ಯುದ್ಧ ಎಂದು ಬಿಂಬಿಸಿದರೆ ಕಾಂಗ್ರೆಸ್ ಮುಂದೆ ಸಂಘಪರಿವಾರದ ಸಿದ್ಧಾಂತಗಳು ಅಶಕ್ತ ಎಂದು ಸಾಬೀತಾಗುತ್ತದೆ ಎಂದು ಹೀಗೆ ಮಾಡಲಾಗುತ್ತಿದೆಯೇ? ತಾವು ನಿಶ್ಪಕ್ಷಪಾತಿಗಳು ಎಂದು ತೋರಿಸಿಕೊಳ್ಳುತ್ತಾ ರಾಜಕಾರಣವನ್ನು ತಾವು ಬಯಸುವ ಮೆಜರಿಟೇರಿಯನಿಸಂ ನ ಕಡೆಗೆ ವಾಲಿಸುವುದು ಅವರ ಉದ್ದೇಶವೇ? ಯಾವುದೋ ಕಾರಣಗಳಿಂದ ಗಾಂಧೀಗಳ ಬಗ್ಗೆ ಅವರಗಿರುವ ಅಸಮಾಧಾನವು ಸಂಘಪರಿವಾರ ಪ್ರಜಾತಂತ್ರಕ್ಕೆ ಒಡ್ಡುತ್ತಿರುವ ಬೆದರಿಕೆಗಿಂತ ಹೆಚ್ಚೇ?
ಇಂತಹ ಪ್ರಶ್ನೆಗಳೊಂದಿಗೆ ನಾನು ಖರೆ ಅವರ ಲೇಖನವನ್ನು ಓದುತ್ತೇನೆ. ನನ್ನ ಯೋಚನೆಗಳು ಗೊಂದಲಕಾರಿಯಾಗಿವೆ. ಅವರ ವಾದವನ್ನು ಮೊದಲು ಕೇಳೋಣ.
ಮೊದಲಿಗೆ, ಅವರು ಮೋದಿ-ಶಾ (ಜಿ2) ಅವರನ್ನು ಮತ್ತು ಪ್ರಿಯಾಂಕಾ-ರಾಹುಲ್ (2ಜಿ) ಅವರನ್ನು ಪ್ರತ್ಯೇಕ ಗುಂಪುಗಳಾಗಿ ಕಾಣುತ್ತಾರೆ. ಅವರ ನಾಯಕತ್ವ ಶೈಲಿಗಳನ್ನು ಮತ್ತು ತತ್ವಗನ್ನು ಜರ್ಮನಿಯ ಆಂಜೆಲಾ ಮಾರ್ಕಲ್ ಅವರ ಅನುಭವದಲ್ಲಿ ಕಾಣುತ್ತಾರೆ. ಜರ್ಮನಿಯ ಪ್ರಜಾಪ್ರಭುತ್ವವನ್ನು 20 ವರ್ಷಗಳಿಂದ ಸ್ಥಿರತೆ, ವಿಶ್ವಾಸ, ಸಂಯಮ ಮತ್ತು ಕೇಂದ್ರೀಯತೆಯಿಂದ ನಡೆಸಿರುವುದಕ್ಕೆ ಮಾರ್ಕಲ್ ಅವರನ್ನು ಖರೆ ಹೊಗಳುತ್ತಾರೆ. ಇದಕ್ಕೆ ನನ್ನ ಸಮ್ಮತಿಯೂ ಇದೆ.
ಆದರೆ ಇಲ್ಲಿ ಮತ್ತೊಂದು ವಿಷಯವನ್ನು ಗಮನಿಸಬೇಕು. ಕ್ರಿಶ್ಚಿಯನ್ ಡೆಮಾಕ್ರಾಟ್ಸ್ ಪಕ್ಷವನ್ನು ಬಿಟ್ಟು ಮಾರ್ಕಲ್ ಅವರು ಒಬ್ಬರೇ ಬರುವುದಿಲ್ಲ. ಕ್ರಿಶ್ಚಿಯನ್ ಡೆಮಾಕ್ರಾಟ್ಸ್ ಗಳಿಗೆ ಅವರದ್ದೇ ಆದ ಸ್ಪಷ್ಟ ತತ್ವ ಸಿದ್ದಾಂತಗಳಿವೆ. ಮಾರ್ಕಲ್ ಅವರು ಅದರಿಂದ ಪ್ರಭಾವಿತರಾಗಿರುವವರು. ಅವರ ಪಕ್ಷವನ್ನು ಬಿಟ್ಟು ಮಾರ್ಕಲ್ ಅವರನ್ನು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಿಲ್ಲ.
ಹಾಗೆಯೇ ಜಿ2 (ಮೋದಿ-ಶಾ) ಸಂಘಪರಿವಾರದೊಡನೆ ಬರುತ್ತಾರೆ. ಹಿಂದೂ ರಾಷ್ಟ್ರದ ಕಲ್ಪನೆಯೊಂದಿಗೆ ಖಾಸಗಿ ಶಸ್ತ್ರಪಡೆಗಳೊಂದಿಗೆ ಫ್ಯಾಸಿಸ್ಟ್ ಕೋಮುವಾದಿ ರಾಜಕಾರಣ ನಡೆಸುವ ಸಂಘಪರಿವಾರಕ್ಕೆ ಉದಾರವಾದಿ ಸಾಂವಿಧಾನಿಕ ಪ್ರಜಾಪ್ರಭುತ್ವವೆಂದರೆ ಆಗುವುದಿಲ್ಲ.
ಇತ್ತ 2ಜಿ ನಮಗೆ ಉದಾರವಾದಿ ಸಂವಿಧಾನವನ್ನು ನೀಡಿದ ಪಕ್ಷದಿಂದ ಪ್ರಭಾವಿತರಾದವರು. ವ್ವಯಸ್ಥೆಯಲ್ಲಿ ಎಷ್ಟೇ ದೋಷವಿದ್ದರೂ ಕಾನೂನು ಮತ್ತು ಕಾನೂನಾತ್ಮಕ ಆಡಳಿತದ ಮೇಲೆ ಆ ಪಕ್ಷ ಇಟ್ಟಿರುವ ವಿಶ್ವಾಸ ಮುಖ್ಯ. ಆ ಪಕ್ಷ ಪ್ರಜಾಪ್ರಭುತ್ವದ ನಿಯಮಗಳ ಅನುಸಾರ ತಮ್ಮ ಆಳ್ವಿಕೆಯನ್ನು ನಡೆಸಿ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಗೌರವಾನ್ವಿತವಾಗಿ ನಡೆಸಿಕೊಂಡಿದೆ.
ಖರೆ ಅವರು ಹೋಲಿಸುತ್ತಿರುವ ಎರಡು ಪರಿಕಲ್ಪನೆಗಳನ್ನು ಹೋಲಿಸಲು ಆಗುವುದೇ? ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಅಂಚಿಗೆ ತಳ್ಳುವ ಹಿಂದೂ ರಾಷ್ಟ್ರವನ್ನು ಧರ್ಮಿನಿರಪೇಕ್ಷ ಪ್ರಜಾಪ್ರಭುತ್ವಕ್ಕೆ ಹೋಲಿಸಲಾಗುವುದೇ?
ಭಾರತದ ಸಂವಿಧಾನಕ್ಕೆ ವಿರುದ್ಧವಾದ ಜಾತೀಯತೆ ಮತ್ತು ಕುಟುಂಬಾಧಾರಿತ ಪುರುಷಪ್ರಧಾನ ಮೌಲ್ಯಗಳಿಂದ ಪ್ರೇರಣೆಗೊಂಡ ಫ್ಯಾಸಿಸ್ಟ್ ಆಳ್ವಿಕೆಯನ್ನು ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳ ಜೊತೆಗೆ ಹೋಲಿಸಲು ಸಾಧ್ಯವೇ?
ಮೋದಿ ಮತ್ತು ಶಾ ತಮ್ಮ ಪಕ್ಷದ ಸಿದ್ಧಾಂತಗಳನ್ನು ಮೀರಿ ರಾಜಕಾರಣ ನಡೆಸುತ್ತಾರೆ ಎಂದು ಖರೆ ಅವರಿಗೆ ವಾದಿಸಲು ಸಾಧ್ಯವೇ?
ನಿಜ, ಏಸುವನ್ನು ಸೈತಾನನೊಂದಿಗೆ ಹೋಲಿಸಬಹುದು. ರಾಮನನ್ನು ರಾವಣನೊಂದಿಗೂ ಹೋಲಿಸಬಹುದು. ಆದರೆ ಅವರಿಬ್ಬರೂ ದೇವರ ನಾಡಿನಿಂದ ಬಂದಿರುವವರು ಎಂದು ಭಾವಿಸುವುದು ಅಚಾತುರ್ಯ. ಒಂದು ಜಿ2 ಸರ್ವನಾಶದ ಹಾದಿಯನ್ನು ಹಿಡಿದಿದೆ. ಮತ್ತೊಂದು 2ಜಿ ರಾಜಕೀಯವಾಗಿ ಕೊಂಚ ದುರ್ಬಲವಾಗಿರಬಹುದು, ಆದರೆ ಅವರು ದೇಶವನ್ನು ನೇರವಾಗಿ ಸರ್ವನಾಶ ಮಾಡುವ ದಾರಿಯನ್ನು ಹಿಡಿದಿಲ್ಲ.
ಜಿ2 ಮತ್ತು 2ಜಿ ಗುಂಪುಗಳನ್ನು ಮತ್ತು ಅವರ ಸೈದ್ಧಾಂತಿಕ ಬದ್ಧತೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಹೋಲಿಸಿರುವುದು ಖರೆ ಅವರ ಲೇಖನವನ್ನು ರಾಜಕೀಯ ಅಸೂಕ್ಷ್ಮ ಬರಹವನ್ನಾಗಿ ಮಾಡುತ್ತದೆ. ಅವರ ವಾದ ಎಷ್ಟೇ ನಿಖರವಾಗಿದ್ದರೂ ಈ ಹೋಲಿಕೆ ಸಾಧ್ಯ ಎಂಬ ಅವರ ಕಲ್ಪನೆಯನ್ನು ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದೇ ನನಗೆ ಅರ್ಥವಾಗುವುದಿಲ್ಲ.
ಗಾಂಧೀಗಳ ನಾಯಕತ್ವ ಇಲ್ಲದ ಕಾಂಗ್ರೆಸ್ ಪಕ್ಷವಾದರೆ ಪರವಾಗಿಲ್ಲ ಎಂಬ ಅವರ ಅಂತಿಮ ನಿಲುವು ಸಂಘಪರಿವಾರಕ್ಕಿಂತ ಕಾಂಗ್ರೆಸ್ ಪರವಾಗಿಲ್ಲ ಎಂಬ ನನ್ನ ವಾದವನ್ನು ಒಪ್ಪುತ್ತದೆ. ಆದರೆ ಬಿಜೆಪಿ-ಆರ್.ಎಸ್.ಎಸ್. ಇಲ್ಲದೇ ಮೋದಿ ಶಾ ಇದ್ದಾರೆಯೇ ಎಂಬುದಕ್ಕೆ ಖರೆ ಅವರ ಬಳಿ ಉತ್ತರವಿಲ್ಲ,
ನಾಯಕತ್ವ ಯಾವಾಗಲೂ ಸಂದರ್ಭಾನುಸಾರವಾದದ್ದು. ಮಾರ್ಕಲ್ ಅವರು ಶ್ರೇಷ್ಠ ನಾಯಕರು ಎಂಬುದಾಗಿ ಖರೆ ಹೇಳುತ್ತಾರೆ. ಸರಿ. ಆದರೆ ಮೋದಿ-ಶಾ ತಮ್ಮ ತೀವ್ರವಾದವನ್ನು ಬಿಟ್ಟು ಸ್ಥಿರ ಮತ್ತು ವಿಶ್ವಾಸಾರ್ಹ ನಾಯಕತ್ವವನ್ನು ನೀಡಬಲ್ಲರೇ? ನಿಜವಾಗಿಯೂ? ಯಾವ ಲೋಕದಲ್ಲಿ?
ಈಗ ನಾವು ಗಾಂಧಿಗಳ ಬಗ್ಗೆ ಮಾತಾಡೋಣ. ಅವರಿಗೆ ಬಹಳಷ್ಟು ಅನುಭವವಿಲ್ಲ, ಆದರೆ ಅವರ ಪಕ್ಷಕ್ಕಿದೆ. ಸಂಘಪರಿವಾರದ ಯಾವ ಪಕ್ಷಕ್ಕೆ ಸ್ಥಿರ, ವಿಶ್ವಾಸಾರ್ಹ, ಸಂಯಮದಿಂದ ಕೂಡಿದ ಕೇಂದ್ರೀಯ ಆಡಳಿತದ ಭರವಸೆ ನೀಡಲಿಕ್ಕೆ ಸಾಧ್ಯವಿದೆ?
ಕಳೆದ ಏಳು ವರ್ಷಗಳಲ್ಲಿ ಮೋದಿ-ಶಾ ಅವರ ಆಳ್ವಿಕೆ ನಡೆಸಿರುವುದು ಹಾಗು ಗಾಂಧಿಗಳು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿರುವುದು ಸಮಾನ ಎಂಬುದು ಖರೆ ಅವರ ಮತ್ತೊಂದು ಪದಗಳ ಹಿಂದೆ ಅಡಗಿರುವ ಕಲ್ಪನೆ. ಈಗ ಇದನ್ನು ಗಮನಿಸೋಣ. 130 ಕೋಟಿ ಜನಸಂಖ್ಯೆ ಉಳ್ಳುವ ಒಂದು ಪ್ರಜಾತಂತ್ರದಲ್ಲಿ ವಿರೋಧ ಪಕ್ಷವನ್ನು ಮುನ್ನಡೆಸುವ ಕಷ್ಟಗಳು ಇಲ್ಲಿ ಅಸಂಬದ್ಧ ಎಂದು ಸದ್ಯಕ್ಕೆ ಭಾವಿಸೋಣ.
ಮೋದಿ-ಶಾ ಈಗ ಅಧಿಕಾರದಲ್ಲಿದ್ದಾರೆ. ಏಳು ವರ್ಷಗಳಿಂದ ಅವರು ದೇಶದ ಎಲ್ಲಾ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಕೆಡವುತ್ತಾ ಅವು ಅಧಿಕಾರದಲ್ಲಿರುವವರ ವಿರುದ್ಧ ತಿರುಗಿ ಬೀಳದಂತೆ ಮಾಡಲಾಗಿದೆ. ಕಾನೂನನ್ನು ತಮ್ಮ ಬೆಂಬಲಿಗರನ್ನು ರಕ್ಷಿಸಲು ಮತ್ತು ವಿರೋಧಿಗಳನ್ನು ಧ್ವಂಸ ಮಾಡಲು ಬಳಸಲಾಗುತ್ತಿದೆ. ಮಾಧ್ಯಮ ವಾಹಿನಿಗಳನ್ನೂ ಅವರ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಪ್ರತಿರೋಧವನ್ನು ಹೊಸಕಿ ಹಾಕಲಾಗುತ್ತಿದೆ. ವಿರೋಧ ಪಕ್ಷಗಳು ಮತ್ತು ಪತ್ರಿಕಾ ಸಂಸ್ಥೆಗಳು ಸದಾ ರೈಡ್ ರಾಜಕಾರಣದ ಭಯದಲ್ಲಿ ಬದುಕಬೇಕಾಗಿದೆ.
ನಮ್ಮ ಪ್ರಜಾಪ್ರಭುತ್ವದ ಈ ಒದ್ದಾಟಕ್ಕೆ ಮೋದಿ-ಶಾ ಎಷ್ಟು ಕಾರಣಕರ್ತರೋ ರಾಹುಲ್-ಪ್ರಿಯಾಂಕಾ ಅವರೂ ಅಷ್ಟೇ ಜವಾಬ್ದಾರರು ಎಂದು ಖರೆ ಹೇಳುತ್ತಾರೆ. ಅಂತಹ ಹಿರಿಯ ಬರಹಗಾರರಿಗೆ ಇಂತಹ ಹೋಲಿಕೆಯನ್ನು ಮಾಡಲು ಯಾವ ಪೂರ್ವಾಗ್ರಹ ಕೆಲಸ ಮಾಡಿತೋ ನನಗಂತೂ ಗೊತ್ತಿಲ್ಲ.
ಸಾರ್ವಜನಿಕವಾಗಿ ಕಾಂಗ್ರೆಸ್ ಪಕ್ಷವನ್ನು ಹೀಯಾಳಿಸುವುದು ಒಂದು ಸಂಸ್ಕೃತಿಯಾಗಿ ಬೆಳೆದಿದೆ. ಕಾಂಗ್ರೆಸ್ ಸಂಪೂರ್ಣವಾಗಿ ನಾಶವಾಗಿದ್ದರೂ ಅವರ ವಿರುದ್ಧದ ಹೇಳಿಕೆಗಳು ಕಡಿಮೆಯಾಗಿಲ್ಲ. ಆಗ ನೀಡಿದಂತಹ ಹೇಳಿಕೆಗಳನ್ನೂ ಈಗ ಪುನರ್ವಿಮರ್ಷಿಸಿಲ್ಲ.
ಕಾಂಗ್ರೆಸ್ ಪಕ್ಷವೇನು ತಪ್ಪೇ ಮಾಡಿಲ್ಲ ಎಂದಲ್ಲ. ಅದರೆ ಹಳಬರ ತಪ್ಪಿಗೆ ಹೊಸಬರನ್ನು ಹೊಣೆ ಮಾಡುವುದು ಸರಿಯಲ್ಲ. ಅವರು ಎಂದಿಗೂ ಅಧಿಕಾರಕ್ಕೆ ಬಂದಿಲ್ಲ. ಅವರಿಗೆ ಟಿವಿ ಶೋಗಳಲ್ಲಿ ಪ್ರೈಮ್ ಟೈಂ ಸಿಗುವುದಿಲ್ಲ. ಮೋದಿ-ಶಾ ಅವರಂತೆ ಅವರು ಹೇಗೆ ಸಾರ್ವಜನಿಕ ವೇದಿಕೆಗಳನ್ನು ಏಕಸ್ವಾಮ್ಯವಾಗಿಸುತ್ತಾರೆ?
ಆದರೆ ರಾಹುಲ್ ಮತ್ತು ಪ್ರಿಯಾಂಕಾ ಪಂಜಾಬ್ ರಾಜಕಾರಣವನ್ನು ನಡೆಸಿಕೊಂಡ ರೀತಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲ. ನವಜೋತ್ ಸಿಂಗ್ ಸಿದ್ದೂ ಅವರು ಕೇವಲ ಓರ್ವ ಜನಪ್ರಿಯತೆಯನ್ನು ಅಪೇಕ್ಷಿಸುವ ಪಾಪ್ಯುಲಿಸ್ಟ್. ಬಿಜೆಪಿ ಯಿಂದ ಅವರನ್ನು ಒಳ ಸೇರಿಸಿಕೊಂಡು ಅಮರೀಂದರ್ ಸಿಂಗ್ ಅಂತವರ ವಿರುದ್ಧ ಅವರನ್ನು ಎತ್ತಿಕಟ್ಟಿದ್ದು ಸರಿಯಲ್ಲ. ಪಕ್ಷಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ಅಮರೀಂದರ್ ಅಂತವರಿಗೆ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು. ತಮ್ಮ ನಿವೃತ್ತಿಯ ಸಮಯದಲ್ಲಿ ಇದು ಅವರಿಗೆ ಸೂಚಿಸುವ ಗೌರವ.
ಗಾಂಧಿಗಳು ಈ ಸನ್ನಿವೇಶವನ್ನು ಸೂಕ್ಷ್ಮವಾಗಿ ನಿರ್ವಹಿಸದೇ ಎಡವಿದ್ದಾರೆ. ಚರಣ್ ಜಿತ್ ಸಿಂಗ್ ಚನ್ನಿ ಅವರೊಡನೆ ಕೊಂಚ ನೆಲೆಯನ್ನು ಕಾಂಗ್ರೆಸ್ ಉಳಿಸಿಕೊಂಡಿರಬಹುದು, ಆದರೆ ಅಮರೀಂದರ್ ಅವರ ನೆರಳು ಕಾಡುತ್ತಲೇ ಇರುತ್ತದೆ. ತಪ್ಪಾದ ಕಾಲದಲ್ಲಿ ಸಿದ್ದೂ ತಪ್ಪಾದ ನಾಯಕ. ಮುಂದೆ ಕಾಂಗ್ರೆಸ್ ತನ್ನ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಮಾಡಿಕೊಳ್ಳಬೇಕಾಗಬಹುದು.
ಸಿದ್ದೂ (ಮತ್ತು ಮೋದಿ) ಅಂತಹ ಜನಪ್ರಿಯವಾದಿಗಳು ಪ್ರಜಾಪ್ರಭುತ್ವಕ್ಕೆ ಯಾವಾಗಲೂ ಅಪಾಯಕಾರಿಗಳೇ. ಇದರ ಬಗ್ಗೆ ನನಗೆ ಖರೆ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷ ಎಂದು ಬಂದಾಗ ಹೈ ಕಮಾಂಡ್ ಅವಶ್ಯಕವೇ. ಆದರೆ ಅಲ್ಲಿ ಪಾರದರ್ಶಕತೆ ಇಲ್ಲವಾದಲ್ಲಿ ಕಾಲದೊಂದಿಗೆ ಅದು ಕೊಳೆಯುತ್ತಾ ಹೋಗುತ್ತದೆ. ನಿಮ್ಮ ಪಕ್ಷದ ಮುಖ್ಯಮಂತ್ರಿಗೆ ನೀವೇ ಸೊಪ್ಪು ನೀಡದೇ ಇರುವುದು ಬಹಳ ಮೂರ್ಖ ಆಟ. ಮುಖ್ಯಮಂತ್ರಿಯ ಶಕ್ತಿಯನ್ನು ಅದು ಕುಂದಿಸುತ್ತಾ ನಿಮ್ಮ ಅಸಾಮರ್ಥ್ಯವನ್ನು ತೋರುತ್ತದೆ. ಪಕ್ಷದ ಆಡಳಿತಕ್ಕೆ ರಾಹುಲ್-ಪ್ರಿಯಾಂಕಾ ಅವರು ಪಾರದರ್ಶಕತೆ ತರಬೇಕು.
ಖರೆ ಮತ್ತು ಅವರಂತಹ ಹಲವಾರು ನಾಯಕರು ಭೀಫ್ ನಿಷೇಧ, ಮುಸಲ್ಮಾನರ ಮೇಲಿನ ಹಲ್ಲೆಗಳು, “ಲವ್ ಜಿಹಾದ್”, ಇತ್ಯಾದಿ ಅಲ್ಪಸಂಖ್ಯಾತ ವಿರೋಧಿ ದಾಳಿಗಳನ್ನು ಸಂಘ ಪರಿವಾರದ ಚಟುವಟಿಕಯನ್ನಾಗಿ ನೋಡದೇ ಪ್ರತ್ಯೇಕವಾಗಿ ನೋಡುತ್ತಾರೆ. ಕಾನೂನನ್ನು ತಮಗೆ ಬೇಕಾದವರನ್ನು ರಕ್ಷಿಸಲು ಮತ್ತು ಬೇಡವಾದವರನ್ನು ಟಾರ್ಗೆಟ್ ಮಾಡಲು ಬಳಸುವುದು ಫ್ಯಾಸಿಸ್ಟ್ ಆಡಳಿತ ಆರಂಭವನ್ನು ಸೂಚಿಸುತ್ತದೆ. ಪ್ರಭುತ್ವ ಮತ್ತು ಪಕ್ಷದ ನಡುವಿನ ಅಂತರವನ್ನು ಸಂಘ ಕಡಿಮೆ ಮಾಡುತ್ತಲೇ ಬಂದಿದೆ. ಸಂಘ ಪರಿವಾರದ ಈ ನೀತಿಯನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ.
ಫ್ಯಾಸಿಸಂ ವಾದವನ್ನು ಸಾಮಾನ್ಯೀಕರಿಸಿರುವುದಕ್ಕೆ ನಾನು ಖರೆ ಅವರನ್ನು ದೂಷಿಸುವುದಿಲ್ಲ. ಆದರೆ ಅವರ ವಿಶ್ಲೇಷಣೆಯ ಸಾರ ಅದೇ ಆಗಿದೆ. ಪ್ರತಿರೋಧದ ವಿರುದ್ಧ ಉಪಯೋಗವಾಗುತ್ತಿರುವ ಹಿಂಸೆ ಆಕಸ್ಮಿಕವಲ್ಲ. ಖಾಸಗಿ ಪಡೆಗಳನ್ನು ವಿರೋಧಿಗಳನ್ನು ಹಿಂಸಿಸುವುದಕ್ಕೆ ಬಳಸುವುದು ಸಂಘಪರಿವಾರದ ತಂತ್ರಗಾರಿಕೆ.
ನೀವು ಇದನ್ನು ಗಮನಿಸಿಲ್ಲವಾದರೆ, ಈ ಖಾಸಗಿ ಪಡೆಗಳು ಸಮವಸ್ತ್ರದಲ್ಲಿದ್ದಾರೆ. ಬೀಫ್ ನಿಷೇಧ ದಿಂದ ಹಿಡಿದು ಲವ್ ಜಿಹಾದ್ ನ ವರೆಗೂ ಎಲ್ಲದರ ಬಗ್ಗೆಯೂ ಅವರು ಪೋಲೀಸುಗಿರಿ ನಡೆಸುತ್ತಾರೆ. ಇದು ಸಂಘಪರಿವಾರದ ಆಳ್ವಿಕೆಯ ಪ್ರಮುಖ ಆಯಾಮ. ಉದಾಹರಣೆಗೆ ಈ ಆರ್ಯನ್ ಖಾನ್ ಅವರ ಪ್ರಕರಣವನ್ನು ತೆಗೆದುಕೊಳ್ಳಿ. ಮುಂಬೈನಲ್ಲಿ ನಡೆದ ರೈಡ್ ನ ಮೇಲೆ ಪಕ್ಷವು ಸಂಪೂರ್ಣ ನಿಗಾ ವಹಿಸಿತ್ತು. ಖರೆ ಅವರು ಬೃಹತ್ ಚಿತ್ರಣವನ್ನು ಗಮನಿಸದೇ ಇರುವುದರಿಂದ ಅವರಿಗೆ ಭಾರತದ ರಾಜಕಾರಣ ಕೇವಲ ಜಿ2 ವರ್ಸಸ್ 2ಜಿ ಯಾಗಿ ಕಾಣುತ್ತದೆ. ಅವರಷ್ಟೇ ಅಲ್ಲ. ಅನೇಕ ಹಿರಿಯ ಪತ್ರಕರ್ತರಿಗೆ ಈ ದೌರ್ಬಲ್ಯವಿದೆ. ಅವರು ಕೇವಲ ಅಪರಾಧವನ್ನು ಗಮನಿಸುತ್ತಾರೆ.
ಆದರೆ ಅದರ ಹಿಂದೆ ಇರುವವರನ್ನು, ಅವರಿಗೆ ಬೆಂಬಲ ನೀಡುವ ವ್ಯವಸ್ಥೆಯನ್ನು ಮತ್ತು ಅದು ಯಾವ ಸಿದ್ಧಾಂತದ ಏಳ್ಗೆಗೆ ಸಹಕರಿಸುತ್ತಿದೆ ಎಂಬುದನ್ನು ಗುರುತಿಸುವುದೇ ಇಲ್ಲ. ಕೆಲವರು ತಮಗೆ ಅರಿವಿಲ್ಲದಂತೆ ಅದನ್ನು ನಿರ್ಲಕ್ಷಿಸುತ್ತಾರೆ. ಇನ್ನೂ ಕೆಲವರು ಆ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವುದರಿಂದ ಅದರ ಕಡೆ ಕುರುಡಾಗುತ್ತಾರೆ.
“ಸರಕಾರದ ಅಧಿಕಾರ ವ್ಯಾಪ್ತಿಯು ಸಾಂವಿಧಾನಿಕ ಉದಾರವಾದ ಮತ್ತು ಪ್ರಜಾಪ್ರುಭುತ್ವದ ನಡುವಿನ ತಿಕ್ಕಾಟದ ಸುತ್ತ ಕೇಂದ್ರೀಕೃತವಾಗುತ್ತದೆ. ಸಾಂವಿಧಾನಿಕ ಉದಾರವಾದ ಅಧಿಕಾರದ ಮಿತಿಯನ್ನು ವ್ಯಾಖ್ಯಾನಿಸಿದರೆ, (ಚುನಾವಣಾ) ಪ್ರಜಾಪ್ರಭುತ್ವ ಅಧಿಕಾರದ ಬಳಸುವಿಕೆಯ ಬಗ್ಗೆ ಇರುತ್ತದೆ,” ಎಂದು ಫರೀದ್ ಜಕಾರಿಯಾ ಉದಾರವಾದಿ ಪ್ರಜಾಪ್ರಭುತ್ವದ ಕುಸಿತದ ಬಗೆಗಿನ ತಮ್ಮ ಪ್ರಬಂಧದಲ್ಲಿ ಎಚ್ಚರಿಕೆ ನೀಡುತ್ತಾರೆ. ಸಂಘ ಪರಿವಾರದ ಆಳ್ವಿಕೆಯಲ್ಲಿ ಸರಕಾರಿ ಅಧಿಕಾರವು ವ್ಯಕ್ತಿ ಸ್ವಾತಂತ್ರವನ್ನು ನಿರ್ಲಕ್ಷಿಸುತ್ತಾ ಮೂಲಭೂತ ಹಕ್ಕುಗಳನ್ನು ನಾಶ ಮಾಡುತ್ತದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಖರೆ ಅಂತವರ ಕಟ್ಟಿಗೆಗಳನ್ನು ಮರಗಳೆಂದು ತಪ್ಪು ತಿಳಿಯಬಾರದು. ನಮ್ಮ ಪ್ರಜಾತಂತ್ರವನ್ನು ನಾಶ ಮಾಡುವ ಸಾಮಾರ್ಥ್ಯ ಇರುವ ಚುನಾಯಿತ ಸರ್ವಾಧಿಕಾರದ ದೀರ್ಘಾವಧಿ ಬೆದರಿಕೆಯನ್ನು ಅಂತವರು ಗಮನಿಸದೇ ಹೋದರೆ ಭಾರತ ಪ್ರಜಾಪ್ರಭುತ್ವವಾಗಿ ಉಳಿಯುವುದಿಲ್ಲ.
ಕೃಪೆ: ದ ವೈರ್
ಮೂಲ: ಸೋನಾಲಿ ರನಾಡೆ
ಸೊನಾಲಿ ರನಾಡೆ ಅವರು ಯು.ಎಸ್. ನಲ್ಲಿ ವಾಸವಿರುವ ರಾಜಕೀಯ ವಿಶ್ಲೇಷಕಿ