ಅಸ್ಸಾಮಿನ ಸರಕಾರ ದರ್ರಂಗ್ ಜಿಲ್ಲೆಯಲ್ಲಿ ‘ಅಕ್ರಮವಾಗಿ ಅತಿಕ್ರಮಿಸಿರುವವರನ್ನು’ ಒಕ್ಕಲೆಬ್ಬಿಸಲು ಆರಂಭಿಸಿದೆ. ಇದರ ವಿರುದ್ಧ ಪ್ರತಿಭಟಿಸುತ್ತಿದ್ದವರ ಮತ್ತು ಪೋಲೀಸರ ನಡುವೆ 23 ಸೆಪ್ಟೆಂಬರ್ 2021 ರಂದು ಸಂಘರ್ಷಗಳು ನಡೆದವು. ಈ ಘರ್ಷಣೆಯ ಪರಿಣಾಮವಾಗಿ ಹಲವಾರು ಜನರು ಗಾಯಗೊಂಡು ಇಬ್ಬರು ಮೃತಪಟ್ಟರು. ಹಾಗೆಯೇ, ಒಂಬತ್ತು ಜನ ಪೋಲೀಸರು ಗಾಯಗೊಂಡರು.
ಮೃತಪಟ್ಟವರ ಮತ್ತು ಗಾಯಗೊಂಡವರ ಕುಟುಂಬಗಳನ್ನು ಭೇಟಿ ಮಾಡಲು ದಿ ಕ್ವಿಂಟ್ ಅಸ್ಸಾಮಿನ ದರ್ರಾಂಗ್ ಜಿಲ್ಲೆಗೆ ಹೊರಟಿತು.
20ನೇ ಸೆಪ್ಟೆಂಬರ್ 2021ರಂದು 4000 ಬಿಘಾ ಗಳಷ್ಟು ಭೂಮಿಯನ್ನು ಯಾವುದೇ ವಿರೋಧವಿಲ್ಲದೇ ಖಾಲಿ ಮಾಡಿಸಲಾಯಿತು. ಗುರುವಾರದಂದು 7000 ಬಿಘಾ ಗಳಷ್ಟು ಭೂಮಿಯನ್ನು ಪೋಲೀಸರು ಖಾಲಿ ಮಾಡಿಸುವ ಪ್ರಯತ್ನದಲ್ಲಿ ತೊಡಗಿದ್ದಾಗ ಘಟನೆಗಳು ಹಿಂಸಾತ್ಮಕ ರೀತಿಗೆ ತಿರುಗಿದವು.
“ಈ ಹಿಂಸೆಗೆ ಸರಕಾರವೇ ಕಾರಣ. ನಮ್ಮ ಜನ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರು.ಚರ್ಚೆಗಳು ನಡೆಯುತ್ತಿದ್ದವು. ಚರ್ಚೆಗಳು ಮುಗಿದು ಜನ ಹೊರಡುವಾಗ, ಪೂರ್ವದಿಂದ ಪೋಲೀಸರ ಗುಂಪೊಂದು ಬಂದು ಜನರನ್ನು ಹೊಡೆಯಲು ಆರಂಭಿಸಿತು,” ಎಂದು ಸ್ಥಳೀಯ ಹೋರಾಟಗಾರರಾದ ಹೈದರ್ ಅಲಿ ಅವರು ಹೇಳುತ್ತಾರೆ.
ಇಬ್ಬರು ಗ್ರಾಮಸ್ಥರನ್ನು ಕೊಲ್ಲಲಾಯಿತು.
33 ವರ್ಷದ ಮಾಯ್ನಲ್ ಹೋಕ್ ಮತ್ತು 12 ವರ್ಷದ ಫಾರಿದ ಶಾಖ್ ಎಂಬ ಇಬ್ಬರು ಗ್ರಾಮಸ್ಥರು ಪೋಲೀಸರ ಹಿಂಸೆಗೆ ಬಲಿಯಾದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವೀಡಿಯೋದಲ್ಲಿ ಮಾಯ್ನಲ್ ಹೋಕ್ ಅವರು ಪೋಲೀಸರತ್ತ ಬೆತ್ತವೊಂದನ್ನು ಹಿಡಿದು ಓಡುತ್ತಿರುವುದನ್ನು ಕಾಣಬಹುದು. ಪೋಲೀಸರು ಅವರ ಮೇಲೆ ಗುಂಡು ಹಾರಿಸಿ ದಾಳಿ ಮಾಡಿದ ನಂತರ ಜಿಲ್ಲಾಡಳಿತ ಕರೆಸಿಕೊಂಡಿದ್ದ ಛಾಯಾಗ್ರಾಹಕ ಬಿಜಾಯ್ ಬನಿಯಾ ಅವರು ಹೋಕ್ ಅವರನ್ನು ತುಳಿದು ಅವರ ಮೇಲೆ ಎಗರಾಡಿದರು.
ಮೂರು ಮಕ್ಕಳ ತಂದೆಯಾಗಿದ್ದ ಹೋಕ್ ತಮ್ಮ ಇಬ್ಬರು ವೃದ್ಧ ಪೋಷಕರನ್ನೂ ನೋಡಿಕೊಳ್ಳತ್ತಿದ್ದರು. ಹೋಕ್ ಅವರು ಒಂದು ಸಣ್ಣ ತುಂಡಿನ ಭೂಮಿಯಲ್ಲಿ ತರಕಾರಿ ಬೆಳೆದು ಜೀವನ ನಡೆಸುತ್ತಿದ್ದರು. ಆದರೆ ಆ ಭೂಮಿ ಅವರದ್ದಲ್ಲ ಎಂಬುದು ಸರಕಾರದ ವಾದ.
“ನನ್ನ ಸಹೋದರ ಸತ್ತು ಹೋದ. ಆ ಛಾಯಾಗ್ರಾಹಕ ಅವನ ಶವದ ಮೇಲೂ ಹಲ್ಲೆ ನಡೆಸಿದ. ಅವನಿಗೆ ಮೂರು ಪುಟ್ಟ ಮಕ್ಕಳಿದ್ದಾರೆ. ಅವರೇನು ಮಾಡುತ್ತಾರೆ?” ಎಂದು ಹೋಕ್ ನ ಸಹೋದರ ಐನುದ್ದಿನ್ ಕೇಳುತ್ತಾರೆ.
ತಮ್ಮ ತಾತ್ಕಾಲಿಕ ಸೂರಿನಲ್ಲಿ ಕುಳಿತಿದ್ದ ಅವರ ತಾಯಿ ಮತ್ತು ಪತ್ನಿಯನ್ನು ಸಮಾಧಾನ ಪಡೆಸಲಾಗಲಿಲ್ಲ. ಒಂದು ತಗಡಿನ ಆಶ್ರಯವೇ ಅವರ ಮನೆ. ಈ ಆಶ್ರಯವನ್ನೂ ಅವರು ಮತ್ತೆ ಕಳೆದುಕೊಳ್ಳಬಹುದು. ಮಾಯ್ನಲ್ ಅವರ ಕುಟುಂಬಕ್ಕೆ ಯಾವುದೇ ಒಕ್ಕಲೆಬ್ಬಿಸುವಿಕೆಯ ನೋಟಿಸ್ ತಲುಪಿಲ್ಲ ಎಂದು ಅವರು ಹೇಳುತ್ತಾರೆ. ಅವರ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳನ್ನು ತೋರಿಸುತ್ತಾ ಸರಕಾರದ ಉದ್ದೇಶವನ್ನು ಅವರು ಪ್ರಶ್ನಿಸಿದ್ದಾರೆ.
“ಸರಕಾರ ನಮ್ಮನ್ನು ಈಗ ನೋಡಿಕೊಳ್ಳಬೇಕು. ನಮಗೆ ವಾಸಿಸಲು ಜಾಗ ನೀಡಬೇಕು. ನನ್ನ ತಂದೆಯನ್ನು ಸಾಯಿಸಲಾಗಿದೆ. ನನಗೆ ಹಾಕಿಕೊಳ್ಳಲೂ ಯಾವುದೇ ಬಟ್ಟೆಯಿಲ್ಲ. ನನ್ನ ಬಟ್ಟೆಗಳನ್ನು ಅವರು ಸುಟ್ಟುಹಾಕಿದ್ದಾರೆ.” ಎಂದು ಹೋಕ್ ಅವರ ಮಗಳು ಮೊಂಜುರಾ ಹೇಳುತ್ತಾಳೆ.
ಪ್ರತಿಭಟನೆ ನಡೆಯುತ್ತಿದ್ದ ದಿನದಂದು 12 ವರ್ಷದ ಶಾಖ್ ಫರೀದ್ ತನ್ನ ಆಧಾರ್ ಕಾರ್ಡನ್ನು ತೆಗೆದುಕೊಳ್ಳಲು ಅಂಚೆ ಕಛೇರಿಗೆ ಹೋಗಿದ್ದ. ಮನೆಗೆ ಹಿಂದಿರುಗುವಾಗ ಈ ತಿಕ್ಕಾಟದಲ್ಲಿ ಆತ ಸಿಲುಕಿಕೊಂಡ. ಎಲ್ಲಿ ಅವನ ಮೇಲೆ ಗುಂಡು ಹಾರಿಸಲಾಯಿತೋ ಅಲ್ಲೇ ಫರೀದನ ಸಮಾಧಿಯನ್ನು ಅಗಿಯಾಲಗಿದೆ.
“ಅವನು ತನ್ನ ಆಧಾರ್ ಕಾರ್ಡ್ ಪಡೆಯಲು ಡೋಲ್ಪುರ್ ಅಂಚೆ ಕಛೇರಿಗೆ ಹೋಗಿದ್ದ. ಅವನು ಹಿಂದಿರುಗುವಾಗ ಅವನ ಮೇಲೆ ಪೋಲೀಸರು ಗುಂಡು ಹಾರಿಸಿದರು. ಅವನು ಅಲ್ಲೇ ಕುಸಿದ. ಜನರು ಅವನನ್ನು ಆಸ್ಪತ್ರೆಗೆ ಕರೆದೊಯ್ದರು. ನನ್ನ ಮೊಬೈಲ್ ಗೆ ಕರೆ ಬಂದ ನಂತರವೇ ನನಗೆ ತಿಳಿದಿದ್ದು. ಅವರು ನನ್ನ ಮಗನನ್ನು ಕೊಂದರು. ನನಗೆ ನ್ಯಾಯ ಬೇಕು,” ಎನ್ನುತ್ತಾರೆ ಫರೀದನ ತಂದೆ ಖಾಲೆಕ್ ಅಲಿ.
ಧಾರ್ಮಿಕ ಸ್ಥಾಪನೆಗಳನ್ನು ನೆಲಸಮಮಾಡಲಾಗಿದೆ.
ಕನಿಷ್ಠ 800 ಕುಟುಂಬಗಳನ್ನು ಇಲ್ಲಿಯ ವರೆಗೂ ಒಕ್ಕಲೆಬ್ಬಿಸಲಾಗಿದೆ. ರಾಜ್ಯ ಸರಕಾರದ ಒಂದು ಕೃಷಿ ಯೋಜನೆಗೆ 4,500 ಬಿಘಾಗಳಷ್ಟು ಭೂಮಿಯ ಅವಶ್ಯಕತೆ ಇದೆ. ಆದರೆ, ಅಲ್ಲಿಯ ನಿವಾಸಿಗಳಿಗೆ ಕೇವಲ 6-9 ಘಂಟೆಗಳ ಮುನ್ನ ನೋಟಿಸ್ ತಲುಪಿದೆ.
“ಅವರು ನಮಗೆ ತಯಾರಾಗಲು ಬೇಕಾದಷ್ಟು ಸಮಯವನ್ನು ನೀಡಲಿಲ್ಲ. ನಮ್ಮ ಜೋಪಡಿಯನ್ನು ಕಳಚಲು ನಮಗೆ ಸಮಯ ಕೊಡಿ ಎಂದು ಬೇಡಿದೆವು. ಆದರೆ ಅವರು ಅದನ್ನು ಜೆ.ಸಿ.ಬಿ. ಯೊಂದಿಗೆ ಧ್ವಂಸ ಮಾಡಿದರು,” ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥ ಮುಲುಕ್ಜಾನ್ ನಿಸಾ.
ಸ್ಥಳೀಯರ ಪ್ರಕಾರ ಅಲ್ಲಿನ ಧಾರ್ಮಿಕ ಸ್ಥಾಪನೆಗಳನ್ನೂ ಉಳಿಸಲಿಲ್ಲ. ನಾಕು ಮಸೀದಿಗಳನ್ನು ಮತ್ತು ಒಂದು ಮದರಾಸವನ್ನೂ ನಾಶ ಪಡಿಸಿದರು. ಕಡೆವಿ ಹೋಗಿರುವ ಮಸೀದಿಯ ಬಳಿ ಕೆಲವರು ಮಧ್ಯಾನದ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು.
ತೀವ್ರವಾದಿಗಳು ಭಾಗವಹಿಸಿದ್ದರು: ಅಸ್ಸಾಂ ಸರಕಾರ
80% ಭೂಮಿಯಲ್ಲಿ ವಾಸವಿದ್ದವರನ್ನು ಒಕ್ಕಲೆಬ್ಬಿಸಿದಾಗ ಯಾವುದೇ ಹಾನಿಯಾಗಿರಲಿಲ್ಲ. ಆದರೆ, ಈ ರೀತಿ ಆಗಿರುವುದಕ್ಕೆ ಪ್ರತಿಭಟನೆಯಲ್ಲಿ ತೀವ್ರವಾದಿಗಳು ಭಾಗವಹಿಸುವಿಕೆಯೇ ಕಾರಣವಿರಬಹುದು ಎನ್ನುತ್ತಾರೆ ಮುಖ್ಯಮಂತ್ರಿ ಹೇಮಂತ್ ಬಿಸಾವಾ ಶರ್ಮಾ.
ಸುಮಾರು 47 ಲಕ್ಷ ಬಿಘಾಗಳಷ್ಟು ಭೂಮಿ ಅತಿಕ್ರಮಣಕ್ಕೆ ಒಳಗಾಗಿದೆ ಎಂದು ಅಸ್ಸಾಂ ಸರಕಾರ 2017ರಲ್ಲಿ ಆರೋಪಿಸಿತ್ತು.
“ಈ ಒಕ್ಕಲೆಬ್ಬಿಸುವಿಕೆ ತುರ್ತಾಗಿತ್ತು. ನಾವು ಈ 27,000 ಎಕರೆ ಭೂಮಿಯನ್ನು ಫಲದಾಯಕ ಭೂಮಿಯನ್ನಾಗಿ ಮಾಡಬೇಕಾಗಿತ್ತು. ಅಲ್ಲಿ ಒಂದು ದೇವಸ್ಥಾನವಿದ್ದು ಅದನ್ನೂ ಅತಿಕ್ರಮಿಸಲಾಗಿತ್ತು. ನಾವು ಅವರೊಂದಿಗೆ ನಾಕು ತಿಂಗಳಿಂದ ಮಾತುಕತೆ ನಡೆಸುತ್ತಲೇ ಇದ್ದೇವೆ. ಭೂಮಿ ನೀತಿಗೆ ಅನುಸಾರವಾಗಿ ಭೂಮಿಯನ್ನು ಹಂಚಬೇಕು ಎಂದು ಕಾಂಗ್ರೆಸ್ ಪ್ರತಿನಿಧಿಗಳೂ ಸಹ ಒಪ್ಪಿದ್ದರು. ಇದು ತಕ್ಷಣದ ನಿರ್ಧಾರವೇನಲ್ಲ,” ಎಂಬುದು ಮುಖ್ಯಮಂತ್ರಿಗಳ ಹೇಳಿಕೆ.
ಈಗ ಒಕ್ಕಲೆಬ್ಬಿತವಾದವರು ತಾತ್ಕಾಲಿಕ ಆಶ್ರಯಗಳಲ್ಲಿ ವಾಸ ಹೂಡಿದ್ದಾರೆ. ಆದರೆ, ಅವರು ಕಠಿಣ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂಬುದು ಬಹುತೇಕರ ಅನಿಸಿಕೆ.
ಮಳೆಯಲ್ಲಿ ನನೆವ ಮಕ್ಕಳು ಆಗಾಗ ಖಾಯಿಲೆಗೆ ಒಳಗಾಗುತ್ತಾರೆ ಎಂದು ಗ್ರಾಮಸ್ಥ ಅಬ್ದುಲ್ ರಜಾಕ್ ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಮುಲುಕ್ಜಾನ್ ನಿಸಾ ಅವರು ತಮ್ಮ ಗರ್ಭಿಣಿ ಸೊಸೆಯ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ.
ಮೂಲ: ದಿ ಕ್ವಿಂಟ್