RSS ಬೆಂಬಲಿತ ವೃತ್ತಪತ್ರಿಕೆ ‘ಪಾಂಚಜನ್ಯ’ ಇ-ಕಾಮರ್ಸ್ ದೈತ್ಯ ಅಮೇಜಾನ್’ನನ್ನು (AMAZON) ‘ಈಸ್ಟ್ ಇಂಡಿಯಾ ಕಂಪೆನಿ 2.0’ (EAST INDIA COMPANY) ಎಂದು ಕರೆಯುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದೆ. ಅಮೇಜಾನ್ ಸಿಇಒ ಜೆಫ್ ಬೆಜೋಸ್ ಅವರ ಚಿತ್ರವನ್ನು ಹೊಂದಿರುವ ಪಾಂಚಜನ್ಯದ ಮುಖಪುಟವನ್ನು ಸಂಪಾದಕ ಹಿತೇಶ್ ಶಂಕರ್ ಅವರು ಸೋಮವಾರ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ಅಧಿಕಾರಿಗಳಿಗೆ ಅಮೇಜಾನ್ ಕಂಪನಿಯ ಕಾನೂನು ವಿಭಾಗದ ಪ್ರತಿನಿಧಿಗಳು ಲಂಚ ನೀಡಿದ ಆರೋಪದ ಕುರಿತಾಗಿ ಈ ಬಾರಿಯ ಸಂಚಿಕೆಯಲ್ಲಿ ಲೇಖನ ಪ್ರಕಟಿಸಲಾಗಿದೆ.“ಅಧಿಕಾರಿಗಳಿಗೆ ಲಂಚ ನೀಡಬೇಕಾದ ಯಾವ ಕೆಲಸವನ್ನು ಅಮೇಜಾನ್ ಮಾಡುತ್ತಿದೆ? ದೇಸೀಯ ಕಂಪನಿ, ಉತ್ಪನ್ನ, ಆರ್ಥಿಕ ಸ್ವಾತಂತ್ರ್ಯ ಹಾಗೂ ಸಂಸ್ಕೃತಿಗೆ ಅಮೇಜಾನ್ ಎಂಬ ದೈತ್ಯ ಕಂಪನಿ ಅಪಾಯಕಾರಿಯೆಂದು ಜನರು ಏಕೆ ಭಾವಿಸುತ್ತಾರೆ?” ಎಂದು ಹಿತೇಶ್ ಟ್ವೀಟ್ ಮಾಡಿದ್ದಾರೆ.
ಕಾನೂನು ಸೇವೆಗಳಿಗೆ ನೀಡಿರುವ ಶುಲ್ಕದ ನೆಪದಲ್ಲಿ ಸುಮಾರು ರೂ. 8500 ಕೋಟಿಯಷ್ಟು ಲಂಚ ನೀಡಲಾಗಿದೆ ಎಂಬ ಆರೋಪದಲ್ಲಿ ಅಮೇಜಾನ್ ಹೆಸರು ತಳುಕು ಹಾಕಿತ್ತು. ಈ ಕುರಿತಾಗಿ ಸಮಗ್ರ ತನಿಖೆ ನಡೆಸುವುದಾಗಿ ಕಳೆದ ವಾರ ಸರ್ಕಾರವು ಹೇಳಿತ್ತು.
ದೇಶದ ವ್ಯವಸ್ಥೆ ಎಷ್ಟರ ಮಟ್ಟಿಗೆ ಹದೆಗೆಟ್ಟಿದೆ ಎಂಬುದನ್ನು ಆಲೋಚಿಸುವ ದಿನ ಬಂದಾಗಿದೆ. ಸಂಪೂರ್ಣ ವ್ಯವಸ್ಥೆಯು ಲಂಚದ ಮೂಲಕವೇ ನಡೆಯುತ್ತಿದೆ. ಇದು ಉತ್ತಮ ವ್ಯವಹಾರದ ಲಕ್ಷಣವಲ್ಲ, ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದರು.
ಈ ಲಂಚ ಪ್ರಕರಣವು ಯಾವಾಗ ಮತ್ತು ಯಾವ ರಾಜ್ಯದಲ್ಲಿ ನಡೆಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ, ಅಮೇಜಾನ್’ನ ಹಿರಿಯ ಕಾರ್ಪೊರೇಟ್ ಅಧಿಕಾರಿಯನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಈ ಪ್ರಕರಣದ ಕುರಿತಾಗಿ ಅಮೇಜಾನ್ ಕೂಡಾ ಆಂತರಿಕ ತನಿಖೆ ನಡೆಸುವುದಾಗಿ ಹೇಳಿದೆ.
ಭೃಷ್ಟಾಚಾರ ವಿಚಾರವಾಗಿ “ಶೂನ್ಯ ಸಹನೆ” ನೀತಿಯನ್ನು ಅನುಸರಿಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹಾಗೂ ಅಮೇಜಾನ್ ಹೇಳಿಕೊಂಡಿದೆ.
ಸೆಪ್ಟೆಂಬರ್’ನ ಆರಂಭದಲ್ಲಿ ಪಾಂಚಜನ್ಯದ ಮೂಲಕ ಇನ್ಫೋಸಿಸ್ ಕಂಪನಿಯ ಮೇಲೆ ಗುರುತರವಾದ ಆರೋಪವನ್ನು ಹೊರಿಸಲಾಗಿತ್ತು. ಜಾಗತಿಕವಾಗಿ ಭಾರತವನ್ನು ಪ್ರತಿನಿಧಿಸುವ ಐಟಿ ಕಂಪನಿಯಾದ ಇನ್ಫೋಸಿಸ್ ದೇಶ ವಿರೋಧಿ ಷಡ್ಯಂತ್ರದಲ್ಲಿ ಪಾಲ್ಗೊಂಡಿದೆ ಎಂದು ಪಾಂಚಜನ್ಯ ಹೇಳಿತ್ತು.
ಇ-ತೆರಿಗೆ ಪಾವತಿಯ ಅಂತರ್ಜಾಲ ತಾಣದಲ್ಲಿ ಉಂಟಾದ ತೊಂದರೆಗಳನ್ನು ಉಲ್ಲೇಖಿಸಿ ಇನ್ಫೋಸಿಸ್ ಮೇಲೆ ಲೇಖನಿಯಿಂದ ದಾಳಿ ನಡೆಸಲಾಗಿತ್ತು. ಈ ದಾಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ಕೇಳಿ ಬಂದಿದ್ದವು.
ಇನ್ಫೋಸಿಸ್ ಮೇಲೆ ದಾಳಿ ನಡೆಸಿದ ಪಾಂಚಜನ್ಯ ಮ್ಯಾಗಜೀನ್ ದೇಶದ್ರೋಹಿ ಪತ್ರಿಕೆ ಎಂದು ಕಾಂಗ್ರೆಸ್ ನಾಯಕ ಜಯರಾಮ್ ರಮೇಶ್ ಅವರು ವಾಗ್ದಾಳಿ ನಡೆಸಿದ್ದರು.
ಪಾಂಚಜನ್ಯ ಆರ್ಎಸ್ಎಸ್ ಬೆಂಬಲಿತ ಮ್ಯಾಗಜೀನ್ ಆಗಿದ್ದರೂ, ಖುದ್ದು ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರೇ ಇನ್ಫೋಸಿಸ್ ವಿರುದ್ದದ ಲೇಖನವನ್ನು ಖಂಡಿಸಿದ್ದರು.
“ಇನ್ಫೋಸಿಸ್ ಅನ್ನು ಟೀಕಿಸಿ ಪಾಂಚಜನ್ಯದಲ್ಲಿ ಪ್ರಕಟವಾಗಿರುವ ಲೇಖನದಿಂದ ಸರ್ಕಾರ ದೂರ ಉಳಿಯಲಿದೆ,” ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
RSS ವಕ್ತಾರರಾಗಿರುವ ಸುನಿಲ್ ಆಂಬೆಕರ್ ಅವರು, “ಪಾಂಚಜನ್ಯ ನಮ್ಮ ಮುಖವಾಣಿಯಲ್ಲ. ಅದರಲ್ಲಿ ಪ್ರಕಟವಾದ ಲೇಖನ ಅಥವಾ ಅಭಿಪ್ರಾಯಗಳನ್ನು RSS ಜತೆ ತಳುಕು ಹಾಕಬಾರದು,” ಎಂದು ಹೇಳಿ ಕೈ ತೊಳೆದುಕೊಂಡಿದ್ದರು.