ಪಶ್ಚಿಮ ಬಂಗಾಳದಲ್ಲಿ ಭವಾನಿಪುರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾದಾಗ ಬಿಜೆಪಿಯು ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಅಂದಿನ ಬಿಜೆಪಿ ನಾಯಕ ಬಾಬುಲ್ ಸುಪ್ರಿಯೊ ಅವರ ಹೆಸರು ಕೂಡಾ ಇತ್ತು. ಕೇಂದ್ರ ಮಂತ್ರಿಗಳಾದ ಸ್ಮೃತಿ ಇರಾನಿ, ಹರ್ದೀಪ್ ಸಿಂಗ್ ಪುರಿ ಅವರೊಂದಿಗೆ ಬಾಬುಲ್ ಅವರೊಂದಿಗೆ ಬಾಬುಲ್ ಸುಪ್ರಿಯೊ ಕೂಡಾ ಪ್ರಚಾರ ನಡೆಸಲಿದ್ದಾರೆ ಎಂದು ಲೆಕ್ಕಾಚಾರ ಹಾಕಿದ್ದ ಬಿಜೆಪಿಗೆ ಕೆಲವೇ ದಿನಗಳ ಅಂತರದಲ್ಲಿ ಬಾಬುಲ್ ಮರ್ಮಾಘಾತ ನೀಡಿದ್ದಾರೆ.
ಗಾಯಕನಾಗಿ ಜನಪ್ರಿಯತೆ ಹೊಂದಿದ್ದ ಬಾಬುಲ್ ಸುಪ್ರಿಯೊ ಕೇಂದ್ರದಲ್ಲಿ ಕಿರಿಯ ಸಚಿವ ಸ್ಥಾನವನ್ನೂ ಹೊಂದಿದ್ದರು. ಆದರೆ, ಇತ್ತೀಚಿಗೆ ನಡೆದ ಕೇಂದ್ರ ಕ್ಯಾಬಿನೆಟ್ ವಿಸ್ತರಣೆಯ ವೇಳೆ ಬಿಜೆಪಿ ಅವರಿಗೆ ಕೊಕ್ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಬಾಬುಲ್ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದರು. ಭಾವನಾತ್ಮಕವಾಗಿ ಫೇಸ್ ಬುಕ್ ಸಂದೇಶ ಬರೆದಿದ್ದ ಅವರು, ನಾನು ಬೆಂಬಲಿಸುವ ಕ್ರೀಡಾ ತಂಡವಿದ್ದರೆ ಅದು ಮೋಹನ್ ಬಾಗನ್ ಮಾತ್ರ. ನಾನು ಬೆಂಬಲಿಸುವ ರಾಜಕೀಯ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ ಎಂದು ಹೇಳಿದ್ದರು. ಇದಾಗಿ ಕೇವಲ ಒಂದು ತಿಂಗಳ ನಂತರ ಬಾಬುಲ್ ಟಿಎಂಸಿ ಸೇರಿದ್ದಾರೆ.
ಬಾಬುಲ್ ಸುಪ್ರಿಯೋ ರಾಜಕೀಯ ನಿವೃತ್ತಿ ಘೋಷಿಸಿದ್ದಕ್ಕಿಂತಲೂ, ಬಿಜೆಪಿಗೆ ದೊಡ್ಡ ಹೊಡೆತ ಎಂದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು. ಅಸಾನ್ಸೋಲ್ ಲೋಕಸಭಾ ಕ್ಷೇತ್ರವು ಈಗ ಖಾಲಿಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಈಗಿರುವ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ, ಬಿಜೆಪಿ ಈಗ ಚುನಾವಣೆ ಗೆಲ್ಲುವುದು ಕಷ್ಟಸಾಧ್ಯ. ಪಶ್ಚಿಮ ಬಂಗಾಳದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಡೆದ ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಅನಿವಾರ್ಯವಾಗಿ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಿಜೆಪಿಗೆ ಎದುರಾಗಬಹುದು.

ಸೆಪ್ಟೆಂಬರ್ ಹತ್ತರಂದು ಭವಾನಿಪುರ್ ಕ್ಷೇತ್ರದ ಉಪ-ಚುನಾವಣೆ ಪ್ರಚಾರಕ್ಕೆ ಬಿಜೆಪಿ ಸ್ಟಾರ್ ಪ್ರಚಾರಕರ ಹೆಸರು ಬಹಿರಂಗಪಡಿಸಿದಾಗ ಬಾಬುಲ್ ಸುಪ್ರಿಯೊ ತಾನು ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ಬಿಜೆಪಿಗೆ ಶಾಕ್ ನೀಡಿದ್ದರು. ಆದರೆ, ಭಾನುವಾರದಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ್ದು ಮಾತ್ರ ಬಂಗಾಳದ ಬಿಜೆಪಿ ನಾಯಕರಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಜೆಪಿ ಊಹಿಸಿಯೂ ಇರದಂತಹ ಹೊಡೆತವನ್ನು ಟಿಎಂಸಿ ನೀಡಿದೆ. ಅಂದಹಾಗೆ ಟಿಎಂಸಿ ಸೇರಿದ ಬಿಜೆಪಿಯ ಪ್ರಥಮ ಸಂಸದ ಬಾಬುಲ್ ಸುಪ್ರಿಯೊ.
ಇದಾದ ಬಳಿಕ, ಲೋಕಸಭಾ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ವಿಚಾರವನ್ನು ಬಹಿರಂಗವಾಗಿ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಮುಂದಿನ ಆರು ತಿಂಗಳ ಒಳಗಾಗಿ ಉಪ-ಚುನಾವಣೆ ನಡೆಯಲಿದೆ.
ಇದಕ್ಕೂ ಮೊದಲು ಬರುವಂತಹ ಭವಾನಿಪುರ್ ಉಪ-ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪರ ಪ್ರಚಾರಕ್ಕೆ ಬಾಬುಲ್ ಸುಪ್ರಿಯೋ ತೆರುಳುವರೋ ಇಲ್ಲವೋ? ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ನನ್ನ ಹೊಸ ಪಕ್ಷವು ಪ್ರಚಾರಕ್ಕೆ ನನ್ನನ್ನು ಕರೆದಲ್ಲಿ ಖಂಡಿತಾ ಹೋಗುವೆ ಎಂದು ಹೇಳಿದ್ದಾರೆ.
ಲಾಭ ನಷ್ಟದ ಲೆಕ್ಕಾಚಾರ:
2021ರ ವಿಧಾನಸಭಾ ಚುನಾವಣೆಯ ಬಳಿಕ ತಮ್ಮ ಕೇಂದ್ರ ಸಚಿವ ಸ್ಥಾನವನ್ನು ಬಾಬುಲ್ ಸುಪ್ರಿಯೊ ಕಳೆದುಕೊಳ್ಳುವುದು ನಿಶ್ಚಿತವಾಗಿತ್ತು. ಚುನಾವಣೆಯಲ್ಲಿ ಟಿಎಂಸಿಯ ಅರೂಪ್ ಬಿಸ್ವಾಸ್ ವಿರುದ್ದ ಬರೋಬ್ಬರಿ 50,080 ಮತಗಳ ಅಂತರದಿಂದ ಸೋಲುಂಡಿದ್ದರು. ಬಾಬುಲ್ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಆರು ಕ್ಷೇತ್ರಗಳನ್ನು ಸೋತಿತ್ತು. ಗೆದ್ದಂತಹ ಒಂದು ಕ್ಷೇತ್ರದಲ್ಲಿ ಗೆಲುವಿನ ಅಂತರ ಕೇವಲ 679 ಮತಗಳು ಅಷ್ಟೇ. ಚುನಾವಣೆಯಲ್ಲಿ ಬಾಬುಲ್ ಅವರ ಪ್ರಭಾವ ಸೊನ್ನೆ ಎಂದು ತಿಳಿಯಲು ಬಿಜೆಪಿಗೆ ಹೆಚ್ಚಿನ ಸಮಯ ಹಿಡಿಯಲಿಲ್ಲ.
ಬಾಬುಲ್ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದಾಗ ತಲೆಕೆಡಿಸಿಕೊಳ್ಳದ ಬಿಜೆಪಿ, ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದಾಗ ಮಾತುಕತೆಗೆ ಧಾವಿಸಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಬಾಬುಲ್ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದರು.
ಕೇಂದ್ರದಲ್ಲಿ ಸಚಿವನಾಗಿದ್ದವರೆಗೆ ರಾಜ್ಯ ಬಿಜೆಪಿಯಲ್ಲಿಯೂ ಉತ್ತಮ ಹಿಡಿತ ಹೊಂದಿದ್ದ ಬಾಬುಲ್, ಸಚಿವ ಸ್ಥಾನ ಕಳೆದುಕೊಂಡ ಬಳಿಕ ರಾಜ್ಯದಲ್ಲಿಯೂ ಹಿಡಿತ ಕಳೆದುಕೊಳ್ಳಲಾರಂಭಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ರಾಜ್ಯಸಭಾ ಸಂಸದ ಸ್ವಪಣ್ ದಾಸ್ ಗುಪ್ತಾ ಸೇರಿದಂತೆ ಇತರ ನಾಯಕರು ಬಾಬುಲ್’ರಿಂದ ದೂರ ಉಳಿಯತೊಡಗಿದರು.
ಏಳು ವರ್ಷಗಳ ಕಾಲ ಯಾವ ಪಕ್ಷದಲ್ಲಿದ್ದರೋ, ಆ ಪಕ್ಷಕ್ಕೇ ಅನಗತ್ಯ ಎಂದು ಅನ್ನಿಸಿಕೊಂಡ ನಾಯಕನನ್ನು ಟಿಎಂಸಿ ಬರಮಾಡಿಕೊಳ್ಳುವುದರಿಂದ ಪಕ್ಷಕ್ಕೇನು ಲಾಭ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇಲ್ಲಿ ಟಿಎಂಸಿಗೆ ದೊಡ್ಡ ಪ್ರಮಾಣದ ಲಾಭವೇನೂ ಇಲ್ಲ. ಆದರೆ, ಇದು ಬಿಜೆಪಿ ಪಾಲಿಗೆ ಮಾತ್ರ ಬಹುದೊಡ್ಡ ಮುಜುಗರವನ್ನು ಉಂಟು ಮಾಡುತ್ತದೆ.
ಪಶ್ಚಿಮ ಬಂಗಾಳದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿರುವ ಬಿಜೆಪಿಗೆ ಈ ಬೆಳವಣಿಗೆ ಅಪಮಾನಕರವಾಗಿರುವುದೇ ಟಿಎಂಸಿಗಿರುವ ದೊಡ್ಡ ಲಾಭ. ಮಿಗಿಲಾಗಿ, ಮುಂಬರುವ ಲೋಕಸಭಾ ಉಪ-ಚುನಾವಣೆಯಲ್ಲಿ ಬಾಬುಲ್ ಸುಪ್ರಿಯೊ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವನ್ನು ಟಿಎಂಸಿ ತನ್ನ ತೆಕ್ಕೆಗೆ ತೆಗೆದುಕೊಂಡರೆ ಬಿಜೆಪಿ ಬೆಂಬಲಿಗರ ಮನೋಸ್ಥೈರ್ಯ ಕುಗ್ಗುತ್ತದೆ. ಇದು 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಇನ್ನು, ಟಿಎಂಸಿಯಲ್ಲಿ ಬಾಬುಲ್ ಸುಪ್ರಿಯೊಗೆ ಉತ್ತಮ ಸ್ಥಾನಮಾನ ಲಭಿಸಿದ್ದೇ ಆದಲ್ಲಿ, ಇನ್ನೂ ಅನೇಕ ಬಿಜೆಪಿ ನಾಯಕರು ಟಿಎಂಸಿಯೆಡೆಗೆ ಆಕರ್ಷಿತರಾಗುವ ಸಾಧ್ಯತೆಗಳಿವೆ. ಈಗಾಗಲೇ ಬಿಜೆಪಿ ಶಾಸಕರಾದ, ಮುಕುಲ್ ರಾಯ್, ತನ್ಮಯ್ ಘೋಷ್, ಸೌಮೇನ್ ರಾಯ್ ಹಾಗೂ ಬಿಸ್ವಜಿತ್ ದಾಸ್ ಅವರು ಟಿಎಂಸಿ ಸೇರಿಯಾಗಿದೆ. ಇವರೊಂದಿಗೆ ಇನ್ನೂ ಹೆಚ್ಚಿನ ಬಿಜೆಪಿ ಶಾಸಕರನ್ನು ಸೆಳೆದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ನೆಲೆಯನ್ನು ಧ್ವಂಸಗೊಳಿಸುವ ಟಿಎಂಸಿ ಯೋಜನೆಯ ಭಾಗವಾಗಿ ಬಾಬುಲ್ ಪಕ್ಷ ಸೇರ್ಪಡೆ ಬಹುದೊಡ್ಡ ಹೆಜ್ಜೆಯಾಗಲಿದೆ












