ಹದಿಹರೆಯದವರು ಮತ್ತು ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದ ಜನರಲ್ಲಿ ಮಧುಮೇಹವು ಪ್ರಪಂಚದಾದ್ಯಂತ ವೇಗವಾಗಿ ಬೆಳೆಯುತ್ತಿರುವ ರೋಗಗಳಲ್ಲಿ ಒಂದಾಗಿದೆ. ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸದಿದ್ದಾಗ ಅಥವಾ ಅದನ್ನು ಪರಿಣಾಮಕಾರಿಯಾಗಿ ಬಳಸಲಾಗದಿದ್ದಾಗ ಈ ಸ್ಥಿತಿ ಉಂಟಾಗುತ್ತದೆ. ಮಧುಮೇಹಿ ರೋಗಿಗಳಿಗೆ ಹೃದ್ರೋಗಗಳು, ಮೂತ್ರಪಿಂಡದ ಸಮಸ್ಯೆಗಳು, ಪಾರ್ಶ್ವವಾಯುಗಳಿಂದ ಹಿಡಿದು ಅಂಗಾಂಗಗಳನ್ನು ಕತ್ತರಿಸುವವರೆಗೆ ಅನೇಕ ಸಮಸ್ಯೆಗಳು ಕಾಡುವ ಅಪಾಯ ಹೆಚ್ಚು.
ಜಡ ಜೀವನಶೈಲಿ ಹಾಗೂ ಹೆಚ್ಚುತ್ತಿರುವ ಒತ್ತಡ ಮತ್ತು ತಪ್ಪು ಆಹಾರದ ಆಯ್ಕೆಗಳು ಮಧುಮೇಹಕ್ಕೆ ಮುಖ್ಯ ಕಾರಣಗಳಾಗಿವೆ. ಅಲ್ಲದೆ ಇದು ವಂಶವಾಹಿ ರೋಗವೂ ಹೌದು.
“ನಿಷ್ಕ್ರಿಯ ಜೀವನಶೈಲಿಯು ಸ್ನಾಯುವಿನ ದ್ರವ್ಯರಾಶಿಯ ನಷ್ಟಕ್ಕೆ ಕಾರಣವಾಗುತ್ತದೆ. ಅದು ಇನ್ಸುಲಿನ್ ಕೊರತೆಯನ್ನು ಉಂಟುಮಾಡಬಹುದು. ಏಕೆಂದರೆ ನಮ್ಮ ದೇಹಗಳು ದೈಹಿಕವಾಗಿ ಸಕ್ರಿಯವಾಗಿರಬೇಕು. ಸಾವಿರಾರು ವರ್ಷಗಳಿಂದ ನಾವು ಸಕ್ರಿಯ ಜೀವನಶೈಲಿಯನ್ನು ನಡೆಸುತ್ತಿದ್ದೆವು, ಮತ್ತು ಕಳೆದ 100 ವರ್ಷಗಳಿಂದಷ್ಟೇ ಮಧುಮೇಹ ಎಲ್ಲರನ್ನೂ ಕಾಡುವ ರೋಗವಾಗಿರುವುದು” ಎಂದು ಖ್ಯಾತ ಸೂಪರ್ ಸ್ಪೆಷಲಿಸ್ಟ್ ಡಾಕ್ಟರ್ ಮತ್ತು ಫಿಟರ್ಫ್ಲೈ ಹೆಲ್ತ್ ಟೆಕ್ ಸ್ಟಾರ್ಟ್ ಅಪ್ನ ಸಹ ಸಂಸ್ಥಾಪಕ ಮತ್ತು ಸಿಇಒ ಡಾ ಅರ್ಬಿಂದರ್ ಸಿಂಗಲ್ ವಿವರಿಸುತ್ತಾರೆ.
ಪ್ರಧಾನ ಆಹಾರವಾಗಿ ಗೋಧಿ ಮತ್ತು ಅಕ್ಕಿಯ ಮೇಲಿನ ನಮ್ಮ ಅವಲಂಬನೆಯು ನಮ್ಮ ಆಹಾರದಲ್ಲಿನ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಮನುಷ್ಯನ ದೇಹವು ಕಾರ್ಬೋಹೈಡ್ರೇಟ್ಗಳನ್ನು ಸುಲಭವಾಗಿ ಒಡೆಯುತ್ತದೆ ಮತ್ತು ಇದು ಗ್ಲೂಕೋಸ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಈ ಪ್ರಕ್ರಿಯೆಯು ಮಧುಮೇಹ ದೇಹವನ್ನು ಭಾದಿಸಲು ಇರುವ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳುತ್ತಾರೆ.
ನಮ್ಮ ಮಧುಮೇಹದ ಅಪಾಯವನ್ನು ಹೆಚ್ಚಿಸುವ ಇನ್ನೊಂದು ಅಂಶವೆಂದರೆ ಒತ್ತಡ. ಇದು ನಮ್ಮ ಆಧುನಿಕ ಜೀವನಶೈಲಿಯ ಸಂಕೀರ್ಣತೆಗಳ ಕೊಡುಗೆ. ನಾವು ಮನೆಯಿಂದ ಕೆಲಸ ಮಾಡುತ್ತಿರುವಂತೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದೆ ಮತ್ತು ವಿಶ್ರಾಂತಿ ಪಡೆಯಲು ಅಥವಾ ಇತರ ಜನರೊಂದಿಗೆ ಸಂವಹನ ಮಾಡಲು ಅವಕಾಶ ಸಿಗುವುದಿಲ್ಲ. ಒತ್ತಡವು ನಮ್ಮ ಚಯಾಪಚಯ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಿವಿಧ ಹಾರ್ಮೋನುಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.
“ನಮ್ಮ ತಪ್ಪು ಜೀವನಶೈಲಿಯು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಅವರ ದೈಹಿಕ ಚಟುವಟಿಕೆಗಳೂ ಸೀಮಿತವಾಗಿದೆ. ಏಕೆಂದರೆ ಅವರು ಮೊದಲಿನಂತೆ ಶಾಲೆಗಳು ಅಥವಾ ಆಟದ ಮೈದಾನಗಳಿಗೆ ಹೋಗುವುದಿಲ್ಲ. ಮಕ್ಕಳು ತಮ್ಮ ಹೆತ್ತವರು ಏನು ಮಾಡುತ್ತಾರೆ ಅದನ್ನೇ ಅನುಸರಿಸುತ್ತಾರೆ ಮತ್ತು ಅವರು ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸದಿದ್ದಾಗ ಮಕ್ಕಳಿಗೆ ಮಧುಮೇಹ ಬರುವ ಸಾಧ್ಯತೆಗಳೂ ಹೆಚ್ಚು”ಎಂದು ಡಾ ಸಿಂಗಲ್ ಹೇಳುತ್ತಾರೆ.
ಮಧುಮೇಹದ ಅಪಾಯವನ್ನು ಕಡಿಮೆಗೊಳಿಸಲು 3 ಪ್ರಮುಖ ಸಲಹೆಗಳನ್ನು ನೀಡುತ್ತಾರೆ ಡಾ. ಸಿಂಗಲ್
1. ನಿಮ್ಮ ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡಿ
ಜನರು ತಾವು ಎಷ್ಟು ಆರೋಗ್ಯವಂತರು ಎಂಬ ಅರಿವು ಹೆಚ್ಚಾಗಿ ಹೊಂದಿರುವುದಿಲ್ಲ. ಅವರು ಮಾಡಬೇಕಾದ ಮೊದಲನೆಯ ಕೆಲಸ ಸಮಯ ಮತ್ತು ಶಕ್ತಿಯನ್ನು ಮೌಲ್ಯಮಾಪನ ಮಾಡುವುದು. ಜನರು ತಮ್ಮ ದೈನಂದಿನ ಆಹಾರದಲ್ಲಿ ಎಷ್ಟು ಕಾರ್ಬೋಹೈಡ್ರೇಟ್ಗಳು ಮತ್ತು ಕ್ಯಾಲೊರಿಗಳನ್ನು ಹೊಂದಿದ್ದಾರೆ ಎಂಬುದನ್ನು ನಿರ್ಣಯಿಸಬೇಕು. ಮಧುಮೇಹವನ್ನು ಹಿಮ್ಮೆಟ್ಟಿಸುವಲ್ಲಿ ಮಾಡಬೇಕಾದ ಮೊದಲ ಕೆಲಸವೆಂದರೆ ಕಾರ್ಬೋಹೈಡ್ರೇಟ್ ಸೇವನೆಯನ್ನು 50%ಕ್ಕೆ ಇಳಿಸುವುದು. ಹೆಚ್ಚಿನ ಭಾರತೀಯರು 60-70% ಕಾರ್ಬೋಹೈಡ್ರೇಟ್ಗಳನ್ನು ಸೇವಿಸುತ್ತಾರೆ. ಕಾರ್ಬೋಹೈಡ್ರೇಟ್ಗಳ ಬಳಕೆಯನ್ನು 10%ರಷ್ಟು ಕಡಿಮೆ ಮಾಡಿದ ತಕ್ಷಣ ದೇಹದಲ್ಲಿ ಬದಲಾವಣೆಯನ್ನು ನೋಡಬಹುದು.
2. ನಿಮ್ಮ ಮೂಲ ಶಕ್ತಿಯ ಬಗ್ಗೆ ಅರಿತುಕೊಳ್ಳಿ
ಉತ್ತಮ ಆರೋಗ್ಯಕ್ಕೆ ವಾಕಿಂಗ್ ಬಹಳ ಮುಖ್ಯವಾದರೂ,ದೇಹದ ಮೇಲ್ಭಾಗ, ಬೆನ್ನು, ಕಾಲುಗಳಿಗೆ ಬಲ ನೀಡುವ ವ್ಯಾಯಾಮಗಳು ಮಧುಮೇಹವನ್ನು ಹಿಮ್ಮೆಟ್ಟಿಸುವಲ್ಲಿ ಬಹಳ ಪ್ರಯೋಜನಕಾರಿ. ಅಧ್ಯಯನದ ಪ್ರಕಾರ, ಉತ್ತಮ ಕೋರ್ ಸ್ಟ್ರೆಂಥ್ ಹೊಂದಿರುವ ಜನರು ಪಾರ್ಶ್ವವಾಯು, ಹೃದ್ರೋಗಗಳು ಮತ್ತು ಮಧುಮೇಹದ ಅಪಾಯವನ್ನು 33% ಕಡಿಮೆ ಹೊಂದಿರುತ್ತಾರೆ.
3. ನಿದ್ರೆ ಮತ್ತು ಒತ್ತಡ ನಿರ್ವಹಣೆ
ಜನರು ತಮ್ಮ ಮಲಗಲು ಆತುರಪಡಬಾರದು ಮತ್ತು ಅವರು ಮಲಗುವ ಮುನ್ನ ಒಂದು ಗಂಟೆ ಹೊರ ಹೋಗಿ ರಿಲ್ಯಾಕ್ಸ್ ಆಗಬೇಕು. ಬೆಳಿಗ್ಗೆ ಎದ್ದ ಕೂಡಲೇಮೊದಲ ಒಂದು ಗಂಟೆ ನಮಗಾಗಿ ಮೀಸಲಿಡಬೇಕು. ನಿದ್ರೆ ಕೂಡ ಅಷ್ಟೇ ಮುಖ್ಯ ಮತ್ತು ದೇಹದ ಶುದ್ಧೀಕರಣ ಕಾರ್ಯವಿಧಾನ ಸರಿಯಾಗಿ ಕೆಲಸ ಮಾಡಲು ಕನಿಷ್ಠ 7-8 ಗಂಟೆಗಳ ನಿದ್ರೆಯನ್ನು ಶಿಫಾರಸು ಮಾಡಲಾಗಿದೆ. ರಾತ್ರಿಯ ಊಟ ಮತ್ತು ನಿದ್ರೆಗೆ ಮುನ್ನ ಕನಿಷ್ಠ 2 ಗಂಟೆಗಳ ಅಂತರವಿರಬೇಕು.
ಮಧುಮೇಹ ಬರುವ ಅಪಾಯವನ್ನು ಹೇಗೆ ನಿರ್ಣಯಿಸುವುದು?
ದೇಹವನ್ನು ಮಧುಮೇಹ ಕಾಡುವ ಮೊದಲು ದೇಹವು ಪ್ರಿಡಿಯಾಬಿಟಿಕ್ ಸ್ಥಿತಿಯಲ್ಲಿರುತ್ತದೆ, ಇದು ಲಕ್ಷಣರಹಿತ ಸ್ಥಿತಿಯಾಗಿದೆ. ಕುಟುಂಬದಲ್ಲಿ ಮಧುಮೇಹದ ಇತಿಹಾಸ ಇದ್ದರೆ ಮತ್ತು 23 ಕ್ಕಿಂತ ಹೆಚ್ಚು BMI ಮತ್ತು 30 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದಗದರೆ ಆನ್ಲೈನ್ನಲ್ಲಿ ಪ್ರಿಡಿಯಾಬಿಟಿಕ್ ಪರೀಕ್ಷೆ ತೆಗೆದುಕೊಳ್ಳುವ ಅನುಕೂಲ ಈಗ ಕಲ್ಪಿಸಲಾಗಿದೆ. 70% ಪ್ರಿಬಯಾಟಿಕ್ಸ್ಥಿತಿಯಲ್ಲಿರುವ ರೋಗಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ 5-7 ವರ್ಷಗಳಲ್ಲಿ ಮಧುಮೇಹಿಗಳಾಗುತ್ತಾರೆ. ಮತ್ತೊಂದೆಡೆ, ಅಗತ್ಯವಾದ ಜೀವನಶೈಲಿಯ ಬದಲಾವಣೆಗಳನ್ನು ಮಾಡುವುದರಿಂದ ಮಧುಮೇಹ ಬರುವ ಅವಕಾಶ 70-80% ರಷ್ಟು ಕಡಿಮೆಯಾಗುತ್ತದೆ.
ಮಧುಮೇಹಿಗಳು ಮಾಡಬೇಕಿರುವ ವ್ಯಾಯಾಮಗಳು
ಮಧುಮೇಹ ಇರುವವರಿಗೆ ಕೀಲು ಸಮಸ್ಯೆಗಳು, ಬೆನ್ನು ನೋವು, ಅಥವಾ ಕುತ್ತಿಗೆ ನೋವು ಇಲ್ಲದಿದ್ದರೆ 15-20 ನಿಮಿಷಗಳ ವ್ಯಾಯಾಮ ಹೆಚ್ಚು ಪ್ರಯೋಜನಕಾರಿಯಾಗಬಲ್ಲವು. ಅದರಲ್ಲೂ ಜಂಪಿಂಗ್ ಜಾಕ್, ಲುಂಜ್, ಕ್ರಂಚ್, ಪುಷ್ ಅಪ್, ವಾರಕ್ಕೆ ಮೂರು ಬಾರಿ 20 ನಿಮಿಷಗಳ ಕಾಲ ಮಾಡುವುದರಿಂದ ಇನ್ಸುಲಿನ್ ಕೊರತೆಯ ವಿರುದ್ಧ ದೇಹ ಹೋರಾಡಲು ಸಹಕಾರಿಯಾಗುತ್ತದೆ ಎಂಬುವುದನ್ನು ಪ್ರಯೋಗಗಳು ಸಾಬೀತುಪಡಿಸಿವೆ.