ಸದಾ ವಿವಾದದ ಸುಳಿಯಲ್ಲೇ ಇರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈದೀಗ ಮತ್ತೆ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ತನ್ನ ಆಡಳಿತ ವೈಖರಿ ಹಾಗೂ ಶ್ರೇಷ್ಟತೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಪತ್ರಿಕೆಗಳಿಗೆ ಕೊಟ್ಟ ಜಾಹೀರಾತೊಂದು ಇದೀಗ ನೆಟ್ಟಿಗರ ಟ್ರೋಲಿಗೆ ಆಹಾರವಾಗಿದೆ. ದಿ ಸಂಡೇ ಎಕ್ಸ್ ಪ್ರೆಸ್ ಪತ್ರಿಕೆ ತನ್ನ ಮುಖಪುಟದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಜಾಹೀರಾತನ್ನು ಪಡೆದುಕೊಂಡು Transforming Uttar Pradesh Under Yogi Adityanath ಎಂಬ ಒಕ್ಕಣೆಯಲ್ಲಿ ಜಾಹೀರಾತು ಬಿತ್ತರಿಸಿದೆ. ಈ ವೇಳೆ ಉತ್ತರ ಪ್ರದೇಶಕ್ಕೆ ಸಂಬಂಧವೇ ಇಲ್ಲದ ಮೇಲ್ಸೇತುವೆ ಹಾಗೂ ಕಟ್ಟಡವೊಂದರ ಚಿತ್ರವನ್ನೂ ಮುದ್ರಿಸಿದೆ. ಇದು ಈಗ ಸಿಎಂ ಯೋಗಿ ಆದಿತ್ಯನಾಥ್ ಮುಖಭಂಗಕ್ಕೆ ಕಾರಣವಾಗಿದೆ.
ಕೊಲ್ಕತಾದ ಎಂಎಎ ಮೇಲ್ಸೇತುವೆ, ಕೋಲ್ಕತಾದ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ಹಾಗೂ ಕೊಲ್ಕತಾದ ಹಳದಿ ಬಣ್ಣದಲ್ಲಿರುವ ಟ್ಯಾಕ್ಸಿ ಕಾರ್ಗಳನ್ನೂ ಯೋಗಿ ಸರ್ಕಾರ ತನ್ನ ಜಾಹೀರಾತಿಗಾಗಿ ಬಳಸಿಕೊಂಡಿದ್ದಾರೆ. ಇದನ್ನು ಕ್ರಾಸ್ ಚೆಕ್ ಕೂಡ ಮಾಡದ ದಿ ಸಂಡೇ ಎಕ್ಸ್ಪ್ರೆಸ್ ಪತ್ರಿಕೆ ಅದನ್ನು ಮುದ್ರಿಸಿ ಬಿತ್ತರಿಸಿದೆ. ಇದು ಈಗ ಸೋಶೀಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಆದಿ ಹಾಡಿದೆ.
ಈ ಬಗ್ಗೆ ಕೂಡಲೇ ಟ್ವೀಟ್ ಮಾಡಿದ ತೃಣಮೂಲ ಕಾಂಗ್ರೆಸ್ ಲೋಕಸಭಾ ಸದಸ್ಯರಾದ ಮಹುವ ಮೊಯಿತ್ರ, ʻʻದಿ ಸಂಡೇ ಎಕ್ಸ್ಪ್ರೆಸ್ ಪತ್ರಿಕೆಯ ಮೊದಲ ಪುಟದಲ್ಲಿ ಪ್ರಕಟವಾಗಿರುವ ಜಾಹೀರಾತಿನ ಫೋಟೋವನ್ನು ಹಂಚಿಕೊಂಡು “ಪುಂಡ ಯೋಗಿ” (Thuggy Yogi) ಎಂದು ಕರೆದಿದ್ದಾರೆ. “ನಿಮ್ಮ ಮನಸ್ಥಿತಿಯನ್ನಾದರೂ ಬದಲಿಸಿಕೊಳ್ಳಿ, ಇಲ್ಲವೇ ಕನಿಷ್ಠ ಪಕ್ಷ ನಿಮ್ಮ ಜಾಹೀರಾತು ಏಜೆನ್ಸಿಯನ್ನಾದರೂ ಬದಲಿಸಿ” ಎಂದು ಕುಟುಕಿದ್ದಾರೆ. ಇದೇ ವೇಳೆ “ನನ್ನ ವಿರುದ್ಧ ನೋಯ್ಡಾದಲ್ಲಿ ಎಫ್ಐಆರ್ ದಾಖಲಾಗುವುದನ್ನು ಎದುರು ನೋಡುತ್ತಿದ್ದೇನೆ”ಎಂದೂ ಅವರು ಯೋಗಿ ಆದಿತ್ಯನಾಥ್ ಬಗ್ಗೆ ಲೇವಡಿ ಮಾಡಿದ್ದಾರೆ.
ಫ್ಯಾಕ್ಟ್ ಚೆಕ್ ಟ್ವಿಟರ್ ಖಾತೆಯು ಪ್ರತಿಕ್ರಿಯಿಸಿದ್ದು, “ಯೋಗಿ ಆದಿತ್ಯನಾಥ ಅವರೇ, ಪಶ್ಚಿಮ ಬಂಗಾಳ ಅಭಿವೃದ್ಧಿಯನ್ನು ನಿಮ್ಮ ಜಾಹೀರಾತಿನಲ್ಲಿ ಕಾಣಲು ಖುಷಿಯಾಗುತ್ತಿದೆ. ಐಟಿಸಿ ಕಡೆಗೆ ತೆರಳಲಿರುವ ಎಂಎಎ ಫ್ಲೈಓವರ್ನ ಸ್ಟಾಕ್ ಫೋಟೋವನ್ನು ಜಾಹೀರಾತಿನಲ್ಲಿ ಬಳಸಲಾಗಿದೆ” ಎಂದಿದೆ. ಸುಮಿತ್ರ ಮುಜುಂದಾರ್ ಎಂಬುವರು ಟ್ವೀಟ್ ಮಾಡಿದ್ದು, ಯೂಪಿ ಮಾದರಿಯನ್ನು ತೋರಿಸಲು ಕೊಲ್ಕತ್ತ ಫೋಟೋವನ್ನು ಬಳಸಲಾಗಿದೆ. ಪಾರದಾರ್ಶಕ ಯೂಪಿ ಎಂದರೆ ಇತರ ರಾಜ್ಯಗಳ ಅಭಿವೃದ್ಧಿಯ ಫೋಟೋಗಳನ್ನು ಕದ್ದು, ಪತ್ರಿಕೆಗೆ ಜಾಹೀರಾತು ನೀಡುವುದಾಗಿದೆ” ಎಂದು ವ್ಯಂಗವಾಡಿದ್ದಾರೆ.
ಜಾಹೀರಾತು ಕುರಿತು ಸ್ಪಷ್ಟನೆ ನೀಡಿರುವ ಇಂಡಿಯನ್ ಎಕ್ಸಪ್ರೆಸ್ ಸಂಸ್ಥೆಯು, “ಇದು ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದಿಂದಾಗಿರುವ ತಪ್ಪು. ಇದಕ್ಕಾಗಿ ತೀವ್ರ ವಿಷಾಧಿಸುತ್ತೇವೆ. ಪತ್ರಿಕೆಯ ಎಲ್ಲಾ ಡಿಜಿಟಲ್ ಆವೃತ್ತಿಗಳಿಂದ ಈ ಫೋಟೋವನ್ನು ಅಳಿಸಿಹಾಕುತ್ತೇವೆ” ಎಂದು ಟ್ವೀಟ್ ಮಾಡಿದೆ.
ʻಎಂಎಎ ಫ್ಲೈಓವರ್ʼ (MAA flyover) ಎಂದು ಗೂಗಲ್ ಮಾಡಿದರೆ, ಕೊಲ್ಕತ್ತದಲ್ಲಿರುವ ಈ ಮೇಲ್ಸೇತುವೆಯ ಕುರಿತು ವರದಿಯಾಗಿರುವ ಸುದ್ದಿಗಳನ್ನು ನೋಡಬಹುದು. ಈ ಹಿಂದೆ ಗುಜರಾತ್ ಮಾದರಿ ಎಂಬ ಭೋಗಸ್ ಅಭಿವೃದ್ಧಿಯನ್ನು ಕೂಡ ಇದೇ ರೀತಿ ಸೃಷ್ಟಿಸಲಾಗಿತ್ತು. ಇತರೆ ರಾಜ್ಯ ಮತ್ತು ದೇಶದ ರಸ್ತೆ, ಕಟ್ಟಡಗಳನ್ನು ಬಳಸಿಕೊಂಡು ಇದು ಗುಜರಾತ್ ಕಾಣುತ್ತಿರುವ ಅಭಿವೃದ್ಧಿ ಎಂದು ಸುಳ್ಳು ಸುದ್ದಿಗಳನ್ನು ಹರಿಬಡಿಲಾಗುತ್ತಿತ್ತು. ಅದೇ ರೀತಿ ಇದೀಗ ಉತ್ತರ ಪ್ರದೇಶ ಸರ್ಕಾರ ಕೂಡ ತನಗೂ ಅದಕ್ಕೂ ಸಂಬಂಧವೇ ಇಲ್ಲದ ಸ್ಥಳಗಳ, ಕಟ್ಟಡಗಳ, ಅಭಿವೃದ್ಧಿಗಳ ಚಿತ್ರವನ್ನು ಬಳಸಿಕೊಂಡು ತನ್ನ ಮೈಲೇಜ್ ಹೆಚ್ಚಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. ಇದಕ್ಕೆ ನೆಟ್ಟಿಗರು ಅಸಮಾಧಾನದ ಜೊತೆಗೆ ವ್ಯಂಗ್ಯವಾಡುತ್ತಿದ್ದಾರೆ.