ಉತ್ತರ ಪ್ರದೇಶದಲ್ಲಿ ಪ್ರಸ್ತುತ ವಿಧಾನಸಭೆಯ ಅವಧಿ 2022ರ ಮಾರ್ಚ್ 14ಕ್ಕೆ ಮುಗಿಯುತ್ತದೆ. ಅಂದರೆ ಉಳಿದಿರುವುದು ಆರು ತಿಂಗಳು ಮಾತ್ರ. ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಎಂದಿನಂತೆ ಭಾರೀ ಮಹತ್ವ ಪಡೆದುಕೊಂಡಿದೆ. ಈ ಚುನಾವಣೆಯನ್ನು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಸಿ-ವೋಟರ್ ಸಮೀಕ್ಷೆಯು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಬಳಿಕ ಈ ಚರ್ಚೆ ಇನ್ನೂ ಬಿರುಸಾಗಿ ನಡೆಯುತ್ತಿದೆ.
ಪಕ್ಷದೊಳಗೆ ಭಾರೀ ವಿರೋಧ ಇದ್ದರೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಮತದಾರರ ಕಣ್ಮಣಿ ಎಂಬ ಕಾರಣಕ್ಕೆ ಬಿಜೆಪಿ ಈ ಚುನಾವಣೆಯ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಇನ್ನೊಂದೆಡೆ ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣಕ್ಕೆ ಸಮಾಜವಾದಿ ಪಕ್ಷದ ನಿರೀಕ್ಷೆಗಳೇನೂ ಕಡಿಮೆ ಇಲ್ಲ. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ -19 ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ, ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿರುವುದರಿಂದ, ನಿರುದ್ಯೋಗ ಸಮಸ್ಯೆ ಹೆಚ್ಚಲು ಕಾರಣರಾಗಿರುವುದರಿಂದ ಜನ ಬಿಜೆಪಿಯನ್ನು ತೊಲಗಿಸಬಹುದು ಎಂಬ ಭರವಸೆ ಇಟ್ಟುಕೊಂಡಿದೆ.
ಆದರೆ ಇವೆಲ್ಲವುಗಳ ಹೊರತಾಗಿಯೂ ಸಮಾಜವಾದಿ ಪಕ್ಷಕ್ಕೆ ಪೂರಕವಾದ ವಾತಾವರಣ ಇಲ್ಲ ಎನ್ನುತ್ತವೆ ಅಂಕಿ ಅಂಶಗಳು. ಮೊದಲನೆಯದಾಗಿ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಈಗ ಸಮಾಜವಾದಿ ಪಕ್ಷಕ್ಕಿಂತ ಬಿಜೆಪಿ 250ಕ್ಕೂ ಹೆಚ್ಚು ಶಾಸಕರನ್ನು ಹೊಂದಿದೆ. ಬಿಜೆಪಿ 312 ಶಾಸಕರನ್ನು ಹೊಂದಿದ್ದರೆ ಸಮಾಜವಾದಿ ಪಕ್ಷದ ಶಾಸಕರಿರುವುದು 47 ಜನ ಮಾತ್ರ. 2017ರ ಚುನಾವಣೆಯಲ್ಲಿ ಪಡೆದಿರುವ ಮತದಾನದ ಪ್ರಮಾಣ ನೋಡಿದರೆ ಸಮಾಜವಾದಿ ಪಕ್ಷಕ್ಕಿಂತ ಬಿಜೆಪಿ ಶೇಕಡಾ 18ರಷ್ಟು ಹೆಚ್ಚು ಪಾಲು ಹೊಂದಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇಕಡಾ 40, ಎಸ್ಪಿ ಮತ್ತು ಬಿಎಸ್ಪಿ ಶೇಕಡಾ 22 ಮತ್ತು ಕಾಂಗ್ರೆಸ್ ಶೇಕಡಾ 6ರಷ್ಟು ಮತಗಳನ್ನು ಪಡೆದಿದ್ದವು. ಈ ಅಂತರವನ್ನು ಬೇಧಿಸಿ ಬಿಜೆಪಿಯನ್ನು ಹಿಂದಿಕ್ಕುವುದು ಸಮಾಜವಾದಿ ಪಕ್ಷಕ್ಕೆ ಕಷ್ಟವಾಗಬಹುದು ಎನಿಸುತ್ತದೆ.
ಆದರೂ ರಾಜಕೀಯದಲ್ಲಿ ಅಸಾಧ್ಯವಾದುದು ಏನೂ ಇಲ್ಲ ಎನ್ನುವ ಮಾತಿನ ಮೇಲೆ ನಂಬಿಕೆ ಇಟ್ಟು ಲೆಕ್ಕಾಚಾರ ಹಾಕುವುದಾದರೆ ‘2017ರ ಚುನಾವಣೆಯಲ್ಲಿ ಪಡೆದಿದ್ದಕ್ಕಿಂತ ಶೇಕಡಾ 5 ರಷ್ಟು ಕಡಿಮೆ ಮತ ಪಡೆದರೆ ಮತ್ತು ಆ ಶೇಕಡಾ 5ರಷ್ಟು ಮತ ಸಮಾಜವಾದಿ ಪಕ್ಷಕ್ಕೆ ಹೋದರೆ ಆಗ ಬಿಜೆಪಿ ಶಾಸಕರ ಸಂಖ್ಯೆ 254ಕ್ಕೆ ಕುಸಿಯಲಿದೆ. ಸಮಾಜವಾದಿ ಪಕ್ಷದ ಶಾಸಕರ ಸಂಖ್ಯೆ 120ಕ್ಕೆ ಏರಿಕೆಯಾಗಲಿದೆ’ ಎಂದು ಎಬಿಪಿ ಸಿ-ವೋಟರ್ ಸಮೀಕ್ಷೆ ಹೇಳುತ್ತದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ಸಮಾಜವಾದಿ ಪಕ್ಷಕ್ಕೆ ಶೇಕಡಾ 20ರಷ್ಟು ದೊಡ್ಡ ಸ್ವಿಂಗ್ ಅಗತ್ಯವಿದೆ. ಇದರರ್ಥ ಬಿಜೆಪಿ ಮತ ಹಂಚಿಕೆಯಲ್ಲಿ ಶೇಕಡಾ 10ರಷ್ಟು ಇಳಿಕೆ ಆಗಬೇಕು. ಮತ್ತು ಅದಷ್ಟೂ ಮತಗಳು ಸಮಾಜವಾದಿ ಪಕ್ಷಕ್ಕೆ ಹೋಗಬೇಕು. ಆಗ ಸಮಾಜವಾದಿ ಪಕ್ಷ 219 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇರುತ್ತದೆ. ಆದರೆ ಇಷ್ಟು ದೊಡ್ಡ ಮಟ್ಟದ ಸ್ವಿಂಗ್ ಆಗುವುದು ಅನುಮಾನಸ್ಪದವಾಗಿದೆ.
ಎಸ್ ಪಿಗೆ ಮೂರೇ ಆಯ್ಕೆಗಳು
ಮೊದಲನೆಯದು
ಬಿಜೆಪಿ ವೋಟ್ ಬ್ಯಾಂಕ್ಗೆ ಸಮಾಜವಾದಿ ಪಕ್ಷವು ದೊಡ್ಡ ಹೊಡೆತ ನೀಡಬೇಕು. ಯಾದವ್ ಹೊರತಾದ ಹಿಂದುಳಿದ ವರ್ಗಗಳು (NYOBC), ಜಾಟ್ ಮತ್ತು ಬ್ರಾಹ್ಮಣ ಮತದಾರರನ್ನು ತನ್ನತ್ತ ಸೆಳೆಯಲು ಕಾರ್ಯತಂತ್ರ ರೂಪಿಸಬೇಕು. ಶೇಕಡಾ 4ರಷ್ಟು ಮತದಾರರನ್ನು ಹೊಂದಿರುವ ರಾಜ್ಭಾರ್ ಸಮುದಾಯವನ್ನು ಪ್ರತಿನಿಧಿಸುವ ಎಸ್ಬಿಎಸ್ಪಿ ಪಕ್ಷವು ‘ಬಿಜೆಪಿಯು ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿದೆ’ ಎಂದು ಆರೋಪಿಸಿ ಎನ್ಡಿಎ ಮೈತ್ರಿ ಕೂಟವನ್ನು ತೊರೆದಿದೆ. ಸದ್ಯ ಒವೈಸಿ ಜೊತೆಗಿರುವ ಎಸ್ಬಿಎಸ್ಪಿ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಬೇಕು. ಚಂದ್ರಶೇಖರ್ ಆಜಾದ್ ಕೆಲವು ಸ್ಥಾನಗಳಲ್ಲಿ ಬಿಜೆಪಿಗೆ ಹಾನಿ ಮಾಡುವ ಸಾಧ್ಯತೆ ಇದೆ. ಅದನ್ನು ತನ್ನ ಪರವಾಗಿಸಿಕೊಳ್ಳಬೇಕು.
NYOBC ಮತದಾರರನ್ನು ಜಾತಿ ಆಧಾರಿತ ಜನಗಣತಿಯ ಭರವಸೆಯ ಮೂಲಕ ಓಲೈಸಬಹುದು ಮತ್ತು ಈ ಬ್ಲಾಕ್ ಅನ್ನು ಪ್ರತಿನಿಧಿಸುವ ಜಾತಿ ಗುಂಪುಗಳಿಗೆ ಗರಿಷ್ಠ ಟಿಕೆಟ್ ನೀಡಬಹುದು. ಸದ್ಯದ ಮಾಹಿತಿಗಳ ಪ್ರಕಾರ 10ರಷ್ಟಿರುವ ಬ್ರಾಹ್ಮಣ ಸಮುದಾಯವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ‘ಠಾಕೂರ್ ಪರವಾದ ರಾಜಕಾರಣಕ್ಕೆ’ ಬೇಸತ್ತಿದೆ. ಜಾಟ್ ಸಮುದಾಯವು ಬಿಜೆಪಿ ವಿರುದ್ಧ ರೈತ ಪ್ರತಿಭಟನೆಗಳನ್ನು ಮುನ್ನಡೆಸುತ್ತಿದೆ. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಶೇಕಡಾ 15ರಿಂದ 20ರಷ್ಟು ಜನಸಂಖ್ಯೆ ಇದ್ದು ನಿರ್ಣಾಯಕ ಸ್ಥಾನದಲ್ಲಿದ್ದಾರೆ. 2017ರಲ್ಲಿ ಶೇಕಡಾ 80ರಷ್ಟು ಬ್ರಾಹ್ಮಣರು, ಶೇಕಡಾ 61ರಷ್ಟು NYOBCಗಳು ಮತ್ತು ಶೇಕಡಾ 37ರಷ್ಟು ಜಾಟ್ಗಳು CSDS ಪ್ರಕಾರ ಬಿಜೆಪಿಯನ್ನು ಬೆಂಬಲಿಸಿದ್ದರು. ಈ ಮೂರು ಸಮುದಾಯಗಳಿಂದ ಈ ಬಾರಿ ಶೇಕಡಾ 10ರಿಂದ 15ರಷ್ಟು ಮತಗಳು ಬಿಜೆಪಿಗೆ ಕಡಿಮೆಯಾದರೆ ಸಮಾಜವಾದಿ ಪಕ್ಷಕ್ಕೆ ಶೇಕಡಾ 8ರಿಂದ 12ರಷ್ಟು ಸ್ವಿಂಗ್ ಆಗಬಹುದು.
ಎರಡನೇಯದು
ಎರಡನೇ ವಿಧಾನವು ಚುನಾವಣೆ ದ್ವಿಧ್ರುವೀಯವಾಗಿ ನಡೆಯುವಂತೆ ಮಾಡಬೇಕು. ಬಿಎಸ್ಪಿ ಮತ್ತು ಕಾಂಗ್ರೆಸ್ ಅನ್ನು ಮತದಾರರ ದೃಷ್ಟಿಯಲ್ಲಿ ಅಪ್ರಸ್ತುತಗೊಳಿಸಬೇಕು. ಮುಖ್ಯಮಂತ್ರಿ ಅಭ್ಯರ್ಥಿ ಅಖಿಲೇಶ್ ಯಾದವ್ ಪರ್ಯಾಯ ನಾಯಕನಾಗಿ ಹೊರಹೊಮ್ಮಬೇಕು. ಬಿಎಸ್ಪಿ ಮತ್ತು ಕಾಂಗ್ರೆಸ್ ಮತಹಾಕಿದರೆ ಬಿಜೆಪಿಗೆ ಮತ ನೀಡಿದಂತೆ ಎಂಬ ವಾತಾವರಣ ಸೃಷ್ಟಿಸಬೇಕು. ವಿರೋಧಿ ಮತಗಳ ವಿಭಜನೆಯನ್ನು ತಡೆಯಲು ಎಲ್ಲಾ ಬಿಜೆಪಿ ವಿರೋಧಿ ಮತದಾರರನ್ನು ಒಟ್ಟುಗೂಡಿಸಬೇಕು.
ಬಿಎಸ್ಪಿಗೆ ಶೇಕಡಾ 62ರಷ್ಟು ದಲಿತರಿಗೆ ಬೆಂಬಲ ಇದೆ. (ಜನಸಂಖ್ಯೆಯ 21%). ಜಾಟವ್ಸ್ (ಮಾಯಾವತಿ ಅವರ ಸಮುದಾಯ) ಇದರ ನಿಷ್ಠಾವಂತ ಬೆಂಬಲಿಗರು. ಮತ್ತೊಂದೆಡೆ, ಕಾಂಗ್ರೆಸ್ಗೆ ನಿಷ್ಠಾವಂತ ಮತ ಬೇಸ್ ಉಳಿದಿಲ್ಲ. ಆದಾಗ್ಯೂ ಅದು ಶೇಕಡಾ 6ರಷ್ಟು ಓಟ್ ಬ್ಯಾಂಕ್ ಹೊಂದಿದೆ. ಎಸ್ಪಿ ಗೆಲ್ಲಲು ಬಿಎಸ್ಪಿಯಿಂದ ಜಾಟವ್ಸ್ ಮತವನ್ನು ಕಸಿದುಕೊಳ್ಳಬೇಕು. ಕಳೆದ 4 ಚುನಾವಣೆಗಳಲ್ಲಿ ಅವರ ಮತಗಳು ವ್ಯರ್ಥವಾಗಿವೆ ಮತ್ತು ಅದರಿಂದಾಗಿ ಅವರಿಗೆ ಅಧಿಕಾರದಲ್ಲಿ ಸರಿಯಾದ ಪಾಲು ಸಿಗುತ್ತಿಲ್ಲ ಎಂದು ಅಖಿಲೇಶ್ ಯಾದವ್ ಜಾಟವ್ಸ್ ಸಮುದಾಯಕ್ಕೆ ಮನವರಿಕೆ ಮಾಡಿಕೊಡಬೇಕು.
ಮೂರನೇಯದು
ಮೇಲಿನ ಎರಡು ವಿಧಾನಗಳ ಮಿಶ್ರಣವು ಸಹ ಕೆಲಸ ಮಾಡಬಹುದು. ಬಿಜೆಪಿ, ಬಿಎಸ್ಪಿ, ಕಾಂಗ್ರೆಸ್ ಮತ್ತು ಸಣ್ಣ ಪಕ್ಷಗಳ ಮತಗಳಲ್ಲಿ ಎಸ್ಪಿ ಸದ್ದು ಮಾಡುತ್ತಿದೆ. ಶೇಕಡಾ 10ರಷ್ಟು ಸ್ವಿಂಗ್ ಬಿಜೆಪಿಯನ್ನು ಶೇಕಡಾ 35ಕ್ಕೆ ಇಳಿಸುತ್ತದೆ ಮತ್ತು ಸಮಾಜವಾದಿ ಪಕ್ಷವನ್ನು ಶೇಕಡಾ 27ಕ್ಕೆ ಮೇಲತ್ತಲಿದೆ. ನಂತರ ಬಿಎಸ್ಪಿ ಮತ್ತು ಕಾಂಗ್ರೆಸ್ನಿಂದ ಶೇಕಡಾ 10ರಷ್ಟು ಮತಗಳನ್ನು ಸೇರಿಸಬೇಕು. ಆಗ ಸಮಾಜವಾದಿ ಪಕ್ಷದ ಮತ ಪ್ರಮಾಣ ಶೇಕಡಾ 37ರಷ್ಟಾಗಲಿದೆ. ಆಗ ಮಾತ್ರ ಸರಳ ಬಹುಮತ ಪಡೆಯಲು ಸಾಧ್ಯ.