ಕಳೆದ ನವೆಂಬರ್ 26ನೇ ತಾರೀಕಿನಿಂದಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ಮುಂದುವರಿಸಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಹೋರಾಟದ ಬೆನ್ನೆಲುಬು ಪಂಜಾಬ್ ಕೃಷಿಕರು. ಹೀಗಾಗಿ ರೈತರ ಈ ಹೋರಾಟವೂ ಮುಂದಿನ ಪಂಜಾಬ್ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಈ ಪಂಜಾಬ್ ಚುನಾವಣೆ ಗೆಲ್ಲಲು ಬಿಜೆಪಿ ಬೇರೆಯದ್ದೇ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.
ಹೌದು, ಮುಂದಿನ ಪಂಜಾಬ್ ವಿಧಾನಸಭಾ ಚುನಾವಣೆ ಬಿಜೆಪಿಗೆ ಹಲವು ಸವಾಲುಗಳಿಂದ ಕೂಡಿದೆ. ಚುನಾವಣೆಗೆ ಗೆಲ್ಲೋದಿರಲಿ ಬಿಜೆಪಿಯ ಅಭ್ಯರ್ಥಿಗಳು ಡೆಪಾಸಿಟ್ ಉಳಿಸಿಕೊಳ್ಳೋದು ಕಷ್ಟ. ಇಂತಹ ಪರಿಸ್ಥಿತಿ ಬಿಜೆಪಿಗೆ ಪಂಜಾಬ್ನಲ್ಲಿ ಎದುರಾಗಿದೆ. ಹೀಗಿರುವಾಗಲೇ ಬಿಜೆಪಿ ಅನ್ಯಮಾರ್ಗವನ್ನು ಹುಡುಕಿ ಚುನಾವಣೆ ಗೆಲ್ಲಲು ಹೊರಟಿದೆ. ಇದಕ್ಕಾಗಿ ಹಿಂದೂಗಳ ಟ್ರಂಪ್ ಕಾರ್ಡ್ ಪ್ಲೇ ಮಾಡಲು ಮುಂದಾಗಿದೆ. ಹಾಗಾಗಿಯೇ ಹಿಂದೂ ಬಹುಸಂಖ್ಯಾತರನ್ನು ಹೊಂದಿರುವ 50ಕ್ಕೂ ಹೆಚ್ಚು ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.
ವಿವಾದಿತ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ ಬಳಿಕ ಬಿಜೆಪಿಯೊಂದಿಗೆ ಎರಡು ದಶಕಗಳ ಕಾಲದಿಂದ ಮೈತ್ರಿ ಮಾಡಿಕೊಂಡಿದ್ದ ಶಿರೋಮಣಿ ಅಕಾಲಿ ದಳವು ದೂರ ಸರಿದಿದೆ. ಹೀಗಿರುವಾಗ ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿ ಬಿಜೆಪಿ ಸ್ಪರ್ಧಿಸಬೇಕಾಗಿದೆ. ಹೇಗಾದರೂ ಸರಿ ಗೆಲ್ಲಲೇಬೇಕೆಂದು ಹೊರಟಿರುವ ಬಿಜೆಪಿ ನ್ನ ಪ್ರಾಬಲ್ಯವನ್ನು ಹೊಂದಿರುವ ಕ್ಷೇತ್ರಗಳ ಮೇಲೆ ಹೆಚ್ಚು ಗಮನಹರಿಸಿದೆ.
ಪಂಜಾಬ್ನಲ್ಲಿ ಅತೀ ಹೆಚ್ಚು ಜನಸಂಖ್ಯೆಯೇ ಕೃಷಿಕರು. ಪ್ರತೀ ಚುನಾವಣೆಯಲ್ಲೂ ಪ್ರಮುಖ ಪಾತ್ರವಹಿಸುವ ರೈತಾಪಿ ವರ್ಗವೇ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದೆ. ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ ಎಂದು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದೆ. ಈ ಮಹತ್ವದ ಬೆಳವಣಿಗೆಗಳ ಮಧ್ಯೆ ಬಿಜೆಪಿ ತನ್ನ ಪ್ರಾಬಲ್ಯವಿರುವ ಅತೀ ಹೆಚ್ಚು ಹಿಂದೂಗಳಿರುವ 50 ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿದೆ.
ಶೇ.60ರಷ್ಟು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರಗಳ ಮೇಲೆ ಫೋಕಸ್ ಮಾಡುತ್ತಿರುವ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಕಳೆದ ಬಾರಿ ಶಿರೋಮಣಿ ಅಕಾಲಿ ದಳದ ಜೊತೆಗೆ ಮೈತ್ರಿ ಮಾಡಿಕೊಂಡು ಗೆದ್ದ 23 ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನಹರಿಸಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಆದೇಶಿಸಿದೆ.
ಮೋದಿ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದ ಬಳಿಕವಂತೂ ಪಂಜಾಬಿಗರು ಸಾಕಷ್ಟು ಕೆಂಡಕಾರುತ್ತಿದ್ದಾರೆ. ಪಂಜಾಬಿನಲ್ಲಿ ಬಿಜೆಪಿ ನಾಯಕರು ಚುನಾವಣಾ ಪ್ರಚಾರಕ್ಕೆ ತೆರಳಿದರೆ ಸಾರ್ವಜನಿಕರು ಮುತ್ತಿಗೆ ಹಾಕುವ ಸಾಧ್ಯತೆಗಳಿವೆ. ಈಗಾಗಲೇ ರಾಜ್ಯ ಬಿಜೆಪಿ ನಾಯಕರ ಮುಖಕ್ಕೆ ಮಸಿ ಬಳೆದ ಎಷ್ಟೋ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ನಮ್ಮ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ಮಾಡೋಣ ಎಂದು ಕೇಂದ್ರ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಬಾರಿ ಗೆದ್ದ ಕ್ಷೇತ್ರಗಳನ್ನು ಮೊದಲು ಉಳಿಸಿಕೊಳ್ಳಬೇಕಿದೆ. ಅಲ್ಲದೇ ಗೆಲ್ಲವ ಅವಕಾಶಗಳು ಇರುವ ಕ್ಷೇತ್ರಗಳ ಮೇಲೆ ಫುಲ್ ಫೋಕಸ್ ಮಾಡಬೇಕಿದೆ. ರೋಪರ್, ಜಲಾಲಾಬಾದ್, ಪಟಿಯಾಲ (ನಗರ), ಬಟಿಂಡಾ (ನಗರ) ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು. ಸಂಘ ಪರಿವಾರ ಪ್ರಾಬಲ್ಯವಿರುವ ದೇರಾಬಾಸಿ, ಖರಾರ್ ಮತ್ತು ಮೊಹಾಲಿ, ರೋಪರ್, ಬುಧ್ಲಾಡಾ ಮತ್ತು ಬಟಿಂಡಾ (ನಗರ)ದಲ್ಲೂ ಗೆಲ್ಲಬೇಕು ಎಂಬುದು ಹೈಕಮಾಂಡ್ ಲೆಕ್ಕಚಾರ.
ಈಗಾಗಲೇ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿಕೊಂಡಿದೆ. ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದೆ. ನಾವು 2022ರ ವಿಧಾನಸಭಾ ಚುನಾವಣೆಯಲ್ಲಿ 117 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ. ಬಿಜೆಪಿಗೆ ಇದೊಂದು ವಿಭಿನ್ನ ಅನುಭವ. ನಾವು ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ. ಯಾವುದೇ ಆತಂಕವಿಲ್ಲದೇ ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದೇವೆ. ಇದಕ್ಕಾಗಿ ಹಿಂದುತ್ವದ ಟ್ರಂಪ್ ಕಾರ್ಡ್ ಪ್ಲೇ ಮಾಡೋಣ ಎಂದು ಕಾರ್ಯಕರ್ತರಿಗೆ ಹೈಕಮಾಂಡ್ ಹೇಳಿದೆ.